ಶುಕ್ರವಾರ, ಜೂಲೈ 10, 2020
27 °C

ವೈಫಲ್ಯ ದಾಟಲು ಇಲ್ಲಿದೆ ದಾರಿ...

ಆನಂದತೀರ್ಥ ಪ್ಯಾಟಿ Updated:

ಅಕ್ಷರ ಗಾತ್ರ : | |

ಆ ಗಷ್ಟೇ ದ್ವಿತೀಯ ಪಿಯುಸಿ ಪರೀಕ್ಷೆಯ ಫಲಿತಾಂಶ ಪ್ರಕಟವಾಗಿದೆ. ಒಳ್ಳೆಯ ಅಂಕ (ಶ್ರೇಣಿ) ಗಳಿಸಿದ ವಿದ್ಯಾರ್ಥಿಗಳು ಹೆಮ್ಮೆಯಿಂದ ಬೀಗುತ್ತಿದ್ದಾರೆ. ಸಿಹಿ ಹಂಚಿಕೆಯೂ ನಡೆದಿದೆ. ರ್ಯಾಂಕ್ ಗಳಿಸಿದವರಂತೂ ಅಭಿನಂದನೆಗಳ ಸುರಿಮಳೆಯಲ್ಲಿ ಮುಳುಗಿಬಿಟ್ಟಿದ್ದಾರೆ. ಎಂಜಿನಿಯರ್, ಮೆಡಿಕಲ್ ಎಂಬೆಲ್ಲ ಆಯ್ಕೆಗಳ ಕನಸು ಅವರ ಮುಂದಿದೆ.ಇತ್ತ ಇನ್ನೊಂದು ದೃಶ್ಯ: ಮನೆಯಲ್ಲಿ ನೀರವ ಮೌನ ಆವರಿಸಿದೆ. ಮೊಗದ ಮೇಲೆ ಶೋಕದ ಛಾಯೆ. ಮುಂದೇನು? ಎಂಬ ಚಿಂತೆ ಪಾಲಕರನ್ನು ಕಾಡುತ್ತಿದೆ. ಹೇಳಬೇಕಿಲ್ಲ- ಇದು ಫೇಲ್ ಆದ ವಿದ್ಯಾರ್ಥಿ/ನಿಯ ಮನೆಯ ಸನ್ನಿವೇಶ.ಮೇಲ್ವರ್ಗ, ಮಧ್ಯಮ ಅಥವಾ ಬಡವರು- ಹೀಗೆ ಯಾವುದೇ ಕುಟುಂಬವಿರಲಿ. ಫೇಲ್ ಎಂಬ ಶಬ್ದವೇ ಅಲ್ಲಿ ಭಯಾನಕ ಸ್ಥಿತಿ ಸೃಷ್ಟಿಸಿಬಿಡುತ್ತದೆ. ‘ಇಷ್ಟು ದಿನ ಓದಿದ್ದು ವೇಸ್ಟ್’, ‘ಇಡೀ ವರ್ಷ ಏನ್ ಮಾಡಿದೆ?’ ಎಂಬ ಮಾತಿನ ಬಾಣಗಳು ಚುಚ್ಚಲು ಆರಂಭವಾಗುತ್ತದೆ. ಸೋಲು ಯಾವಾಗಲೂ ಅನಾಥ ಎನ್ನುವ ಮಾತು ನಿಜ ಎಂದು ಭಾಸವಾಗುವುದೇ ಆವಾಗ.ಇಂಥ ಸ್ಥಿತಿಯಲ್ಲಿ ಖಿನ್ನತೆಗೆ ಒಳಗಾಗುವ ಮಕ್ಕಳನ್ನು ಕರೆದು, ಅವರಲ್ಲಿ ಆತ್ಮವಿಶ್ವಾಸ ತುಂಬುವ ಕೆಲಸ ಗುಲ್ಬರ್ಗದಲ್ಲಿ ನಡೆಯುತ್ತಿದೆ. ಎರಡು ವರ್ಷಗಳ ಹಿಂದೆ ಈಶಾನ್ಯ ವಲಯ ಶಿಕ್ಷಕರ ವೇದಿಕೆಯು ಆರಂಭಿಸಿದ ಶಿಬಿರವು ವಿದ್ಯಾರ್ಥಿಗಳಲ್ಲಿ ವಿಶ್ವಾಸ ತುಂಬುವಲ್ಲಿ ಸಫಲವಾಗಿದೆ. ರ್ಯಾಂಕ್, ಫಸ್ಟ್ ಕ್ಲಾಸ್‌ನಲ್ಲಿ ತೇರ್ಗಡೆಯಾಗುವಂತೆ ವಿದ್ಯಾರ್ಥಿಗಳಿಗೆ ತರಬೇತಿ ನೀಡುವ ಕೇಂದ್ರಗಳೇ ಎಲ್ಲೆಡೆ ಕಾಣುತ್ತಿರುವಾಗ, ಫೇಲ್ ಆದವರಿಗೆ ವಿಶೇಷ ತರಬೇತಿ ನೀಡುವ ಕಲ್ಪನೆಯೇ ಕುತೂಹಲಕರ. ಇದಕ್ಕಿರುವ ಹಿನ್ನೆಲೆಯಾದರೂ ಏನು?

