ಶನಿವಾರ, ಜೂನ್ 19, 2021
27 °C

ಶಸ್ತ್ರ ಹರಿತಕ್ಕೆ ಶಾಸನವೇ ಅಸ್ತ್ರ!

ಅನುರಾಧಾ ಗಂಗನಾಥ Updated:

ಅಕ್ಷರ ಗಾತ್ರ : | |

ಕೈಯಲ್ಲಿ ಕುಡುಗೋಲು, ಮಚ್ಚು ಹಿಡಿದು ಬಂದ ಆ ವ್ಯಕ್ತಿ  ಆ ದೇಗುಲದ ಎದುರು ಅಡ್ಡಬಿದ್ದು ನಮಸ್ಕಾರ ಮಾಡಿದ. ಯಾವುದೋ ಸಮರಕ್ಕೆ ಹೊರಟಂತಿತ್ತು ಆ ವೈಖರಿ!ದೇವಾಲಯದ ಎದುರು ಆತ ಏನು ಮಾಡುತ್ತಾನೆ ಎಂದು ಹತ್ತಿರ ಹೋಗಿ ನೋಡಿದಾಗ ತನ್ನ ಕೈಯಲ್ಲಿದ್ದ ಮೊಂಡಾದ ಕತ್ತಿಯನ್ನು ಹಿಡಿದು ಹರಿತಗೊಳಿಸತೊಡಗಿದ್ದು ಕಂಡುಬಂತು. ತನ್ನ ಕಾರ್ಯದಲ್ಲಿ ಮಗ್ನನಾಗಿದ್ದ ಆತ, ದೇವಾಲಯದ ಎದುರು ಇರುವ ಶಾಸನದ ಮೇಲೆ ಆ ಕತ್ತಿ ಮಸೆಯುತ್ತಿದ್ದ. ‘ಹೀಗೇಕೆ ಮಾಡುತ್ತಿದ್ದಿ?’ ಎಂದು ವಿಚಾರಿಸಿ­ದರೆ ‘ನಾನು ಮಾತ್ರ ಅಲ್ಲ; ಹೆಚ್ಚಿನ ಜನ ತಮ್ಮ ಕತ್ತಿಗಳನ್ನು ಹರಿತಗೊಳಿಸೋದು ಇಲ್ಲೇ’ ಎಂದು ಉತ್ತರ ಕೊಟ್ಟ.

