ಶಾಲೆಯಲ್ಲಿ ಸರ್ಪ ಪಾಠ!

7

ಶಾಲೆಯಲ್ಲಿ ಸರ್ಪ ಪಾಠ!

Published:
Updated:

ಮಕ್ಕಳಿಗೆ ಪ್ರಾಣಿಗಳ ಬಗ್ಗೆ ತುಂಬ ಕುತೂಹಲ. ಅದರಲ್ಲೂ ಹಾವುಗಳ ಬಗ್ಗೆ ಭೀತಿ ಇದ್ದರೂ, ಅವುಗಳ ಗುಣ ಸ್ವಭಾವ ಅರಿತುಕೊಳ್ಳುವ ಬಗ್ಗೆ ಸಹಜ ಆಸಕ್ತಿ. ಜೊತೆಗೆ ಹಾವುಗಳ ಬಗ್ಗೆ ತಾವು ಕೇಳಿದ ಅನೇಕ ಸಂಗತಿಗಳ ಸತ್ಯಾಸತ್ಯತೆಯನ್ನು ಅರಿತುಕೊಳ್ಳುವ ಬಯಕೆ.ಅವರಿಗೆ ಗೊತ್ತಿರುವ ಒಂದು ವಿಷಯ ಎಂದರೆ `ಹಾವು ವಿಷ ಜಂತು~ ಎಂಬುದು (ಆದರೆ ಬಹುತೇಕ ಹಾವುಗಳಲ್ಲಿ ವಿಷ ಇರುವುದಿಲ್ಲ). ಹಾವಿನ ವಿಷ ಎಲ್ಲಿರುತ್ತದೆ, ದೇಹದಲ್ಲಿಯೇ ವಿಷ ಇದ್ದರೂ ಅದು ಮಾತ್ರ ಏಕೆ ಸಾಯುವುದಿಲ್ಲ, ಅದರ ವಿಷ ಹೇಗೆ ತೆಗೆಯುತ್ತಾರೆ ಇತ್ಯಾದಿ ಇತ್ಯಾದಿ ಪ್ರಶ್ನೆಗಳು ಎಲ್ಲ ಮಕ್ಕಳಂತೆ ಹಾವೇರಿ ಜಿಲ್ಲೆ ರಾಣೇಬೆನ್ನೂರಿನ ಓಂ ಪಬ್ಲಿಕ್ ಶಾಲೆ ಮಕ್ಕಳನ್ನೂ ಕಾಡುತ್ತಿತ್ತು.

ಅದಕ್ಕೆ ಸರಿಯಾಗಿ ಒಂದು ದಿನ ಈ ಶಾಲೆಯ ಆವರಣಕ್ಕೆ ಹಾವೊಂದು ಬಂದೇ ಬಿಡೋದೇ? ಅದೃಷ್ಟಕ್ಕೆ ಶಾಲೆಯ ಪ್ರಾಚಾರ್ಯ ಬಸವರಾಜ ಮಾಗಡಿ ಹಾವು ಹಿಡಿಯುವುದರಲ್ಲಿ ಪರಿಣಿತರು.

ಇದುವರೆಗೂ 30ಕ್ಕೂ ಹೆಚ್ಚು ಹಾವುಗಳನ್ನು ಹಿಡಿದು ಕೃಷ್ಣಮೃಗ ಅಭಯಾರಣ್ಯಕ್ಕೆ ಬಿಟ್ಟಿದ್ದಾರೆ. ಅಂತೆಯೇ ಇದನ್ನೂ ಸುಲಭವಾಗಿ ಹಿಡಿದ ಅವರು, ಮಕ್ಕಳು ಕೇಳಿದ ಪ್ರಶ್ನೆಗಳಿಗೆ ಉತ್ತರಿಸಿದರು. ಅನುಮಾನ ಪರಿಹರಿಸುವ ಪ್ರಯತ್ನ ಮಾಡಿದರು.`ಭೂಮಿಯಲ್ಲಿ ಸಹಸ್ರಾರು ಜಾತಿಯ ಹಾವುಗಳಿದ್ದರೂ ಸುಮಾರು 60 ಜಾತಿಗಳಷ್ಟೇ ವಿಷಕಾರಿ. ಇವುಗಳಲ್ಲಿ ಸಾವು ತರುವಂಥ ಹಾವುಗಳ ಸಂಖ್ಯೆ ಬೆರಳೆಣಿಕೆಯಷ್ಟು ಮಾತ್ರ. ಹಾಗಾಗಿ ವಿನಾಕಾರಣ ಹಾವುಗಳನ್ನು ಸಾಯಿಸುವುದು ತರವ್ಲ್ಲಲ.

