ಮಂಗಳವಾರ, ಏಪ್ರಿಲ್ 13, 2021
29 °C

ಶತಮಾನದಂಚಿನಲ್ಲಿ ಕುಪ್ಪಹಳ್ಳಿ ಶಾಲೆ

ರಾಹುಲ ಬೆಳಗಲಿ Updated:

ಅಕ್ಷರ ಗಾತ್ರ : | |

ಚಿಕ್ಕಬಳ್ಳಾಪುರ ತಾಲ್ಲೂಕಿನ ಕುಪ್ಪಹಳ್ಳಿ ಗ್ರಾಮದಲ್ಲಿರುವ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯು ಇತರ ಶಾಲೆಗಳಿಗಿಂತ ಕೊಂಚ ಭಿನ್ನ. ಕೆಲವೇ ವರ್ಷಗಳಲ್ಲಿ ಶತಮಾನೋತ್ಸವ ಆಚರಿಸಲಿರುವ ಈ ಶಾಲೆಯು ಸ್ಥಾಪನೆಗೊಂಡಿದ್ದು 1929ರಲ್ಲಿ. ದೇಶವು ಸ್ವಾತಂತ್ರ್ಯಗೊಳ್ಳುವ ಪೂರ್ವದಲ್ಲಿ ಅಸ್ತಿತ್ವಕ್ಕೆ ಬಂದ ಈ ಶಾಲೆಯು ವಿಶಿಷ್ಟ ಇತಿಹಾಸವನ್ನು ಹೊಂದಿದೆ.ಸ್ವಾತಂತ್ರ್ಯ ಹೋರಾಟವು ತೀವ್ರ ಸ್ವರೂಪ ಪಡೆದುಕೊಂಡಿದ್ದ ಸಂದರ್ಭದಲ್ಲಿ ಸ್ಥಾಪನೆಗೊಂಡ ಈ ಶಾಲೆಯು ಹೋರಾಟಕ್ಕೆ ಜೀವ ತುಂಬುವಲ್ಲಿ ಪ್ರಮುಖ ಪಾತ್ರವಹಿಸಿತ್ತು. ಸತತ 83 ವರ್ಷಗಳಿಂದ ವಿದ್ಯಾರ್ಥಿಗಳಿಗೆ ಶಿಕ್ಷಣ ನೀಡುವಲ್ಲಿ ಮತ್ತು ಭವಿಷ್ಯ ರೂಪಿಸುವಲ್ಲಿ ತನ್ನದೇ ಆದ ಪಾತ್ರ ನಿರ್ವಹಿಸುತ್ತಿರುವ ಶಾಲೆಯಲ್ಲಿ ತಾಲ್ಲೂಕಿನ ಬಹುತೇಕ ಜನರು ವಿದ್ಯಾಭ್ಯಾಸ ಮಾಡಿದ್ದಾರೆ.ರೈಲು ಹಳಿ ಬದಿಯಲ್ಲೇ ಇರುವ ಈ ಶಾಲೆಯಲ್ಲಿ ವಿಶಾಲವಾದ ಮೈದಾನವಿದೆ. ಸಾಂಸ್ಕೃತಿಕ ಕಾರ್ಯಕ್ರಮವಲ್ಲದೇ ಸಭೆ-ಸಮಾರಂಭಗಳನ್ನು ನಡೆಸಲು ಪ್ರತ್ಯೇಕ ವೇದಿಕೆಯನ್ನು ಹೊಂದಿದೆ. ಪ್ರತ್ಯೇಕ ಶೌಚಾಲಯ, ಗ್ರಂಥಾಲಯ, ಕಂಪ್ಯೂಟರ್ ಮತ್ತು ಇತರ ಸೌಲಭ್ಯಗಳನ್ನು ಹೊಂದಿರುವ ಈ ಶಾಲೆಯನ್ನು ಅಭಿವೃದ್ಧಿಪಡಿಸುವಲ್ಲಿ ಸರ್ಕಾರ ಮಾತ್ರವಲ್ಲದೇ ತಾಲ್ಲೂಕಿನ ದಾನಿಗಳು