ಗುರುವಾರ , ಮೇ 13, 2021
22 °C

ಶಾಲಾ ಮೂಲಸೌಕರ್ಯಕ್ಕೂ ಆದ್ಯತೆ: ಹೈಕೋರ್ಟ್ ಕಿವಿಮಾತು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಶಿಕ್ಷಣದಿಂದ ವಂಚಿತರಾಗಿರುವ ಮಕ್ಕಳನ್ನು ಶಾಲೆಗೆ ಮರಳಿ ತರುವುದಷ್ಟೇ ಮುಖ್ಯವಲ್ಲ, ಅವರಿಗೆ ಶಾಲೆಯಲ್ಲಿ ಅಗತ್ಯ ಮೂಲಸೌಕರ್ಯ ಕಲ್ಪಿಸುವುದಕ್ಕೂ ಆದ್ಯತೆ ನೀಡಬೇಕು ಎಂದು ಸರ್ಕಾರಕ್ಕೆ ಹೈಕೋರ್ಟ್ ಮೌಖಿಕವಾಗಿ ಕಿವಿಮಾತು ಹೇಳಿದೆ.ರಾಜ್ಯದಲ್ಲಿ ಅಂದಾಜು 54 ಸಾವಿರ ಮಕ್ಕಳು ಶಾಲಾ ಶಿಕ್ಷಣದಿಂದ ವಂಚಿತರಾಗಿರುವ ಸಂಗತಿಯನ್ನು ಗಂಭೀರವಾಗಿ ಪರಿಗಣಿಸಿದ ಹೈಕೋರ್ಟ್, ಸ್ವಯಂಪ್ರೇರಿತವಾಗಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ (ಪಿಐಎಲ್) ದಾಖಲು ಮಾಡಿಕೊಂಡಿದೆ. ಅದರ ವಿಚಾರಣೆಯನ್ನು ಮುಖ್ಯ ನ್ಯಾಯಮೂರ್ತಿ ಡಿ.ಎಚ್. ವಘೇಲಾ ಮತ್ತು ನ್ಯಾಯಮೂರ್ತಿ ಬಿ.ವಿ. ನಾಗರತ್ನ ಅವರನ್ನು ಒಳಗೊಂಡ ವಿಭಾಗೀಯ ಪೀಠ ಬುಧವಾರ ನಡೆಸಿತು.`ಮಕ್ಕಳನ್ನು ಶಾಲೆಗೆ ಕಳುಹಿಸುವ ಸಾಮರ್ಥ್ಯ ಪಾಲಕರಿಗೆ ಬರಬೇಕು. ಈ ನಿಟ್ಟಿನಲ್ಲೂ ಯೋಜನೆ ರೂಪಿಸಬೇಕು. ಶಾಲೆಗಳಲ್ಲಿ ಯಾವ ರೀತಿಯ ಸೌಲಭ್ಯ ದೊರೆಯುತ್ತಿದೆ ಎಂಬ ಬಗ್ಗೆ ಪಾಲಕರಿಗೆ ಮಾಹಿತಿ ನೀಡಬೇಕು. ಅಂಗನವಾಡಿಗಳಲ್ಲಿ ಓದುತ್ತಿರುವ ಮಕ್ಕಳು, ಅಲ್ಲಿಂದ ನೇರವಾಗಿ ಶಾಲೆಗಳಿಗೆ ದಾಖಲಾಗುವಂತೆ ಕಾಳಜಿ ವಹಿಸಬೇಕು' ಎಂದೂ ಪೀಠ ಹೇಳಿತು.ಶಾಲೆ ತೊರೆದ ಮಕ್ಕಳನ್ನು ಮರಳಿ ಕರೆತರಲು ಸಂಪನ್ಮೂಲದ ಕೊರತೆ ಇದ್ದಂತಿಲ್ಲ. ಲಭ್ಯ ಸಂಪನ್ಮೂಲಗಳನ್ನು ಸೂಕ್ತವಾಗಿ ಬಳಸಿಕೊಳ್ಳಬೇಕು. ಮಕ್ಕಳನ್ನು ಶಾಲೆಗೆ ಮರಳಿ ಕರೆತರುವ ಕುರಿತು ಸರ್ಕಾರ ಮತ್ತು ಸ್ವಯಂಸೇವಾ ಸಂಘಟನೆಗಳು ಚರ್ಚೆ ನಡೆಸಿ, ವಿಸ್ತೃತ ವರದಿ ಸಲ್ಲಿಸಬೇಕು ಎಂದು ನಿರ್ದೇಶನ ನೀಡಿತು.