ಶನಿವಾರ, ಮೇ 28, 2022
30 °C

ಶಾಲ್ಮಲೆಗೆ ಶಾಶ್ವತ ರಕ್ಷೆ

ಸಂಧ್ಯಾ ಹೆಗಡೆ ಆಲ್ಮನೆ Updated:

ಅಕ್ಷರ ಗಾತ್ರ : | |

ಸಾಂಸ್ಕೃತಿಕ, ಐತಿಹಾಸಿಕ ವೈವಿಧ್ಯಗಳನ್ನು ಪೋಷಿಸುತ್ತ, ಅಪರೂಪದ ಪರಿಸರವನ್ನು ರಕ್ಷಿಸುತ್ತ ಬಂದ ಉತ್ತರ ಕನ್ನಡ ಜಿಲ್ಲೆಯ ಶಿರಸಿ ತಾಲ್ಲೂಕಿನ ಶಾಲ್ಮಲಾ ನದಿ ಕಣಿವೆಯ ಕೆಲ ಭಾಗ ಈಗ ಸಂರಕ್ಷಿತ ಪ್ರದೇಶ.ಪರಿಸರ ಪ್ರವಾಸಿ ತಾಣವಾಗಿ ನಾಡಿನ ಪ್ರವಾಸಿಗರನ್ನು ಸೆಳೆದಿರುವ ಉತ್ತರ ಕನ್ನಡ ಜಿಲ್ಲೆ ಶಿರಸಿ ತಾಲ್ಲೂಕಿನ ಶಾಲ್ಮಲಾ ನದಿಯ ಒಂದಿಷ್ಟು ಭಾಗಕ್ಕೆ `ಸಂರಕ್ಷಿತ ಪ್ರದೇಶ~ದ ಮಾನ್ಯತೆ ಸಿಕ್ಕಿದೆ.

 

