ಭಾನುವಾರ, ಏಪ್ರಿಲ್ 11, 2021
27 °C

ಶವ ಸಂಸ್ಕಾರಕ್ಕೆ ತಡೆ: ವಿಶ್ವಕರ್ಮರಿಂದ ಪ್ರತಿಭಟನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಶ್ರೀರಂಗಪಟ್ಟಣ: ಶವ ಸಂಸ್ಕಾರಕ್ಕೆ ಮೀಸಲಿಟ್ಟಿರುವ ಜಾಗದಲ್ಲಿ ಶವ ಸಂಸ್ಕಾರ ನಡಸಲು ವ್ಯಕ್ತಿಯೊಬ್ಬರು ತಡೆ ಒಡ್ಡಿದರು ಎಂಬ ಹಿನ್ನೆಲೆಯಲ್ಲಿ ಗಂಜಾಂನ ವಿಶ್ವಕರ್ಮ ಸಮುದಾಯದವರು ಸೋಮವಾರ ಪಟ್ಟಣದ ಮಿನಿ ವಿಧಾನಸೌಧದ ಎದುರು ಶವ ಇಟ್ಟು ಪ್ರತಿಭಟನೆ ನಡೆಸಿದರು.  ಗಂಜಾಂನ ಲಿಂಗಾಚಾರಿ ಎಂಬುವರ ಪತ್ನಿ ತಾಯಮ್ಮ (60) ಅವರ ಶವ ಇಟ್ಟು ಪ್ರತಿಭಟಿಸಿದರು. ಸುಮಾರು ಒಂದು ತಾಸು ಪ್ರತಿಭಟನೆ ನಡೆಸಿದ ಪ್ರತಿಭಟನಾಕಾರರು ತಾಲ್ಲೂಕು ಆಡಳಿತದ ವಿರುದ್ಧ ಘೋಷಣೆ ಕೂಗಿದರು. ಗಂಜಾಂ ಸಮೀಪ ಚಂದಗಾಲು ರಸ್ತೆಯಲ್ಲಿನ ಸ.ನಂ.151/1ರಲ್ಲಿ 24 ಗುಂಟೆ ಸರ್ಕಾರಿ ಭೂಮಿ ಇದ್ದು ವಿಶ್ವಕರ್ಮ ಜನಾಂಗದವರು ಹತ್ತಾರು ವರ್ಷಗಳಿಂದ ಇಲ್ಲಿ ಶವ ಸಂಸ್ಕಾರ ನಡೆಸುತ್ತಿದ್ದಾರೆ.ಆದರೆ ಸೋಮವಾರ ಮೃತಪಟ್ಟ ತಾಯಮ್ಮ ಅವರ ಶವವನ್ನು ಅಲ್ಲಿ ಸಂಸ್ಕಾರ ಮಾಡಲು ಹೋದಾಗ ನಾಗರಾಜು ಎಂಬ ವ್ಯಕ್ತಿ ತಡೆದಿದ್ದಾರೆ. ಸ್ಮಶಾನದ ಜಾಗ ತಮ್ಮದೆಂದು ಹೇಳುತ್ತಿದ್ದಾರೆ. ಇದರಿಂದ ಶವ ಸಂಸ್ಕಾರ ಮಾಡಲು ಜಾಗ ಇಲ್ಲದಂತಾಗಿದೆ ಎಂದು ಪ್ರಸನ್ನ, ಪುಟ್ಟಸ್ವಾಮಿ ಇತರರು ಹೇಳಿದರು.  ಸ್ಥಳಕ್ಕೆ ಆಗಮಿಸಿದ ಶಾಸಕ ರಮೇಶ ಬಂಡಿಸಿದ್ದೇಗೌಡ, ವಿಶ್ವಕರ್ಮ ಸಮುದಾಯದ ಮುಖಂಡರು ಹಾಗೂ ಶವ ಸಂಸ್ಕಾರಕ್ಕೆ ತಡೆ ಒಡ್ಡಿದರು ಎನ್ನಲಾದ ನಾಗರಾಜು ಅವರ ಜತೆ ಚರ್ಚೆ ನಡೆಸಿದರು. ತಹಶೀಲ್ದಾರ್ ಅವರನ್ನು ದೂರವಾಣಿ ಮೂಲಕ ಸಂಪರ್ಕಿಸಿ ವಿಶ್ವಕರ್ಮ ಜನರಿಗೆ ಶಾಶ್ವತ ಸ್ಮಶಾನ ವ್ಯವಸ್ಥೆ ಕಲ್ಪಿಸುವಂತೆ ತಾಕೀತು ಮಾಡಿದರು.

 

ಈ ಮೊದಲು ಶವ ಸಂಸ್ಕಾರ ನಡೆಸುತ್ತಿದ್ದ ಸ್ಥಳದಲ್ಲೇ ತಾಯಮ್ಮ ಅವರ ಶವಸ್ಕಾರ ನಡೆಸಲು ನಾಗರಾಜು ಒಪ್ಪಿಗೆ ಸೂಚಿಸಿದ ನಂತರ ಪ್ರತಿಭಟನೆ ವಾಪಸ್ ಪಡೆದರು. ಮಂಜುನಾಥ್, ಯಶೋಧಮ್ಮ, ರಾಣಿ ಇತರರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.