ಶಿಕ್ಷಕರಿಗಾಗಿ ಬೀದಿಗಿಳಿದ ವಿದ್ಯಾರ್ಥಿಗಳು

7

ಶಿಕ್ಷಕರಿಗಾಗಿ ಬೀದಿಗಿಳಿದ ವಿದ್ಯಾರ್ಥಿಗಳು

Published:
Updated:
ಶಿಕ್ಷಕರಿಗಾಗಿ ಬೀದಿಗಿಳಿದ ವಿದ್ಯಾರ್ಥಿಗಳು

ಯಾದಗಿರಿ: ಜಿಲ್ಲೆಯಲ್ಲಿ ತೀವ್ರವಾಗಿರುವ ಶಿಕ್ಷಕರ ಕೊರತೆಯಿಂದಾಗಿ ಜನರು ರೋಸಿ ಹೋಗಿದ್ದು, ಇದೀಗ ಶಾಲೆಗೆ ಶಿಕ್ಷಕರನ್ನು ನೇಮಕ ಮಾಡುವಂತೆ ಆಗ್ರಹಿಸಿ ಶಾಲಾ ವಿದ್ಯಾರ್ಥಿಗಳೇ ಬೀದಿಗಿಳಿದು ಹೋರಾಟ ಮಾಡು           ವಂತಾಗಿದೆ.ಸೋಮವಾರ ತಾಲ್ಲೂಕಿನ ಕಿಲ್ಲನಕೇರಾ ಗ್ರಾಮದ ಇನ್ನೂರಕ್ಕೂ ಹೆಚ್ಚು ವಿದ್ಯಾರ್ಥಿ-ವಿದ್ಯಾರ್ಥಿನಿಯರು ನಗರದಲ್ಲಿ ಪ್ರತಿಭಟನೆ ನಡೆಸಿದರು. ದಾರಿಯುದ್ದಕ್ಕೂ, ಶಿಕ್ಷಕರನ್ನು ನೇಮಿಸಿ, ನಮ್ಮ ಭವಿಷ್ಯ ಹಾಳು ಮಾಡಬೇಡಿ ಎಂದು ಘೋಷಣೆ ಕೂಗಿದ ವಿದ್ಯಾರ್ಥಿಗಳು, ನೇರವಾಗಿ ಜಿಲ್ಲಾ ಉಸ್ತುವಾರಿ ಸಚಿವರು ಸಭೆ ನಡೆಸುತ್ತಿದ್ದ ಜಿಲ್ಲಾ ಪಂಚಾಯಿತಿ ಸಭಾಂಗಣಕ್ಕೆ ಆಗಮಿಸಿದರು.ಸ್ಥಳಕ್ಕೆ ಬಂದು ಮನವಿ ಸ್ವೀಕರಿಸಿದ ಜಿಲ್ಲಾ ಉಸ್ತುವಾರಿ ಸಚಿವ ರಾಜುಗೌಡ, ಮಕ್ಕಳ ಸಮಸ್ಯೆಯನ್ನು ಆಲಿಸಿದರು. ತಾಲ್ಲೂಕಿನ ಕಿಲ್ಲನಕೇರಾ ಗ್ರಾಮದಲ್ಲಿ ಹಿರಿಯ ಪ್ರಾಥಮಿಕ ಶಾಲೆಯಿದ್ದು, 1ರಿಂದ 8 ನೇ ತರಗತಿಗಳು ನಡೆಯುತ್ತಿವೆ. ಸುಮಾರು 400 ಕ್ಕೂ ಹೆಚ್ಚು ವಿದ್ಯಾರ್ಥಿಗಳು ನಿತ್ಯ ಶಾಲೆಗೆ ಬರುತ್ತಿದ್ದಾರೆ.  ಆದರೆ ಶಿಕ್ಷಕರೇ ಇಲ್ಲದಂತಾಗಿದೆ ಎಂದು ವಿದ್ಯಾರ್ಥಿಗಳು ಅಳಲು ತೋಡಿಕೊಂಡರು.ಕಳೆದ ಎರಡು ವರ್ಷಗಳಿಂದ ಶಾಲೆಯಲ್ಲಿ ಶಿಕ್ಷಕರ ಕೊರತೆ ಎದುರಾಗಿದೆ. ಮುಖ್ಯಾಧ್ಯಾಪಕರು ಹಾಗೂ ಒಬ್ಬ ಶಿಕ್ಷಕರು ಮಾತ್ರವಿದ್ದು, 8 ತರಗತಿಗಳನ್ನು ನಡೆಸಬೇಕಾಗಿದೆ. 10-12 ಶಿಕ್ಷಕರು ಮಾಡಬೇಕಾದ ಕೆಲಸವನ್ನು ಇಬ್ಬರೇ ಶಿಕ್ಷಕರು ನಿರ್ವಹಿಸುತ್ತಿದ್ದಾರೆ. ಇದರಿಂದಾಗಿ ವಿದ್ಯಾರ್ಥಿಗಳು ತೀವ್ರ ತೊಂದರೆ ಅನುಭವಿಸಬೇಕಾಗಿದೆ ಎಂದು ತಿಳಿಸಿದರು.ಗುಣಮಟ್ಟದ ಶಿಕ್ಷಣ ಸಿಗಬೇಕಾದರೆ, ಶಿಕ್ಷಕರು ಅಗತ್ಯವಾಗಿದ್ದು, ಶಿಕ್ಷಕರನ್ನು ನೇಮಕ ಮಾಡಬೇಕು ಎಂದು ಆಗ್ರಹಿಸಿದರು. ಕೂಡಲೇ ಬಿಇಒ ಮಜರ್ ಹುಸೇನ್ ಅವರನ್ನು ಸ್ಥಳಕ್ಕೆ ಕರೆಯಿಸಿದ ಸಚಿವರು, ಸಮಸ್ಯೆಯನ್ನು ಕೂಡಲೇ ಪರಿಹರಿಸುವಂತೆ ಸೂಚನೆ ನೀಡಿದರು.ಎಸ್‌ಡಿಎಂಸಿ ಅಧ್ಯಕ್ಷ ಹಣಮಂತ ಧೋತ್ರೆ, ಗ್ರಾಮದ ಮುಖಂಡರಾದ ಬನ್ನಪ್ಪ ಬಾವುರ, ಚಂದ್ರಪ್ಪ ಧೋತ್ರೆ, ಮೆಹಬೂಬಸಾಬ್ ಬಡಿಗೇರ, ಮಹೇಶ ಸಜ್ಜನ್, ದಾವೂದ್ ಅಖ್ತರ್, ಹಳ್ಳೆಪ್ಪ ಹಾಜರಿದ್ದು, ಶಾಲೆಯ ವಾಸ್ತವ ಸ್ಥಿತಿಯನ್ನು ಸಚಿವರಿಗೆ ವಿವರಿಸಿದರು.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry