ಗುರುವಾರ , ಮಾರ್ಚ್ 4, 2021
29 °C
ತಾಲ್ಲೂಕು ಪಂಚಾಯ್ತಿ ಸಾಮಾನ್ಯ ಸಭೆ; ಶಾಲೆ ನಿರ್ಮಾಣಕ್ಕೆ ಒತ್ತಾಯ

ಶಿಕ್ಷಕರ ಹುದ್ದೆ ಭರ್ತಿಗೆ ಸದಸ್ಯರ ಆಗ್ರಹ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಶಿಕ್ಷಕರ ಹುದ್ದೆ ಭರ್ತಿಗೆ ಸದಸ್ಯರ ಆಗ್ರಹ

ಶಿವಮೊಗ್ಗ: ಅಂಬೇಡ್ಕರ್ ನಿಗಮದಿಂದ ಮಂಜೂರಾದ ಶಾಲೆಗಳ ನಿರ್ಮಾಣಕ್ಕೆ ಸಾರ್ವಜನಿಕ ಶಿಕ್ಷಣ ಇಲಾಖೆ ಕ್ರಮಕೈಗೊಳ್ಳಬೇಕು ಎಂದು ತಾಲ್ಲೂಕು ಪಂಚಾಯ್ತಿ ಸದಸ್ಯರು ಆಗ್ರಹಿಸಿದರು.ನಗರದ ತಾಲ್ಲೂಕು ಪಂಚಾಯ್ತಿಯ ಸಾಮರ್ಥ್ಯ ಸೌಧ ಸಭಾಂಗಣದಲ್ಲಿ ಸೋಮವಾರ ನಡೆದ ಸಾಮಾನ್ಯ ಸಭೆಯಲ್ಲಿ ಶಾಲೆ ನಿರ್ಮಾಣ ಮಾಡುವಂತೆ ಸದಸ್ಯರು ಒತ್ತಾಯಿಸಿದರು.ಕಳೆದ ಸಾಮಾನ್ಯ ಸಭೆಯಲ್ಲಿ ಅಂಬೇಡ್ಕರ್ ನಿಗಮದಿಂದ ಮಂಜೂರಾದ ಅನುದಾನದಲ್ಲಿ ಶಾಲೆಗಳ ನಿರ್ಮಾಣಕ್ಕೆ ಕ್ರಮಕೈಗೊಳ್ಳುವ ಬಗ್ಗೆ ಅನುಮೋದನೆ ನೀಡಲಾಗಿತ್ತು. ಆದರೆ, ಇದುವರೆಗೂ ಶಾಲೆ ನಿರ್ಮಾಣ ಆಗಿಲ್ಲ ಎಂದು ಸದಸ್ಯರು ಅಸಮಾಧಾನ ವ್ಯಕ್ತಪಡಿಸಿದರು.ಇದಕ್ಕೆ ಪ್ರತಿಕ್ರಿಯಿಸಿದ ಸಾರ್ವಜನಿಕ ಶಿಕ್ಷಣ ಇಲಾಖೆ ಸಂಯೋಜಕ ಪಾಟೀಲ್, ಅಂಬೇಡ್ಕರ್ ಅಭಿವೃದ್ಧಿ ನಿಗಮದಿಂದ ಮಂಜೂರಾದ ಅನುದಾನದಲ್ಲಿ ಮೊರಾರ್ಜಿ ದೇಸಾಯಿ ಶಾಲೆಗಳನ್ನು ಮಾತ್ರ ನಿರ್ಮಾಣ ಮಾಡಲು ಅವಕಾಶವಿದೆ. ಆದರೆ, ಸರ್ಕಾರವು ಮೊರಾರ್ಜಿ ದೇಸಾಯಿ ಶಾಲೆಗಳ ಮೇಲ್ವಿಚಾರಣೆಗೆ ಸಮಾಜ ಕಲ್ಯಾಣ ಇಲಾಖೆ ಒಪ್ಪಿಸಿದೆ. ಆದ್ದರಿಂದ ಶಾಲೆ ನಿರ್ಮಾಣಕ್ಕೆ ಮುಂದಾಗಿಲ್ಲ ಎಂದರು.ಕಾರ್ಯನಿರ್ವಹಣಾಧಿಕಾರಿ ಜಯಕುಮಾರ್ ಮಾತನಾಡಿ, ಮೊರಾರ್ಜಿ ದೇಸಾಯಿ ಶಾಲೆಗಳ ಮೇಲ್ವಿಚಾರಣೆ ಸಮಾಜ ಕಲ್ಯಾಣ ಇಲಾಖೆ ವ್ಯಾಪ್ತಿಗೆ ಬಂದರೂ ಹಣಕಾಸು ನಿರ್ವಹಣೆ ಸಾರ್ವಜನಿಕ ಶಿಕ್ಷಣ ಇಲಾಖೆಯಿಂದ ಮಾಡಲು ಸಾಧ್ಯವಿದೆ. ಶಾಲೆ ನಿರ್ಮಾಣ ಸಾಧ್ಯವಿದೆ. ಶಾಲೆ ನಿರ್ಮಾಣಕ್ಕೆ ಕೂಡಲೇ ಇ-ಟೆಂಡರ್ ಕರೆಯುವಂತೆ ಸೂಚನೆ ನೀಡಿದರು.