ಹಾಸನ ಜಿಲ್ಲೆಯ ಅರಕಲಗೂಡಿನಲ್ಲಿರುವ ಚೋಳರ ಕಾಲದ ಶಾಸನದ ಇಂದಿನ ಅವಸ್ಥೆ ಇದು! ಗತ ವೈಭವವನ್ನು ಸಾರಬೇಕಿದ್ದ ಈ ಶಾಸನ ಇಂದು ಆಯುಧಗಳನ್ನು ಹರಿತಗೊಳಿಸುವ ವಸ್ತುವಾಗಿ ಪರಿಣಮಿಸಿದೆ.ಶಂಭುನಾಥೇಶ್ವರ ದೇವಾಲಯದ ಪೂರ್ವ ಪ್ರವೇಶದ್ವಾರದ ಬಳಿಯೇ ಇರುವುದು ಈ ಶಾಸನ. ಈ ಶಾಸನವನ್ನು ಕೇಶವನಾಯ್ಕ ಮತ್ತು ಸುಂಕಾಧಿಕಾರಿ ದೇವರಸರು ಸೇನಾಬೋವ ಲಿಂಗಣ್ಣ ಎಂಬಾತನಿಂದ ಬರೆಸಿದರು ಎಂಬುದು ತಿಳಿದುಬಂದಿದೆ. ದೇವಾಲಯದ ಹತ್ತಿರವೇ 30/30 ಅಡಿ ಅಳತೆಯ ಕೊಳವಿದೆ. ಈ ಕೊಳದಲ್ಲಿ ಲಿಂಗವಿದೆಯೆಂಬ ನಂಬಿಕೆ ಜನರದ್ದು. ಇಷ್ಟೆಲ್ಲಾ ಇತಿಹಾಸ ಮೈದುಂಬಿಸಿಕೊಂಡಿರುವ ಈ ಶಾಸನ ಸವೆ­ಯುತ್ತಾ ಇದೆ. ಜನರೆಲ್ಲರೂ ಸೇರಿ ಶಾಸನದ ತಲೆಯನ್ನೇ ನುಣ್ಣಗೆ ಬೋಳಿಸಿದ್ದಾರೆ. ಕುರಿ, ಮೇಕೆ ಸೇರಿದಂತೆ ಇತರ ಪ್ರಾಣಿಗಳಿಗೂ ಇದು ವಿಶ್ರಮಿಸುವ ಸ್ಥಳವಾಗಿದೆ.ಜನರಿಗೆ ಸರಿಯಾದ ಮಾಹಿತಿ ಇಲ್ಲದೆ, ಜಾಗೃತಿಯಿಲ್ಲದೆ ದಿನೇ ದಿನೇ ಈ ಶಾಸನ ಕ್ಷೀಣಿಸುತ್ತಾ ಇದೆ. ಇದೇ ರೀತಿ ಮುಂದುವರಿದರೆ ಈ ಶಾಸನ ಕಣ್ಮರೆಯಾಗುವುದರಲ್ಲಿ ಎರಡು ಮಾತಿಲ್ಲ.ಜನ ಜಾಗೃತರಾಗಿ, ಶಾಸನದ ಮಹತ್ವ ಅರಿತು, ಅದನ್ನು ಜತನದಿಂದ ಕಾಯ್ದರೆ ನಮ್ಮ ಪರಂಪರೆಯನ್ನು ಉಳಿಸಿ ಬೆಳೆಸಬಹುದು. ಇದು ಆ ಊರಿನ ಜನರ ಜವಾಬ್ದಾರಿ ಹಾಗೂ ಕರ್ತವ್ಯ.ಶಂಭುನಾಥೇಶ್ವರ ದೇವಾಲಯ ಅರಕಲಗೂಡಿನಿಂದ 2 ಕಿ.ಮೀ ದೂರದಲ್ಲಿದೆ. ಇದಕ್ಕೆ ಶಂಭುನಾಥಪುರ ಎಂದೂ ಹೆಸರು. ಈ ದೇವಾಲಯದ ನವರಂಗ ಹಾಗೂ ಗೋಪುರ ಪಾಳೆಯಗಾರರ ಕಾಲದಲ್ಲಿ ನಿರ್ಮಾಣಗೊಂಡಿದೆ. ಗರ್ಭಗುಡಿಯಲ್ಲಿರುವ ಶಂಭುಲಿಂಗವು ಸ್ವಯಂ ಉದ್ಭವ ಮೂರ್ತಿಯಾಗಿದೆ.ಗರ್ಭಗುಡಿಯ ಮೇಲೆ ಗೋಳಾಕಾರದ ಗೋಪುರವಿದೆ. ದೇವಾಲಯದ ನವರಂಗವು ವಿಶಾಲ­ವಾಗಿದ್ದು, ಪೂರ್ವ ಹಾಗೂ ದಕ್ಷಿಣ ಭಾಗಗಳಿಗೆ ಎರಡು ಪ್ರವೇಶದ್ವಾರವನ್ನು ದೇವಾಲಯ ಹೊಂದಿದೆ ಹಾಗೂ ದೇವಾಲಯದ ಒಳಗೆ ಬೆಳಕು ಬರಲು ಕಿಂಡಿ (ಕಿಟಕಿ) ವ್ಯವಸ್ಥೆಯೂ ಇದೆ. ಇಲ್ಲಿ ನಿತ್ಯ ಪೂಜೆ ನಡೆಯುತ್ತಿದೆ. ಊರಿಗೆ ಬರಗಾಲ ಬಡಿದಾಗ ವಿಶೇಷ ಪೂಜೆ ಸಲ್ಲಿಸಿದರೆ ಧಾರಾಕಾರ ಮಳೆ ಬೀಳುವುದೆಂಬ ನಂಬಿಕೆಯಿದೆ.ಗರ್ಭಗುಡಿಯಲ್ಲಿರುವ ಶಂಭುಲಿಂಗೇಶ್ವರನಿಗೆ ಮಹಾಭಿಷೇಕ/ಕುಂಭಾಭಿಷೇಕವನ್ನು ಮಾಡಿ ಅಭಿಷೇಕದ ನೀರು ನಾಲ್ಕೈದು ಅಡಿ ಎತ್ತರದವರೆಗೆ ಏರುವಂತೆ ಕಟ್ಟೆ ಕಟ್ಟಲಾಗುತ್ತದೆ. ಮೂರು ದಿನಗಳ ನಂತರ ಈ ನೀರು ಖಾಲಿಯಾಗು­ವು­ದೆಂದೂ, ಹೀಗೆ ಖಾಲಿಯಾದರೆ ಮಳೆ ಬೀಳುವುದೆಂಬ ನಂಬಿಕೆ ಇದೆ. ನೀರು ಖಾಲಿಯಾದ ನಂತರ ಭಕ್ತಾದಿಗಳು ದೇವರ ಉತ್ಸವವನ್ನು ಆಚರಿಸುತ್ತಾರೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.