ನದಿಯ ನಡುವೆ ಕಪ್ಪು ಬಂಡೆಗಳ ಮೇಲೆ ನಿಸರ್ಗ ನಿರ್ಮಿತ ಸಹಸ್ರಾರು ಶಿವಲಿಂಗ ಕಾಣುವ ಸಹಸ್ರಲಿಂಗದಿಂದ ಇನ್ನೊಂದು ಪ್ರವಾಸಿ ತಾಣ ಗಣೇಶ ಫಾಲ್ಸ್‌ವರೆಗೆ ನದಿ ಕಣಿವೆಯ 15.76 ಕಿಲೋ ಮೀಟರ್ ಪ್ರದೇಶಕ್ಕೆ ರಕ್ಷಾ ಕವಚ ದೊರೆತಿದೆ.ನದಿ ಕಣಿವೆಯೊಂದು ವನ್ಯಜೀವಿ ಸಂರಕ್ಷಣಾ ಕಾನೂನು ಪ್ರಕಾರ ಸಂರಕ್ಷಿತ ಪ್ರದೇಶವೆಂದು ಘೋಷಣೆಯಾಗಿದ್ದು ಇದೇ ಮೊದಲು ಎನ್ನುತ್ತವೆ ಸರ್ಕಾರಿ ಮೂಲಗಳು. ಇದರಡಿ ಕರ್ನಾಟಕ ರಾಜ್ಯದ ಐದು ಸಂರಕ್ಷಿತ ಪ್ರದೇಶಗಳ ಪಟ್ಟಿಗೆ ಬೇಡ್ತಿ ನದಿಯ ಉಪನದಿಯಾದ ಶಾಲ್ಮಲಾ ಸೇರ್ಪಡೆಗೊಂಡಿದೆ.ಇದು ತನ್ನ ಒಡಲಲ್ಲಿ ಬೈನೆ, ಹೊಂಗೆ, ನಂದಿ, ಕೆಂಜಿಗೆ, ದಾಲ್ಚಿನ್ನಿ, ಕಾಡು ಅರಿಶಿಣ, ಚಂದ್ರಕಲ, ಕುಂಕುಮ, ಜರೀ ಮರ, ಅತ್ತಿ, ಅಶ್ವತ್ಥ, ಅಳಲೆ, ಜೇನುಕೋಲು ಮರ, ಅಪ್ಪೆಮಿಡಿ, ಹೊನಾಲು, ಭರಣಿಕೆ, ಅಪರೂಪದ ನೀರುಚುಳ್ಳಿ (ochreinauclea missions) ಕದಂಬ (anthocephalus cadamba), ಮೀನಂಗಿ (syzygium zeylancia), ಬೊಬ್ಬಿ (calophyllum apetalum) ಸೇರಿದಂತೆ 123ಕ್ಕೂ ಅಧಿಕ ಸಸ್ಯ ವೈವಿಧ್ಯಗಳಿಗೆ ಆಶ್ರಯ ನೀಡಿದೆ.ಮಲಬಾರ್ ಪೈಡ್, ಗ್ರೇಟ್ ಹಾರ್ನ್‌ಬಿಲ್, ಮಲಬಾರ್ ಟ್ರೋಗನ್, ಸಿಲೋನ್ ಫ್ರಾಗ್ ಮೌಥ್ ಪಕ್ಷಿಗಳು ಶಾಲ್ಮಲೆ ತಟದ ಸೊಂಪಾದ ಕಾಡಿನಲ್ಲಿ ಸ್ವಚ್ಛಂದವಾಗಿ ಹಾರಾಡಿಕೊಂಡಿವೆ. ಸಸ್ತನಿಗಳು, ಚಿಟ್ಟೆ, ಸರಿಸೃಪಗಳು ನದಿ ಅಂಚಿನ ಹರಿದ್ವರ್ಣ ಕಾಡಿನಲ್ಲಿ ವಾಸವಾಗಿವೆ.ಶತಶತಮಾನಗಳ ಇತಿಹಾಸ ಹೊಂದಿರುವ ಔಷಧಿಯುಕ್ತ ಸಸ್ಯ ಸಂಪತ್ತು, ಮರಕ್ಕೆ ಹಬ್ಬುವ ಗಣಪೆ ಬಳ್ಳಿ ಶಾಲ್ಮಲೆ ಋಣದಲ್ಲಿ ಬದುಕಿವೆ. ನದಿಗೆ ಹೊಂದಿಕೊಂಡು ನಿತ್ಯ ಹರಿದ್ವರ್ಣ, ಅರೆ ನಿತ್ಯಹರಿದ್ವರ್ಣ, ಪರ್ಣಪಾತಿ ಕಾಡು, ತೇಗದ ನೆಡುತೋಪುಗಳಿವೆ.

ಇಷ್ಟೇ ಅಲ್ಲ. ಶಾಲ್ಮಲಾ ಕಣಿವೆ ಸಾಂಸ್ಕೃತಿಕ, ಐತಿಹಾಸಿಕ ವೈವಿಧ್ಯಗಳ ಸಂಗಮ. ನದಿ ತಟದಲ್ಲಿ ಸೋದೆ ಅರಸರು ನಿರ್ಮಿಸಿದ ಅನೇಕ ಐತಿಹಾಸಿಕ ದೇಗುಲಗಳಿವೆ.ಇಲ್ಲಿನ ಸೋದೆ ಮಠ, ಸ್ವರ್ಣವಲ್ಲಿ ಮಠ, ಜೈನ ಮಠಗಳು ಭಕ್ತರ ಆಕರ್ಷಣೀಯ ಕೇಂದ್ರಗಳು.ವೈವಿಧ್ಯತೆ ಆಗರ ಆಗಿರುವ ನದಿ ಕಣಿವೆ ಪ್ರದೇಶದ ಸುತ್ತ ಕರೆಒಕ್ಕಲಿಗ, ಜೈನ, ಗೌಡ ಸಾರಸ್ವತ, ಸಿದ್ದಿ, ಕುಣಬಿ, ಹವ್ಯಕ ಸೇರಿದಂತೆ ವಿವಿಧ ಸಮುದಾಯದವರು ನೆಲೆ ಕಟ್ಟಿಕೊಂಡು ಬದುಕುತ್ತಿದ್ದಾರೆ.ಇವರಿಗೆಲ್ಲ ಅಭಿವೃದ್ಧಿ ಹೆಸರಿನಲ್ಲಿ ಆಗಾಗ ಪ್ರಸ್ತಾಪವಾಗುವ ಜಲ ವಿದ್ಯುತ್, ನೀರಾವರಿ, ರೈಲು ಮಾರ್ಗ ನಿರ್ಮಾಣ ಯೋಜನೆಗಳು ತೂಗುಕತ್ತಿಯಾಗಿ ಕಾಡುತ್ತಿದ್ದವು.