ತಾಲ್ಲೂಕು ವ್ಯಾಪ್ತಿಯಲ್ಲಿ ಖಾಲಿ ಇರುವ ಶಿಕ್ಷಕರ ಹುದ್ದೆಗಳನ್ನು ಭರ್ತಿ ಮಾಡಲು ಕ್ರಮಕೈಗೊಳ್ಳುವಂತೆ ಸದಸ್ಯರು ಆಗ್ರಹಿಸಿದರು.ಕಡೇಕಲ್‌ನ ಉರ್ದು ಶಾಲೆಯಲ್ಲಿ ಉರ್ದು ಭಾಷೆಯೇ ಬಾರದ ಶಿಕ್ಷಕ ಕಾರ್ಯ ನಿರ್ವಹಿಸುತ್ತಿದ್ದು, ಮಕ್ಕಳು ಉರ್ದು ಭಾಷೆಯಿಂದ ವಂಚಿತರಾಗುತ್ತಿದ್ದಾರೆ. ಈ ಬಗ್ಗೆ ಗಮನ ಹರಿಸಿ ಕ್ರಮಕೈಗೊಳ್ಳುವಂತೆ ಉಪಾಧ್ಯಕ್ಷೆ ಅತಿಯಾ ಬೇಗಂ ನೂರುಲ್ಲಾ ಬೇಗ್ ಸೂಚಿಸಿದರು.ತಾಲ್ಲೂಕಿನ ಅಂಗನವಾಡಿ ಕೇಂದ್ರಗಳಿಗೆ ಪೂರೈಕೆ ಮಾಡುತ್ತಿರುವ ರವೆ ಮತ್ತು ಇತರ ಆಹಾರ ಪದಾರ್ಥಗಳ ಗುಣಮಟ್ಟ ಕಳಪೆ ಆಗಿದೆ ಎಂದು ಸದಸ್ಯರು ಆರೋಪಿಸಿದರು. ಈ ಬಗ್ಗೆ ಗಮನ ಹರಿಸುವಂತೆ ಸಿಡಿಪಿಒ ಅಧಿಕಾರಿಗೆ, ಅಧ್ಯಕ್ಷೆ ದೇವೀಬಾಯಿ ಧರ್ಮನಾಯ್ಕ ಹೇಳಿದರು.ಸಾಮಾನ್ಯ ಸಭೆಯಲ್ಲಿ ಸದಸ್ಯರಾದ ದೇವರಾಜ್, ಪರಮೇಶ್, ಸೋಮಶೇಖರ್, ಮಂಜುಳಾ ಲಿಂಗರಾಜ್, ಶಾರದಾ, ಗಾಯತ್ರಿರಾವ್ ಮತ್ತಿತರರು ಉಪಸ್ಥಿತರಿದ್ದರು.

 

2 ಸಭೆಗೆ ಬಾರದ ಅಧಿಕಾರಿಗಳ ವಿರುದ್ಧ ಆಕ್ರೋಶ

ತಾಲ್ಲೂಕು ಪಂಚಾಯ್ತಿ ಸಾಮಾನ್ಯ ಸಭೆಗೆ ಬಾರದ ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ ಸದಸ್ಯರು, ಅಧಿಕಾರಿಗಳ ಮೇಲೆ ಕ್ರಮಕೈಗೊಳ್ಳುವಂತೆ ಅಧ್ಯಕ್ಷೆ ದೇವಿಬಾಯಿ ಧರ್ಮನಾಯ್ಕ ಅವರನ್ನು ಆಗ್ರಹಿಸಿದರು. ಕ್ಷೇತ್ರ ಶಿಕ್ಷಣಾಕಾರಿ ಟಿ.ಎನ್.ಕಮಲಾಕರ್ ಹಾಗೂ ಇನ್ನಿತರ ಅಧಿಕಾರಿಗಳು ತಾಲ್ಲೂಕು ಪಂಚಾಯ್ತಿಯ ಯಾವುದೇ ಸಭೆಗೂ ಹಾಜರಾಗುತ್ತಿಲ್ಲ. ಅನಾರೋಗ್ಯದ ನೆಪ ಹೇಳುತ್ತಾರೆ. ಆದರೆ, ಜಿಲ್ಲಾ ಪಂಚಾಯ್ತಿಯ ಪ್ರತಿಯೊಂದು ಸಭೆಗಳಿಗೂ ಹಾಜರಾಗುತ್ತಾರೆ. ತಾಲ್ಲೂಕು ಪಂಚಾಯ್ತಿ ಸಭೆಗಳ ಬಗ್ಗೆ ಅಧಿಕಾರಿಗಳಿಗೆ ಅಸಡ್ಡೆ ಏಕೆ ಎಂದು ಸದಸ್ಯರು ಅಸಮಾಧಾನ ವ್ಯಕ್ತಪಡಿಸಿದರು.ಸದಸ್ಯರಿಗೆ ಕಾದು ಕುಳಿತ ಅಧ್ಯಕ್ಷೆ, ಉಪಾಧ್ಯಕ್ಷೆ !

ನಿಗದಿತ ಸಮಯಕ್ಕಿಂತ ಒಂದು ಗಂಟೆ ತಡವಾಗಿ ಸಭೆ ಆರಂಭವಾದರೂ ಸಭೆಗೆ ಸದಸ್ಯರು ಆಗಮಿಸಲಿಲ್ಲ.

ಇತ್ತ ಸಭೆ ನಡೆಸಲು ಕೋರಂ ಕೊರತೆ ಇದ್ದ ಕಾರಣ ಸದಸ್ಯರಿಗಾಗಿ ಅಧ್ಯಕ್ಷೆ ದೇವೀಬಾಯಿ ಧರ್ಮನಾಯ್ಕ ಉಪಾಧ್ಯಕ್ಷೆ ಅತಿಯಾ ಬೇಗಂ ಕಾದು ಕುಳಿತ್ತಿದ್ದರು. ಅತ್ತ ಕಾರ್ಯನಿರ್ವಹಣಾಧಿಕಾರಿ ಸಭೆಗೆ ಬಾರದೇ ಇದ್ದ ಸದಸ್ಯರಿಗೆ ಸಭೆಗೆ ಬರುವಂತೆ ಕರೆ ಮಾಡುತ್ತಿದ್ದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.