ಸೋಮವಾರ, ಜೂನ್ 21, 2021
30 °C

ಶಶಿಕುಮಾರನ ಜವಾಬ್ದಾರಿಗಳನ್ನು ನೆನೆದು...

ಡಾ. ಆಶಾ ಬೆನಕಪ್ಪ Updated:

ಅಕ್ಷರ ಗಾತ್ರ : | |

ಶಶಿಕುಮಾರನ ಜವಾಬ್ದಾರಿಗಳನ್ನು ನೆನೆದು...

ಮಕ್ಕಳಲ್ಲಿ ಕಂಡುಬರುವ ಮೂತ್ರಪಿಂಡ ಕಾಯಿಲೆಯ ಚಿಕಿತ್ಸೆಗಾಗಿ ಇರುವ ಶಿಶು ವೈದ್ಯಕೀಯ ಮೂತ್ರಪಿಂಡಶಾಸ್ತ್ರ ವಿಭಾಗವು ಶಿಶುವೈದ್ಯ ಔಷಧದ ಒಂದು ಭಾಗ. ನನ್ನ ಸಹೋದ್ಯೋಗಿ, ಇಪ್ಪತ್ತೇಳು ವರ್ಷದ ಡಾ. ಪ್ರೇಮಲತಾ, ವಾಣಿವಿಲಾಸ ಆಸ್ಪತ್ರೆಯಲ್ಲಿ ಈ ವಿಭಾಗದ ವಿಶೇಷ ವೈದ್ಯೆ. ಮೂತ್ರಪಿಂಡ ಸಮಸ್ಯೆಗೊಳಗಾದ ಮಕ್ಕಳ ಮೇಲೆ ಅವರು ತೋರುವ ಕಾಳಜಿ ಮತ್ತು ಅವರ ಕಾರ್ಯಕ್ಷಮತೆಯನ್ನು ನಾನು ಸದಾ ಮೆಚ್ಚಿಕೊಳ್ಳುತ್ತೇನೆ. ಮಾನಸಿಕ ಮತ್ತು ದೈಹಿಕವಾಗಿ ತುಂಬಾ ಗಟ್ಟಿಯಾದ ಅವರು, ತಮ್ಮ ರೋಗಿಗಳೊಂದಿಗೆ ಭಾವನಾತ್ಮಕವಾಗಿ ಅಂಟಿಕೊಳ್ಳದೆಯೇ ತಮ್ಮ ಕೆಲಸವನ್ನು ಸೊಗಸಾಗಿ ನಿಭಾಯಿಸುತ್ತಾರೆ.

ಇಪ್ಪತ್ತು ಮೂವತ್ತು ವರ್ಷದ ಬದುಕು ಸಾಗಿಸುವ ಮೊದಲೇ ಚಿಕ್ಕವಯಸ್ಸಿನಲ್ಲಿ ಸಾವಿಗೀಡಾಗುವ ದೀರ್ಘಕಾಲೀನ ಕಾಯಿಲೆಗೆ ತುತ್ತಾದ ರೋಗಿಗಳ ಜವಾಬ್ದಾರಿಯನ್ನು ಡಾ. ಪ್ರೇಮಲತಾ ಅವರ ವಿಭಾಗ ನಿರ್ವಹಿಸುತ್ತದೆ. ಕಾಯಿಲೆಯ ತೀವ್ರತೆಯನ್ನು ನಿಯಂತ್ರಿಸುವ ಮೂಲಕ, ರೋಗಿಗಳ ದೇಹ ಸಾಮರ್ಥ್ಯದ ಗುಣಮಟ್ಟ ಕುಸಿದಿದ್ದರೂ ಇಹಲೋಕದ ಅವರ ಬದುಕನ್ನು ಕೆಲವು ದಿನಗಳವರೆಗಾದರೂ ವಿಸ್ತರಿಸುವ ಪ್ರಯತ್ನವನ್ನು ಅವರು ಮಾಡುತ್ತಿದ್ದಾರೆ. ಈ ರೋಗಿಗಳು ನಿರಂತರವಾಗಿ (ಸಾಯುವವರೆಗೂ) ಚಿಕಿತ್ಸೆ ಪಡೆಯುತ್ತಲೇ ಇರಬೇಕಾಗುತ್ತದೆ. ಹೀಗಾಗಿ ಅವರು ಚಾಚೂತಪ್ಪದೆ ಆಸ್ಪತ್ರೆಗೆ ಭೇಟಿ ಕೊಡುತ್ತಲೇ ಇರಬೇಕು. ಇಂತಹ ರೋಗಿಗಳನ್ನು ನೋಡಿಕೊಳ್ಳುವಲ್ಲಿ ಅವರು ತೋರುವ ಸಹನೆ ಬದ್ಧತೆಯ ಅಭಿಮಾನಿ ನಾನು.