ಇವೆಲ್ಲ ಅನುಷ್ಠಾನಗೊಂಡರೆ ಇಲ್ಲಿ ವಾಸಿಸುವ ಜನ ಅಕ್ಷರಶಃ ಬೀದಿಗೆ ಬರುತ್ತಿದ್ದರು, ಲಕ್ಷಾಂತರ ಹೆಕ್ಟೇರ್ ಕೃಷಿ ಭೂಮಿ, ಜೀವ ವೈವಿಧ್ಯ ಕೊನೆಯಾಗುತ್ತಿತ್ತು.ಅದಕ್ಕಾಗಿ ಭಾರೀ ಯೋಜನೆ ಪ್ರಸ್ತಾಪ ಆದಾಗಲೆಲ್ಲ ಇಲ್ಲಿನ ಜನ ಹಸಿರು ಸ್ವಾಮೀಜಿಯೆಂದು ಖ್ಯಾತರಾದ ಸ್ವರ್ಣವಲ್ಲಿ ಗಂಗಾಧರೇಂದ್ರ ಸರಸ್ವತಿ ಸ್ವಾಮೀಜಿ ನೇತೃತ್ವದಲ್ಲಿ ನಿರಂತರ ಪರಿಸರ ಹೋರಾಟ ನಡೆಸಿದ್ದಾರೆ. ಇದರ ಫಲವಾಗಿ ಈ ನದಿಯ ಸ್ವತಂತ್ರ ಹರಿವು ಉಳಿದುಕೊಂಡಿದೆ.ಈಗ ಸಂರಕ್ಷಿತ ಪ್ರದೇಶವೆಂಬ ರಕ್ಷಾ ಕವಚ ಪಡೆದ ಶಾಲ್ಮಲೆ ಇನ್ನು ಶಾಶ್ವತ ಕನ್ಯೆ. ಆಕೆ ಆಕ್ರಮಣದ ಭೀತಿಯಿಂದ ಸಂಪೂರ್ಣ ಮುಕ್ತಳು.ಪಾರಂಪರಿಕ ಹಕ್ಕು

