ಸೋಮವಾರ, ಮಾರ್ಚ್ 8, 2021
31 °C

ವ್ಯರ್ಥವಾಗುವ ಮಳೆಗೆ ದಾರಿ ತೋರಿ...

ನಾಗರಾಜ ಎಸ್‌. ಹಣಗಿ Updated:

ಅಕ್ಷರ ಗಾತ್ರ : | |

ವ್ಯರ್ಥವಾಗುವ ಮಳೆಗೆ ದಾರಿ ತೋರಿ...

ಮಳೆಗಾಲದಲ್ಲಿ ಲಕ್ಷಾಂತರ ಲೀಟರ್‌ ನೀರು ವ್ಯರ್ಥವಾಗಿ ಹರಿದುಹೋಗುತ್ತದೆ. ಹೀಗೆ ಬಿದ್ದ ನೀರನ್ನು ತಡೆ ಹಿಡಿದು ಅದನ್ನು ಬಳಸುವ ನಿಟ್ಟಿನಲ್ಲಿ ಹಿಂದೆಲ್ಲಾ ಕೆರೆಗಳನ್ನು ಕಟ್ಟಿಸಲಾಗುತ್ತಿತ್ತು. ಆದರೆ ಇದೀಗ ಕೆರೆ ಅಂಗಳವೆಲ್ಲಾ ಒತ್ತುವರಿಯಾಗಿ ಎಲ್ಲೆಡೆಯೂ ಕಟ್ಟಡಗಳೇ ರಾರಾಜಿಸುತ್ತಿವೆ.ಮಳೆ ಬಂತೆಂದರೆ ನೀರು ಹರಿದು ಹೋಗಲೂ ಜಾಗವಿಲ್ಲ. ಇದರ ಪರಿಣಾಮದಿಂದ ಜನರೇ ಪರದಾಡುವ ಪರಿಸ್ಥಿತಿ ಪ್ರತಿವರ್ಷ ನಮ್ಮ ಕಣ್ಣೆದುರೇ ಇದೆ. ಹೀಗಿದ್ದರೂ ಜನರ ಮನಸ್ಥಿತಿ ಮಾತ್ರ ಬದಲಾಗಿಲ್ಲ. ಇಂಥ ಕಟ್ಟಡಗಳ ನಿರ್ಮಾಣಕ್ಕೆ ಸ್ಥಳೀಯ ಸಂಸ್ಥೆಗಳ ಅನುಮತಿ ಬೇರೆ!ಇಂಥ ಪರಿಸ್ಥಿತಿ ನಡುವೆ, ಕೆರೆಯನ್ನು ಉಳಿಸಿಕೊಂಡು ನಮಗಷ್ಟೇ ಅಲ್ಲದೇ ಮುಂದಿನ ಪೀಳಿಗೆಗೂ ನೆರವಾಗುವಂಥ ಕಾರ್ಯಕ್ಕೆ ನಾಂದಿ ಹಾಡಿದೆ ಗದಗ ಜಿಲ್ಲೆಯ ಶಿರಹಟ್ಟಿ.ಬರದ ನಾಡುಗಳ ಪಟ್ಟಿಯಲ್ಲಿ ಗದಗದ ಪಾಲು ದೊಡ್ಡದಿದೆ. ಆದರೆ ಇಂಥ ಸಮಸ್ಯೆ ಹೋಗಲಾಡಿಸುವ ನಿಟ್ಟಿನಲ್ಲಿ ಮಳೆ ನೀರನ್ನು ಹಿಡಿದಿಡುವ ಕಾರ್ಯ ಇಲ್ಲಿ ಸದ್ದಿಲ್ಲದೇ ಸಾಗಿದೆ. ಸ್ಥಳೀಯ ಜನಪ್ರತಿನಿಧಿಗಳ ಸಹಕಾರವಿದ್ದರೆ, ಯಾವುದೇ ಪ್ರದೇಶ ಮಾದರಿಯಾಗಬಲ್ಲದು ಎಂಬುದಕ್ಕೆ ಶಿರಹಟ್ಟಿಯ ಈ ಹೊಸ ಪ್ರಯತ್ನ ಒಂದು ಉದಾಹರಣೆ.