ಭಾನುವಾರ, ಮೇ 9, 2021
25 °C

ವ್ಯಾಪಾರಿ ಕೇಂದ್ರಗಳಾದ ದೇವಾಲಯಗಳು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಯಾದಗಿರಿ: ದೇಶದ ದೇವಾಲಯಗಳು ಪ್ರಸ್ತುತ ದಿನಗಳಲ್ಲಿ ವ್ಯಾಪಾರ ಕೇಂದ್ರಗಳಾಗಿವೆ ಎಂದು ಹಿರಿಯ ಸಾಹಿತಿ ಲಿಂಗಣ್ಣ ಸತ್ಯಂಪೇಟ್ ವಿಷಾದಿಸಿದರು.ವಲಯ ವೀರಶೈವ ಸಮಾಜದ ವತಿಯಿಂದ ಮಂಗಳವಾರ ಸಂಜೆ ತಾಲ್ಲೂಕಿನ ಸೈದಾಪುರದಲ್ಲಿ ಹಮ್ಮಿಕೊಂಡಿದ್ದ ಬಸವ ಜಯಂತಿಯ ಶತಮಾನೋತ್ಸವ ಕಾರ್ಯಕ್ರಮದಲ್ಲಿ ಅವರು ವಿಶೇಷ ಉಪನ್ಯಾಸ ನೀಡಿದರು.ಜಗತ್ತಿನಲ್ಲಿಯೇ ಭಾರತದ ದೇವಾಲಯಗಳು ಅತ್ಯಂತ ಶ್ರೀಮಂತ ದೇವಸ್ಥಾನಗಳಾಗಿವೆ. ದೇಶದ ರಾಜಕಾರಣಿಗಳು ಭ್ರಷ್ಟಾಚಾರದಿಂದ ಗಳಿಸಿದ ಹಣವನ್ನು ಒಳ್ಳೆಯ ಕೆಲಸಗಳಿಗೆ ಉಪಯೋಗಿಸದೇ ಹೆಚ್ಚಿನ ಪ್ರಮಾಣದಲ್ಲಿ ದೇವಸ್ಥಾನಗಳಿಗೆ ನೀಡುತ್ತಿರುವುದಕ್ಕೆ ತೀವ್ರ ಆಕ್ರೋಶ ವ್ಯಕ್ತಪಡಿಸಿದರು.ಸ್ಪರ್ಧಾತ್ಮಕ ಯುಗದಲ್ಲಿರುವ ನಾವು ಎಲ್ಲ ರಂಗಗಳಲ್ಲೂ ಪ್ರಗತಿ ಸಾಧಿಸುತ್ತಿದ್ದೇವೆ. ಆದರೂ ಗ್ರಾಮೀಣ ಜನತೆ ಇನ್ನೂ ಮೂಢನಂಬಿಕೆ, ಅಂಧಾಚರಣೆ ಮಾಡುತ್ತಿರುವುದು ಆತಂಕಕಾರಿ ವಿಷಯ. ಇಂತಹ ಜನರಲ್ಲಿ ಕ್ರಾಂತಿಯೋಗಿ ಬಸವಣ್ಣನವರ ತತ್ವ-ಸಿದ್ಧಾಂತಗಳ ಬಗ್ಗೆ ಜಾಗೃತಿ ಮೂಡಿಸಿದಲ್ಲಿ ಮಾತ್ರ ಸದೃಢ ಸಮಾಜ ನಿರ್ಮಾಣ ಮಾಡಲು ಸಾಧ್ಯ ಎಂದು ಅಭಿಪ್ರಾಯಪಟ್ಟರು.ದೇವರ ಎಲ್ಲೆಡೆ ಇದ್ದಾನೆ. ಪ್ರತಿಯೊಬ್ಬರ ಮನಸ್ಸಿನಲ್ಲಿ ಒಂದು ದೈವತ್ವ ಶಕ್ತಿ ಇದೆ. ಅದನ್ನು ಜಾಗೃತಗೊಳಿಸುತ್ತ ಎಲ್ಲರೂ ತಮ್ಮ ವ್ಯಕ್ತಿತ್ವ, ನಡವಳಿಕೆ ಕಾರ್ಯಗಳಿಂದ ಆತ್ಮಸಾಕ್ಷಿಯಾಗಿ ಕ್ರಿಯಾಶೀಲ ಬದುಕನ್ನು ನಡೆಸಿದಲ್ಲಿ ಮಾತ್ರ ಪ್ರಗತಿ ಸಾಧಿಸಬಹುದು ಎಂದು ಹೇಳಿದರು.ಬಸವಣ್ಣ ಎಲ್ಲ ವರ್ಗದ ಜನರಲ್ಲಿ ಸಮಾನತೆ ಮೂಡಿಸಿದರು. ಆದರೆ ಪ್ರಸಕ್ತ ದಿನಗಳಲ್ಲಿ ವೀರಶೈವ ಸಮಾಜದಲ್ಲಿ ಉಪ ಜಾತಿಗಳನ್ನು ಸೃಷ್ಟಿಸಿ ಭೇದ-ಭಾವ ಮಾಡುತ್ತಿರುವುದು ಸರಿಯಲ್ಲ. ಆರೋಗ್ಯಕರ ಸಮಾಜ ನಿರ್ಮಾಣಕ್ಕೆ ತೊಡಕಾಗುತ್ತದೆ ಎಂದು ಅಭಿಪ್ರಾಯಪಟ್ಟರು.ವೀರಶೈವ ಮುಖಂಡ ಶಿವಣ್ಣ ಇಜೇರಿ ಮಾತನಾಡಿ, ಹಿಂದಿನಿಂದಲೂ ಶರಣರು ನಡೆಸಿಕೊಂಡು ಬಂದಿರುವ ಅನ್ನದಾಸೋಹ ಪದ್ಧತಿಯನ್ನು ಬಸವ ಅನುಯಾಯಿಗಳು ಮುಂದುವರಿಸಿಕೊಂಡು ಹೋಗಬೇಕು ಎಂದು ಸಲಹೆ ಮಾಡಿದರು.