ಶನಿವಾರ, ಏಪ್ರಿಲ್ 17, 2021
27 °C

ಶಿಕ್ಷಣ ಇಲಾಖೆಗೆ ಸೇರದ 200 ಶಾಲೆಗಳು!

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮೈಸೂರು:  ಈ ಶಾಲೆಗಳು ಶಿಕ್ಷಣ ಇಲಾಖೆಗೆ ಸೇರಿಲ್ಲ. ಇಲ್ಲಿ ನುರಿತ ಶಿಕ್ಷಕರೂ ಇಲ್ಲ. ಇಲ್ಲಿ ಕಲಿತ ಮಕ್ಕಳು ಪ್ರಾಥಮಿಕ ಹಂತದಿಂದ ಪ್ರೌಢಶಾಲೆ ಹಂತಕ್ಕೆ ಬರುವುದರೊಳಗೇ ಶಾಲೆ ಬಿಡುತ್ತಾರೆ. ಕಾಲೇಜಿಗೆ ಬರುವವರ ಸಂಖ್ಯೆ ಇಲ್ಲವೇ ಇಲ್ಲ ಎನ್ನುವಷ್ಟು ಕಡಿಮೆ.ಇದು ರಾಜ್ಯದಲ್ಲಿ ಇರುವ 200 ಆಶ್ರಮ ಶಾಲೆಗಳ ಸ್ಥಿತಿ. ಇವುಗಳಲ್ಲಿ  ಒಟ್ಟು ಸುಮಾರು 20 ಸಾವಿರ ಮಕ್ಕಳು ಓದುತ್ತಿದ್ದಾರೆ. ಆದರೆ, ಈ ಮಕ್ಕಳ ಶಿಕ್ಷಣದ ಜವಾಬ್ದಾರಿಯನ್ನು ಶಿಕ್ಷಣ ಇಲಾಖೆ ಬದಲು ಸಮಾಜ ಕಲ್ಯಾಣ ಇಲಾಖೆ ನೋಡಿಕೊಳ್ಳುತ್ತಿದೆ.ರಾಜ್ಯದಲ್ಲಿರುವ ಆದಿವಾಸಿ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡುವ ದೃಷ್ಟಿಯಿಂದಲೇ ಯಶೋದರ ದಾಸಪ್ಪ ಅವರು ಸಚಿವರಾಗಿದ್ದ ಕಾಲದಲ್ಲಿ ಆಶ್ರಮ ಶಾಲೆಗಳನ್ನು ಆರಂಭಿಸಲಾಯಿತು. ಆದಿವಾಸಿಗಳು ಇರುವ ಪ್ರದೇಶದಲ್ಲಿಯೇ ಊಟ ವಸತಿ ನೀಡಿ ಗುರುಕುಲ ಮಾದರಿಯಲ್ಲಿ ಶಿಕ್ಷಣ ಒದಗಿಸುವುದು ಇದರ ಮುಖ್ಯ ಗುರಿಯಾಗಿತ್ತು. ಇದರ ಜವಾಬ್ದಾರಿಯನ್ನು ಬುಡಕಟ್ಟು ಕಲ್ಯಾಣ ನಿರ್ದೇಶನಾಲಯ ಮತ್ತು ಸಮಾಜ ಕಲ್ಯಾಣ ಇಲಾಖೆಗಳು ನೋಡಿಕೊಳ್ಳುತ್ತವೆ.1990ರವರೆಗೆ ಈ ಶಾಲೆಗಳು ಸೋಲಿಗರು, ಸೂಜಿ ಸೋಲಿಗರು, ಎರವರು, ಜೇನು ಕುರುಬರು, ಬೆಟ್ಟ ಕುರುಬರು, ಇರುಳಿಗರು, ಮಲೆಕುಡಿಯ, ಹಸಲರು, ಕೊರಗ ಮುಂತಾದ ಆದಿವಾಸಿ ಜನಾಂಗಕ್ಕೆ ಸೀಮಿತವಾಗಿತ್ತು. ನಂತರ ಬೇಡ, ವಾಲ್ಮೀಕಿ, ಪರಿವಾರ ಮುಂತಾದ ಜನಾಂಗಕ್ಕೂ ಈ ಸೇವೆಯನ್ನು ವಿಸ್ತರಿಸಲಾಯಿತು.ಮೈಸೂರು ಜಿಲ್ಲೆಯ ಹುಣಸೂರು, ಪಿರಿಯಾಪಟ್ಟಣ, ಎಚ್.ಡಿ.ಕೋಟೆ ತಾಲ್ಲೂಕುಗಳಲ್ಲಿ 20 ಆಶ್ರಮ ಶಾಲೆಗಳಿವೆ. ಸುಮಾರು 2 ಸಾವಿರ ಮಕ್ಕಳು ಓದಲು ಇಲ್ಲಿ ಅವಕಾಶ ಇದೆ. ಆದರೆ ಬಹುತೇಕ ಶಾಲೆಗಳಲ್ಲಿ ವಾರ್ಡನ್, ಮುಖ್ಯಶಿಕ್ಷಕರು, ಶಾಲಾಭಿವೃದ್ಧಿ ಮಂಡಳಿ, ಇಂಗ್ಲಿಷ್, ಕನ್ನಡ, ವಿಜ್ಞಾನ, ಗಣಿತ, ಹಿಂದಿ ಶಿಕ್ಷಕರು ಇಲ್ಲ. ಇಲ್ಲಿ ಇರುವ ಎಲ್ಲರೂ ಗುತ್ತಿಗೆ ಆಧಾರಿತ ಶಿಕ್ಷಕರು.ಮೊದಲು ಒಂದರಿಂದ ನಾಲ್ಕನೇ ತರಗತಿಯವರೆಗೆ ಆಶ್ರಮ ಶಾಲೆಗಳನ್ನು ಮಾಡಲಾಗಿತ್ತು. ನಂತರ ಇದನ್ನು 7ನೇ ತರಗತಿಯವರೆಗೆ ವಿಸ್ತರಿಸಲಾಯಿತು. ಆಶ್ರಮ ಶಾಲೆಗಳು ಆರಂಭವಾಗಿ ಸುಮಾರು 40 ವರ್ಷಗಳೇ ಕಳೆದರೂ ಇನ್ನೂ ಮೈಸೂರು ಜಿಲ್ಲೆಯಲ್ಲಿ ಒಬ್ಬನೇ ಒಬ್ಬ ಆದಿವಾಸಿ ಪದವಿ ಪೂರೈಸಿಲ್ಲ.ಹುಣಸೂರಿನಲ್ಲಿ ಕಳೆದ 40 ವರ್ಷಗಳಿಂದ ಆದಿವಾಸಿಗಳ ಅಭಿವೃದ್ಧಿಗೆ ದುಡಿಯುತ್ತಿರುವ ಡೀಡ್ ಸಂಸ್ಥೆ 23 ಶಾಲೆಗಳಲ್ಲಿ ಸಮೀಕ್ಷೆಯೊಂದನ್ನು ನಡೆಸಿತು. ಇದರ ಪ್ರಕಾರ ಶೇ 3ರಷ್ಟು ವಿದ್ಯಾರ್ಥಿಗಳು ಇಂಗ್ಲಿಷ್ ಓದಬಲ್ಲರು. ಶೇ 10ರಷ್ಟು ವಿದ್ಯಾರ್ಥಿಗಳು ಲೆಕ್ಕ ಮಾಡಬಲ್ಲರು. ಶೇ 30ರಷ್ಟು ಮಕ್ಕಳಿಗೆ ಕನ್ನಡ ಓದಲು ಮತ್ತು ಬರೆಯಲು ಬರುತ್ತದೆ.ಯಾವುದೇ ವಿದ್ಯಾರ್ಥಿಗೆ ಹಿಂದಿ ಓದಲು ಅಥವಾ ಬರೆಯಲು ಬರುವುದಿಲ್ಲ.ಒಂದನೇ ತರಗತಿಗೆ ಬರುವ ಆದಿವಾಸಿ ಮಕ್ಕಳಿಗೆ ಕನ್ನಡ ಬರುವುದಿಲ್ಲ. ಅವರದ್ದೇ ಆದ ಭಾಷೆ ಇದೆ. ಆ ಭಾಷೆಯ ಮೂಲಕವೇ ಅವರು ಸಂವಹನ ನಡೆಸುತ್ತಾರೆ. ಆದರೆ ಆಶ್ರಮ ಶಾಲೆಗಳಲ್ಲಿ ಆದಿವಾಸಿ ಪಠ್ಯ ಇಲ್ಲ. ಆದಿವಾಸಿ ಭಾಷೆಗೆ ಮಹತ್ವವನ್ನೇ ಕೊಟ್ಟಿಲ್ಲ.ಅಲ್ಲದೆ ಈ ಶಾಲೆಗಳನ್ನು ಸಮಾಜ ಕಲ್ಯಾಣ ಇಲಾಖೆ ಉಸ್ತುವಾರಿಗೆ ನೀಡಿದ್ದರಿಂದ ಶಿಕ್ಷಣ ಗುಣಮಟ್ಟದಿಂದ ಕೂಡಿಲ್ಲ. ಊಟ, ವಸತಿ ಜವಾಬ್ದಾರಿಯನ್ನು ಸಮಾಜ ಕಲ್ಯಾಣ ಇಲಾಖೆ ನೋಡಿಕೊಂಡು ಶಿಕ್ಷಣದ ಜವಾಬ್ದಾರಿಯನ್ನು ಶಿಕ್ಷಣ ಇಲಾಖೆ ವಹಿಸಿಕೊಂಡು ಉತ್ತಮ ಶಿಕ್ಷಕರನ್ನು ನೇಮಕ ಮಾಡಿದರೆ ಪರಿಸ್ಥಿತಿ ಸುಧಾರಿಸಬಹುದು ಎಂದು ಡೀಡ್ ಸಂಸ್ಥೆ ನಿರ್ದೇಶಕ ಎಸ್.ಶ್ರೀಕಾಂತ್ ಅಭಿಪ್ರಾಯಪಡುತ್ತಾರೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.