ಆಸ್ಪತ್ರೆಯಲ್ಲಿ ನಾನು ತುಂಬಾ ಭಾವನಾತ್ಮಕ ಸಂಪರ್ಕ ಹೊಂದಿರುವ ಶಶಿಕುಮಾರ್ ಕುರಿತು ಬರೆಯುವಂತೆ ಅವರು ನನ್ನನ್ನು ಕೋರಿದರು.

ಶಶಿಕುಮಾರ್ ನಮ್ಮಲ್ಲಿಗೆ ಬಾರದೇ ಹೋಗಿದ್ದರೆ ಮೂರು ವರ್ಷಗಳ ಹಿಂದೆಯೇ ಮರಣವನ್ನಪ್ಪುತ್ತಿದ್ದ ಹುಡುಗ. ಈಗ ಆತನಿಗೆ 18 ವರ್ಷ. ಅವನ ಕುಟುಂಬಕ್ಕೆ ಆತನೇ ಆತ್ಮ ಮತ್ತು ಎಲ್ಲವೂ. ನಿರಂತರ ಚಿಕಿತ್ಸೆಗೆ ಒಳಗಾಗುತ್ತ್ದ್ದಿದ್ದರೂ ತನ್ನ ಕುಟುಂಬದ ಜವಾಬ್ದಾರಿಯನ್ನೂ ಆತನೇ ನಿರ್ವಹಿಸಬೇಕು. ಹಾರೋಹಳ್ಳಿಯಲ್ಲಿರುವ ಜೈನ್ ಕಾಲೇಜಿನಲ್ಲಿ ಸೆಕ್ಯುರಿಟಿ ಗಾರ್ಡ್ ಆಗಿರುವ ಆತನಿಗೆ ತಿಂಗಳಿಗೆ 3,200 ರೂಪಾಯಿ ಸಂಬಳ.

ಶಶಿಕುಮಾರನ ಬೆಳಗು ಆರಂಭವಾಗುವುದು ತಂದೆ ಮತ್ತು ಸಹೋದರನಿಗೆ ಅಡುಗೆ ಮಾಡಿಕೊಡುವ ಮೂಲಕ. ಕೆಲವೊಮ್ಮೆ ತನ್ನ ಮಾನಸಿಕ ಅಸ್ವಸ್ಥ ತಾಯಿಯ ಅಗತ್ಯಗಳನ್ನೂ ಆತ ನೋಡಿಕೊಳ್ಳಬೇಕು. ಆಕೆಗೆ ಸ್ನಾನ ಮಾಡಿಸುವುದು, ತಲೆ ಬಾಚುವುದು, ಹಲ್ಲು ಉಜ್ಜುವುದು ಮತ್ತು ಬಟ್ಟೆ ತೊಡಿಸುವುದು ಸೇರಿದಂತೆ ಆಕೆಗೆ ಊಟ ಮಾಡಿಸುವ ಕೆಲಸವನ್ನೂ ಆತನೇ ಮಾಡಬೇಕು. ತನ್ನ ಕೆಲಸವನ್ನು ತಾನೇ ಮಾಡಿಕೊಳ್ಳುವ ಸಾಮರ್ಥ್ಯ ಆಕೆಗಿಲ್ಲ. ತನ್ನ ಗುಡಿಸಿಲಿನ ಮೂಲೆಯೊಂದರಲ್ಲಿ ಸುಮ್ಮನೆ ಕುಳಿತುಕೊಳ್ಳುವ ಆಕೆ ತನ್ನ ಕೆಲಸವನ್ನು ತಾನು ಮಾಡಿಕೊಳ್ಳಲಾರದ್ದಕ್ಕೆ, ಕೊಳಕಾಗಿ ಇರುವುದಕ್ಕೆ ಆಕೆಯ ಮಾನಸಿಕ ಸಮಸ್ಯೆಯೇ ಕಾರಣ.

