ಗುರುವಾರ , ಏಪ್ರಿಲ್ 15, 2021
24 °C

ಶಿಕ್ಷಕರ ಕೊರತೆ: ವಿದ್ಯಾರ್ಥಿಗಳಿಗೆ ವ್ಯಾಸಂಗದ ಚಿಂತೆ

ಪ್ರಜಾವಾಣಿ ವಾರ್ತೆ ಬಸವರಾಜ ಹವಾಲ್ದಾರ Updated:

ಅಕ್ಷರ ಗಾತ್ರ : | |

ಮಂಡ್ಯ: ಶಾಲೆ ಆರಂಭವಾಗಿ ಎರಡು ತಿಂಗಳು ಕಳೆದಿವೆ. ಆದರೂ ಶಿಕ್ಷಕರ ಹಾಗೂ ಪಠ್ಯ ಪುಸ್ತಕದ ಕೊರತೆ ವಿದ್ಯಾರ್ಥಿಗಳನ್ನು ಕಾಡುತ್ತಿದೆ.ಜಿಲ್ಲೆಯಲ್ಲಿ ಪ್ರಾಥಮಿಕ ಶಾಲಾ ವಿಭಾಗದಲ್ಲಿ 399 ಶಿಕ್ಷಕರ ಕೊರತೆ ಇದ್ದರೆ, ಪ್ರೌಢಶಾಲಾ ವಿಭಾಗದಲ್ಲಿ 100 ಶಿಕ್ಷಕರ ಕೊರತೆ ಇದೆ. ಹೀಗಾಗಿ, ಕೆಲವು ಶಾಲೆಗಳಲ್ಲಿ ಬೋಧನೆ ಸರಿಯಾಗಿ ಆಗುತ್ತಿಲ್ಲ.ನಾಗಮಂಗಲ ತಾಲ್ಲೂಕಿನಲ್ಲಿ 138, ಕೆ.ಆರ್.ಪೇಟೆ ತಾಲ್ಲೂಕಿನಲ್ಲಿ 93, ಮಂಡ್ಯ ಉತ್ತರದಲ್ಲಿ 48, ಪಾಂಡವಪುರ ತಾಲ್ಲೂಕಿನಲ್ಲಿ 46, ಮದ್ದೂರು ತಾಲ್ಲೂಕಿನಲ್ಲಿ 40 ಮಂದಿ ಪ್ರಾಥಮಿಕ ಶಾಲಾ ಶಿಕ್ಷಕರಿಲ್ಲ.ಮಂಡ್ಯ ದಕ್ಷಿಣದಲ್ಲಿ 11, ಶ್ರೀರಂಗಪಟ್ಟಣ ತಾಲ್ಲೂಕಿನಲ್ಲಿ 16, ಮಳವಳ್ಳಿ ತಾಲ್ಲೂಕಿನಲ್ಲಿ 7 ಶಿಕ್ಷಕರ ಕೊರತೆ ಇದೆ.

ಪ್ರೌಢಶಾಲಾ ವಿಭಾಗದಲ್ಲಿ 100 ಶಿಕ್ಷಕರ ಕೊರತೆ ಇದೆ. ಇಂಗ್ಲಿಷ್ ವಿಷಯಕ್ಕೆ 79, ಹಿಂದಿ ವಿಷಯಕ್ಕೆ 11, ಕನ್ನಡ ವಿಷಯಕ್ಕೆ ನಾಲ್ಕು, ಪಿಇಟಿಗೆ 3, ಗ್ರೇಡ್ ಒನ್, ಕ್ರಾಫ್ಟ್ ಹಾಗೂ ವಿಶೇಷ ಶಿಕ್ಷಕರ ವಿಭಾಗದಲ್ಲಿ ತಲಾ ಒಬ್ಬರು ಶಿಕ್ಷಕರ ಕೊರತೆ ಎದುರಿಸಲಾಗುತ್ತಿದೆ.ಪ್ರೌಢಶಾಲಾ ವಿಭಾಗದಲ್ಲಿ 153 ಶಿಕ್ಷಕರು ಹೆಚ್ಚುವರಿಯಾಗಿದ್ದಾರೆ. ಪಿಸಿಎಂ ವಿಷಯಕ್ಕೆ 80, ಕಲಾ ವಿಭಾಗದಲ್ಲಿ 53, ಸಿಬಿಝಡ್ ವಿಷಯಕ್ಕೆ 11, ಇಂಗ್ಲಿಷ್ ವಿಷಯಕ್ಕೆ ಮೂರು, ಕನ್ನಡ, ಕ್ರಾಫ್ಟ್ ಹಾಗೂ ವಿಶೇಷ ಶಿಕ್ಷಕರ ವಿಭಾಗದಲ್ಲಿ ತಲಾ ಇಬ್ಬರು ಶಿಕ್ಷಕರು ಹೆಚ್ಚುವರಿಯಾಗಿದ್ದಾರೆ.ಹೆಚ್ಚುವರಿ ಶಿಕ್ಷಕರ ಪಟ್ಟಿಯನ್ನು ಈಗಾಗಲೇ ಸಿದ್ಧಪಡಿಸಲಾಗಿತ್ತು. ಅವರಿಗೆ ಕೌನ್ಸೆಲಿಂಗ್ ಮೂಲಕ ಜಿಲ್ಲೆಯಲ್ಲಿ ಅವಶ್ಯವಿದ್ದರೆ ವರ್ಗ ಮಾಡಲಾಗುವುದು. ಇಲ್ಲದಿದ್ದರೆ ವಿಭಾಗಮಟ್ಟಕ್ಕೆ ಪಟ್ಟಿ ಕಳುಹಿಸಿಕೊಡಲಾಗುವುದು ಎನ್ನುತ್ತಾರೆ ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಎಂ.ಡಿ. ಶಿವಕುಮಾರ್.ಪಠ್ಯಪುಸ್ತಕಗಳಿಗೂ ಬರ

ಜಿಲ್ಲೆಗೆ ಒಟ್ಟು 12,53,452 ಲಕ್ಷ ಪಠ್ಯ ಪುಸ್ತಕಗಳು ಬೇಕಾಗಿದ್ದವು. ಕಳೆದ ವರ್ಷ 3 ಲಕ್ಷಕ್ಕೂ ಹೆಚ್ಚು ಪುಸ್ತಕಗಳು ಉಳಿದಿದ್ದರಿಂದ 8,62,018 ಪುಸ್ತಕಗಳ ಬೇಡಿಕೆಯನ್ನು ಸಲ್ಲಿಸಲಾಗಿತ್ತು.ಶಾಲೆಗಳಿಗೆ ಪುಸ್ತಕ ಹಂಚಿಕೆಯ ನಂತರ 1 ಲಕ್ಷದಷ್ಟು ಪುಸ್ತಕಗಳು ಉಳಿದಿವೆ. ಆದರೆ ನಾಲ್ಕನೇ ತರಗತಿಗೆ 500, ಐದನೇ ತರಗತಿಗೆ 600, ಆರನೇ ತರಗತಿಗೆ 1200, ಏಳನೇ ತರಗತಿಗೆ 1100 ಹಾಗೂ 8ನೇ ತರಗತಿಗೆ 3,200 ಪುಸ್ತಕಗಳ ಕೊರತೆ ಇದೆ.ಹೆಚ್ಚುವರಿ ಉಳಿದಿರುವ ಪುಸ್ತಕಗಳನ್ನು, ಕೊರತೆ ಇರುವ ಮೈಸೂರು, ಚಾಮರಾಜನಗರ, ಚಿಕ್ಕಮಗಳೂರು ಜಿಲ್ಲೆಗಳಿಗೆ ಕಳುಹಿಸಿಕೊಡಲಾಗುತ್ತಿದೆ. ಕೊರತೆಯಾಗಿರುವ ಪುಸ್ತಕಗಳನ್ನು ಒದಗಿಸುವಂತೆ ಈಗಾಗಲೇ ಬೇಡಿಕೆ ಸಲ್ಲಿಸಲಾಗಿದೆ. ಜೊತೆಗೆ 1,47,660 ವಿದ್ಯಾರ್ಥಿಗಳಿಗೆ ಸಮವಸ್ತ್ರ ಬಂದಿವೆ. ಹಂಚಿಕೆ ನಡೆದಿದೆ ಎಂದು ಶಿವಕುಮಾರ್ ತಿಳಿಸಿದರು.ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳಿಗೆ ಕಬ್ಬಿಣ ಕಡಲೆಯಾಗಿರುವ ಇಂಗ್ಲಿಷ್ ವಿಷಯದಲ್ಲಿಯೇ ಹೆಚ್ಚಿನ ಪ್ರಮಾಣದ ಶಿಕ್ಷಕರ ಕೊರತೆಯನ್ನು ಜಿಲ್ಲೆಯ ವಿದ್ಯಾರ್ಥಿಗಳು ಎದುರಿಸುತ್ತಿದ್ದಾರೆ. ಭವಿಷ್ಯಕ್ಕೆ ಭದ್ರ ಅಡಿಪಾಯ ಹಾಕುವ ಪ್ರಾಥಮಿಕ ಶಾಲೆಗಳಿಗೆ 399 ಶಿಕ್ಷಕರ ಕೊರತೆ ಇರುವುದು ಪೋಷಕರನ್ನು ಆತಂಕಕ್ಕೆ ದೂಡಿದೆ.ಜಿಲ್ಲೆಗೆ ಇನ್ನು ಎಷ್ಟು ಶಿಕ್ಷಕರು ಬೇಕಾಗಿದ್ದಾರೆ ಎಂಬ ವಿವರವನ್ನು ಈಗಾಗಲೇ ಸರ್ಕಾರಕ್ಕೆ ಕಳುಹಿಸಿಕೊಡಲಾಗಿದೆ. ಬೇರೆ ವಿಷಯ ಶಿಕ್ಷಕರು, ಕೊರತೆ ಇರುವ ಶಿಕ್ಷಕರ ಪಠ್ಯವನ್ನೂ ಅಭ್ಯಾಸ ಮಾಡಿಸುತ್ತಿದ್ದಾರೆ ಎನ್ನುತ್ತಾರೆ ಅವರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.