ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಂಬಾ ಶೋಧನೆಯ ಬೆಳಕು

Last Updated 27 ಸೆಪ್ಟೆಂಬರ್ 2014, 19:30 IST
ಅಕ್ಷರ ಗಾತ್ರ

ಹುಟ್ಟಿದ ಜಾತಿಯೇ ಪ್ರಧಾನವಾಗಿ ಕಂಡು ಜಾತಿಯನ್ನು ನಿರಾಕರಿಸಿದ ಮಾನವ ಬದುಕಿನ ಔನ್ನತ್ಯವನ್ನು ಎತ್ತಿ ಹಿಡಿದ ಜೀವಗಳನ್ನು ನಿರಾಸಕ್ತಿಯಿಂದ ಕಾಣುವುದರಿಂದ ನಮ್ಮ ನೆನಪಿನ ಕೋಶಗಳನ್ನು ಕೊಂದುಕೊಳ್ಳುತ್ತೇವೆಯೇ ಹೊರತು ಬೇರೇನು ಸಾಧ್ಯವಿಲ್ಲ. ಶಂಬಾ ಬದುಕಿದ್ದಾಗ ಎದುರಿಸಿದ ಬಹುದೊಡ್ಡ ಸವಾಲು ಇದೇ.

ಇಡೀ ಸಾಹಿತ್ಯ ಮತ್ತು ಬದುಕಿನ ಚಲನೆ ಸಂಪ್ರದಾಯದ ಹಗ್ಗ ಕಟ್ಟಿಕೊಂಡು ಕುಂಟುತ್ತಿದ್ದಾಗ, ಮನುಷ್ಯ ಬದುಕಿಗೆ ಅಗತ್ಯವಾದ ಸಂಸ್ಕೃತಿಯ ಚೈತನ್ಯವನ್ನು ಶೋಧಿಸುತ್ತಾ ಹಂಚುತ್ತಾ ನಡೆದ ಶಂಬಾ ಅವರನ್ನು ಆಗಲೂ ಸಹ ನಿರಾಕರಣೆಯಿಂದಲ್ಲ, ನಿರ್ಲಕ್ಷ್ಯದಿಂದ ತೊಡರುಗಾಲು ಹಾಕಿದ್ದಿದೆ.

ಸಂಶೋಧನೆ ಮತ್ತು ಅಧ್ಯಯನಗಳು ಜೀವಕುಲಕ್ಕೆ ಹೊಸ ಬೆಳಕಿನ ಸತ್ವವನ್ನು ತರುತ್ತಿರುವ ಈ ಹೊತ್ತಿನಲ್ಲಿ ಶಂಬಾ ಕುರಿತ ಪ್ರೀತಿ ಮತ್ತು ಮುಕ್ತವಾದ ಮುಖಾಮುಖಿ ಅನಿವಾರ್ಯವಿದೆಯೇನೋ. ನಮ್ಮ ಪರಿಸರ ಎಲ್ಲ ರೀತಿಯ ವಿಕ್ಷಿಪ್ತತೆ ಮತ್ತು ವರ್ಣರಾಹಿತ್ಯವನ್ನು ಅನುಭವಿಸುತ್ತಿರುವ ಈ ಹೊತ್ತಿನಲ್ಲಿ ಮನುಷ್ಯ ಬದುಕಿನ ಇತಿಹಾಸ, ವರ್ತಮಾನ ಮತ್ತು ಭವಿಷ್ಯದ ಕುರಿತು ಅಪಾರ ಆಸಕ್ತಿಯನ್ನು ಹೊಂದಿದ್ದ ಶಂಬಾ ಅವರು ನಡೆದುಹೋದ ದಾರಿಯ ಸ್ಮರಣೆ ಬೇರೆ ಬೇರೆ ರೀತಿಯಲ್ಲಿ ನಡೆಯಬೇಕಾದ ಜರೂರು ಯಾವತ್ತಿಗೂ ಇದ್ದೇ ಇದೆ.