`ಶಿಕ್ಷಣ ಹಕ್ಕಿಗಾಗಿ ಜನರ ಒಕ್ಕೂಟ' (ಪಿ.ಎ.ಎಫ್.ಆರ್.ಇ) ಸಂಸ್ಥೆ ಮಾರ್ಚ್ 30ರಂದು ಬೆಂಗಳೂರಿನಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ತಜ್ಞರು, `ರಾಜ್ಯದಲ್ಲಿ ಅಂದಾಜು 54 ಸಾವಿರ ಮಕ್ಕಳು ಶಾಲಾ ಶಿಕ್ಷಣದಿಂದ ವಂಚಿತರಾಗಿದ್ದಾರೆ' ಎಂದು ಹೇಳಿದ್ದರು. ಇದನ್ನು ಆಧರಿಸಿ ಮಾರ್ಚ್ 31ರಂದು ಪತ್ರಿಕೆಗಳಲ್ಲಿ ಪ್ರಕಟವಾದ ವರದಿಗಳನ್ನು ಗಮನಿಸಿ, ಹೈಕೋರ್ಟ್ ಪಿಐಎಲ್ ದಾಖಲು ಮಾಡಿಕೊಂಡಿದೆ.ನೈಸ್: ಕಾಯ್ದಿಟ್ಟ ಆದೇಶ

ನೈಸ್‌ನ `ಬೆಂಗಳೂರು - ಮೈಸೂರು ಇನ್‌ಫ್ರಾಸ್ಟ್ರಕ್ಚರ್ ಕಾರಿಡಾರ್' (ಬಿಎಂಐಸಿ) ಯೋಜನೆಯಲ್ಲಿ ನಡೆದಿದೆ ಎನ್ನಲಾದ ಅಕ್ರಮಗಳ ಬಗ್ಗೆ ತನಿಖೆಗೆ ಲೋಕಾಯುಕ್ತ ವಿಶೇಷ ನ್ಯಾಯಾಲಯ ನೀಡಿದ್ದ ಆದೇಶ ರದ್ದು ಕೋರಿ ಸಂಸ್ಥೆಯ ಮುಖ್ಯಸ್ಥ ಅಶೋಕ್ ಖೇಣಿ ಸಲ್ಲಿಸಿರುವ ಅರ್ಜಿಗೆ ಸಂಬಂಧಿಸಿದ ಆದೇಶವನ್ನು ಹೈಕೋರ್ಟ್ ಕಾಯ್ದಿರಿಸಿದೆ.ಅರ್ಜಿಯ ವಿಚಾರಣೆಯನ್ನು ನ್ಯಾಯಮೂರ್ತಿ ಆನಂದ ಬೈರಾರೆಡ್ಡಿ ಬುಧವಾರ ನಡೆಸಿದರು. ಲೋಕಾಯುಕ್ತ ತನಿಖೆಗೆ ಹೈಕೋರ್ಟ್ ಈಗಾಗಲೇ ಮಧ್ಯಂತರ ತಡೆಯಾಜ್ಞೆ ನೀಡಿದೆ. ಖೇಣಿ ಸಲ್ಲಿಸಿರುವ ಅರ್ಜಿ ಇತ್ಯರ್ಥ ಆಗುವವರೆಗೆ ತಡೆಯಾಜ್ಞೆ ಜಾರಿಯಲ್ಲಿರುತ್ತದೆ ಎಂದು ನ್ಯಾಯಾಲಯ ಮಧ್ಯಂತರ ಆದೇಶದಲ್ಲಿ ಸ್ಪಷ್ಟಪಡಿಸಿತ್ತು.ಶರ್ಮಗೆ ಹಿನ್ನಡೆ

