ಬುಧವಾರ, ಜನವರಿ 22, 2020
28 °C

ಶಾಸಕ ಸಂಭಾಜಿ ಪಾಟೀಲ್‌ ವಿರುದ್ಧ ದೂರು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ರಾಜ್ಯದ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡಿದ್ದ ಮಹಾರಾಷ್ಟ್ರ ಏಕೀಕರಣ ಸಮಿತಿಯ (ಎಂಇಎಸ್‌) ಶಾಸಕ ಸಂಭಾಜಿ ಪಾಟೀಲ್‌ ಅವರ ವಿರುದ್ಧ ಕರ್ನಾಟಕ ನವನಿರ್ಮಾಣ ಸೇನೆಯು ನಗರದ ವಿಧಾನಸೌಧ ಪೊಲೀಸ್‌ ಠಾಣೆಗೆ ಸೋಮವಾರ ದೂರು ನೀಡಿದೆ. ಸಂಭಾಜಿ ಪಾಟೀಲ್‌ ಅವರ ಪ್ರಚೋದನಕಾರಿ ಹೇಳಿಕೆ­ಯಿಂದ ರಾಜ್ಯದ ವಿವಿಧೆಡೆ ಅಹಿತಕರ ಘಟನೆಗಳು ನಡೆದಿವೆ. ಕಾನೂನು ಮತ್ತು ಸುವ್ಯವಸ್ಥೆಗೆ ಧಕ್ಕೆಯಾಗಿದೆ. ಆದ್ದರಿಂದ ಅವರನ್ನು ಬಂಧಿಸಬೇಕು ಎಂದು ಸೇನೆಯ ರಾಜ್ಯ ಘಟಕದ ಅಧ್ಯಕ್ಷ ಭೀಮಾಶಂಕರ್‌ ಪಾಟೀಲ್‌ ದೂರು ನೀಡಿದ್ದಾರೆ.ಚುನಾಯಿತ ಪ್ರತಿನಿಧಿಯಾದ ಸಂಭಾಜಿ ಪಾಟೀಲ್‌, ಸಂವಿಧಾನದ ಆಶಯಕ್ಕೆ ಹಾಗೂ ವಿಧಾನಸಭೆಯ ನಡಾವಳಿಗೆ ವಿರುದ್ಧವಾಗಿ ನಡೆದುಕೊಂಡಿದ್ದಾರೆ. ಕನ್ನಡ ನಾಡು ಮತ್ತು ನುಡಿಯನ್ನು ಅವಮಾನಿಸುವ ಮೂಲಕ ಕನ್ನಡ ನಾಡಿಗೆ ದ್ರೋಹ ಎಸಗಿದ್ದಾರೆ ಎಂದು ಅವರು ದೂರಿನಲ್ಲಿ ಹೇಳಿದ್ದಾರೆ. ದೂರಿನ ಸಂಬಂಧ ಈವರೆಗೆ ಯಾವುದೇ ಪ್ರಕರಣ ದಾಖಲಿಸಿಕೊಂಡಿಲ್ಲ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಸಂಭಾಜಿ ಪಾಟೀಲ್‌ ವಿರುದ್ಧ ನಗರದ ಎಸಿಎಂಎಂ ನ್ಯಾಯಾಲಯದಲ್ಲಿ ಮಂಗಳವಾರ ಖಾಸಗಿ ದೂರು ದಾಖಲಿಸುತ್ತೇವೆ ಎಂದು ಭೀಮಾಶಂಕರ್‌ ತಿಳಿಸಿದ್ದಾರೆ.

ಪ್ರತಿಕ್ರಿಯಿಸಿ (+)