ಗುರುವಾರ , ಮೇ 13, 2021
22 °C

ಶಾಸಕರ ಪ್ರತಿಕೃತಿ ದಹಿಸಿ ಪ್ರತಿಭಟನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಳಗಾವಿ: ಕನ್ನಡ ಭಾಷೆಯ ಬದಲು ಮರಾಠಿ ಹಾಗೂ ಇಂಗ್ಲಿಷ್‌ನಲ್ಲಿ ವಿಧಾನಸಭೆಯಲ್ಲಿ ಪ್ರಮಾಣವಚನ ಸ್ವೀಕರಿಸಿದ ಸಚಿವ ಹಾಗೂ ಶಾಸಕರ ಸದಸ್ಯತ್ವವನ್ನು ರದ್ದುಗೊಳಿಸಬೇಕು ಎಂದು ಒತ್ತಾಯಿಸಿ ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯಕರ್ತರು ನಗರದಲ್ಲಿ ಶುಕ್ರವಾರ ಪ್ರತಿಭಟಿಸಿದರು.ಇಲ್ಲಿನ ರಾಣಿ ಚನ್ನಮ್ಮ ವೃತ್ತದಲ್ಲಿ ಕರವೇ ಜಿಲ್ಲಾ ಘಟಕದ ಅಧ್ಯಕ್ಷ ಮಹಾದೇವ ತಳವಾರ ನೇತೃತ್ವದಲ್ಲಿ ಪ್ರತಿಭಟಿಸಿದ ಕಾರ್ಯಕರ್ತರು, ಕನ್ನಡೇತರ ಭಾಷೆಗಳಲ್ಲಿ ಪ್ರಮಾಣವಚನ ಸ್ವೀಕರಿಸಿದ ಸಚಿವ ಹಾಗೂ ಶಾಸಕರ ಪ್ರತಿಕೃತಿಯನ್ನು ದಹಿಸಿದರು.`ಕರ್ನಾಟಕ ಸರ್ಕಾರದ ಆಡಳಿತ ಭಾಷೆಯಾದ ಕನ್ನಡ ಭಾಷೆಯಲ್ಲಿ ಪ್ರಮಾಣವಚನ ಸ್ವೀಕರಿಸದೇ ಸಚಿವರು ಹಾಗೂ ಶಾಸಕರು ಇಂಗ್ಲಿಷ್ ಹಾಗೂ ಮರಾಠಿ ಭಾಷೆಯಲ್ಲಿ ಪ್ರಮಾಣವಚನ ಸ್ವೀಕರಿಸಿ ಆಡಳಿತ ಭಾಷೆಗೆ ಅವಮಾನ ಮಾಡಿದ್ದಾರೆ. ಈಗಾಗಲೇ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಎಲ್ಲ ಕಡತಗಳನ್ನು ಕನ್ನಡದಲ್ಲೇ ಮಾಡಬೇಕು ಎಂದು ಎಲ್ಲ ಇಲಾಖೆಯ ಹಿರಿಯ ಅಧಿಕಾರಿಗಳು, ಜಿಲ್ಲಾಧಿಕಾರಿ, ಜಿ.ಪಂ. ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿಗಳಿಗೆ ಆದೇಶ ನೀಡಿದ್ದಾರೆ. ಆದರೂ, ಕೆಲವು ಸಚಿವರು ಹಾಗೂ ಶಾಸಕರು ಅನ್ಯ ಭಾಷೆಯಲ್ಲಿ ಪ್ರಮಾಣವಚನ ಸ್ವೀಕರಿಸುವ ಮೂಲಕ ಕನ್ನಡ ಭಾಷೆಗೆ ಅವಮಾನ ಮಾಡಿದ್ದಾರೆ' ಎಂದು ಆಕ್ರೋಶ ವ್ಯಕ್ತಪಡಿಸಿದರು.`ಇಂಗ್ಲಿಷ್‌ನಲ್ಲಿ ಪ್ರಮಾಣ ವಚನ ಸ್ವೀಕರಿಸಿದ ಸಚಿವರಾದ ಖಮರುಲ್ಲಾ ಇಸ್ಲಾಂ, ಶಾಸಕರಾದ ಅಶೋಕ ಖೇಣಿ, ಸಂಜಯ ಪಾಟೀಲ ಹಾಗೂ ಮರಾಠಿ ಯಲ್ಲಿ ಪ್ರಮಾಣವಚನ ಸ್ವೀಕರಿಸಿದ ಶಾಸಕರಾದ ಸಂಭಾಜಿ ಪಾಟೀಲ ಹಾಗೂ ಅರವಿಂದ ಪಾಟೀಲ ಅವರಿಗೆ ಕನ್ನಡ ಭಾಷೆಯಲ್ಲೇ ಪುನಃ ಪ್ರಮಾಣವಚನ ಸ್ವೀಕರಿಸಲು ಆದೇಶ ನೀಡಬೇಕು. ಇಲ್ಲದಿದ್ದರೆ ಅವರ ಸದಸ್ಯತ್ವವನ್ನು ರದ್ದುಗೊಳಿಸಬೇಕು' ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು.`ಸರ್ಕಾರವು ನಮ್ಮ ಬೇಡಿಕೆಗೆ ಸ್ಪಂದಿಸದಿದ್ದಲ್ಲಿ ಸಂಘಟನೆಯ ರಾಜ್ಯ ಘಟಕದ ಅಧ್ಯಕ್ಷ ನಾರಾಯಣ ಗೌಡರ ನೇತೃತ್ವದಲ್ಲಿ ರಾಜ್ಯದಾದ್ಯಂತ ಉಗ್ರಹೋರಾಟ ನಡೆಸಲಿದೆ' ಎಂದು ಎಚ್ಚರಿಸಿದರು.ರಾಜು ನಾಶಿಪುಡಿ, ಸುರೇಶ ಗೌವನ್ನವರ, ಹೊಳೆಪ್ಪ ಸುಲಧಾಳ, ಟಿ. ಶಾಂತಮ್ಮ, ಬಸವರಾಜ ಅವರೊಳ್ಳಿ, ಬಸವರಾಜ ತೊಲಗಿ, ಅಶೋಕ ಅಪ್ಪುಗೋಳ, ಸಂಜು ನಾಯಕ ಮತ್ತಿತರರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.