ಕಾಯಿಲೆ ಬಿದ್ದ ಮಕ್ಕಳನ್ನು ತಾಯಿ ಆರೈಕೆ ಮಾಡುವುದು ಸಾಮಾನ್ಯ. ಆದರೆ ಶಶಿಕುಮಾರನ ಪ್ರಕರಣದಲ್ಲಿ ಹಾಗಲ್ಲ. ಅವನ ಕಾಯಿಲೆ ತೀವ್ರವಾದಾಗ ಆಸ್ಪತ್ರೆಗೆ ಕರೆದುಕೊಂಡು ಬರುವುದು ತಂದೆ. ಅವರು ಇಲ್ಲದಿದ್ದಾಗ ಕಾಯಿಲೆ ಸ್ವಲ್ಪ ತಗ್ಗಿದ ಬಳಿಕ ಆತನೊಬ್ಬನೇ ಬರುತ್ತಾನೆ. ಒಮ್ಮೆ ಆತನ ತಾಯಿಯ ಬಗ್ಗೆ ವಿಚಾರಿಸಿದಾಗ ಶಶಿ ಗೋಣು ಕೆಳಗೆ ಹಾಕಿ ಕಣ್ಣೀರು ಸುರಿಸುತ್ತಾ ತನ್ನ ಕಥೆ ಹೇಳತೊಡಗಿದ.

ಹತ್ತು ವರ್ಷದ ಹಿಂದೆ ಸೀಮೆಎಣ್ಣೆಯ ಸ್ಟೌನಲ್ಲಿ ಅಡುಗೆ ಮಾಡುವಾಗ ಅದು ಸಿಡಿದು, ಆತನ ಹದಿನಾಲ್ಕು ವರ್ಷದ ಸಹೋದರಿ ಬೆಂಕಿ ಜ್ವಾಲೆಯಲ್ಲಿ ಸುಟ್ಟು ಸಾವಿಗೀಡಾದಳು. ಒಬ್ಬಳೇ ಮಗಳ ಅಗಲಿಕೆಯಿಂದ ಆಘಾತಕ್ಕೊಳಗಾಗಿ ತೀವ್ರ ಖಿನ್ನತೆಗೆ ಒಳಗಾದ ತಾಯಿ ಮತ್ತೆ ಚೇತರಿಸಿಕೊಳ್ಳಲೇ ಇಲ್ಲ.

ಆತನ 26 ವರ್ಷದ ಅವಿವಾಹಿತ ಅಣ್ಣ ನಮ್ಮ ಶಶಿ ಪಾಲಿನ ತಲೆನೋವು. ಗುತ್ತಿಗೆದಾರರೊಬ್ಬರೊಂದಿಗೆ ಕೆಲಸ ಮಾಡುವ ಆತ ತನ್ನ ತಿಂಗಳ ಸಂಪಾದನೆಯ 9 ಸಾವಿರ ರೂಪಾಯಿಯನ್ನು ಕುಡಿತಕ್ಕೆ ಖರ್ಚು ಮಾಡುತ್ತಾನೆಯೇ ಹೊರತು ಮನೆಗೆ ನಯಾಪೈಸೆಯನ್ನೂ ಕೊಡುವುದಿಲ್ಲ. ಮನೆಯ `ಯಜಮಾನ ಶಶಿ~ಗೆ ಅಣ್ಣ ಮದುವೆಯಾಗುವುದು ಇಷ್ಟವಿಲ್ಲ. ತನ್ನಣ್ಣನನ್ನು ಮದುವೆಯಾಗುವ ಹೆಣ್ಣು ಸಾಕಷ್ಟು ನೋವು ಅನುಭವಿಸಬೇಕಾಗುತ್ತದೆ ಎನ್ನುವುದು ಆತನ ಹೆದರಿಕೆ. ಕುಟುಂಬದ ಈ ಎಲ್ಲ ಪ್ರಸಂಗಗಳಿಂದಾಗಿ ಹದಿನೆಂಟರ ಶಶಿ ಒಮ್ಮಿಂದೊಮ್ಮೆಗೇ ಹೆಚ್ಚು ಪ್ರಬುದ್ಧನಾಗಿದ್ದಾನೆ.