ಏಕೆಂದರೆ ಬರದ ಗಂಭೀರ ಪರಿಸ್ಥಿತಿ ಅರಿತು, ಜನರಿಗೆ ಇನ್ನು ಮುಂದೆ ನೀರಿನ ಅಭಾವ ಕಾಡಬಾರದು ಎಂಬ ಕಾರಣದಿಂದ ಸ್ಥಳೀಯ ಶಾಸಕ ರಾಮಕೃಷ್ಣ ದೊಡ್ಡಮನಿಯವರು ಕೆರೆ ನಿರ್ಮಾಣ ಮಾರ್ಗವನ್ನು ಕಂಡುಕೊಂಡಿದ್ದಾರೆ. ಜಿಲ್ಲೆಯ ಮಾಗಡಿ ಗ್ರಾಮದಿಂದ ಪುಟಗಾಂವ್‌ ಬಡ್ನಿ ಮಾರ್ಗವಾಗಿ ಹರಿದಿರುವ ದೊಡ್ಡ ಹಳ್ಳಕ್ಕೆ ಅಲ್ಲಲ್ಲಿ ಸಿರೀಜ್‌ ಚೆಕ್‌ ಡ್ಯಾಂಗಳನ್ನು ಕಟ್ಟಿಸುವ ಇವರ ಕನಸು ಈಗ ನನಸಾಗಿದೆ.ಈ ಹಳ್ಳ ಹತ್ತಾರು ಕಿಲೋ ಮೀಟರ್‌ ಹರಿದು ಕೊನೆಗೆ ತುಂಗಭದ್ರಾ ನದಿಯನ್ನು ಸೇರುತ್ತದೆ. ಇಂಥ ಹಳ್ಳಕ್ಕೆ ಕಿಲೋ ಮೀಟರ್‌ ಒಂದರಂತೆ 18 ಸಿಡಿ (ಚೆಕ್‌ ಡ್ಯಾಂ) ಗಳನ್ನು ಸಣ್ಣ ನೀರಾವರಿ ಇಲಾಖೆ ವತಿಯಿಂದ ನಿರ್ಮಿಸಲು ಶಾಸಕರು ತೀರ್ಮಾನಿಸಿದರು.ಇದಕ್ಕಾಗಿ ಸರ್ಕಾರ 14 ಕೋಟಿ ರೂಪಾಯಿ ಅನುದಾನ ನೀಡಿತು. ಬೆಂಗಳೂರಿನ ಅಮೃತ ಕನ್‌ಸ್ಟ್ರಕ್ಷನ್ಸ್‌ ಕಂಪೆನಿಗೆ ಡ್ಯಾಂಗಳ ನಿರ್ಮಾಣದ ಗುತ್ತಿಗೆ ದೊರೆಯಿತು. ಈಗಾಗಲೇ 10 ಚೆಕ್‌ ಡ್ಯಾಂಗಳ ಕಾಮಗಾರಿ ಪೂರ್ಣಗೊಂಡಿದ್ದು, ಎಲ್ಲ ಡ್ಯಾಂಗಳು ಒಡಲ ತುಂಬ ನೀರನ್ನು ತುಂಬಿಕೊಂಡಿವೆ.‘ಮಳೆಗಾಲದಲ್ಲಿ ಸಾಕಷ್ಟು ನೀರು ವ್ಯರ್ಥವಾಗಿ ಹರಿದು ಹೋಗುತ್ತಿತ್ತು. ಅದನ್ನು ತಡೆದರೆ ರೈತರಿಗೆ ಹಾಗೂ ಜನತೆಗೆ ಬಹಳ ಅನುಕೂಲ ಆಗುತ್ತದೆ. ಅಲ್ಲದೆ ಅಂತರ್ಜಲ ಮಟ್ಟವೂ ಹೆಚ್ಚುತ್ತದೆ ಎಂಬುದನ್ನು ಮನಗಂಡು ಹಳ್ಳಕ್ಕೆ ಚೆಕ್‌ ಡ್ಯಾಂಗಳನ್ನು ನಿರ್ಮಿಸಲು ನಿರ್ಧರಿಸಲಾಯಿತು. ಈ ವರ್ಷದ ಮುಂಗಾರು ಮಳೆಗೆ 10 ಚೆಕ್‌ ಡ್ಯಾಂಗಳಲ್ಲಿ ನೀರು ನಿಂತಿದ್ದು ನಮ್ಮ ಕೆಲಸವನ್ನು ಸಾರ್ಥಕಗೊಳಿಸಿದೆ’ ಎನ್ನುತ್ತಾರೆ ರಾಮಕೃಷ್ಣ ದೊಡ್ಡಮನಿ ಅವರು.ಅಂದಹಾಗೆ ರಾಮಕೃಷ್ಣ ಅವರಿಗೆ ಇಂಥ ಒಂದು ಯೋಜನೆ ರೂಪಿಸಲು ಮಹಾರಾಷ್ಟ್ರ ಪ್ರೇರಣೆ. ‘ಮಹಾರಾಷ್ಟ್ರದಲ್ಲಿ ಈ ರೀತಿಯ ಸಿರೀಜ್‌ ಚೆಕ್‌ ಡ್ಯಾಂಗಳನ್ನು ಪ್ರತಿಯೊಬ್ಬ ರೈತರು ಮೂರು ಸಾವಿರ ರೂಪಾಯಿ ವಂತಿಗೆ ಹಾಕಿ ನಿರ್ಮಿಸಿದ್ದಾರೆ.

