ಭಾನುವಾರ, ಜನವರಿ 26, 2020
27 °C

ವ್ಯಾಜ್ಯಕ್ಕೆ ಪೂರ್ಣವಿರಾಮ ಹಾಡಿ: ಹೈಕೋರ್ಟ್‌

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಧಾರವಾಡ: ಪ್ರಕರಣದ ಪರಿಣಾಮ ಯಾರ ಪರವಾಗಿ ಆದರೂ ಅದು ಅಲ್ಲಿಗೆ ಮುಗಿಯು­ವುದಿಲ್ಲ. ಮುಂದು­ವರಿ­ಯುತ್ತದೆ. ಆದರೆ ಇದರಲ್ಲಿ ನಿರಂತರವಾಗಿ ಶೋಷಣೆಗೆ ಒಳಗಾಗು­ವವರು ಕಬ್ಬು ಬೆಳೆಗಾರರು. ಕಂಪೆನಿ ವಿಷಯದಲ್ಲಿ ಒಂದು ಸಲ ಲಾಭ, ಇನ್ನೊಂದು ಸಲ ನಷ್ಟ ಇದ್ದೇ ಇರುತ್ತದೆ. ರಾಜಿ ಸೂತ್ರದ ಮೂಲಕ ಇದಕ್ಕೆ ಕೊನೆ ಹಾಡಿ ಎಂದು ಇಲ್ಲಿನ ಹೈಕೋರ್ಟ್‌ಪೀಠ ಸೋಮವಾರ ಮತ್ತೊಮ್ಮೆ ಉಭಯ ಬಣಗಳ ವಕೀಲರಿಗೆ ಕಿವಿ ಮಾತು ಹೇಳಿತು. ಸಕ್ಕರೆ ಕಾರ್ಖಾನೆಗೆ ಪೂರೈಸಿದ ಕಬ್ಬಿನ ಬಾಕಿ ಹಣಕ್ಕೆ ಸಂಬಂಧಿಸಿದಂತೆ ರಾಜಿ ಸೂತ್ರದಡಿ ಒಪ್ಪಂದವೊಂದಕ್ಕೆ ಬಂದು ಪ್ರಕರಣವನ್ನು ಮುಕ್ತಾಯಗೊಳಿ­ಸಬೇಕು ಎಂದು ಕಳೆದ ವಿಚಾರಣೆ ಸಂದರ್ಭದಲ್ಲಿ ನೀಡಿದ್ದ ಸಲಹೆಯನ್ನು ಉಭಯಬಣಗಳು ಪ್ರಸ್ತಾವಗಳನ್ನು ಒಪ್ಪಿಕೊಳ್ಳದ ಹಿನ್ನೆಲೆಯಲ್ಲಿ ವಿಚಾರಣೆ ಮುಂದುವರಿಸಿದ ನ್ಯಾಯಮೂರ್ತಿ ಎಲ್‌.ನಾರಾಯಣಸ್ವಾಮಿ ಅವರಿದ್ದ ಏಕಸದಸ್ಯಪೀಠ ಕಲಾಪದ ಬಹುತೇಕ ಸಮಯವನ್ನು ಕಂಪೆನಿ ಪರ ವಕೀಲರ ವಾದ ಮಂಡನೆಗೆ ವಿನಿಯೋಗಿಸಿತು.ಇಷ್ಟಾಗಿಯೂ ವಾದ ಮಂಡನೆ ಪೂರ್ಣಗೊಳ್ಳದ ಹಿನ್ನೆಲೆಯಲ್ಲಿ ‘ ದೀರ್ಘ ಸಮಯದಿಂದ ಈ ವ್ಯಾಜ್ಯ ನಡೆ­ಯುತ್ತಿದೆ. ಇನ್ನು ಮುಂದೆ ಇದೊಂದೆ ಪ್ರಕರಣಕ್ಕೆ ಮತ್ತಷ್ಟು ಸಮಯ ನೀಡಲು ಸಾಧ್ಯವಿಲ್ಲ. ಇದೇನು ಸಾಂವಿಧಾನಿಕ ಬಿಕ್ಕಟ್ಟಿಗೆ ಸಂಬಂಧಿಸಿದ ಪ್ರಕರಣವಲ್ಲ. ಬೇರೆ ಪ್ರಕರಣಗಳು ಅಷ್ಟೇ ಮುಖ್ಯ’ ಎಂದು ಸೂಚಿಸಿ ವಿಚಾರಣೆಯನ್ನು ಡಿ.18 ಕ್ಕೆ ಮುಂದೂಡಿತು. ಹೊಸಪೇಟೆಯ ಇಂಡಿಯಾ ಶುಗರ್ಸ್‌ ಮತ್ತು ರಿಫೈನರೀಸ್‌ ಲಿ. ಕಬ್ಬು ಬೆಳೆಗಾರರಿಗೆ ನೀಡಬೇಕಾಗಿರುವ ಬಾಕಿ ಹಣವನ್ನು ನೀಡುವಂತೆ ಸಕ್ಕರೆ ಆಯುಕ್ತರು ನೀಡಿದ್ದ ಆದೇಶವನ್ನು ಪ್ರಶ್ನಿಸಿ ಕಂಪೆನಿ ರಿಟ್‌್ ಅರ್ಜಿ ಸಲ್ಲಿಸಿದೆ.ನ್ಯಾಯಾಂಗ ನಿಂದನಾ ಅರ್ಜಿ ವಿಚಾರಣೆ ಮುಂದೂಡಿಕೆ

ಧಾರವಾಡ:
‘ನ್ಯಾಯಾಲಯದ ಆದೇಶ ಬಂದಾಗ ಹುದ್ದೆಯಲ್ಲಿದ್ದ ಅಧಿಕಾರಿಗಳು ಬೇರೆ ಇಲಾಖೆಗೆ ವರ್ಗಾವಣೆ ಹೊಂದಿದ್ದರೆ, ಅವರ ವಿರುದ್ಧ ನ್ಯಾಯಾಂಗ ನಿಂದನಾ ಆರೋಪಪಟ್ಟಿ ಸಿದ್ಧಪಡಿಸಿ ಅವರನ್ನು ಹೊಣೆ­ಗಾರರನ್ನಾಗಿಸುವುದು ಹೇಗೆ? ಸಂಬಂ­ಧಿಸಿದ ಹುದ್ದೆಯಲ್ಲಿ ಇಲ್ಲದೇ ಅಧಿಕಾರಿ­ಗಳು ನ್ಯಾಯಾಲಯದ ಆದೇಶ­ವನ್ನು ಅನುಷ್ಠಾನಗೊಳಿಸುವುದು ಹೇಗೆ ಸಾಧ್ಯ? ಎಂದು ಇಲ್ಲಿನ ಹೈಕೋರ್ಟ್‌­ಪೀಠ ಮೌಖಿಕವಾಗಿ ಪ್ರಶ್ನಿಸಿತು.ಸೂಚಿತ ಪ್ರದೇಶದ ಸಕ್ಕರೆ ಕಾರ್ಖಾ­ನೆಗೆ ಕಬ್ಬು ಪೂರೈಸಲು ಅಗತ್ಯ ಕ್ರಮ­ಗಳನ್ನು ಕೈಗೊಳ್ಳುವಂತೆ ನ್ಯಾಯಾಲಯ ನೀಡಿದ್ದ ಆದೇಶವನ್ನು ಅಧಿಕಾರಿಗಳು ಉದ್ದೇಶಪೂರ್ವಕವಾಗಿ ಪಾಲಿಸಿಲ್ಲ ಎಂದು ಆರೋಪಿಸಿ ಹೊಸಪೇಟೆಯ ಇಂಡಿಯಾ ಶುಗರ್ಸ್‌ ಮತ್ತು ರಿಫೈನರೀಸ್ ಲಿ. ಸಲ್ಲಿಸಿದ್ದ ನ್ಯಾಯಾಂಗ ನಿಂದನಾ ಅರ್ಜಿಯ ವಿಚಾರಣೆಯನ್ನು ಸೋಮವಾರ ಮುಂದುವರಿಸಿದ ನ್ಯಾಯಮೂರ್ತಿ ದಿಲೀಪ ಭೋಸ್ಲೆ ಮತ್ತು ಬಿ.ಮನೋಹರ ಅವರಿದ್ದ ವಿಭಾಗೀಯ ಪೀಠ ‘ಕಬ್ಬು ನುರಿಸುವ ಅವಧಿ ಇನ್ನೂ ಪೂರ್ಣಗೊಂಡಿಲ್ಲ. ಹೀಗಾಗಿ ಈ ಕುರಿತು ಆದೇಶ ಮಾಡುವುದು ಸಾಧುವಲ್ಲ.2013ರ ಜುಲೈ 24 ರಂದು ದೋಷಾರೋಪಣಾ ಪಟ್ಟಿ ಸಿದ್ಧಪಡಿಸುವ ಕುರಿತು ವಿಭಾ­ಗೀಯ ಪೀಠ ನೀಡಿದ್ದ ಆದೇಶ ಹಿಂಪಡೆಯಬೇಕು ಎನ್ನುವ ಅರ್ಜಿಯ ವಿಚಾರಣೆಯನ್ನು ಅರ್ಜಿದಾರರು ಮುಖ್ಯ ನ್ಯಾಯಮೂರ್ತಿಗಳ ಗಮನಕ್ಕೆ ತಂದು ಆದೇಶ ನೀಡಿದ್ದ ನ್ಯಾಯ­ಮೂರ್ತಿಗಳ ಪೀಠದ ಮುಂದೆಯೇ ಆದೇಶ ಪಡೆದು­ಕೊಳ್ಳುವಂತೆ ಸೂಚಿಸಿ ವಿಚಾರಣೆಯನ್ನು ಮುಂದೂಡಿತು. 2011 ರ ಜುಲೈ 15 ರಂದು ವಿಭಾಗೀಯ ಪೀಠ ನೀಡಿದ್ದ ಆದೇಶವನ್ನು ಪಾಲಿಸದ ಹಿನ್ನೆಲೆಯಲ್ಲಿ ಕಂಪೆನಿ ನ್ಯಾಯಾಂಗ ನಿಂದನಾ ಅರ್ಜಿ ಸಲ್ಲಿಸಿತ್ತು.  ಆದೇಶದ ಹಿನ್ನಲೆಯಲ್ಲಿ ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆಯ ಅಂದಿನ ಆಯುಕ್ತರಾಗಿದ್ದ ಅನಿಲಕುಮಾರ ಝಾ, ಕಬ್ಬು ಮತ್ತು ಸಕ್ಕರೆ ಆಯೋಗದ ಅಂದಿನ ನಿರ್ದೇಶಕ ಸತ್ಯಮೂರ್ತಿ, ಬಳ್ಳಾರಿ ಜಿಲ್ಲಾಧಿಕಾರಿ ಆದಿತ್ಯ ಆಮ್ಲಾನ್‌ ಬಿಸ್ವಾಸ್‌ ಮತ್ತು ಹೊಸಪೇಟೆ ಉಪವಿಭಾಗಾಧಿಕಾರಿಗಳಿಗೆ ನ್ಯಾಯಪೀಠದ ಮುಂದೆ ಖುದ್ದು ಹಾಜರಾಗುವಂತೆ ಆದೇಶಿಸಿ, ನ್ಯಾಯಾಂಗ ನಿಂದನಾ ಪ್ರಕರಣವನ್ನು ಜಾರಿಯಲ್ಲಿಟ್ಟು, ಪ್ರಸ್ತುತ ಸಾಲಿಗೆ ಜಿಲ್ಲೆಯಲ್ಲಿ ಬೆಳೆಯುವ ಕಬ್ಬನ್ನು ಸೂಚಿತ ಕಂಪೆನಿಗೆ ಪೂರೈಕೆಯಾಗುವಂತೆ ಮಾಡಲು ಕೈಗೊಳ್ಳಲಾಗುವ ಕ್ರಮಗಳ ಕುರಿತು ಪರಾಮರ್ಶಿಸಲಾಗುವುದು ಎಂದು ಹೇಳಿತ್ತು.ಪ್ರಕರಣ ತನಿಖೆ ವಿಳಂಬಕ್ಕೆ ಅತೃಪ್ತಿ

ಧಾರವಾಡ: ವ್ಯಕ್ತಿಯೊಬ್ಬ ಕೊಲೆಯಾಗಿ ಎರಡು ವರ್ಷಗಳಾದರೂ ಆರೋಪಿಗಳನ್ನು ಪತ್ತೆ ಹಚ್ಚಲು ಸಾಧ್ಯವಾಗದಿದ್ದರೆ, ಸಾಮಾನ್ಯ ಜನರ ಜೀವಕ್ಕೆ ರಕ್ಷಣೆ ಎಲ್ಲಿದೆ ಎಂದು ಇಲ್ಲಿನ ಹೈಕೋರ್ಟ್‌ಪೀಠ ಸೋಮವಾರ ಸರ್ಕಾರಿ ವಕೀಲರನ್ನು ಖಾರವಾಗಿ ಪ್ರಶ್ನಿಸಿತು.ಮಗನ ಕೊಲೆಯಾಗಿ ಎರಡು ವರ್ಷಗಳು ಕಳೆದಿವೆ. ಇದುವರೆಗೆ ಆರೋಪಿಗಳ ಕುರಿತು ಯಾವುದೇ ಮಾಹಿತಿ ಇಲ್ಲ. ತನಿಖೆ ನಡೆಸುತ್ತಿರುವ ಅಧಿಕಾರಿಗಳನ್ನು ಕೇಳಿದರೆ ಯಾವುದೇ ಸುಳಿವು ಇಲ್ಲ ಎನ್ನುವ ಉತ್ತರ ನೀಡುತ್ತಾರೆ.

ಹೀಗಾಗಿ ತನಿಖೆಯನ್ನು ಪರ್ಯಾಯ ತನಿಖಾ ಸಂಸ್ಥೆಗೆ ವಹಿಸುವಂತೆ ನಿರ್ದೇಶನ ನೀಡಬೇಕು ಎಂದು ಕೋರಿ ಇಲ್ಲಿನ ಸಾಧುನಗರ ನಿವಾಸಿ ಮೊಹಮ್ಮದ್‌ ಫರೀದ್‌ ಎನ್ನುವವರು ಸಲ್ಲಿಸಿದ್ದ ರಿಟ್‌ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಲ್‌.ನಾರಾಯಣಸ್ವಾಮಿ ಅವರಿದ್ದ ಏಕಸದಸ್ಯಪೀಠ ‘ಇದನ್ನು ಗಮನಿಸಿದರೆ ಸಂಬಂಧಿಸಿದ ಅಧಿಕಾರಿಗಳು ತಮ್ಮ ಕರ್ತವ್ಯವನ್ನು ಸಮರ್ಪಕವಾಗಿ ನಿಭಾಯಿಸಿಲ್ಲ ಎನ್ನುವದು ಕಂಡು ಬರುತ್ತದೆ. ಸಂಬಂಧಿಸಿದ ಅಧಿಕಾರಿಗಳ ಮೇಲೆ ಕ್ರಮ ಜರುಗಿಸಲು ನಿರ್ದೇಶನ ನೀಡಬೇಕಾಗುತ್ತದೆ’ ಎಂದು

ಎಚ್ಚರಿಸಿತು.   

 

2011ರ ಫೆಬ್ರುವರಿ 11ರಂದು ಧಾರವಾಡದ ಸಾಧುನವರ ಎಸ್ಟೇಟ್‌ನಲ್ಲಿ ಅಬ್ದುಲ್ ಖಾದರ್‌ ಎನ್ನುವ ಯುವಕನನ್ನು ಗುಂಡಿಟ್ಟು ಕೊಲ್ಲಲಾಗಿತ್ತು. ಪ್ರಕರಣ ದಾಖಲಿಸಿಕೊಂಡಿದ್ದ ಪೊಲೀಸರು ತನಿಖೆ ಆರಂಭಿಸಿದ್ದರು. ಎರಡು ವರ್ಷಗಳು ಕಳೆದರೂ ಆರೋಪಿಗಳನ್ನು ಬಂಧಿಸಲು ಸಾಧ್ಯವಾಗಿರದ ಹಿನ್ನೆಲೆಯಲ್ಲಿ ಮೃತನ ತಂದೆ ಮೊಹಮ್ಮದ್‌ ಫರೀದ ಹೈಕೋರ್ಟ್‌ನಲ್ಲಿ ರಿಟ್‌ ಅರ್ಜಿ ದಾಖಲಿಸದ್ದಾರೆ.‘ಸಂಬಂಧಿಸಿದ ಅಧಿಕಾರಿಗಳಿಂದ ಸಮಗ್ರ ಮಾಹಿತಿ ಪಡೆದು ನ್ಯಾಯಾಲಯದ ಗಮನಕ್ಕೆ ತನ್ನಿ, ಇಲ್ಲದಿದ್ದರೆ ಪ್ರಕರಣದ ವಿಚಾರಣೆಯನ್ನು ಸಿಸಿಬಿ ಅಥವಾ ಸಿಬಿಐಗೆ ವಹಿಸುವಂತೆ ನಿರ್ದೇಶನ ನೀಡಬೇಕಾಗುತ್ತದೆ ಎಂದು ಸರ್ಕಾರಿ ವಕೀಲರಿಗೆ ಸೂಚಿಸಿ ವಿಚಾರಣೆಯನ್ನು ಡಿ.18 ಕ್ಕೆ ಮುಂದೂಡಿತು. ಅರ್ಜಿದಾರರ ಪರವಾಗಿ ವಿದ್ಯಾಶಂಕರ ದಳವಾಯಿ ವಕಾಲತ್ತುವಹಿಸಿದ್ದಾರೆ.

ಪ್ರತಿಕ್ರಿಯಿಸಿ (+)