ಕೂಲಿ ಕೆಲಸ ಮಾಡಿ ಜೀವನ ಸಾಗಿಸುವ ವೆಂಕಟಬೂರಿಯ ಈ ಮೂರನೇ ಮಗನನ್ನು ಒಂದು ವರ್ಷದ ಮಗುವಾಗಿದ್ದಾಗಿನಿಂದ ನಾನು ಮತ್ತು ಪ್ರೇಮಲತಾ ನೋಡುತ್ತಿದ್ದೇವೆ. ಆತ ಬಳಲುತ್ತಿದ್ದ ನಿಫ್ರಿಟಿಕ್ ಸಿಂಡ್ರೋಮ್ ಅನ್ನು (ಮೂತ್ರಪಿಂಡದ ಒಂದು ಕಾಯಿಲೆ) ಜೀವನಪರ್ಯಂತ ಸ್ಟಿರಾಯ್ಡಗಳನ್ನು ನೀಡುವ ಮೂಲಕ ಮಾತ್ರ ನಿಯಂತ್ರಿಸಲು ಸಾಧ್ಯ. ಕಾಯಿಲೆಯ ಜೊತೆಜೊತೆಗೇ ಔಷಧವನ್ನು ಪ್ರಯೋಗಿಸುವುದು ಕಷ್ಟಕರ ವಿಷಯ.

ಮೂರು ವರ್ಷದ ಹಿಂದೆ ಬೆನ್ನುಹುರಿಯಲ್ಲಿ ಬಿರುಕುಗಳು ಕಾಣಿಸಿಕೊಂಡಿದ್ದರಿಂದ ಶಶಿ ನನ್ನ ವಿಭಾಗದಲ್ಲಿ ದಾಖಲಾದನು. ಬೆನ್ನುಮೂಳೆಯಲ್ಲಿ ಬಹುವಿಧದ ಬಿರುಕುಗಳಾಗಿದ್ದರಿಂದ ಆತ ಹಲವು ತಿಂಗಳು ಸಂಪೂರ್ಣ ಹಾಸಿಗೆ ಮೇಲೆಯೇ ವಿಶ್ರಾಂತಿ ಪಡೆಯಬೇಕಾಯಿತು. ದುಂಡು ದುಂಡಾದ ತುಂಬುಗಲ್ಲದ (ಸ್ಟಿರಾಯ್ಡನ ಅಡ್ಡ ಪರಿಣಾಮದ ಫಲ) ಶಶಿಯನ್ನು ನೋಡಿ ನನ್ನ ಹೃದಯ ಕರಗಿತು. ಮೂತ್ರಪಿಂಡ ಶಾಸ್ತ್ರಜ್ಞೆ ಪ್ರೇಮಲತಾ (ಅವರನ್ನು ನಾವು ಹೆಚ್ಚಾಗಿ ಕರೆಯುವುದು `ಆರ್‌ಪಿ~ ಎಂದು) ಅವರನ್ನು ಈ ಮಗುವನ್ನು ಉಳಿಸಲು ನನಗೆ ಸಹಾಯ ಮಾಡುವಂತೆ ಕೇಳಿಕೊಂಡೆ. ಬೇರೆ ಬೇರೆ ಮೂಲಗಳಿಂದ 25 ಸಾವಿರ ರೂಪಾಯಿಗೂ ಅಧಿಕ ಹಣ ಸಂಗ್ರಹಿಸಿದ ಬಳಿಕ (ಇದರಲ್ಲಿ ಹೆಚ್ಚಿನ ಕಾಣಿಕೆ ನನ್ನ ಮತ್ತು `ಆರ್‌ಪಿ~ಯದ್ದಾಗಿತ್ತು) ಆತನನ್ನು ಅಪಾಯದಿಂದ ಪಾರು ಮಾಡಲು ಸಾಧ್ಯವಾಯಿತು.

