ಶುಕ್ರವಾರ, ಜೂನ್ 25, 2021
29 °C

ಶಿಕ್ಷಣದ ಭಾರತೀಕರಣಕ್ಕೆ ನಿರ್ಣಯ: ಎಬಿವಿಪಿ ಸಮಾವೇಶಕ್ಕೆ ತೆರೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹಾಸನ: ಅಖಿಲ ಭಾರತೀಯ ವಿದ್ಯಾರ್ಥಿಪರಿಷತ್ತಿನವರು ನಗರದಲ್ಲಿ ಆಯೋಜಿಸಿದ್ದ ಮೂರು ದಿನಗಳ 31ನೇ ರಾಜ್ಯ ಸಮ್ಮೇಳನಕ್ಕೆ ಶುಕ್ರವಾರ ತೆರೆಬಿದ್ದಿದೆ.ಶುಕ್ರವಾರ ಬೆಳಿಗ್ಗೆ ನಡೆದ ಸಭೆಯಲ್ಲಿ ರಾಜ್ಯದ ಹಿಂದುಳಿದ ಜಿಲ್ಲೆಗಳ ಅಭಿವೃದ್ಧಿ, ರಾಜ್ಯದ ಪ್ರಸಕ್ತ ಸ್ಥಿತಿಗತಿ ಹಾಗೂ ಶಿಕ್ಷಣದ ಭಾರತೀಕರಣಗಳಿಗೆ ಸಂಬಂಧಿಸಿದಂತೆ ಮೂರು ಪ್ರಮುಖ ನಿರ್ಣಯಗಳನ್ನು ಅಂಗೀಕರಿಸಲಾಯಿತು.

ವಿವಿಧ ಭಾಗಗಳಿಂದ ಬಂದಿದ್ದ ವಿದ್ಯಾರ್ಥಿಗಳು ಕರಡು ನಿರ್ಣಯಗಳಿಗೆ ಸೂಕ್ತ ಸೇರ್ಪಡೆ, ತಿದ್ದುಪಡಿಗಳನ್ನು ಸೂಚಿಸಿದರು. ಬಳಿಕ ನೆರೆದಿದ್ದ ಎಲ್ಲ ವಿದ್ಯಾರ್ಥಿಗಳು ಎರಡೂ ಕೈಗಳನ್ನೆತ್ತಿ ಓಂಕಾರ ಉಚ್ಚರಿಸುವ ಮೂಲಕ ನಿರ್ಣಯಗಳಿಗೆ ಅಂಗೀಕಾರ ಸೂಚಿಸಿದರು.ಕರಡು ನಿರ್ಣಯಗಳಿಗೆ ವಿದ್ಯಾರ್ಥಿಗಳು ಸೂಚಿಸಿದ ತಿದ್ದುಪಡಿ ಹಾಗೂ ಸಲಹೆಗಳನ್ನು ಗಮನಿಸಿದರೆ ರಾಜ್ಯದ ವಿವಿಧ ಭಾಗಗಳ ವಿದ್ಯಾರ್ಥಿಗಳು ತಮ್ಮ ಸ್ಥಳೀಯ ಸಮಸ್ಯೆಗಳಿಗೆ ಸ್ಪಂದಿಸಿದ ರೀತಿ ಸ್ಪಷ್ಟವಾಗುತ್ತಿತ್ತು. ಉತ್ತರ ಕರ್ನಾಟಕದ ವಿವಿಧ ಭಾಗಗಳಿಂದ ಬಂದಿದ್ದ ವಿದ್ಯಾರ್ಥಿಗಳು ರಾಜ್ಯದ ಐದು ಹಿಂದುಳಿದ ಜಿಲ್ಲೆಗಳ ಅಭಿವೃದ್ಧಿಗೆ 371ನೇ ಕಲಂ ಜಾರಿಮಾಡಿ, ಈ ಭಾಗಕ್ಕೆ ವಿಶೇಷ ಸ್ಥಾನಮಾನ ನೀಡುವಂತೆ ಒತ್ತಾಯಿಸಿದರೆ, ಕೋಲಾರ, ತುಮಕೂರು ಭಾಗದಿಂದ ಬಂದಿದ್ದ ವಿದ್ಯಾರ್ಥಿಗಳು ಈ ಭಾಗದ ನೀರಾವರಿ ಯೋಜನೆಗಳನ್ನು ತ್ವರಿತವಾಗಿ ಜಾರಿಗೊಳಿಸಲು ಒತ್ತಾಯಿಸಬೇಕು ಎಂದರು. ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಯ ವಿದ್ಯಾರ್ಥಿಗಳು ಈ ಭಾಗದಲ್ಲಿ      ತೀವ್ರವಾಗಿರುವ ನಕ್ಸಲ್ ಸಮಸ್ಯೆ, ಲವ್ ಜಿಹಾದ್, ಸಮಾಜ ಘಾತುಕ ವಿದ್ಯಾರ್ಥಿ ಸಂಘಟನೆಗಳ ಬಗ್ಗೆ ಆತಂಕ ವ್ಯಕ್ತಪಡಿಸಿದರು.ಸಮಾರೋಪ ಸಮಾರಂಭ

ಮೂರುದಿನಗಳ ಸಮ್ಮೇಳನದ ಸಮಾರೋಪ ಸಮಾರಂಭ ಸಂಜೆ ನಡೆಯಿತು. ಸಮಾರೋಪ ಭಾಷಣ ಮಾಡಿದ ಎಬಿವಿಪಿ ಪ್ರಾಂತ ಸಂಘಟನಾ ಕಾರ್ಯದರ್ಶಿ ನಾಗರಾಜ ರೆಡ್ಡಿ, `ಈಚಿನ ಕೆಲವು ವರ್ಷಗಳಿಂದ ಸಮಾಜದಲ್ಲಿ ಮೌಲ್ಯಗಳ ಸಂಘರ್ಷ  ನಡೆಯುತ್ತಿದೆ. ವಿದ್ಯಾರ್ಥಿಗಳಲ್ಲಿ ಭಾರತೀಯ ಮೌಲ್ಯಗಳನ್ನು ತುಂಬುವುದು ಹೇಗೆ ಎಂಬುದು ಇಂದಿನ ದೊಡ್ಡ ಸವಾಲಾಗಿದೆ. ಇಂಥ ಸಂದರ್ಭದಲ್ಲಿ ಎಬಿವಿಪಿ ಕಾರ್ಯ ಚಟುವಟಿಕೆ ಹೆಚ್ಚು ಪ್ರಸ್ತುತವೆನಿಸುತ್ತದೆ~ ಎಂದರು.`ಭ್ರಷ್ಟಾಚಾರದ ವಿರುದ್ಧ ಸಂಘಟನೆ ದೊಡ್ಡ ಹೋರಾಟ ಮಾಡಿದೆ. ಬಾಬಾ ರಾಮದೇವ್, ಅಣ್ಣಾ ಹಜಾರೆ ಅವರ ಹೋರಾಟಗಳಿಗೆ ಎಬಿವಿಪಿ ದೊಡ್ಡ ಪ್ರಮಾಣದ  ಬೆಂಬಲ ನೀಡಿದೆ. ಆದರೆ ಮಾಧ್ಯಮಗಳಲ್ಲಿ ಪ್ರಚಾರ ಗಿಟ್ಟಿಸಿಕೊಂಡಿಲ್ಲ. ಯಾವತ್ತೂ ಮಾಧ್ಯಮಗಳ ವರದಿಗಳ ಆಧಾರದಲ್ಲಿ ಹೋರಾಟದ ಯಶಸ್ಸನ್ನು          ಅಳೆಯಬಾರದು. ಹೋರಾಟಗಳು ಸಮಾಜದ ಮೇಲೆ ಉಂಟುಮಾಡುವ ಪರಿಣಾಮವೇ ಮುಖ್ಯವಾಗುತ್ತದೆ ಎಂದರು.