ಇತ್ತೀಚೆಗೆ ನನಗೆ ಮಿತ್ರರಾಗಿರುವ ಹಿರಿಯ ಜೀವ, ‘ಮಾನವಧರ್ಮ ಪ್ರತಿಷ್ಠಾನ’ದ ಪ್ರೊ. ಜ್ಯೋತಿ ಹೊಸೂರರು ಶಂಬಾ ಬದುಕಿನ ಬಹುಭಾಗವನ್ನು ಹತ್ತಿರದಿಂದ ಅಲ್ಲ ಜೊತೆಗೂಡಿ ಬದುಕಿದಷ್ಟು, ಶಂಬಾ ಬದುಕನ್ನು ತಾವೇ ಬದುಕಿದ್ದಾರೇನೋ ಎನ್ನಿಸುವಷ್ಟು ಪ್ರಾಮಾಣಿಕತೆಯಿಂದ ಮೆಲುದನಿಯಲ್ಲಿ ನಿರೂಪಿಸುತ್ತಾರೆ. ಈ ಪ್ರೀತಿಗೆ ಬಹುಮುಖ್ಯ ಕಾರಣ ಶಂಬಾರವರ ಮಾನವೀಯ ದಾರಿಯ ಸತ್ಯದ ಶೋಧ.

***

ಸಂಸ್ಕೃತಿಯ, ಸಾಹಿತ್ಯದ ಹೆಸರಿನಲ್ಲಿ ಅಕ್ಷರಗಳನ್ನು ಉತ್ಪಾದಿಸುವ ಕ್ರಿಯೆ ಎಗ್ಗಿಲ್ಲದೆ ನಡೆಯುತ್ತಿರುವುದಕ್ಕೆ ಇಲ್ಲಿ ನಡೆದು ಹೋದ ನಿಜ ಶೋಧಕರ ಹೆಜ್ಜೆಗುರುತುಗಳನ್ನು ಕಾಣುವ ಎದುರುಗೊಳ್ಳುವ ಮುಕ್ತತೆಯನ್ನು ನಾವು ಕಳೆದುಕೊಂಡಿರುವುದೇ ಕಾರಣವೇನೋ. ಶಂಬಾ ನಿಜದ ಮುಖಗಳ ಹುಡುಕಾಟಕ್ಕೆ ಬಹಳ ದೊಡ್ಡ ಸಂಗಾತಿಯಾದದ್ದು ಅವರ ಬಹುಭಾಷಿಕ ಶಕ್ತಿ. ಬೇರೊಂದು ಭಾಷೆ ಕೇವಲ ಪಾಂಡಿತ್ಯವೆಂಬ ಒಣಜಂಬವಾಗದೆ ಅದೊಂದು ಸತ್ವವಾಗಿ ತಾವು ನಡೆಯುತ್ತಿರುವ ಕಡಿದಾದ ದಾರಿಯಲ್ಲಿ ದಣಿದಾಗ, ತತ್‌ಕ್ಷಣ ಉಕ್ಕುವ ಜೀವರಕ್ತವಾಗಿ ಮುನ್ನಡೆಸಿದೆ ಎನಿಸುತ್ತದೆ.