ಬಹುವಿಧದ ಮುರಿತಕ್ಕೆ ಒಳಗಾಗಿದ್ದರೂ (ಸ್ಟಿರಾಯ್ಡ ಪ್ರಭಾವದಿಂದ) ಹಾಸಿಗೆ ಹಿಡಿದಿದ್ದ ಶಶಿ ಯಾವುದೇ ನರವೈಜ್ಞಾನಿಕ ಸಮಸ್ಯೆಗಳಿಲ್ಲದೇ ಆಸ್ಪತ್ರೆಯಿಂದ ಹೊರನಡೆದ. ಅಂದರೆ ಈ ಮುಂಚೆ ಆತ ತನ್ನ ಅಂಗಾಂಗಗಳಲ್ಲಿನ ಶಕ್ತಿಯನ್ನು ಕಳೆದುಕೊಂಡಿದ್ದ. ಈ ಸಂದರ್ಭದಲ್ಲಿ `ಆರ್‌ಪಿ~ ಅವರನ್ನೂ ತಮ್ಮಲ್ಲಿಗೆ ಕರೆಯಿಸಿ ಸಹಾಯ ಮಾಡಿದ ಇಂದಿರಾ ಗಾಂಧಿ ಮಕ್ಕಳ ಆರೋಗ್ಯ ಸಂಸ್ಥೆಯ ಮೂಳೆ ತಜ್ಞ ಡಾ. ರುದ್ರಪ್ರಸಾದ್ ಅವರನ್ನು ಸ್ಮರಿಸಿಕೊಳ್ಳಬೇಕು. ಶಶಿಯ ಬೆನ್ನೆಲುಬು ದೃಢವಾಗಿ ನಿಲ್ಲಲು ಅಗತ್ಯವಿದ್ದ ಉಪಕರಣವನ್ನು ಅತ್ಯಂತ ಕಡಿಮೆ ಬೆಲೆಗೆ ಲಭ್ಯವಾಗುವಂತೆ ಡಾ. ರುದ್ರಪ್ರಸಾದ್ ಮಾಡಿದ್ದರು. ಅಲ್ಲದೆ, ಶಶಿಯ ಆಶ್ಚರ್ಯಕರ ಚೇತರಿಕೆಗೆ ಕೊಡುಗೆ ಸಲ್ಲಿಸಿದವರಲ್ಲಿ ಅವರೂ ಒಬ್ಬರಾಗಿದ್ದರು.

ಶಶಿ, ತಪಾಸಣೆಗಾಗಿ ಪ್ರೇಮಲತಾ ಅವರ ಬಳಿ ಬಂದಾಗ ಪ್ರತಿ ಬಾರಿಯೂ ಆತ ನನ್ನ ಬಳಿ ಬಂದು ಮಾತನಾಡುತ್ತಾನೆ. ನನ್ನ ಉಪನ್ಯಾಸ ಕೇಳುವ ಪದವಿ ವಿದ್ಯಾರ್ಥಿಗಳಿಗೆ, `ಆಶಾ ಮೇಡಂ~ 65 ಸಾವಿರ ರೂ (ಈ ಮೊತ್ತ ಆತನ ಊಹೆ) ಖರ್ಚು ಮಾಡಿ ತನ್ನನ್ನು ಹೇಗೆ ಉಳಿಸಿದರು ಎನ್ನುವುದನ್ನು ಹೇಳುತ್ತಾನೆ. ಅಂದಹಾಗೆ, ಶಶಿ ಓದಿರುವುದು ಆರನೇ ತರಗತಿಯವರೆಗೆ ಮಾತ್ರ.