ನಿಸರ್ಗ ಸಂಪತ್ತಿನ ಆಗರವಾದ ಪಶ್ಚಿಮಘಟ್ಟ ಪ್ರದೇಶದ ಶಾಲ್ಮಲಾ ನದಿ ಕಣಿವೆ ಸಂರಕ್ಷಿತ ಪ್ರದೇಶವೆಂದು ಘೋಷಣೆಯಾಗುವ ನಿಟ್ಟಿನಲ್ಲಿ ಪಶ್ಚಿಮಘಟ್ಟ ಕಾರ್ಯಪಡೆಯ ಕಾರ್ಯ ಗಮನಾರ್ಹವಾದದ್ದು. ಸರಿಯಾಗಿ ಒಂದು ವರ್ಷದ ಹಿಂದೆ ಕಾರ್ಯಪಡೆ ನೇತೃತ್ವದಲ್ಲಿ ವಿದ್ಯಾರ್ಥಿಗಳು, ವಿಜ್ಞಾನಿಗಳು ಸೇರಿದಂತೆ ಪರಿಸರ ಪ್ರೇಮಿಗಳು ನಡೆಸಿದ ನದಿ ಕಣಿವೆ ಪಾದಯಾತ್ರೆ ಶಾಲ್ಮಲೆ ಮಡಿಲಲ್ಲಿ ಬೆಳೆದಿರುವ ವೈವಿಧ್ಯತೆ ದಾಖಲಾತಿ ಸಂರಕ್ಷಿತ ಪ್ರದೇಶದ ಘೋಷಣೆಗೆ ಸಹಕಾರಿಯಾಗಿದೆ.ಇದರ ಫಲವಾಗಿ ಸರ್ಕಾರದ ಘೋಷಣಾ ಪತ್ರ ಸ್ಥಳೀಯ ಗ್ರಾಮ ಪಂಚಾಯಿತಿ ಕೈ ತಲುಪಿದೆ. ಸಂರಕ್ಷಿತ ಪ್ರದೇಶದ ಘೋಷಣೆಯಿಂದ ಸ್ಥಳೀಯರ ಸಾಂಪ್ರದಾಯಿಕ ಹಕ್ಕು ಮೊಟಕಾಗುವದಿಲ್ಲ. ಆದರೆ ಮರಳು ಸಾಗಣೆ, ಒತ್ತುವರಿ, ಅಕ್ರಮ ಮರ ಕಟಾವಿಗೆ ಲಗಾಮು ಬೀಳಲಿದೆ. ಸ್ಥಳೀಯರ ಸಹಭಾಗಿತ್ವದಲ್ಲಿ ನದಿ ಕಣಿವೆ ರಕ್ಷಣೆಗೆ ಸಮಿತಿ ರಚನೆಯಾಗಲಿದೆ. ಜೊತೆಗೆ ಗ್ರಾಮ ಅರಣ್ಯ ಸಮಿತಿ ರಚನೆಗೂ ಚಾಲನೆ ಸಿಗಲಿದೆ. ಇದರಿಂದ  ಅರಣ್ಯ ಇಲಾಖೆ, ಸ್ಥಳೀಯರ ಜವಾಬ್ದಾರಿ ಹೆಚ್ಚಾಗಲಿದೆ.ಇದೆಲ್ಲ ಪರಿಸರ ಸಂರಕ್ಷಣೆಯ ವಿಷಯವಾಯಿತು. ಆದರೆ ನಿತ್ಯ ನೂರಾರು ಪ್ರವಾಸಿಗರು ಭೇಟಿ ನೀಡುವ ಸಹಸ್ರಲಿಂಗ ದಿನಕಳೆದಂತೆ ಮಾಲಿನ್ಯದ ಗೂಡಾಗುತ್ತಿದೆ. ಸಂರಕ್ಷಿತ ಪ್ರದೇಶ ಘೋಷಣೆ ನದಿ ಕಣಿವೆಯ ಸಮಗ್ರ ಪರಿಸರ ವ್ಯವಸ್ಥೆ ಕಾಪಾಡಲು ಮತ್ತಷ್ಟು ಬಲ ಕೊಡುತ್ತದೆ ಎಂಬ ಭರವಸೆ ಇಟ್ಟುಕೊಂಡಿದ್ದಾರೆ ಸ್ಥಳೀಯ ನಿವಾಸಿಗಳು. ಮಾನದಂಡ ಏನು?

ಶಾಲ್ಮಲಾ ಕಣಿವೆಯ ವಿಶಿಷ್ಟ ಪರಿಸರ ವ್ಯವಸ್ಥೆ, ಸಸ್ಯ ಪ್ರಭೇದ, ಪ್ರಾಣಿಗಳು, ನದಿ ಸುತ್ತಣ ಜಲಾನಯನ ಪ್ರದೇಶಗಳು ಸಂರಕ್ಷಿತ ಪ್ರದೇಶ ಘೋಷಣೆಗೆ ಸಹಕಾರಿಯಾಗಿವೆ. ಶಾಲ್ಮಲೆಯ ಒಡಲಿನ ಸಸ್ಯ ಜಾತಿಗಳಲ್ಲಿ ಶೇಕಡಾ 50ರಷ್ಟು ಸ್ಥಾನಿಕ ಸಸ್ಯಗಳಿವೆ, ಇನ್ನೆಲ್ಲಿಯೂ ಇವನ್ನು ಕಾಣಲು ಸಾಧ್ಯವಿಲ್ಲ.ಈ ನದಿಗುಂಟ ವನ್ಯಜೀವಿ ತಜ್ಞ ಬಾಲಚಂದ್ರ ಸಾಯಿಮನೆ ಹಾಗೂ ಪ್ರೊ. ಕೇಶವ ಕೊರ್ಸೆ ನಡೆಸಿದ ಪರಿಸರ ಅಧ್ಯಯನ ವರದಿಯನ್ನು ಪಶ್ಚಿಮಘಟ್ಟ ಕಾರ್ಯಪಡೆ ಅಧ್ಯಕ್ಷ ಅನಂತ ಅಶೀಸರ ಅವರು ಕರ್ನಾಟಕ ರಾಜ್ಯ ವನ್ಯಜೀವಿ ಮಂಡಳಿಗೆ ಸಲ್ಲಿಸಿದ್ದರು.ಮಂಡಳಿ ಮತ್ತು ಅರಣ್ಯ ಇಲಾಖೆ ಸ್ಥಳ ಸಮೀಕ್ಷೆ ನಡೆಸುವಾಗ ಸಂರಕ್ಷಣಾ ಪ್ರದೇಶ ಘೋಷಣೆಗೆ ಸ್ಥಳೀಯ ಗ್ರಾಮ ಪಂಚಾಯ್ತಿಯ ಅನುಮತಿ ಕೇಳಿತ್ತು. ಬಯಸಿ ಬಂದ ಭಾಗ್ಯವೆಂಬ ಸಂಭ್ರಮದಲ್ಲಿ ಸ್ಥಳೀಯ ನಿವಾಸಿಗಳು ಖುಷಿಯಿಂದ ಹಸಿರು ನಿಶಾನೆ ನೀಡಿದ್ದರು.ಸಮೀಕ್ಷೆ ನಡೆದು, ಎಂಟು ತಿಂಗಳಲ್ಲಿ ರಾಜ್ಯ ಸರ್ಕಾರ ವನ್ಯಜೀವಿ ಮಂಡಳಿ ಮೂಲಕ ಶಾಲ್ಮಲಾ ನದಿ ಕಣಿವೆಗೆ ಸಂರಕ್ಷಿತ ಪ್ರದೇಶದ ಕವಚ ತೊಡಿಸಿದೆ. ಪರಿಸರ ಸಂರಕ್ಷಣೆ ನಿಟ್ಟಿನಲ್ಲಿ ಇಂತಹ ಅದೆಷ್ಟೋ ಅಧ್ಯಯನ ವರದಿಗಳು ಕಡತದಲ್ಲಿವೆ. ವನ್ಯಜೀವಿ ಕಾನೂನು ಅನುಷ್ಠಾನಗೊಂಡು 25 ವರ್ಷ ಕಳೆದಿವೆ.ಪ್ರಾಯೋಗಿಕ ಪ್ರಯತ್ನಗಳು ನಡೆದಾಗ ಮಾತ್ರ ಅಪರೂಪದ ಪರಿಸರ ಪ್ರದೇಶಗಳು ಸಂರಕ್ಷಣೆ ಪಟ್ಟ ಪಡೆಯಲು ಸಾಧ್ಯ ಎಂಬುದಕ್ಕೆ ಶಾಲ್ಮಲಾ ನದಿ ಕಣಿವೆ ಮಾದರಿಯಾಗಿದೆ.ಶಾಲ್ಮಲೆಯ ವಿಸ್ಮಯ

* ಸಂರಕ್ಷಿತ ಪ್ರದೇಶದ ಒಟ್ಟೂ ಉದ್ದ 15.76ಕಿಮೀ * ಸಂರಕ್ಷಿತ ಕಣಿವೆಯ ವ್ಯಾಪ್ತಿ 489 ಹೆಕ್ಟೇರ್ * ಶಾಲ್ಮಲೆ ಒಡಲಲ್ಲಿ 123 ಸಸ್ಯ ಪ್ರಭೇದಗಳು. ಇದು ಪಶ್ಚಿಮಘಟ್ಟದ ಒಟ್ಟೂ ಸಸ್ಯ  ವೈವಿಧ್ಯದ ಶೇ 26ರಷ್ಟು.ವಿನಾಶದ ಅಂಚಿನಲ್ಲಿರುವ ಸಸ್ಯ ಪ್ರಭೇದಗಳು ಶೇ 11.* ಕಾಡಿನಲ್ಲಿರುವ ಸಸ್ತನಿಗಳು 15 ವಿಧ, ಪಕ್ಷಿಗಳು 33 ಜಾತಿ, ಬಣ್ಣದ ಚಿಟ್ಟೆಗಳು 14 ಬಗೆ.* 500 ವರ್ಷ ಆಯಸ್ಸಿನ ಗಣಪೆ ಬಳ್ಳಿ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.