ಜಗತ್ತಿಗೆ ಕಾಯಕ ಸಂಸ್ಕೃತಿ ನೀಡಿದ ವ್ಯಕ್ತಿ ಬಸವಣ್ಣ. ಬಸವ ಸಾಹಿತ್ಯದಿಂದ ಬದುಕಿಗೆ ಚೈತನ್ಯ ಪಡೆಯಬಹುದು ಎಂದು ಹೇಳಿದರು.ಆನಂದ ಶಾಸ್ತ್ರಿಗಳು, ಚೆನ್ನಬಸವ ಶಾಸ್ತ್ರಿಗಳು ಪ್ರವಚನ ನಡೆಸಿಕೊಟ್ಟರು. ರಾಯಚೂರಿನ ಸೋಮವಾರ ಪೇಟ ಹಿರೇಮಠದ ಅಭಿನವ ರಾಚೋಟಿವೀರ ಶಿವಾಚಾರ್ಯ ಸ್ವಾಮೀಜಿ ನೇತೃತ್ವ ಹಾಗೂ ಕಡೇಚೂರ ಸಂಸ್ಥಾನ ಮಠದ ಗುರುಮೂರ್ತಿ ಶಿವಾಚಾರ್ಯ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಪ್ರಾಂಶುಪಾಲ ಜಿ.ಎಂ. ಗುರುಪ್ರಸಾದ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ನೂರಾರು ಜನ ಭಾಗವಹಿಸಿದ್ದರು.ಅದ್ದೂರಿ ಬಸವ ಜಯಂತಿ: ತಾಲ್ಲೂಕಿನ ಸೈದಾಪುರದಲ್ಲಿ ಅಖಿಲ ಭಾರತ ವೀರಶೈವ ಸಮಾಜ ವಲಯ ಘಟಕದಿಂದ ಮಂಗಳವಾರ ಸಂಜೆ ಬಸವ ಜಯಂತಿ ಅಂಗವಾಗಿ ಬಸವೇಶ್ವರರ ಭಾವಚಿತ್ರದ ಮೆರವಣಿಗೆ ಅದ್ದೂರಿಯಾಗಿ ನಡೆಯಿತು.ಗಂಜ್ ಆವರಣದಿಂದ ಹೊರಟ ಮೆರವಣಿಗೆ, ವಿಶ್ವನಾಥ ಮಂದಿರದವರೆಗೆ ನಡೆಯಿತು. ಮೆರವಣಿಗೆಯಲ್ಲಿ ಡೊಳ್ಳು, ಬಾಜಿ ಭಜಂತ್ರಿ, ಹಲಗೆ ಮುಂತಾದ ಮಂಗಲವಾದ್ಯಗಳು ಗಮನಸೆಳೆದವು. ಬಸವ ಅನುಯಾಯಿಗಳು ಪಟಾಕಿ ಸಿಡಿಸಿ ಸಂಭ್ರಮಿಸಿದರು.ಮೆರವಣಿಯಲ್ಲಿ ವಲಯ ವೀರಶೈವ ಸಮಾಜದ ಅಧ್ಯಕ್ಷ ಬಸವರಾಜಪ್ಪಗೌಡ ಗೊಂದೆಡಗಿ, ಭೀಮರಡ್ಡಿ ಶೆಟ್ಟಿಹಳ್ಳಿ, ಬಸವರಾಜಸ್ವಾಮಿ ಬದ್ದೇಪಲ್ಲಿ, ಮಲ್ಲರಡ್ಡಿಗೌಡ ಕಣೇಕಲ್, ಮಲ್ಲಣಗೌಡ ಕ್ಯಾತನಾಳ, ಶರಣಗೌಡ ಗೊಂದಡಗಿ, ಸಿದ್ಧನಗೌಡ ಕಡೇಚೂರ, ಪ್ರಕಾಶ ಪಾಟೀಲ ಸೈದಾಪೂರ, ಬಸವಂತರಾಯಗೌಡ ಪಾಟೀಲ,

 

ಬಸವಲಿಂಗಪ್ಪಗೌಡ ಕೂಡ್ಲೂರ, ಎಪಿಎಂಸಿ ನಿರ್ದೇಶಕ ಭೀಮನಗೌಡ ಕ್ಯಾತನಾಳ,  ಚಂದ್ರಾಯಗೌಡ, ಸೂಗುರಪ್ಪ ಸಾಹುಕಾರ, ಭೀಮಣಗೌಡ ಕೂಡ್ಲೂರ, ಬಸವರಾಜಪ್ಪಗೌಡ ಸೌರಾಷ್ಟ್ರಹಳ್ಳಿ, ಶಂಕ್ರಪ್ಪಗೌಡ ಬಳಿಚಕ್ರ, ಬಸವರಾಜ ಸ್ವಾಮಿ ಈಡ್ಲೂರ, ಬಸವರಾಜಪ್ಪಗೌಡ ಬೆಳಗುಂದಿ ಸೇರಿದಂತೆ ನೂರಾರು ಜನ ಭಾಗವಹಿಸಿದ್ದರು.

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.