ಸಹ ಹೆಚ್ಚಿನ ಆಸಕ್ತಿ ತೋರುತ್ತಿದ್ದಾರೆ. `ನಮ್ಮೂರ ಶಾಲೆ ಯಾವುದೇ ಕಾರಣಕ್ಕೂ ಹಿಂದುಳಿಯಬಾರದು~ ಎಂಬ ಭಾವನೆ ಹೊಂದಿರುವ ದಾನಿಗಳು ವಿದ್ಯಾರ್ಥಿಗಳಿಗೆ ಪಠ್ಯಪುಸ್ತಕ ಮತ್ತು ಸಮವಸ್ತ್ರಗಳನ್ನು ವಿತರಿಸುತ್ತಾರೆ.`1929ರಲ್ಲಿ ಸ್ಥಾಪನೆಗೊಂಡ ಶಾಲೆಯು ಎರಡೇ ಕೋಣೆಗಳನ್ನು ಹೊಂದಿತ್ತು. ನಂತರದ ವರ್ಷಗಳಲ್ಲಿ ಶಾಲೆಯ ತರಗತಿಗಳನ್ನು ವಿಸ್ತರಿಸಲಾಯಿತು. ಎರಡು ವರ್ಷಗಳ ಹಿಂದೆ ಶಾಲೆಯನ್ನು ಮೇಲ್ದರ್ಜೆಗೇರಿಸಿ, 8ನೇ ತರಗತಿಯನ್ನು ಆರಂಭಿಸಲಾಯಿತು.83 ವರ್ಷಗಳ ಇತಿಹಾಸ ಹೊಂದಿರುವ ನಮ್ಮ ಶಾಲೆಯಲ್ಲಿ ಹಾಲಿ ಮತ್ತು ಮಾಜಿ ಶಾಸಕರು, ಮಾಜಿ ಸಚಿವರು ಮುಂತಾದವರು ವಿದ್ಯಾಭ್ಯಾಸ ಮಾಡಿದ್ದಾರೆ. ಶಾಲೆಯೊಂದಿಗೆ ಗಾಢವಾದ ನಂಟನ್ನು ಹೊಂದಿರುವ ಅವರು ಹಳೆಯ ವಿದ್ಯಾರ್ಥಿಗಳಾಗಿ ಶಾಲೆಯ ಏಳ್ಗೆಗಾಗಿ ಈಗಲೂ ಕಾಳಜಿ ತೋರುತ್ತಾರೆ~ ಎಂದು ಶಾಲೆ ಶಿಕ್ಷಕ ಕೆ.ಆರ್.ಸುಂದರ್‌ರಾಜ್ `ಪ್ರಜಾವಾಣಿ~ಗೆ ತಿಳಿಸಿದರು.`ನಮ್ಮ ಶಾಲೆಯಲ್ಲಿ ಪ್ರತಿಭಾವಂತ ಮಕ್ಕಳಿದ್ದು, ಸಾಂಸ್ಕೃತಿಕ ಮತ್ತು ಕ್ರೀಡಾ ಸ್ಪರ್ಧೆಗಳಲ್ಲಿ ತಾಲ್ಲೂಕು, ಜಿಲ್ಲಾ ಮತ್ತು ರಾಜ್ಯಮಟ್ಟದಲ್ಲಿ ಉತ್ತಮ ಪ್ರದರ್ಶನ ತೋರಿದ್ದಾರೆ. ಶಾಲೆಯ ವಿದ್ಯಾರ್ಥಿಗಳು ಕೋಲಾಟದಲ್ಲಿ ತಾಲ್ಲೂಕು ಮತ್ತು ಜಿಲ್ಲಾಮಟ್ಟದಲ್ಲಿ ಪ್ರಥಮ ಬಹುಮಾನ ಗಳಿಸಿ ರಾಜ್ಯಮಟ್ಟದ ಸ್ಪರ್ಧೆಗೆ ಆಯ್ಕೆಯಾಗಿದ್ದರು. ಕುಸ್ತಿ ಸ್ಪರ್ಧೆಯಲ್ಲೂ ಬಹುಮಾನ ಗಳಿಸಿದ್ದರು. ರಸಪ್ರಶ್ನೆಯಲ್ಲಿ ಬಹುಮಾನ ಗಳಿಸಿದ ವಿದ್ಯಾರ್ಥಿಗಳು ನವದೆಹಲಿ ಪ್ರವಾಸ ಕೂಡ     ಕೈಗೊಂಡಿದ್ದರು~ ಎಂದು ಅವರು ಹೇಳಿದರು.`ವಿದ್ಯಾರ್ಥಿಗಳ ಶೈಕ್ಷಣಿಕ ಗುಣಮಟ್ಟ ವೃದ್ಧಿಸಲು ಹೆಚ್ಚಿನ ಆಸ್ಥೆ ತೋರುವ ನಾವು ಅವರ ಮೂಲಕವೇ ಕಿರುಪರೀಕ್ಷೆ ನಡೆಸುತ್ತೇವೆ. ಅವರ ಉತ್ತರಪತ್ರಿಕೆಗಳ ಮೌಲ್ಯಮಾಪನ ಮಾಡಿ, ಶೈಕ್ಷಣಿಕ ಗುಣಮಟ್ಟ ವೃದ್ಧಿಸಲು ಚಿಂತನೆ ನಡೆಸುತ್ತೇವೆ.ವಿದ್ಯಾರ್ಥಿಗಳ ಪೋಷಕರೊಂದಿಗೆ ಸಂವಾದ ನಡೆಸುತ್ತೇವೆ. ಯಾವ ವಿಷಯದಲ್ಲಿ ವಿದ್ಯಾರ್ಥಿಗಳು ಹಿಂದುಳಿದಿದ್ದಾರೋ ಆಯಾ ವಿಷಯದ ಬಗ್ಗೆ ವಿಶೇಷ ತರಗತಿಗಳನ್ನು ನಡೆಸುವುದರ ಮೂಲಕ ಅವರಲ್ಲಿ ಆತ್ಮವಿಶ್ವಾಸ ತುಂಬಿ, ಕಲಿಕೆಯಲ್ಲಿ ಹೆಚ್ಚಿನ ರೀತಿಯಲ್ಲಿ ತೊಡಗಿಸಿಕೊಳ್ಳುವಂತೆ ಮಾಡುತ್ತೇವೆ~ ಎಂದು ಕೆ.ಎನ್.ವಿಜಯಾ ತಿಳಿಸಿದರು.`ನಮ್ಮ ಶಾಲೆಯ ಬಹುತೇಕ ವಿದ್ಯಾರ್ಥಿಗಳಿಗೆ ಶಿಷ್ಯವೇತನ ಬರುತ್ತಿದ್ದು, ಪ್ರತಿಯೊಬ್ಬ ವಿದ್ಯಾರ್ಥಿ ಹೆಸರಿನಲ್ಲೂ ಬ್ಯಾಂಕ್ ಖಾತೆಗಳನ್ನು ತೆರೆಸಿದ್ದೇವೆ. ವಿದ್ಯಾರ್ಥಿಗಳಿಗೆ ಮತ್ತು ಪೋಷಕರಿಗೆ ತೊಂದರೆಯಾಗದಿರಲಿಯೆಂದೇ ವಿದ್ಯಾರ್ಥಿಗಳ ಭಾವಚಿತ್ರವನ್ನು ಪಡೆದು ನಾವೇ ಖುದ್ದು ಜಾತಿ ಮತ್ತು ಆದಾಯ ಪ್ರಮಾಣಪತ್ರವನ್ನು ಸಿದ್ಧಪಡಿಸಿಕೊಂಡು ತರುತ್ತೇವೆ. ನಮ್ಮ ಶಾಲೆಯನ್ನು ಶಿಕ್ಷಣ ಪ್ರತಿಷ್ಠಾನವು ದತ್ತು ತೆಗೆದುಕೊಂಡಿದ್ದು, ಅವರ ಯೋಜನೆಯಡಿಯಲ್ಲೇ ದೈನಂದಿನ ಕೈಪಿಡಿ ಮೂಲಕ ವಿದ್ಯಾರ್ಥಿಗಳ ಕಲಿಕಾ ಪ್ರಗತಿ ಗಮನಿಸುತ್ತಿದ್ದೇವೆ~ ಎಂದು ಅವರು ಹೇಳಿದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.