ಡಾ.ಎಸ್.ಸಿ. ಶರ್ಮ ಅವರು ತುಮಕೂರು ವಿಶ್ವವಿದ್ಯಾಲಯದ ಕುಲಪತಿ ಸ್ಥಾನದಿಂದ ನಿವೃತ್ತಿ ಪಡೆದ ನಂತರ, ಬೆಂಗಳೂರಿನ ಆರ್.ವಿ. ಎಂಜಿನಿಯರಿಂಗ್ ಕಾಲೇಜಿನ ಪ್ರಾಂಶುಪಾಲರ ಹುದ್ದೆಗೆ ಮರಳಬಹುದು ಎಂದು ಸರ್ಕಾರ ಹೊರಡಿಸಿದ್ದ ಆದೇಶವನ್ನು ಹೈಕೋರ್ಟ್ ಬುಧವಾರ ರದ್ದು ಮಾಡಿದೆ. ಡಾ. ಶರ್ಮ ಅವರು ತುಮಕೂರು ವಿ.ವಿ. ಕುಲಪತಿ ಸ್ಥಾನದಿಂದ ಈಗಾಗಲೇ ನಿವೃತ್ತಿಹೊಂದಿದ್ದಾರೆ.ಸರ್ಕಾರದ ಆದೇಶ ಪ್ರಶ್ನಿಸಿ ಆರ್.ವಿ. ಎಂಜಿನಿಯರಿಂಗ್ ಕಾಲೇಜಿನ ಮಾತೃ ಸಂಸ್ಥೆ ರಾಷ್ಟ್ರೀಯ ಶಿಕ್ಷಣ ಸಮಿತಿ ಟ್ರಸ್ಟ್ ಹೈಕೋರ್ಟ್ ಮೆಟ್ಟಿಲೇರಿತ್ತು. ಅರ್ಜಿಯ ವಿಚಾರಣೆ ನಡೆಸಿದ್ದ ನ್ಯಾಯಮೂರ್ತಿ ಹುಲುವಾಡಿ ಜಿ. ರಮೇಶ್ ಆದೇಶ ಕಾಯ್ದಿರಿಸಿದ್ದರು. `ಡಾ. ಶರ್ಮ ಅವರು ಪ್ರಾಂಶುಪಾಲರ ಹುದ್ದೆಗೆ ಮತ್ತೆ ಮರಳಬಹುದು ಎಂದು ಸರ್ಕಾರ 2009ರ ಜೂನ್ 26ರಂದು ಹೊರಡಿಸಿದ್ದ ಆದೇಶವನ್ನು ರದ್ದು ಮಾಡಲಾಗಿದೆ. ಡಾ. ಶರ್ಮ ಅವರು ಕಾಲೇಜಿನಲ್ಲಿ ಪ್ರಾಧ್ಯಾಪಕರ ಹುದ್ದೆಗೆ ಮರಳಬಹುದು' ಎಂದು ಆದೇಶದಲ್ಲಿ ಹೇಳಲಾಗಿದೆ.`ತುಮಕೂರು ವಿ.ವಿ.ಯ ಕುಲಪತಿ ಹುದ್ದೆಯಿಂದ ನಿವೃತನಾದ ನಂತರ, ಕಾಲೇಜಿನ ಪ್ರಾಂಶುಪಾಲರ ಹುದ್ದೆಗೆ ಮರಳಲು ಅವಕಾಶ ನೀಡುವುದಾಗಿ ಕಾಲೇಜಿನ ಆಡಳಿತ ಮಂಡಳಿ ಭರವಸೆ ನೀಡಿತ್ತು. ಆದರೆ ನಂತರ, ಈ ಭರವಸೆಯನ್ನು ಹಿಂಪಡೆಯಿತು' ಎಂದು ಡಾ. ಶರ್ಮ ವಾದಿಸಿದ್ದರು. `ಪ್ರಾಂಶುಪಾಲರ ಹುದ್ದೆಗೆ ಮರಳುವುದಕ್ಕೆ ಟಸ್ಟ್‌ನ ಆಡಳಿತ ಮಂಡಳಿ ಸದಸ್ಯರು ಅನುಮತಿ ನಿರಾಕರಿಸಿದ್ದಾರೆ' ಎಂದು ಟ್ರಸ್ಟ್ ಪರ ವಕೀಲರು ಪ್ರತಿವಾದ ಮಂಡಿಸಿದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.