“ಹೈದರಾಬಾದ ಕರ್ನಾಟಕ ಪ್ರದೇಶದ ವ್ಯಾಪ್ತಿಗೆ ಒಳಪಡುವ ಗುಲ್ಬರ್ಗ, ಯಾದಗಿರಿ, ಬೀದರ, ರಾಯಚೂರು ಹಾಗೂ ಕೊಪ್ಪಳ ಜಿಲ್ಲೆಗಳಲ್ಲಿ ಕಳೆದ ಐದು ವರ್ಷಗಳಲ್ಲಿ ದ್ವಿತೀಯ ಪಿಯುಸಿ (ಕಲಾ, ವಿಜ್ಞಾನ ಹಾಗೂ ವಾಣಿಜ್ಯ ಕೋರ್ಸ್) ವಿದ್ಯಾರ್ಥಿಗಳು ಉತ್ತೀರ್ಣರಾಗುವ ಸರಾಸರಿ ಫಲಿತಾಂಶ ಶೇ 40ರಷ್ಟನ್ನೂ ದಾಟಿಲ್ಲ. ಅಂದರೆ ಶೇ 60ರಷ್ಟು ವಿದ್ಯಾರ್ಥಿಗಳು ಫೇಲ್ ಆಗುತ್ತಿದ್ದಾರೆ ಎಂದರ್ಥ.ಇದು ನಿಜಕ್ಕೂ ಆತಂಕ ಮೂಡಿಸುವ ಸಂಗತಿ. ಈ ದುಸ್ಥಿತಿಗೆ ಕಾರಣಗಳೇನು? ಎಂಬ ಬಗ್ಗೆ ನಾವು ಅಧ್ಯಯನ ನಡೆಸಿದೆವು. ಆಗ ನಮಗೆ ಹಲವು ವಿಷಯಗಳು ಗೋಚರಿಸಿದವು. ಅವುಗಳನ್ನು ಗಮನದಲ್ಲಿ ಇಟ್ಟುಕೊಂಡು, ವಿದ್ಯಾರ್ಥಿಗಳು ಉತ್ತೀರ್ಣವಾಗುವ ಮಟ್ಟವನ್ನು ಹೆಚ್ಚಿಸಲು ಇಂಥ ತರಬೇತಿ ರೂಪಿಸಿದೆವು” ಎನ್ನುತ್ತಾರೆ, ವೇದಿಕೆ ಕಾರ್ಯಾಧ್ಯಕ್ಷ ಎಂ.ಬಿ.ಅಂಬಲಗಿ.