ಸಂಸ್ಕೃತವನ್ನು ಯಜಮಾನ್ಯವಾಗಿಸಿದ ವಿಕೃತಿಯನ್ನು ಅದರ ಒಳಗಿನಿಂದಲೇ ಒಡೆಯುವ ತಾಕತ್ತು ಶಂಬಾರವರಿಗೆ ಬಂದ ಬಗೆಯನ್ನು ನಾವು ಮನಗಾಣಬೇಕಿದೆ. ಆಫ್ರಿಕಾದ ಪ್ರತಿರೋಧದ ಶಕ್ತಿ ತನ್ನ ವಿಶ್ವರೂಪವನ್ನು ಪಡೆದುಕೊಂಡದ್ದು ತಮ್ಮನ್ನು ತಲೆಮಾರುಗಳಿಂದ ಮರಣಕಂಟಕವಾದ ಭಾಷೆಯನ್ನು ಅಭಿಮಾನಕ್ಕಲ್ಲ, ಅಸ್ತ್ರವಾಗಿಸಿಕೊಳ್ಳಲು ಅರಿತಿದ್ದರಿಂದಲೇ. ಮರಾಠಿಯಿಂದ ಮರಾಠಿಗರ ಸಂಸ್ಕೃತಿಯ ಸಮಸ್ಯೆಗಳನ್ನು ಬಿಡಿಸಲು ಯತ್ನಿಸಿದ ತಾಕತ್ತು ಸುಮ್ಮನೆ ಬಂದಿತೆ? ರೂಢಿಗತವಾಗಿ ಯಾರೋ ಕೊಟ್ಟುಹೋದ ದೂಳು ಮೆತ್ತಿದ ಕನ್ನಡಿಯಲ್ಲಿಯೇ ಕಾಲವನ್ನು ಎಣಿಸುವ ಮತ್ತು ಆ ಮೆತ್ತಿರುವ ದೂಳೇ ಸಂಸ್ಕೃತಿಯೆಂದು ತಿಳಿಯಲಾರದ ಧಾಟಿಯಲ್ಲಿ ದಾಖಲಿಸುವಿಕೆ ನಡೆಯುತ್ತಿದ್ದ ಸಮಯದಲ್ಲಿ ಭಾಷೆಗೆ ಹಲವು ಭಾಷೆಗಳಿಂದ ಹೊಸ ಸ್ಪರ್ಶವನ್ನು, ಅಧ್ಯಯನದ ಶಿಸ್ತು ಮತ್ತಾವುದೂ ಇಲ್ಲ ತಾವು ತಿಳಿದದ್ದೇ ಎಂಬ ಹೊತ್ತಿನಲ್ಲಿ– ಸಾಹಿತ್ಯಕ್ಕೆ ಮಾನವಶಾಸ್ತ್ರದ ಸಾಂಗತ್ಯವನ್ನು, ಭಾಷೆ ಕೇವಲ ಪ್ರಭುತ್ವದ್ದಲ್ಲ, ಪೌರೋಹಿತ್ಯದ ಹಾದಿ ಮಾತ್ರವಲ್ಲ, ಅದಕ್ಕೆ ಪ್ರಜಾಪರ ಆಯಾಮವೂ ಇದೆ ಮತ್ತು ಅದು ಯಾರೋ ತಂದೊಡ್ಡಿರುವ ಮನುಷ್ಯ ಬದುಕಿನ ದುರಂತಗಳನ್ನು ಎದುರಿಸುವ ಅಂತಃಶಕ್ತಿ ನೀಡಬಲ್ಲದು ಎಂಬುದನ್ನು ಸಜೀವವಾಗಿ ತೋರಿಸಿಕೊಟ್ಟವರು ಶಂಬಾ. ಅವರು ಸಂಸ್ಕೃತಿ ಶೋಧದ ಆದಿಯಲ್ಲಿ ಹುಟ್ಟಿದ ಜೀವಪರ ಚಿಂತಕರು.

