ಭಾನುವಾರ, ಜನವರಿ 26, 2020
28 °C

ವೋಲ್ವೊ ಬಸ್‌ ಜೀವರಕ್ಷಕ ಸುತ್ತಿಗೆಗಳ ಕಳವು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ತುರ್ತು ಸಂದರ್ಭದಲ್ಲಿ  ಗಾಜುಗಳನ್ನು ಒಡೆಯಲು ವೋಲ್ವೊ ಬಸ್‌ಗಳಲ್ಲಿ ಅಳವಡಿಸಲಾಗಿದ್ದ  ಸುತ್ತಿಗೆಗಳು ಕಳುವಾಗುತ್ತಿವೆ ಎಂದು ಬಿಎಂಟಿಸಿ ಕೈಗೊಂಡಿದ್ದ ಸಮೀಕ್ಷೆಯ ವರದಿ ಬಹಿರಂಗಪಡಿಸಿದೆ.ಇತ್ತೀಚೆಗೆ ಆಂಧ್ರ ಪ್ರದೇಶದ ಮೆಹಬೂಬ್ ನಗರದಲ್ಲಿ ನಡೆದ ವೋಲ್ವೊ ಬಸ್ ದುರಂತದ ನಂತರ ತನ್ನ ವೋಲ್ವೊ ಬಸ್‌ಗಳಲ್ಲಿನ ಸುರಕ್ಷಾ ಕ್ರಮಗಳನ್ನು ಉತ್ತಮ ಪಡಿಸುವ ಸಲುವಾಗಿ ಬಿಎಂಟಿಸಿಯು ಕಳೆದ ನವೆಂಬರ್‌ನಲ್ಲಿ ಸಮೀಕ್ಷೆಯನ್ನು ಕೈಗೊಂಡಿತ್ತು.ಅಪಘಾತ ಮತ್ತು ಬೆಂಕಿ ಅವಘಡದಂತಹ ಸಂದರ್ಭದಲ್ಲಿ ಗಾಜುಗಳನ್ನು ಒಡೆಯಲು ವೋಲ್ವೊ ಬಸ್‌ಗಳಲ್ಲಿ ಅಳವಡಿಸಲಾಗಿದ್ದ 186  ಸುತ್ತಿಗೆಗಳು ಪ್ರಯಾಣಿಕರಿಂದಲೇ  ಕಳುವಾಗಿರುವುದು ಬೆಳಕಿಗೆ ಬಂತು.ಸುತ್ತಿಗೆಗಳ ಕಳ್ಳತನ ಮಾಡಿದ   ಪ್ರಯಾಣಿಕರಿಗೆ ಆ ಬಗ್ಗೆ  ಪಶ್ಚಾತಾಪ ಇರಲಿಲ್ಲ. ‘ಬಸ್‌ಗಳು ಸಾರ್ವಜನಿಕ ಆಸ್ತಿ.ಬಸ್ಸಿನಲ್ಲಿರುವ ಸುತ್ತಿಗೆಯೂ ಸಾರ್ವಜನಿಕರದೆ’ ಎಂಬ ಉತ್ತರ ಪ್ರಯಾಣಿಕನೊಬ್ಬನಿಂದ  ಸಮೀಕ್ಷೆ ಯಲ್ಲಿ ಪಾಲ್ಗೊಂಡಿದ್ದ ಸಂಸ್ಥೆಯ ಸಿಬ್ಬಂದಿಯೊಬ್ಬರಿಗೆ ಲಭ್ಯವಾಗಿದೆ. ಇಂತಹ ಮನೋಭಾವದ ಕಾರಣದಿಂದಲೆ ಬಸ್‌ಗಳಲ್ಲಿನ ಸುತ್ತಿಗೆಗಳು,  ಪ್ರಥಮ ಚಿಕಿತ್ಸಾ ಪೆಟ್ಟಿಗೆ ಮತ್ತು ಅಗ್ನಿಶಾಮಕ ಸಾಧನಗಳು ಕಾಣೆಯಾಗುತ್ತಿರಬಹುದು ಎಂದು  ಸಂಸ್ಥೆಯ ಸಿಬ್ಬಂದಿ ಹೇಳುತ್ತಾರೆ.ನಿಯಮದ ಪ್ರಕಾರ ವೋಲ್ವೊ ಬಸ್‌ಗಳಲ್ಲಿ ಕನಿಷ್ಠ 5 ಸುತ್ತಿಗೆಗಳು, ತಲಾ ಒಂದು ಅಗ್ನಿಶಾಮಕ ಸಾಧನ ಹಾಗೂ ಪ್ರಥಮ ಚಿಕಿತ್ಸಾ ಪೆಟ್ಟಿಗೆಗಳಿರಬೇಕು. ಡಿಪೋಗಳಿಗೆ ಹಿಂದಿರುಗಿದ ಪ್ರತಿ  ಬಾರಿಯೂ ಬಸ್‌ಗಳನ್ನು ಪರೀಕ್ಷಿಸಬೇಕು.ಆದರೆ ಕಳೆದ ಕೆಲವು ತಿಂಗಳುಗಳಿಂದ ಬಸ್‌ಗಳನ್ನು ಪರೀಕ್ಷಿಸುತ್ತಿಲ್ಲ. ಹೀಗಾಗಿ ಸಾವಿರಾರು ಬಸ್‌ಗಳು ಯಾವುದೇ ಸುರಕ್ಷಾ ಸಾಧನಗಳಿಲ್ಲದೆ ಸಂಚರಿಸುತ್ತಿವೆ ಎಂದು ಸಂಸ್ಥೆಯ ಮೂಲಗಳು ತಿಳಿಸುತ್ತವೆ.ಬಿಎಂಟಿಸಿ ವ್ಯವಸ್ಥಾಪಕ ನಿರ್ದೇಶಕ ಅಂಜುಂ ಪರ್ವೇಜ್, ‘ಕಳುವಾಗಿರುವ ಸುತ್ತಿಗೆಗಳನ್ನು ಪುನಃ ಅಳವಡಿಸುವಂತೆ ಸೂಚನೆ ನೀಡಲಾಗಿದೆ.ರೂ 180 ಮೌಲ್ಯದ ಸುತ್ತಿಗೆಯನ್ನು ಪ್ರತಿ ಬಾರಿಯೂ ಅಳವಡಿಸುವುದು ಹೆಚ್ಚಿನ ಹೊರೆಯಾಗುತ್ತದೆ. ಇನ್ನು ಮುಂದೆ ಬಸ್‌ಗಳು ಡಿಪೋಗಳಿಗೆ ಹಿಂದಿರುಗಿದಾಗಲೆಲ್ಲ   ಪರೀಕ್ಷಿಸುವಂತೆ ಸೂಚನೆ ನೀಡಲಾಗುವುದು’ ಎನ್ನುತ್ತಾರೆ.‘ಅವಘಡಗಳ ಸಂದರ್ಭದಲ್ಲಿ ಜೀವರಕ್ಷಣೆಗೆ ನೆರವಾಗುವ ಸಣ್ಣ ಸಾಧ್ಯತೆಯನ್ನೂ ಪ್ರಯಾಣಿಕರೆ ಇಲ್ಲವಾಗಿಸುತ್ತಿರುವುದು ಬೇಸರದ ಸಂಗತಿ.  ದುರಂತಗಳು ಸಂಭವಿಸದಂತೆ ಎಚ್ಚರ ವಹಿಸುವಲ್ಲಿ ಸಾರ್ವಜನಿಕರ ಸಹಕಾರವನ್ನೂ ಬಿಎಂಟಿಸಿ ನಿರೀಕ್ಷಿಸುತ್ತಿದೆ’ ಎಂದು ಅವರು ಹೇಳಿದರು.

ಪ್ರತಿಕ್ರಿಯಿಸಿ (+)