ಶನಿವಾರ, ಫೆಬ್ರವರಿ 27, 2021
20 °C

ಶಿಕ್ಷಕರಿಲ್ಲದ ಕಸ್ತೂರ್‌ಬಾ ವಸತಿ ಶಾಲೆ

ಶ್ರೀಧರ ಗೌಡರ / ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಶಿಕ್ಷಕರಿಲ್ಲದ ಕಸ್ತೂರ್‌ಬಾ ವಸತಿ ಶಾಲೆ

ಕೂಡಲಸಂಗಮ: ಕೇಂದ್ರ ಮತ್ತು ರಾಜ್ಯ ಸರಕಾರ ಶಿಕ್ಷಣ ಅಭಿವೃದ್ದಿಗಾಗಿ, ಗುಣಮಟ್ಟದ ಶಿಕ್ಷಣಕ್ಕಾಗಿ ವಿವಿಧ ಯೋಜನೆ ಅನುಷ್ಠಾನಕ್ಕೆ ತಂದಿದೆ. ಅದಕ್ಕಾಗಿ ಕೋಟ್ಯಂತರ ಹಣ ಸುರಿಯುತ್ತಿದೆ. ಆದರೆ ಮೂಲಸೌಲಭ್ಯಗಳೇ ಇಲ್ಲದೆ ವಿದ್ಯಾರ್ಥಿಗಳು ಸರ್ಕಾರಿ ಶಾಲೆಯಿಂದ ದೂರವಾಗುವ ಸ್ಥಿತಿ ಎದುರಾಗಿದೆ. ಇದಕ್ಕೆ ನಿದರ್ಶನ ಎಂಬಂತೆ ಇಲ್ಲಿಯ ಕಸ್ತೂರ್‌ಬಾ ವಸತಿ ಶಾಲೆ ಸಾಕ್ಷಿಯಾಗಿದೆ.ಪ್ರಸಕ್ತ ಶೈಕ್ಷಣಿಕ ವರ್ಷದ ಶಾಲಾ ಅವಧಿ ಪ್ರಾರಂಭಗೊಂಡು 16 ದಿನಗಳಾಗಿವೆ. ಇಲ್ಲಿಯ ಕಸ್ತೂರ್‌ಬಾ ವಸತಿ ಶಾಲೆಯಲ್ಲಿ ಬೋಧಕ ಸಿಬ್ಬಂದಿಯೇ ಇಲ್ಲ. ವಿದ್ಯಾರ್ಥಿಗಳಿಗೆ ಪಾಠವಿಲ್ಲ. ಶಾಲೆಗೆ ಆಗಮಿಸುವ ಮಕ್ಕಳು ಆಟವಾಡಿ ಕಾಲಹರಣ ಮಾಡಿ ವಾಪಸ್ ಹೋಗುತ್ತಿದ್ದಾರೆ.ಶಿಕ್ಷಣದಿಂದ ವಂಚಿತರಾದ 11ರಿಂದ 14 ವರ್ಷದೊಳಗಿನ ಬಾಲಕಿಯರಿಗೆ ಊಟ ಮತ್ತು ವಸತಿ ಸಹಿತ ಶಿಕ್ಷಣ ನೀಡುವ ಉದ್ದೇಶದಿಂದ 2005ರಲ್ಲಿ ಸರಕಾರ ಗ್ರಾಮದಲ್ಲಿ ಕಸ್ತೂರ್‌ಬಾ ವಸತಿ ಶಾಲೆ ಪ್ರಾರಂಭಿಸಿತು.ಪುನರ್ವಸತಿ ಕೇಂದ್ರದಲ್ಲಿ ನಿರ್ಮಿಸಲಾದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಕಟ್ಟಡದಲ್ಲಿಯೇ ಈ ಶಾಲೆಯೂ ಕಾರ್ಯ ನಿರ್ವಹಿಸುತ್ತಿದೆ. ಶಾಲೆಯಲ್ಲಿ 6ರಿಂದ 10ನೇ ತರಗತಿಯ 150 ಬಾಲಕಿಯರು ಪ್ರವೇಶ ಪಡೆಯಬಹುದು. ಶಾಲೆಗೆ ಒಟ್ಟು 14 ಸಿಬ್ಬಂದಿ ಮಂಜೂರಾತಿ ಸಿಕ್ಕಿದೆ. ಇಬ್ಬರು ಮಾತ್ರ ಕಾರ್ಯ ನಿರ್ವಹಿಸುತ್ತಿದ್ದಾರೆ. ಅವರಲ್ಲಿ ಒಬ್ಬರು ಮುಖ್ಯೋಪಾಧ್ಯಾಯಿನಿ, ಇನ್ನೊಬ್ಬರು ಶಿಕ್ಷಕರು. ಇವರೇ ಎಲ್ಲ ತರಗತಿಯ ಮಕ್ಕಳಿಗೆ ಪಾಠ ಹೇಳಬೇಕಾಗಿದೆ.ಸಿಬ್ಬಂದಿ ಕೊರತೆ