ಎಲ್ಲರದೂ ಪಾತ್ರ..!:

ಫಲಿತಾಂಶ ಕಳಪೆಯಾಗಲು ಪ್ರಮುಖವಾಗಿ ನಾಲ್ಕು ಕಾರಣಗಳಿವೆ. ವಿದ್ಯಾರ್ಥಿ, ಶಿಕ್ಷಕ, ಪಾಲಕರು ಮತ್ತು ಆಯಾ ಕಾಲೇಜು ನಡೆಸುವ ಆಡಳಿತ ಸಂಸ್ಥೆ ಅಥವಾ ಸರ್ಕಾರದ ಇಲಾಖೆ.ಎಸ್ಸೆಸ್ಸೆಲ್ಸಿ ಪಾಸ್ ಆಗುವ ವಿದ್ಯಾರ್ಥಿ ತನ್ನ ಮಟ್ಟವನ್ನು ಅರಿಯದೇ ಯಾರದೋ ಬಲವಂತಕ್ಕೆ ಪಿಯುಸಿಯಲ್ಲಿ ಒಂದು ಕೋರ್ಸ್ ಆಯ್ದುಕೊಳ್ಳುತ್ತಾನೆ. ಇನ್ನು ಬಹುತೇಕ ಖಾಸಗಿ ಕಾಲೇಜುಗಳ ತರಗತಿಗಳಲ್ಲಿ ಮುದ್ರಿತ ನೋಟ್ಸ್ ಕೊಡುವುದರಿಂದ ಬರೆಯುವ ಪರಿಪಾಠವೇ ತಪ್ಪಿಬಿಡುತ್ತದೆ. ಕಿರುಪರೀಕ್ಷೆಗಳನ್ನು ಗಂಭೀರವಾಗಿ ಪರಿಗಣಿಸದಿರುವುದು ಹಾಗೂ ಅತಿಯಾದ ಮನೆಪಾಠದ ಹಾವಳಿ ವಿದ್ಯಾರ್ಥಿಗಳನ್ನು ಸೋಮಾರಿಯನ್ನಾಗಿ ಮಾಡಿಬಿಡುತ್ತದೆ. ಟ್ಯೂಷನ್‌ನಲ್ಲಿ ಶೇ 80ರಷ್ಟು ಅಂಕ ಗಳಿಸುವ ತಮ್ಮ ಮಗ, ಮಗಳ ಬಗ್ಗೆ ಪಾಲಕರು ಹೆಮ್ಮೆಯಿಂದ ಬೀಗುತ್ತಾರೆ. ಆದರೆ ವಾಸ್ತವ ಸ್ಥಿತಿ ಬೇರೆಯೇ ಆಗಿರುವುದು ಅವರ ಗಮನಕ್ಕೆ ಬಂದಿರುವುದಿಲ್ಲ.ಶಿಕ್ಷಕರಿಗೆ ವಿದ್ಯಾರ್ಥಿಗಳ ಗ್ರಹಿಕೆ ಹಾಗೂ ಕಲಿಕಾ ಮಟ್ಟ ಗೊತ್ತಿದ್ದರೂ ಅದನ್ನು ಅವರಿಗೆ ಮನವರಿಕೆ ಮಾಡಿಕೊಡುವುದಿಲ್ಲ. ಚ್ಚುಕಟ್ಟಾಗಿರುವ ಮುದ್ರಿತ ನೋಟ್ಸ್‌ಗಳನ್ನು ನೋಡಿಕೊಂಡು ಶಿಕ್ಷಕರು ಬೋಧಿಸಿದರೆ, ಅದನ್ನೇ ನೋಡುತ್ತ ವಿದ್ಯಾರ್ಥಿಗಳು ‘...ಎಲ್ಲ ಅರ್ಥವಾಗಿದೆ’ ಎಂದುಕೊಳ್ಳುತ್ತಾರೆ. ಇದೊಂದು ರೀತಿಯ ಭ್ರಮಾಲೋಕ! ಇನ್ನು ಪಾಲಕರಿಗೆ ಮಕ್ಕಳ ಓದು, ಕಲಿಕೆ ಬಗ್ಗೆ ಗಮನಹರಿಸುವುದು ಕಷ್ಟಸಾಧ್ಯ. ಕೊನೆಯದಾಗಿ, ಕಾಲೇಜು ನಡೆಸುವ ಆಡಳಿತ ಮಂಡಳಿ (ಅಥವಾ ಅದು ಸರ್ಕಾರದ ಇಲಾಖೆಯೂ ಆಗಿರಬಹುದು) ಫಲಿತಾಂಶ ಕಳಪೆಯಾಗಿರುವುದು ಏಕೆ? ಎಂಬ ಬಗ್ಗೆ ಗಂಭೀರ ಪರಿಶೀಲನೆ ನಡೆಸುವುದೇ ಇಲ್ಲ.ಕನಿಷ್ಠ ಪಾಲಕರು ಹಾಗೂ ಶಿಕ್ಷಕರ ಜತೆ ಚರ್ಚೆ ನಡೆಸಿ, ಆಗಿರುವ ಲೋಪವಾದರೂ ಏನು ಎಂಬುದನ್ನು ಅರಿಯುವ ಪ್ರಯತ್ನ ಮಾಡುವುದಿಲ್ಲ.“ರ್ಯಾಂಕ್, ಪ್ರಥಮ ಶ್ರೇಣಿಯಲ್ಲಿ ಪಾಸಾದವರ ಬಗ್ಗೆ ಹೆಚ್ಚಿನ ಪ್ರಚಾರ ಸಿಗುತ್ತದೆ. ಆದರೆ ಅಂಥ ಯಶಸ್ವಿ ವಿದ್ಯಾರ್ಥಿಗಳ ಪೈಕಿ ಬಹುತೇಕ ಮಂದಿ ತಮ್ಮ ಶ್ರಮ ಹಾಗೂ ಸಾಮರ್ಥ್ಯದಿಂದ ಆ ಗುರಿ ತಲುಪಿರುವುದು ನಮಗೆ ಗೊತ್ತಾಗಿದೆ” ಎಂದು ಎಂ.ಬಿ.ಅಂಬಲಗಿ ವಿಶ್ಲೇಷಿಸುತ್ತಾರೆ. ಇದೆಲ್ಲದರ ಮಧ್ಯೆ ಫೇಲ್ ಆದ ವಿದ್ಯಾರ್ಥಿ ಖಿನ್ನತೆಯಿಂದ ಬಳಲುತ್ತಾನೆ. ಕುಟುಂಬದವರಿಗೆ ಆಕಾಶ ಕಳಚಿ ಬಿದ್ದ ಅನುಭವ. ಆದರೆ ಅಂಥ ವಿದ್ಯಾರ್ಥಿಗಳಿಗೆ ಮತ್ತೆ ತರಬೇತಿ ಕೊಟ್ಟು, ‘ದಡ’ ಸೇರಿಸುವ ಯತ್ನವನ್ನು ಈಶಾನ್ಯ ವಲಯ ಶಿಕ್ಷಕರ ವೇದಿಕೆಯು ಮಾಡುತ್ತಿದೆ. ಮೊದಲ ವರ್ಷ ತರಬೇತಿಗೆ ಹಾಜರಾಗಿದ್ದ 108 ವಿದ್ಯಾರ್ಥಿಗಳ ಪೈಕಿ 66, ಎರಡನೇ ವರ್ಷ 130ರಲ್ಲಿ 109 ವಿದ್ಯಾರ್ಥಿಗಳು ಪಾಸ್ ಆಗಿದ್ದಾರೆ.

ವಿಭಿನ್ನ ಕಲಿಕಾ ವಿಧಾನ:

ಫೇಲ್ ಆಗಿರುವ ವಿದ್ಯಾರ್ಥಿಗಳು ಮುಂದಿನ ಪರೀಕ್ಷೆಯಲ್ಲಿ ಪಾಸ್ ಆಗಬೇಕೆಂದರೆ ಮೊದಲು ಅವರಲ್ಲಿ ಉತ್ಸಾಹ ತುಂಬಬೇಕು. ‘ವಿಫಲವಾಗುವುದು ಸಹಜ. ಆದರೆ ಅದೇ ಅಂತಿಮವಲ್ಲ. ಗೆಲ್ಲಲು ಪರ್ಯಾಯ ಮಾರ್ಗಗಳಿವೆ’ ಎಂದು ಅವರನ್ನು ಹುರಿದುಂಬಿಸಲಾಗುತ್ತದೆ. ನಂತರ ಕಲಿಕೆಯತ್ತ ಗಮನ. ಪಠ್ಯಕ್ರಮದಲ್ಲಿರುವ ಎಲ್ಲವನ್ನೂ ಕಲಿಸುವ ಬದಲಿಗೆ, ಶೇ 40ರಿಂದ 50ರಷ್ಟು ಭಾಗವನ್ನು ಮಾತ್ರ ಇಲ್ಲಿ ತರಬೇತಿ ನೀಡಲು ತೆಗೆದುಕೊಳ್ಳಲಾಗುತ್ತದೆ. ಈ ಭಾಗಗಳ ಪುನರ್ಮನನ, ಸಂಭವನೀಯ ಪ್ರಶ್ನೋತ್ತರ, ಪ್ರತಿ ಭಾನುವಾರ ಮಾದರಿ ಪರೀಕ್ಷೆಗೆ ಉತ್ತರ ಬರೆಸುವುದರ ಜತೆಗೆ ಪ್ರತಿ ವಿದ್ಯಾರ್ಥಿಯ ಕಡೆಗೆ ಗಮನ ಹರಿಸುವುದು ಇಲ್ಲಿನ ವಿಶೇಷ.

ಒಟ್ಟು ಎರಡೂವರೆ ತಿಂಗಳ ಅವಧಿಯ ತರಬೇತಿಗೆ ಸಾಂಕೇತಿಕ ಶುಲ್ಕ ಪಡೆಯಲಾಗುತ್ತಿದ್ದು, ಗ್ರಾಮೀಣ ಹಾಗೂ ಬಡ ವಿದ್ಯಾರ್ಥಿಗಳಿಗೆ ರಿಯಾಯತಿ ದರದಲ್ಲಿ ಊಟ ಹಾಗೂ ವಸತಿ ವ್ಯವಸ್ಥೆಯನ್ನೂ ಕಲ್ಪಿಸಲಾಗುತ್ತದೆ. ಹೈ-ಕ ಭಾಗದ ಬೇರೆ ಜಿಲ್ಲೆಗಳಿಂದ ವಿದ್ಯಾರ್ಥಿಗಳು ತರಬೇತಿ ಪಡೆಯಲು ಬರುತ್ತಿದ್ದಾರೆ. 

 

“ಶೈಕ್ಷಣಿಕ ಕ್ಷೇತ್ರದಲ್ಲಿ ಅಪಾರ ಸಾಧನೆ ಮಾಡಿರುವುದಾಗಿ ಬಣ್ಣಿಸಿಕೊಳ್ಳುವ ಕಾಲೇಜುಗಳಲ್ಲಿ ಕಲಿತು ಫೇಲ್ ಆಗಿರುವ ವಿದ್ಯಾರ್ಥಿಗಳೂ ನಮ್ಮಲ್ಲಿಗೆ ಬಂದಿದ್ದಾರೆ. ಪರೀಕ್ಷೆಯಲ್ಲಿ ಫೇಲ್ ಆದರೆ ಬದುಕೇ ಮುಗಿದಂತೆ ಎಂದು ಭಾವಿಸುವವರಿದ್ದಾರೆ. ಅಂಥ ಎಷ್ಟೋ ವಿದ್ಯಾರ್ಥಿಗಳಲ್ಲಿ ಚೈತನ್ಯ ತುಂಬಿ, ಪರೀಕ್ಷೆಯಲ್ಲಿ ಯಶಸ್ಸು ಪಡೆಯುವಂತೆ ಮಾಡಿರುವ ಹೆಮ್ಮೆ ನಮ್ಮದು” ಎಂದು ಇಲ್ಲಿ ಪಾಠ ಮಾಡುವ ಶಿಕ್ಷಕರೊಬ್ಬರು ಹೇಳುತ್ತಾರೆ.

ಶಿಕ್ಷಣ ಕ್ಷೇತ್ರದಲ್ಲಿ ಹೈದರಾಬಾದ ಕರ್ನಾಟಕದ ಸ್ಥಾನ ಯಾವಾಗಲೂ ಕೆಳಗೆ ಇರುತ್ತದೆ. ಎಷ್ಟೋ ಯೋಜನೆಗಳಿಗೆ ಕೋಟಿಗಟ್ಟಲೇ ಹಣ ವೆಚ್ಚವಾದರೂ ಈ ಸ್ಥಿತಿ ಸುಧಾರಿಸಿಲ್ಲ. ಪಿಯುಸಿ ಪರೀಕ್ಷೆಯಲ್ಲಿ ಬೆರಳೆಣಿಕೆಯಷ್ಟು ವಿದ್ಯಾರ್ಥಿಗಳು ರ್ಯಾಂಕ್ ಪಡೆಯುತ್ತಾರೆ. ಒಂದಷ್ಟು ವಿದ್ಯಾರ್ಥಿಗಳು ಪ್ರಥಮ ಶ್ರೇಣಿಯಲ್ಲಿ ಪಾಸಾಗುತ್ತಾರೆ. ಆದರೆ ಉತ್ತೀರ್ಣರಾಗುವ ವಿದ್ಯಾರ್ಥಿಗಳ ಪ್ರಮಾಣ- ಸರಾಸರಿ ಶೇ 28!

ವಿಪರ್ಯಾಸವೆಂದರೆ ದ್ವಿತೀಯ ಪಿಯುಸಿಯಲ್ಲಿ ಪ್ರತಿ ವರ್ಷ ಕಳಪೆ ಫಲಿತಾಂಶ ಏಕೆ ಬರುತ್ತಿದೆ? ಎಂಬುದಕ್ಕೆ ಕಾರಣ ಹಾಗೂ ಅದಕ್ಕೆ ನಿಖರ ಪರಿಹಾರ ಹುಡುಕುವ ಗೋಜಿಗೆ ಶಿಕ್ಷಣ ಇಲಾಖೆ ಹೋಗಿಲ್ಲ. ಹೀಗಿರುವುದರಿಂದಲೇ ವರ್ಷ-ವರ್ಷವೂ ಇದೇ ದುಸ್ಥಿತಿ ಪುನರಾವರ್ತನೆಯಾಗುತ್ತಿದೆ. ಪಿಯುಸಿ ನಂತರ ತನ್ನ ಆಸಕ್ತಿಯ ಕೋರ್ಸ್ ಆಯ್ಕೆ ಹಾಗೂ ಮುಂದಿನ ದಿನಗಳಲ್ಲಿ ಅದಕ್ಕಿರುವ ಅವಕಾಶಗಳ ಕುರಿತು ಅರಿತುಕೊಳ್ಳುವ ಸಾಮರ್ಥ್ಯ ವಿದ್ಯಾರ್ಥಿಗೆ ಬರಬೇಕು; ಇನ್ನೊಂದೆಡೆ, ವಿದ್ಯಾರ್ಥಿಯ ಕಲಿಕಾ ಮಟ್ಟ ಎಷ್ಟು ಎಂಬುದನ್ನು ಗುರುತಿಸಿ, ಆತನಿಗೆ ಸೂಕ್ತ ಮಾರ್ಗದರ್ಶನವನ್ನು ಶಿಕ್ಷಕರು ನೀಡಬೇಕು. ಇದು ಅನುಷ್ಠಾನಕ್ಕೆ ಬರುವವರೆಗೂ ಕಳಪೆ ಫಲಿತಾಂಶವೇ ಗತಿ ಎಂಬುದು ಎಂ.ಬಿ.ಅಂಬಲಗಿ ಅವರ ಅಭಿಮತ.

(ಸಂಪರ್ಕಕ್ಕೆ ಮೊ: 98801 69907)

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.