`ಎಬಿವಿಪಿ ಪ್ರತ್ಯೇಕ ಪದ್ಧತಿ ಅನುಸರಿಸುತ್ತ ಬಂದಿದೆ. ಈಗ ರಾಜಕೀಯವಾಗಿ ನಾವು ಎಲ್ಲ ಪಕ್ಷಗಳಿಂದ ದೂರ ಉಳಿದಿದ್ದೇವೆಯೇ ಎಂಬುದನ್ನು ಆತ್ಮಶೋಧ ಮಾಡಬೇಕು. ಪಕ್ಷಗಳಿಂದ ದೂರ ಉಳಿದಿಲ್ಲ ಎಂದಾದರೆ ಆ ಬಗ್ಗೆ ಗಂಭೀರ ಪ್ರಯತ್ನ ಮಾಡಬೇಕು. ನಮ್ಮ ವಿಚಾರಗಳನ್ನು ಒಪ್ಪುವ ಎಲ್ಲ ಪಕ್ಷಗಳಿಗೂ ನಮ್ಮ ಬೆಂಬಲ ಇರುತ್ತದೆ~ ಎಂದು ರೆಡ್ಡಿ ನುಡಿದರು. ಎಬಿವಿಪಿ ರಾಜ್ಯ ಘಟಕದ ಅಧ್ಯಕ್ಷ ಡಾ. ಬಿ.ವಿ. ವಸಂತ ಕುಮಾರ್ ಹಾಗೂ ಕಾರ್ಯದರ್ಶಿ ರಮೇಶ್ ಕೆ. ವೇದಿಕೆಯಲ್ಲಿದ್ದರು. ಎಬಿವಿಪಿ ವಿವಿಧ ಜಿಲ್ಲೆಗಳ ಪದಾಧಿಕಾರಿಗಳನ್ನೂ ಶುಕ್ರವಾರ ಆಯ್ಕೆ ಮಾಡಲಾಯಿತು. ಧ್ವಜಾವತರಣದೊಂದಿಗೆ ಕಾರ್ಯಕ್ರಮಕ್ಕೆ ಮಂಗಳ ಹಾಡಲಾಯಿತು.ಕೇಸರೀಕರಣ ವಿರೋಧಿಸಿ ವಿಚಾರ ಸಂಕಿರಣ ಇಂದು

ದಲಿತ ಸಂಘರ್ಷ ಸಮಿತಿಯ ಕೇಂದ್ರ ಸಮಿತಿ ಹಾಗೂ ಹಾಸನ ಜಿಲ್ಲಾ ಚಾಲನಾ ಸಮಿತಿಗಳ ಆಶ್ರಯದಲ್ಲಿ `ಶಿಕ್ಷಣದ ಕೇಸರೀಕರಣ ಮತ್ತು ಕೋಮುವಾದೀಕರಣ~ ವಿಚಾರದ ಬಗ್ಗೆ ಭಾ–ನುವಾರ (ಮಾ.18)ಬೆಳಿಗ್ಗೆ 10.30ಕ್ಕೆವಿಚಾರ ಸಂಕಿರಣಏರ್ಪಡಿಸಲಾಗಿದೆ.ನಗರದ ಆರ್.ಸಿ ರಸ್ತೆಯ ಶತಮಾನೋತ್ಸವ ಭವನದಲ್ಲಿ ನಡೆಯುವ ವಿಚಾರ ಸಂಕಿರಣದ ಅಧ್ಯಕ್ಷತೆಯನ್ನು ಮೈಸೂರು ವಿಭಾಗೀಯ ಸಂಚಾಲಕ ಎಂ.ಬಿ. ಪುಟ್ಟಸ್ವಾಮಿ ವಹಿಸಲಿದ್ದಾರೆ. ಪ್ರಗತಿಪರರು ಪಾಲ್ಗೊಂಡು ಪ್ರಜಾಪ್ರಭುತ್ವವಾದಿ ಚಳುವಳಿಯನ್ನ ಬಲಪಡಿಸಬೇಕು ಎಂದು ಸಮಿತಿ ಪ್ರಕಟಣೆಯಲ್ಲಿ  ಕೋರಿದೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.