ಇತ್ತೀಚೆಗೆ ಶಂಬಾ ಕುರಿತು ಬರುತ್ತಿರುವ ಮಾತುಗಳಲ್ಲಿ ಅವರು ಹೀಗೆ ಮಾಡಬೇಕಿತ್ತು ಎಂಬರ್ಥ ಬರುವ ಹೇಳಿಕೆಗಳು ಗದ್ದಲವೆನ್ನಿಸುವಷ್ಟು ಕೇಳಿಸುತ್ತವೆ. ದೃಷ್ಟಿಕೋನ, ಅಧ್ಯಯನ ಮತ್ತು ನಿರೂಪಣೆಗಳು ಯಾರದಾದರೂ ಅವು ಪ್ರಶ್ನಾತೀತವಲ್ಲ; ಈಗ ಸಂಸ್ಕೃತಿಯೇ ತಮ್ಮ ಆದ್ಯತೆ ಎಂದುಕೊಂಡು ಬಡಬಡಿಸುತ್ತಿರುವವರನ್ನೂ ಸೇರಿಸಿ. ಪ್ರಶ್ನೆ ಇರುವುದು ಹೀಗಾಗಬೇಕು ಎಂಬುದು ಸರಿ, ಆದರೆ ಹೀಗಾಗಬೇಕಿತ್ತು ಎಂದರೆ ಹಾಗೆ ಆಗಗೊಳಿಸುವವರು ಈಗ ಇದ್ದಾರೆಯೇ? ಶಂಬಾ ಇಲ್ಲವಾಗಿ ಈಗ್ಗೆ ಎರಡು ದಶಕಗಳ ಮೇಲಾಯಿತು. ಬಹಳಷ್ಟು ಬಾರಿ ಶಂಬಾರನ್ನು ಅಲ್ಲಗಳೆಯುವ ಧಾವಂತದಲ್ಲೇ ದಣಿದವರಿದ್ದಾರೆ. ಆ ದಣಿವು ಓದದವರಿಗೂ ದಾಟುವಂತೆ ಮಾಡುವಷ್ಟು ವ್ಯಾಪಕವಾಗಿವೆ.

ಇತ್ತೀಚೆಗೆ ಮೊಗಳ್ಳಿ ಅವರು ಶಂಬಾ ಶೋಧನೆಯ ಭಾಷಿಕ ಆಯಾಮಗಳನ್ನು ತಮ್ಮ ಬದಲಾವಣೆಗೆ ತೆರೆದುಕೊಂಡಿರುವ ನಿಲುವುಗಳ ಮೂಲಕ ತೆರೆದು ತೋರಿಸುವ ಆಶಾದಾಯಕ ಕಾರ್ಯಮಾಡಿದ್ದಾರೆ. ಶಂಬಾಗೆ ಭಾಷೆ ಕ್ರೌರ್ಯದ ವಿರುದ್ಧ ಸೆಣಸಲು ಬೇಕಾದ ಜೀವಪರ ಸಾಧನವಾಗಿತ್ತು. ಆ ರೀತಿಯ ಹೊಳಹುಗಳ ಎಳೆಗಳನ್ನೇ ಹಿಡಿದು ರಂಗನಾಥ ಕಂಟನಕುಂಟೆ ಅವರಂಥ ಯುವ ಜೀವಗಳು ಶೋಧನೆಯ ನಿಜದಾರಿಯ ಹುಡುಕಾಟದಲ್ಲಿದ್ದಾರೆ. ತುಂಬಾ ಚರ್ಚೆಗಳು ಬೇಡ, ಕನಿಷ್ಠ ಶಂಬಾ ತೋರಿದ ಬೆಳಕಿನ ಸತ್ವವನ್ನು ಅದರದೇ ನಿಜದಲ್ಲಿ ತೋರುಗಾಣುವವರು ಬೇಕಾಗಿದ್ದಾರೆ ಮತ್ತು ಅಂತಹ ಅಂತಃಸತ್ವದ ಮಾತುಗಳು ಕೆಲವೇ ಹುಟ್ಟಿದರೂ ಬಹುಶಃ ಇಂದಿನ ಸಂಶೋಧನೆಯ ಜಿಡ್ಡನ್ನು ತಕ್ಕಮಟ್ಟಿಗೆ ತೊಳೆದು ದೂರ ಸರಿಸಬಹುದೇನೋ.