ನಿಜ. ಕಡುಬಡತನ ಮತ್ತು ಮನೆಯಲ್ಲಿ ಅಪಾರ ಜವಾಬ್ದಾರಿಗಳನ್ನು ಹೊತ್ತುಕೊಂಡಿದ್ದ ಆತನಿಗೆ ಆರನೇ ತರಗತಿಗೇ ಓದಿಗೆ ತಿಲಾಂಜಲಿ ಇಡುವುದು ಅನಿವಾರ್ಯವಾಗಿತ್ತು. ಮನೆಯನ್ನು ನೋಡಿಕೊಳ್ಳಲು ಆತ ಹಲವಾರು ಅನಿಯಮಿತ ಕೆಲಸಗಳನ್ನು ಮಾಡಿದ. ಟೈಲರ್ ಆಗಿ, ಕಟ್ಟಡ ನಿರ್ಮಾಣ ಕೆಲಸಗಾರನಾಗಿ... ಹೀಗೆ. ಈಗ ಸೆಕ್ಯುರಿಟಿ ಗಾರ್ಡ್.

ವಾಸ್ತವವಾಗಿ ಶಶಿಯ ತಿಂಗಳ ಸಂಬಳ 4,200 ರೂಪಾಯಿ. ಆದರೆ, ಆಸ್ಪತ್ರೆಗೆ ಬಂದಾಗಲೆಲ್ಲ ಗೈರು ಹಾಜರಿ ಆಗುವುದರಿಂದ ಸಂಬಳ ಕತ್ತರಿ ಪ್ರಯೋಗಕ್ಕೊಳಗಾಗಿ, ತಿಂಗಳ ಕೊನೆಗೆ ಕೈಗೆ ಸಿಗುವುದು 3,200 ರೂಪಾಯಿ ಮಾತ್ರ.

ಇತ್ತೀಚೆಗೆ ಆತನ ಕಾಯಿಲೆಯ ಬೆಳವಣಿಗೆಯನ್ನು ಕಂಡುಹಿಡಿಯಲು, ಕಿಡ್ನಿ ಅಂಗಾಂಶ ಪರೀಕ್ಷೆಗಾಗಿ ಶಶಿ ಮೂರು ದಿನ ಆಸ್ಪತ್ರೆಯಲ್ಲಿ ದಾಖಲಾಗಬೇಕಿತ್ತು. ಶಶಿಯ ರಕ್ತಪರೀಕ್ಷೆಯ ಕೋರಿಕೆಯ ಪತ್ರ, ರಕ್ತದ ಮಾದರಿಗಳನ್ನು ಹಿಡಿದು ಹೊರಟಾಗ ಮೆಟ್ಟಿಲ ಬಳಿ ಆತ ಎದುರಾದ. ತನ್ನನ್ನು ಹೀಗೆ ದಾಖಲು ಮಾಡಿಕೊಂಡ ಕಾರಣವನ್ನು ಕೇಳಿದ. `ಪುಟ್ಟಾ, ಅಂಗಾಂಗ ಪರೀಕ್ಷೆ ಮಾಡುವ ಸಂದರ್ಭದಲ್ಲಿ ನಿನ್ನ ಕೈ ಹಿಡಿದುಕೊಳ್ಳುವವರು ಯಾರಾದರೂ ಇದ್ದಾರೆಯೇ?~ ಎಂದು ಕೇಳಿದೆ. `ನೀವೆಲ್ಲರೂ ಇರುತ್ತೀರಲ್ಲಾ. ನೀವೆಲ್ಲಾ ನನ್ನ ಮೊದಲ ಜನ್ಮದಿನದಿಂದ ಇಲ್ಲಿಯವರೆಗೂ ನೋಡಿಕೊಂಡಿಲ್ಲವೇ~ ಎಂದು ಕೂಡಲೇ ಪ್ರತಿಕ್ರಿಯಿಸಿದ. ನನ್ನ ಬಳಿ ಅದಕ್ಕೆ ಉತ್ತರವಿರಲಿಲ್ಲ. ಬಳಿಕ ಆತನೇ ಮಾತು ಮುಂದುವರಿಸಿದ. ಅವರ 66 ವರ್ಷದ ತಂದೆ ಅನಾರೋಗ್ಯದಿಂದ ಬಳಲುತ್ತಿದ್ದಾರೆ. ವಯಸ್ಸಾಗಿರುವುದರಿಂದ ಅವರಿಗೆ ಅವನ ಜೊತೆ ಇರಲು  ಸಾಧ್ಯವಾಗುತ್ತಿರಲಿಲ್ಲ. ಅಲ್ಲದೆ ಅವರು ಕೆಲಸಕ್ಕೆ ಹೋಗುವುದನ್ನೂ ನಿಲ್ಲಿಸಿದ್ದರು. ಅವರ ಕಣ್ಣಿಗೆ ಪೊರೆ ಬಂದಿದ್ದು, ತಂದೆಗೆ ಶಸ್ತ್ರಚಿಕಿತ್ಸೆ ಮಾಡಿಸುವ ಗುರಿ ಆತನದ್ದು.