ಈ ಮೂಲಕ ಮಳೆ ನೀರು ಸಂಗ್ರಹದಲ್ಲಿ ಯಶಸ್ಸು ಕಂಡಿದ್ದಾರೆ. ಇದನ್ನು ಕಣ್ಣಾರೆ ಕಂಡ ನಾನು ಅದೇ ರೀತಿ ನನ್ನ ಕ್ಷೇತ್ರದಲ್ಲೂ ಮಾಡಬೇಕು ಎಂದು ಕನಸು ಕಂಡಿದ್ದೆ. ನನ್ನ ಕನಸನ್ನು ಸರ್ಕಾರದ ಮುಂದಿಟ್ಟೆ. ಮುಖ್ಯಮಂತ್ರಿಗಳು ಅನುದಾನ ನೀಡಲು ಒಪ್ಪಿ, ಅದನ್ನು ಬಿಡುಗಡೆ ಮಾಡಿದರು.ಆದ್ದರಿಂದ ಇಂಥ ಒಂದು ಯೋಜನೆ ರೂಪಿಸಲು ಸಾಧ್ಯವಾಯಿತು’ ಎನ್ನುತ್ತಾರೆ ಅವರು. ಈಗಾಗಲೇ ಶಿರಹಟ್ಟಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಇಂಥ 42 ಚೆಕ್‌ ಡ್ಯಾಂಗಳನ್ನು ನಿರ್ಮಿಸಲಾಗಿದೆ. ಅಲದೇ ಪ್ರತಿ ವರ್ಷ ಕ್ಷೇತ್ರದಲ್ಲಿ 100 ಚೆಕ್‌ ಡ್ಯಾಂಗಳನ್ನು ಕಟ್ಟುವ ಗುರಿಯನ್ನು ಹೊಂದಿದ್ದಾರೆ.ಅಂತರ್ಜಲ ಹೆಚ್ಚಿಸುವುದು ಬ್ಯಾರೇಜ್‌ಗಳ ನಿರ್ಮಾಣದ ಪ್ರಮುಖ ಗುರಿ. ಇದರೊಂದಿಗೆ ರೈತರು ಬ್ಯಾರೇಜ್‌ಗಳಲ್ಲಿನ ನೀರಿನಿಂದ ನೀರಾವರಿ ಮಾಡಿಕೊಳ್ಳಬಹುದು. ದನಕರುಗಳಿಗೆ ಕುಡಿಯಲು ಬರಗಾಲದಲ್ಲೂ ನೀರು ದೊರೆಯುತ್ತದೆ.ಇದರೊಂದಿಗೆ ಬ್ಯಾರೇಜ್‌ಗಳಲ್ಲಿನ ನೀರು ಸಾರ್ವಜನಿಕರ ಉಪಯೋಗಕ್ಕೆ ಬರುತ್ತದೆ. ಹೀಗೆ ಬ್ಯಾರೇಜ್‌ ನಿರ್ಮಾಣದಿಂದ ಹತ್ತು ಹಲವು ಉಪಯೋಗಗಳು ಆಗುತ್ತವೆ’ ಎಂಬ ಆಶಯ ನೀರಾವರಿ ಇಲಾಖೆಯ ಕೆ.ಶೋಭಾ ಅವರದ್ದು.‘ನಮ್ಮೂರಿನ ಹಳ್ಳದ ನೀರು ಉಪಯೋಗವಿಲ್ಲದೆ ಹರಿದು ಹೋಗ್ತಿತ್ತು. ಈಗ ಡ್ಯಾಂ ಕಟ್ಟಿದ್ದರಿಂದ ಮಳೆಗಾಲದಾಗ ಅವು ತುಂಬಿ ನಮಗೆಲ್ಲ ಅನುಕೂಲ ಆಗೇತಿ. ನಮ್ಮ ಹಳ್ಳಿ ಸುತ್ತಮುತ್ತಲಿನ ಬೋರ್‌ಗಳು ರೀಚಾರ್ಜ್‌ ಆಗ್ಯಾವ್ರೀ’ ಎಂದು ಬಟ್ಟೂರು ಗ್ರಾಮದ ನಿವಾಸಿ ಯು.ಎನ್‌. ಹೊಳಲಾಪುರ ಹಾಗೂ ಬಸವರಾಜ ಉಪ್ಪಿನ ಹೇಳುತ್ತಾರೆ.‘ತಾಲ್ಲೂಕಿನಲ್ಲಿ ಕಟ್ಟಿರುವ ಚೆಕ್‌ ಡ್ಯಾಂಗಳು ತುಂಬಿದ್ದು ನಮಗೆ ಆನಂದವಾಗಿದೆ. ಮಳಿಗಾಲ್ದಾಗ ಇಷ್ಟು ನೀರು ಹಾಳಾಗಿ ಹೋಗ್ತಿತ್ತು. ಇದನ್ನು ಸಂಗ್ರಹ ಮಾಡಾಕ ಶಾಸಕರು ಮನಸ್ಸು ಮಾಡಿದ್ದು ನಮಗ ಆನಂದ ತಂದೈತ್ರೀ’ ಎಂದು ಸಂತಸಪಡುತ್ತಾರೆ ಜಿಲ್ಲಾ ಪಂಚಾಯಿತಿ ಕೃಷಿ ಮತ್ತು ಕೈಗಾರಿಕೆ ಸ್ಥಾಯಿ ಸಮಿತಿ ಅಧ್ಯಕ್ಷ ಎಸ್‌.ಪಿ. ಬಳಿಗಾರ.ಶಾಸಕರ ಮಳೆ ನೀರಿನ ಸಂಗ್ರಹ ಕ್ಷೇತ್ರದ ಜನತೆಯಲ್ಲಿ ಹೊಸ ಆಸೆ ಚಿಗುರಿಸಿದೆ. ಚೆಕ್‌ ಡ್ಯಾಂಗಳಲ್ಲಿ ನೀರು ನಿಂತಿರುವುದರಿಂದ ಬಹಳಷ್ಟು ರೈತರು ಕಟ್ಟಿಸಿರುವ ಬೋರ್‌ವೆಲ್‌ಗಳು ರೀಚಾರ್ಜ್‌ ಆಗಿದ್ದು, ಇಲಾಖೆ ಕೆಲಸ ಸಾರ್ಥಕತೆ ಕಂಡಿದೆ.  

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.