ಈ ವರ್ಷ ಶಾಲೆ ಆರಂಭವಾಗಿ, ಮಕ್ಕಳು ದಿನವೂ ಶಾಲೆಗೆ ಬಂದು ಹೋಗುತ್ತಿದ್ದಾರೆ. ಸಿಬ್ಬಂದಿ ನೇಮಕಾತಿ ಪ್ರಕ್ರಿಯೆ ಇನ್ನೂ ಆಗಿಲ್ಲ. ಅಧಿಕಾರಿಗಳು ಇತ್ತ ಆಸಕ್ತಿಯನ್ನೂ ತೋರಿಲ್ಲ. ಶಾಲೆಯಲ್ಲಿ 7ರಿಂದ 8ನೇ ತರಗತಿ ವರೆಗೆ ಪ್ರವೇಶ ಪಡೆದ 60ರಲ್ಲಿ 30 ವಿದ್ಯಾರ್ಥಿನಿಯರಿದ್ದಾರೆ. 9 ಮತ್ತು 10ನೇ ತರಗತಿಗೆ ಪ್ರವೇಶ ಪಡೆದ 51ರಲ್ಲಿ 19 ವಿದ್ಯಾರ್ಥಿನಿಯರು ಶಾಲೆಗೆ ಬರುತ್ತಿದ್ದಾರೆ. 6ನೇ ವರ್ಗಕ್ಕೆ ಪ್ರವೇಶ ಪಡೆಯುವವರೇ ಇಲ್ಲವಾಗಿದ್ದಾರೆ.ಅವ್ಯವಸ್ಥೆಯ ಆಗರ


ಶಾಲೆ ಆರಂಭಿಸಿ ಆರು ವರ್ಷ ಕಳೆದರೂ ಶಾಲೆಗೆ ಪ್ರತ್ಯೇಕ ಕಟ್ಟಡ ಇಲ್ಲ. ಪ್ರತಿದಿನ ವಿದ್ಯಾರ್ಥಿನಿಯರು ಶೌಚ, ಸ್ನಾನಕ್ಕಾಗಿ ಪರದಾಡಬೇಕಾಗಿದೆ. ಇಕ್ಕಟ್ಟಾದ ಕೋಣೆಗಳಲ್ಲಿ ವಿದ್ಯಾರ್ಥಿನಿಯರು ವಾಸಿಸಬೇಕು. ಸರಿಯಾಗಿ ಸ್ನಾನಗೃಹ, ಪ್ರತ್ಯೇಕ ಶೌಚಾಲಯ ಇಲ್ಲ. ಬಹುತೇಕ ವಿದ್ಯಾರ್ಥಿನಿಯರು ಶೌಚಾಲಯಕ್ಕೆ ಬಯಲನ್ನೇ ಅವಲಂಬಿಸಿದ್ದಾರೆ.ಅನುದಾನ ಬಿಡುಗಡೆ

ಶಾಲೆಯ ನಿರ್ವಹಣೆ ಮತ್ತು ವಿದ್ಯಾರ್ಥಿನಿಯರಿಗೆ ಮೂಲಸೌಲಭ್ಯ ಒದಗಿಸಲು ಸರಕಾರ ಪ್ರತಿ ವರ್ಷ ಅಗತ್ಯ ಅನುದಾನ ನೀಡುತ್ತದೆ. ಅದರೆ ಬಹುತೇಕ ಸೌಲಭ್ಯಗಳು ವಿದ್ಯಾರ್ಥಿನಿಯರಿಗೆ ದೊರಕುತ್ತಿಲ್ಲ ಎಂಬುದು ಗ್ರಾಮಸ್ಥರ ಆರೋಪ.ಕಸ್ತೂರ್‌ಬಾ ವಸತಿ ಶಾಲೆ ಕಟ್ಟಡ ನಿರ್ಮಾಣಕ್ಕೆ ಸರ್ಕಾರ 2005ರಲ್ಲಿ 12.65 ಲಕ್ಷ ರೂಪಾಯಿ ಅನುದಾನ ಬಿಡುಗಡೆ ಮಾಡಿದೆ. ಇಲ್ಲಿಯವರೆಗೆ 10.50 ಲಕ್ಷ ರೂಪಾಯಿ ಖರ್ಚು ಮಾಡಲಾಗಿದೆ. ಕಟ್ಟಡ ಕಾಮಗಾರಿ ಅಪೂರ್ಣವಾಗಿದೆ. ವಿದ್ಯಾರ್ಥಿನಿಯರ ಶೈಕ್ಷಣಿಕ ಸ್ಥಿತಿಯೂ ಅತಂತ್ರವಾಗಿದೆ ಎಂಬುದು ಪಾಲಕರು ಆತಂಕ ವ್ಯಕ್ತಪಡಿಸಿದ್ದಾರೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.