ನಾವು ಆತನ ಭವಿಷ್ಯದ ಯೋಜನೆಗಳ ಬಗ್ಗೆ ಚರ್ಚಿಸಿದೆವು. ಮದ್ಯದ ದಾಸನಾಗಿದ್ದ ಅಣ್ಣನಿಗೆ ಮದುವೆಯಾಗಲು ಬಿಡುವುದಿಲ್ಲ. ಗಳಿಕೆಯನ್ನೆಲ್ಲಾ ಕುಟುಂಬದ ಜೀವನಕ್ಕಾಗಿ ಮತ್ತು ತಾಯಿಗೆ ನಿಮ್ಹಾನ್ಸ್‌ನಲ್ಲಿ ಚಿಕಿತ್ಸೆ ನೀಡಲು ವಿನಿಯೋಗಿಸುತ್ತಿದ್ದೇನೆ. ತಂದೆಗೆ ಶೀಘ್ರದಲ್ಲೇ ಕಣ್ಣಿನ ಪೊರೆ ಚಿಕಿತ್ಸೆ ಮಾಡಿಸುತ್ತೇನೆ ಎಂದು ನನ್ನೊಂದಿಗೆ ಹೇಳಿಕೊಂಡ.

ನಾನು ಆತನ ಸ್ವಂತ ಚಿಕಿತ್ಸೆಯ ಬಗ್ಗೆ ಕೇಳಿದೆ. `ಆರ್‌ಪಿ~ ಮೇಡಂ ತಿಂಗಳಿಗೆ 1 ಸಾವಿರ ರೂಪಾಯಿಯಂತೆ ಅತಿ ಕಡಿಮೆ ವೆಚ್ಚದಲ್ಲಿ ಔಷಧಗಳನ್ನು ಪಡೆದು ಒದಗಿಸುತ್ತಿದ್ದಾರೆ ಎಂದ. ಸುಮ್ಮನೆ ತಮಾಷೆಗೆಂದು ಅವನ ಮದುವೆ ಬಗ್ಗೆ ಕೇಳಿದೆ. ಆಗ ಶಶಿ ನಕ್ಕ. ಆ ನಗುವನ್ನು ನನ್ನ ಸೆಲ್‌ಫೋನ್‌ನಲ್ಲಿ ಕೂಡಲೇ ಸೆರೆ ಹಿಡಿದೆ. `ಮೇಡಂ ನಾನು ಇನ್ನೊಂದು ಜೀವವನ್ನು ಸಲಹಲು ಹೇಗೆ ಸಾಧ್ಯ? ನನ್ನ ವಯಸ್ಸಾದ ಮತ್ತು ಕಾಯಿಲೆ ಬಿದ್ದ ಪೋಷಕರನ್ನು ನೋಡಿಕೊಳ್ಳುವುದಷ್ಟೇ ನನ್ನ ಜೀವನದ ಬದ್ಧತೆ ಮತ್ತು ಗುರಿ. ಅವರ ಋಣವನ್ನು ತೀರಿಸುವುದು ನನ್ನ ಬಯಕೆ~ ಎಂದು ಮಾರ್ಮಿಕವಾಗಿ ಹೇಳಿದ.

ಶಶಿ ಹಣದ ಅತಿ ಅಗತ್ಯವಿದ್ದಾಗ ಕೊಟ್ಟಿದ್ದನ್ನು ಎಂದೂ ನಿರಾಕರಿಸಿಲ್ಲ. ಈ ಬಾರಿ ಸಹ ನಾನು ನೀಡಿದ ಹಣವನ್ನು ಕೃತಜ್ಞತೆಯಿಂದ ಸ್ವೀಕರಿಸಿದ.

ಶಶಿ ಹೊರಟುಹೋಗುತ್ತಿದ್ದಂತೆಯೇ ಈ ಮಗುವಿನ ಪರೀಕ್ಷೆ ನಡೆಸಿದ ಪದವಿ ವಿದ್ಯಾರ್ಥಿನಿ ಡಾ. ಅನಿತಾ ಆತನ ಅಂಗಾಂಶ ಪರೀಕ್ಷೆಯ ವರದಿ ವಿವರಿಸಿದರು. ಅದು ಅತಿ ನಿರಾಶಾದಾಯಕವಾಗಿತ್ತು. 100 ನೆಫ್ರಾನ್‌ಗಳಲ್ಲಿ (ಕಿಡ್ನಿ ಕಾರ್ಯನಿರ್ವಹಿಸುವ ಅಂಗಗಳು) ಆತನಲ್ಲಿ ಉಳಿದಿದ್ದು ಶೇಕಡಾ 30 ಮಾತ್ರ. ಕಾಯಿಲೆ ಉಲ್ಬಣವಾಗುತ್ತಿತ್ತು. ಶಶಿ ಇನ್ನು ಒಂದು ವರ್ಷಕ್ಕಿಂತ ಹೆಚ್ಚು ಕಾಲ ಬದುಕುಳಿಯುವ ಸಾಧ್ಯತೆ ಇಲ್ಲ! ನಾನು ಈ ಮಗುವನ್ನು ಉಳಿಸಲು ಸಹಾಯ ಮಾಡುವಂತೆ ಪ್ರೇಮಲತಾ ಅವರನ್ನು ಕೋರಿಕೊಂಡೆ. ಆಗ ಅವರು ನಿಮ್ಮ ಅಂಕಣದ ಮೂಲಕವೇ ಆತನ ಚಿಕಿತ್ಸೆಗೆ ಹಣ ಮತ್ತು ಮೂತ್ರಪಿಂಡ ದಾನಿಯೊಬ್ಬರನ್ನು ಸಂಗ್ರಹಿಸೋಣ ಎಂದು ಸಲಹೆ ನೀಡಿದರು.

ನನ್ನ ಓದುಗರಲ್ಲಿ ಕೆಲವು ದಾನಿಗಳಾದರೂ ಶಶಿಗೆ ಆತನ `ಜವಾಬ್ದಾರಿ~ಗಳನ್ನು ಪೂರೈಸಲು ಸಹಾಯ ಮಾಡುತ್ತಾರೆ ಎಂಬ ಭರವಸೆಯೊಂದಿಗೆ ಶಶಿಯ ಈ ಕಥೆ ಬರೆದಿದ್ದೇನೆ. ಕಾಲಚಕ್ರ ವೇಗವಾಗಿ ಉರುಳುತ್ತಿದೆ.

ನನ್ನ ಶ್ರೀಮಂತ ಸಂಬಂಧಿಯೊಬ್ಬರ ಮಗನ ವಿವಾಹದ ಕರೆಯೋಲೆಯು ಪೆಟ್ಟಿಗೆಯಂತಹ ಪತ್ರದಲ್ಲಿ ಒಣಗಿಸಿದ ಹಣ್ಣುಗಳನ್ನು ಒಳಗೊಂಡಿತ್ತು. ಅದರ ಬೆಲೆ ಎರಡು ಸಾವಿರ ರೂಪಾಯಿ!

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.