ಶಂಬಾ ಸ್ಮರಣೆ ಅಭಿಮಾನ ಮತ್ತು ಅವಗಣನೆಗಳಾಚೆಗೆ ನಮ್ಮ ನಮ್ಮ ಅರಿವಿನ ರಕ್ತಹೀನತೆಯ ಮಟ್ಟವನ್ನು ಅಳೆದುಕೊಳ್ಳಲಾದರೂ ನಡೆಯಬೇಕಿದೆಯೇನೋ. ಭೋಗವಲ್ಲ ಐಭೋಗ ಸಾಧ್ಯವಿದ್ದ ಆಡಂಬರದ ಜೀವನವನ್ನು ಕಸದಂತೆ ಚೆಲ್ಲಿ ಬಡತನವನ್ನು ಪ್ರೀತಿಯಿಂದ ಕರೆದು ಅಪ್ಪಿಕೊಂಡ ರೀತಿಗೆ ಮಾದರಿಯಾಗಿ ನನಗೀಗಲೂ ಎದೆಯೊಳಗಿರುವುದು ಬಿ.ಸಿ. ದೇಸಾಯಿ ಮತ್ತು ಶಂಬಾ ಜೋಶಿ. ಸಂಶೋಧನೆಯ ಹೆಸರಿನಲ್ಲಿ ಯುಜಿಸಿ ಸಂಬಳದೊಂದಿಗೆ ವರ್ಷಗಟ್ಟಲೇ ರಜೆ ಮೇಲೆ ತೆರಳಿ ಬರೀಗೈಲಿ ಮರಳಿ ಬಂದು ಯಾರೋ ಕೇಳಿದರೆ ಉರಿದು ಬೀಳುವವರ ನಡುವೆ ನಮಗೆ ಶಂಬಾ ಅರ್ಥಪೂರ್ಣ ಸ್ಮರಣೆಯೊಂದೇ ಅನಿವಾರ್ಯ ಆಶಯದ ಹಾದಿಯೇನೋ!

***

ಚಿಕ್ಕೋಡಿಯಲ್ಲಿ ಪ್ರಾಥಮಿಕ ಶಾಲಾ ಶಿಕ್ಷಕರಾಗಿದ್ದುಕೊಂಡು ಸಂಶೋಧನೆಗೆ ಹೊಸ ಮಾರ್ಗಗಳನ್ನು ಹುಡುಕಿದ ಶಂಬಾ ಎಲ್ಲರಿಗೂ ಪ್ರೀತಿಯ ವ್ಯಕ್ತಿತ್ವವೇ. ಮಾಸ್ತರಿಕೆಗೊಂದು ಘನತೆಯಿದೆ ಎಂಬುದನ್ನು ಅಲ್ಲಗಳೆಯುವಂತೆ ನಡೆದುಕೊಳ್ಳುತ್ತಿರುವ ಪ್ರಭುತ್ವ ಮತ್ತು ಕೊಟ್ಟಿರುವ ಅವಕಾಶವೇ ಅಧಿಕಾರ ಚಲಾಯಿಸಲು ಮತ್ತು ಶಿಕ್ಷಕರ ಬದುಕು–ನೆಮ್ಮದಿಯನ್ನು ಲಂಚ, ಕಿರುಕುಳದ ಮೂಲಕ ತಿನ್ನಲು ಎಂದು ಕೊಂಡಿ ರುವ ಪಿಪಾಸುಗಳಿಗೆ ಶಂಬಾ ಬದುಕಿನ ಪುಟಗಳು ಬುದ್ಧಿ ನೀಡಬೇಕಿದೆಯೇನೋ. ಇದು ಕೇವಲ ಸಾಂದರ್ಭಿಕ ಬಡಬಡಿಕೆಯಲ್ಲ, ಇದೇ ನೆಲದಲ್ಲಿ ಶಿಕ್ಷಕ ನಾಗಿರುವ ನಾನು ಕಂಡಿರುವ, ಅನುಭವಿಸುತ್ತಿರುವ ವಾಸ್ತವಗಳೂ ಹೌದು.  ಶಂಬಾ ಎಲ್ಲ ಕಾಲದ ಬೆಳಕು. ಬೇಕಾದವರು ಬೇಕಾದಷ್ಟನ್ನು ಹಿಡಿಯಬಹುದು. ಆದರೆ ಮುಕ್ತತೆ ಮಾತಿಗಲ್ಲ ಹೃದಯದಲ್ಲೂ ಇದ್ದರೆ ಖಂಡಿತ ಬೊಗಸೆಯಾದರೂ ಸಿಕ್ಕೀತೇನೋ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT