ಭಾನುವಾರ, ಮೇ 16, 2021
22 °C

ವ್ಯಾಪಾರ ಮುಗಿಸಿದ ಗಂಗಾರಾಮ್ಸ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮನಃಶಾಸ್ತ್ರ ಸಂಶೋಧಕ ಪ್ರೊ. ಪ್ರಸನ್ನ ಮೈಸೂರಿನಿಂದ ಬೆಂಗಳೂರಿಗೆ ಬಂದಿದ್ದರು. ಪುಸ್ತಕ ಮಳಿಗೆಯೊಂದರಲ್ಲಿ ತಮಗಿಷ್ಟವಾದ ಪುಸ್ತಕ ಖರೀದಿಸಿ ಕಾಲೇಜು ವಿದ್ಯಾರ್ಥಿಯಂತೆ ಕೈಯಲ್ಲಿ ಹಿಡಿದುಕೊಂಡಿದ್ದರು.

 

ಮೈಸೂರಿನಿಂದ ಬೆಂಗಳೂರಿಗೆ ಅವರು ಪುಸ್ತಕ ಖರೀದಿಯ ಉದ್ದೇಶದಿಂದ ಬಂದವರಲ್ಲ, ಬದಲಾಗಿ 40 ವರ್ಷಗಳಿಂದ ಪುಸ್ತಕ ಮಳಿಗೆಯೊಂದಿಗೆ ಸಂಬಂಧ ಇಟ್ಟುಕೊಂಡಿದ್ದ ಅವರು ಆ ಪುಸ್ತಕ ಮಳಿಗೆ ಮುಚ್ಚುವ ಸುದ್ದಿ ತಿಳಿದು ಅಷ್ಟು ದೂರದಿಂದ ಬಂದವರು.ನಗರದ ಎಂ.ಜಿ.ರಸ್ತೆಯಲ್ಲಿ ಇರುವ ಪ್ರಸಿದ್ಧ ಗಂಗಾರಾಮ್ಸ ಪುಸ್ತಕ ಮಳಿಗೆ ಇನ್ನು ಕೆಲವೇ ವಾರಗಳಲ್ಲಿ ಬಾಗಿಲು ಮುಚ್ಚುತ್ತದೆಂಬ ಸುದ್ದಿ ತಿಳಿದು ಪ್ರಸನ್ನ ಮೈಸೂರಿನಿಂದ ಬೆಂಗಳೂರಿಗೆ ಬಂದಿದ್ದರು. ಇದು ಪುಸ್ತಕಕ್ಕೂ ಸಾಹಿತ್ಯಾಸಕ್ತರಿಗೂ ಇರುವ ಸಂಬಂಧವನ್ನು ಸಾರುತ್ತದೆ.1965ರಲ್ಲಿ ಆರಂಭವಾದ ಗಂಗಾರಾಮ್ಸ ಬುಕ್ ಬ್ಯೂರೊ ಇನ್ನೂ ಕೆಲವೇ ವಾರ ಮಾತ್ರ ತೆರೆದಿರುತ್ತದೆ. ಜೂನ್ ಮೊದಲ ವಾರದಿಂದ ಸೇಂಟ್‌ಮಾರ್ಕ್ಸ್ ರಸ್ತೆಯ ಕೋಶಿಷ್ ಹೋಟೆಲ್ ಮಳಿಗೆಯಲ್ಲಿ ಆರಂಭವಾಗಲಿದೆ.ನಲ್ವತ್ತೇಳು ವರ್ಷ ಸಾಹಿತ್ಯಾಸಕ್ತರ ಮೆಚ್ಚಿನ ಮಳಿಗೆಯಾಗಿದ್ದ ಗಂಗಾರಾಮ್ಸ ಬುಕ್ ಬ್ಯೂರೊ ಎಂ.ಜಿ.ರಸ್ತೆಯಲ್ಲಿ ತನ್ನ ವ್ಯಾಪಾರ ಸ್ಥಗಿತಗೊಳಿಸಲು ಕಾರಣ ಇಲ್ಲಿನ ನೆಲ ಬಾಡಿಗೆ. ಮೆಟ್ರೊ ನಗರಿಯಾದ ಉದ್ಯಾನ ನಗರಿಯಲ್ಲಿ ಕಟ್ಟಡಗಳ ಬಾಡಿಗೆ ದಿನೇ ದಿನೇ ಹೆಚ್ಚಾಗುತ್ತಲೇ ಇದೆ. ಇದರ ಬಿಸಿ ಈ ಪುಸ್ತಕ ಮಳಿಗೆಗೂ ತಟ್ಟಿದೆ.ತಿಂಗಳಿಗೆ ಒಂದು ಚದರ ಅಡಿಗೆ 35 ರೂಪಾಯಿ ಬಾಡಿಗೆ ಕೊಡುತ್ತಿದ್ದ ಮಾಲೀಕರು ಈಗ 300 ರೂಪಾಯಿ ಕೊಡಬೇಕಾಗಿ ಬಂದಿದೆ. ಹಾಗಾಗಿ ನಿರ್ವಹಣೆ ದುಬಾರಿಯಾದ್ದರಿಂದ ಈ ತೀರ್ಮಾನಕ್ಕೆ ಬರಲಾಗಿದೆ ಎನ್ನುತ್ತಾರೆ ಮಾಲೀಕ ಆತ್ಮರಾಮ್ ಎನ್.ಗಂಗಾರಾಮ್.ದೇವಸ್ಥಾನಗಳಿಗೆ ಹೋಗುವಾಗ ಜನರು ಪಾದರಕ್ಷೆಗಳನ್ನು ಹೊರಗಡೆ ಬಿಟ್ಟು ಹೋಗುವಂತೆ, ಗಂಗಾರಾಮ್ಸ ಪುಸ್ತಕ ಮಳಿಗೆಗೆ ಪಾದರಕ್ಷೆ ಬಿಟ್ಟು ಬರುತ್ತಿದ್ದ ಕಾಲವೊಂದಿತ್ತು ಎಂದು ಹೇಳುವಾಗ ಆತ್ಮರಾಮ್ ಅವರ ಕಣ್ಣು ತೇವವಾಯಿತು.ಕಪಾಲಿ ಥಿಯೇಟರ್ ಬಳಿ ಮೊದಲಿಗೆ ಚಿಕ್ಕ ಮಳಿಗೆಯಲ್ಲಿ ಗಂಗಾರಾಮ್ಸ ಬುಕ್‌ಬ್ಯೂರೊ ಪ್ರಾರಂಭಿಸಲಾಯಿತು. ಎನ್.ಗಂಗಾರಾಮ್, ದೇವಿಪ್ರಸಾದ್, ಆತ್ಮರಾಮ್, ಚತುರ್ಭುಜ್, ಪ್ರಕಾಶ್ ಸಹೋದರರು ಸೇರಿ ಆರಂಭಿಸಿದ ಬುಕ್ ಬ್ಯೂರೊ ಇಂದು ನಗರದೆಲ್ಲೆಡೆ ಮನೆಮಾತಾಗಲು ಸಾಕ್ಷಿಯಾಗಿದ್ದಾರೆ.ಕಂಟೋನ್ಮೆಂಟ್ ಪ್ರದೇಶದಲ್ಲಿದ್ದ ಎಂ.ಜಿ.ರಸ್ತೆಯಲ್ಲಿ `ಗಂಗಾರಾಮ್ಸ~ ಮಳಿಗೆ ಆರಂಭಿಸಿ ಎಂದು ಈ ಪ್ರದೇಶದ ಸ್ನೇಹಿತರು ಕೇಳಿಕೊಂಡಿದ್ದರಿಂದ 1977ರಲ್ಲಿ ಮಳಿಗೆ ಆರಂಭಿಸಿದೆವು ಎನ್ನುತ್ತಾರೆ ಆತ್ಮರಾಮ್.ಮಳಿಗೆ ಆರಂಭಿಸಿದ ಆರಂಭದ ದಿನಗಳಲ್ಲಿ ಗ್ರೀಟಿಂಗ್ ಕಾರ್ಡ್‌ಗಳನ್ನು ಹೆಚ್ಚಾಗಿ ಕೇಳುತ್ತಿದ್ದರು. ಹಾಗಾಗಿ ಗ್ರಾಹಕರ ಬೇಡಿಕೆ ದೃಷ್ಟಿಯಿಂದ ನಾವೇ ವಿನ್ಯಾಸ ಮಾಡಿದ ವಿವಿಧ ಬಗೆಯ ಗ್ರೀಟಿಂಗ್ ಕಾರ್ಡ್‌ಗಳನ್ನು ಪ್ರಕಟಿಸಿ ಮಾರಲು ಶುರುಮಾಡಿದೆವು. ಅದಕ್ಕೆ ಉತ್ತಮ ಪ್ರತಿಕ್ರಿಯೆ ದೊರೆಯಿತು.ಗ್ರೀಟಿಂಗ್ ಕಾರ್ಡ್‌ಗಳು, ಡೈರಿಗಳು ಹಾಗೂ ಲೇಖನ ಸಾಮಗ್ರಿಗಳಿಗಾಗಿಯೇ ಒಂದು ಮಹಡಿಯನ್ನು ಆರಂಭಿಸಲಾಯಿತು. ಉಳಿದ ಮೂರು ಮಹಡಿಗಳಲ್ಲಿ ವಿವಿಧ ಕ್ಷೇತ್ರಗಳಿಗೆ ಸಂಬಂಧಿಸಿದ ಪುಸ್ತಕಗಳ ಮಾರಾಟ ಮಾಡಲು ಮುಂದಾದೆವು ಎನ್ನುತ್ತಾರೆ ಅವರು.

ಇತ್ತೀಚಿನ ದಿನಗಳಲ್ಲಿ ಗ್ರೀಟಿಂಗ್ ಕಾರ್ಡ್‌ಗಳಿಗೆ ಬೇಡಿಕೆ ಕಡಿಮೆ ಆಯಿತು. ಕಂಪ್ಯೂಟರ್, ಮೊಬೈಲ್‌ಗಳು ಬಂದ ಮೇಲೆ ವ್ಯಾಪಾರ ಕಡಿಮೆಯಾಗಿದೆ ಎಂದು ನೋವಿನಿಂದ ಹೇಳುತ್ತಾರೆ ಆತ್ಮರಾಮ್.ಒಂದನೇ ಮಹಡಿಯಲ್ಲಿದ್ದ ಲೇಖನ ಸಾಮಗ್ರಿಗಳನ್ನು ಸೋಮವಾರ (ಏ.2)ರವರೆಗೆ ಮಾತ್ರ ವ್ಯಾಪಾರ ಮಾಡಲಾಗುತ್ತದೆ. ಹಾಗಾಗಿ ರಿಯಾಯಿತಿ ದರದಲ್ಲಿ ಉಳಿದ ಸಾಮಗ್ರಿಗಳನ್ನು ಮಾರಲು ನಿರ್ಧರಿಸಿದ್ದಾರೆ. ಇನ್ನೂ ಜೂನ್ ತಿಂಗಳ ವರೆಗೆ ಮಾತ್ರ ಪುಸ್ತಕ ಮಳಿಗೆ ತೆರೆದಿರುತ್ತದೆ.`ಲೇಖನ ಸಾಮಗ್ರಿ ವ್ಯಾಪಾರ ನಿಲ್ಲಿಸುವ ವಿಷಯ ತಿಳಿದು ನಾನು ಬಂದೆ. ಇಲ್ಲಿಗೆ 10 ವರ್ಷಗಳಿಂದ ಬರುತ್ತಿದ್ದೇನೆ. ಬೆಂಗಳೂರಿನಲ್ಲಿ ಎಲ್ಲಿಯೂ ಸಿಗದ ಕೆಲ ಲೇಖನ ಸಾಮಗ್ರಿ ಸಂಗ್ರಹಗಳು ಇಲ್ಲಿವೆ. ಎಮ್ರಾಯ್ಡರಿ, ಕರಕುಶಲ ಕುಸುರಿ ವಸ್ತುಗಳು ಹೆಚ್ಚು ಆಕರ್ಷಕವಾಗಿವೆ. ಹಾಗಾಗಿ ನನ್ನ ನೆಚ್ಚಿನ ಅಂಗಡಿ ಇದಾಗಿತ್ತು ಎಂದು ಸುಮನ್ ಕಾರಂತ್ ಹೇಳುವಾಗ ಅವರ ಮುಖದಲ್ಲಿ ದುಃಖದ ಛಾಯೆ ಕವಿದಿತ್ತು. ಸುಮನ್ ಅವರು ಬಾಣಸವಾಡಿಯಿಂದ ಬಂದಿದ್ದರು.ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ, ಎಲ್.ಕೆ.ಅಡ್ವಾಣಿ, ದಿ. ರಾಮಕೃಷ್ಣ ಹೆಗಡೆ, ಕೇಂದ್ರ ಸಚೀವ ವೀರಪ್ಪ ಮೊಯ್ಲಿ ಸೇರಿದಂತೆ ದೇಶದ ಹಲವು ಗಣ್ಯವ್ಯಕ್ತಿಗಳು ಗಂಗಾರಾಮ್ಸ ಬುಕ್ ಬ್ಯೂರೊಗೆ ಭೇಟಿ ನೀಡಿದ್ದಾರೆ. ಇಂಥ ಪ್ರಸಿದ್ಧ ಪಸ್ತಕ ಮಳಿಗೆ ಎಂ.ಜಿ.ರಸ್ತೆಯಲ್ಲಿ ಇನ್ನೂ ಕೆಲವೇ ವಾರಗಳಲ್ಲಿ ವ್ಯಾಪಾರ ಮುಗಿಸಲಿದೆ. ಬೆಳಿಗ್ಗೆ10ರಿಂದ ರಾತ್ರಿ8ರವರೆಗೆ ಅಂಗಡಿ ತೆರೆದಿರುತ್ತದೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.