ಕಾಳಿಂಗ ಸರ್ಪ, ನಾಗರ, ಮಂಡಲಹಾವು ಮತ್ತು ಕಾಮನ್ ಕ್ರಾಟ್ ಮಾತ್ರ ವಿಷಪೂರಿತ. ಉಳಿದ ವಿಷಕಾರಿ ಹಾವುಗಳು ಕಚ್ಚಿದರೂ ಪ್ರಾಣ ಹಾನಿಯಾಗುವುದಿಲ್ಲ~ ಎಂಬ ಅವರ ಮಾತು ಮಕ್ಕಳ ಮನಸ್ಸಿಗೂ ನಾಟಿತ್ತು, ಭಯ ದೂರವಾಗಿತ್ತು.ಹಾವುಗಳನ್ನು ಹೊಡೆದು ಕೊಲ್ಲಬಾರದು ಎಂದು ಮಕ್ಕಳಲ್ಲಿ ವಿನಂತಿ ಮಾಡಿದರು. ಈ ಎಲ್ಲ ವಿವರಣೆಗಳನ್ನು ಕೇಳಿದ ಬಳಿಕ ಮಕ್ಕಳು ಬಸವರಾಜ ಹಿಡಿದಿದ್ದ ಹಾವನ್ನು ಮುಟ್ಟಿ, ಮೈಮೇಲೆ  ಹಾಕಿಕೊಂಡರು, ಅದರ ದೇಹದ ರಚನೆಯನ್ನು ನೋಡಿದರು, ಭಯವನ್ನು ಹೋಗಲಾಡಿಸಿಕೊಂಡರು.

 

ಮೊದಲು ಹಾವು ಹಿಡಿದಿದ್ದು...ಕೆಲ ವರ್ಷಗಳ ಹಿಂದೆ ಬಸವರಾಜ ಅವರ ಮನೆಯಲ್ಲೆೀ ಸಣ್ಣದೊಂದು ಹಾವು ಕಾಣಿಸಿತ್ತು. ಮನೆಯವರೆಲ್ಲ ಹೆದರಿ `ಹೊಡೆಯಿರಿ- ಸಾಯಿಸಿರಿ~ ಎಂದು ಕೂಗುತ್ತಾ ಹಾರಾಟ ತಾರಾಟದಲ್ಲಿ ತೊಡಗಿದ್ದರು. ಆದರೆ ಇವರು ಮಾತ್ರ ಸ್ವಲ್ಪವೂ ವಿಚಲಿತರಾಗದೇ ಧೈರ್ಯ ಮತ್ತು ಉಪಾಯದಿಂದ ಹಾವನ್ನು ಹಿಡಿದೇ ಬಿಟ್ಟರು.

ಈ ಘಟನೆ ಅವರಿಗೆ ಹಾವುಗಳ ಬಗ್ಗೆ ಆಸಕ್ತಿ ಮೂಡಿಸಿಕೊಳ್ಳಲು ಸಹಕಾರಿಯಾಯಿತು.

ನಂತರದಲ್ಲಿ ಹಾವುಗಳ ಬಗ್ಗೆ ಮಾಹಿತಿ ಕಲೆಹಾಕಿಕೊಂಡು, ಅವುಗಳ ಬಗ್ಗೆ ಹೆಚ್ಚು ತಿಳಿದುಕೊಳ್ಳಲು ತೊಡಗಿದರು. ಅವನ್ನು ಹಿಡಿಯುವ ಕಲೆಯನ್ನು ಕರಗತ ಮಾಡಿಕೊಂಡರು.ಈಗ ರಾಣೇಬೆನ್ನೂರಲ್ಲಿ ಎಲ್ಲೇ ಹಾವು ಕಾಣಿಸಿದರೂ ಮೊದಲಿಗೆ ಬಸವರಾಜ ಅವರ ಮೊಬೈಲ್ ಸಂಖ್ಯೆ 94486 93193 ಗೆ ಕರೆ ಹೋಗುತ್ತದೆ. ಕೆಲಸವನ್ನೆಲ್ಲ ಬದಿಗೊತ್ತಿ ಸ್ಥಳದಲ್ಲಿ ಹಾಜರಾಗುವ ಅವರು ಹಾವನ್ನು ಹಿಡಿದು ಸುರಕ್ಷಿತವಾಗಿ ಅಭಯಾರಣ್ಯಕ್ಕೆ ಕಳುಹಿಸಿಕೊಡುವ ವ್ಯವಸ್ಥೆ ಮಾಡುತ್ತಾರೆ. ಈ ಸಂದರ್ಭದಲ್ಲಿ ಸಾರ್ವಜನಿಕರಿಗೂ ಹಾವುಗಳ ಬಗ್ಗೆ ತಿಳಿವಳಿಕೆ ನೀಡುತ್ತಾರೆ.ಎಷ್ಟೋ ಜನ ಹಾವು ಕಚ್ಚಿತು ಎಂದು ಹೆದರಿಯೇ ಪ್ರಾಣ ಕಳೆದುಕೊಳ್ಳುತ್ತಾರೆ ಎನ್ನುವ ಬಸವರಾಜ, ಪ್ರಥಮ ಚಿಕಿತ್ಸೆಯಿಂದ ಹಾವು ಕಚ್ಚಿದವರನ್ನು ಬದುಕಿಸುವ ವಿದ್ಯೆಯನ್ನೂ ಬಲ್ಲರು. ಸಂಘ- ಸಂಸ್ಥೆಗಳ ಸಹಕಾರದಿಂದ ಜಿಲ್ಲೆಯಾದ್ಯಂತ ಶಾಲಾ- ಕಾಲೇಜು ವಿದ್ಯಾರ್ಥಿಗಳಿಗೆ ಹಾವುಗಳ ಬಗ್ಗೆ ಅರಿವು ಹೆಚ್ಚಿಸುವ ಆಲೋಚನೆ ಅವರಿಗಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry