ಮಂಗಳವಾರ, ಜನವರಿ 28, 2020
24 °C

ಶಿಕ್ಷಣ ಹಕ್ಕು ಕಾಯ್ದೆ ಜಾರಿಗೆ ಒತ್ತಾಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೀದರ್: ಶಿಕ್ಷಣ ಹಕ್ಕು ಕಾಯ್ದೆಯನ್ನು ಜಿಲ್ಲೆಯಲ್ಲಿ ಸಮರ್ಪಕವಾಗಿ ಜಾರಿಗೊಳಿಸಬೇಕು ಎಂದು ಒತ್ತಾಯಿಸಿ ಭಾರತೀಯ ಖೇತ್ ಮಜ್ದೂರ್ ಯೂನಿಯನ್, ಅಖಿಲ ಭಾರತ ಕಿಸಾನ್ ಸಭಾ, ಅಖಿಲ ಭಾರತ ತಂಜೀಮ್-–ಎ–-ಇನ್ಸಾಫ್ ಹಾಗೂ ಅಖಿಲ ಭಾರತ ಯುವಜನ ಒಕ್ಕೂಟದ ನೇತೃತ್ವದಲ್ಲಿ ನಗರದ ಜಿಲ್ಲಾಧಿಕಾರಿ ಕಚೇರಿ ಎದುರು ಮಂಗಳವಾರ ಧರಣಿ ಸತ್ಯಾಗ್ರಹ ನಡೆಯಿತು.ಸಂವಿಧಾನವು ಪ್ರತಿಯೊಬ್ಬರಿಗೂ ಶಿಕ್ಷಣ, ಆರೋಗ್ಯ ಸೇರಿದಂತೆ ವಿವಿಧ ಹಕ್ಕುಗಳನ್ನು ನೀಡಿದೆ. ಆದರೆ, ರಾಜ್ಯ ಹಾಗೂ ಕೇಂದ್ರ ಸರ್ಕಾರಗಳು ಆ ಹಕ್ಕುಗಳನ್ನು ರಕ್ಷಿಸುವಲ್ಲಿ ವಿಫಲವಾಗಿವೆ ಎಂದು ಮುಖ್ಯಮಂತ್ರಿಗಳಿಗೆ ಬರೆದ ಮನವಿ ಪತ್ರದಲ್ಲಿ ದೂರಿದ್ದಾರೆ. ಬೀದರ್ ತಾಲ್ಲೂಕಿನ ಬಗದಲ್, ಕಮಠಾಣ, ಸಿರ್ಸಿ(ಎ), ಹುಮನಾ­ಬಾದ್ ತಾಲ್ಲೂಕಿನ ಮನ್ನಾಎಖ್ಖೆಳ್ಳಿ ಗ್ರಾಮ ಪಂಚಾಯಿತಿಗಳಲ್ಲಿ ಆಶ್ರಯ ಮನೆ ಹಂಚಿಕೆಯಲ್ಲಿ ಅವ್ಯವಹಾರ ನಡೆದಿದ್ದು, ಅರ್ಹರಿಗೆ ಸೌಲಭ್ಯ ತಲುಪಿಲ್ಲ. ಬಗದಲ್ ಗ್ರಾಮದಲ್ಲಿ ಈ ಹಿಂದೆ ಕಲ್ಮಷ ನೀರು ಸೇವನೆಯಿಂದಾಗಿ ವಾಂತಿ ಭೇದಿ ಉಂಟಾಗಿದ್ದು, ಒಬ್ಬರು ಮೃತಪಟ್ಟು, ಅನೇಕರು ಅಸ್ವಸ್ಥರಾಗಿ­ದ್ದರು. ಇದಕ್ಕೆ ಅಧಿಕಾರಿಗಳ ನಿರ್ಲಕ್ಷ್ಯವೇ ಕಾರಣವಾಗಿದೆ ಎಂದು ಆರೋಪಿಸಿದ್ದಾರೆ.ಅತಿವೃಷ್ಠಿಯಿಂದಾಗಿ ಜಿಲ್ಲೆಯಲ್ಲಿ ಬೆಳೆ ಹಾನಿಗೀಡಾಗಿದ್ದು, ಈವರೆಗೆ ಪರಿ­ಹಾರ ಒದಗಿಸಿಲ್ಲ ಎಂದು ಆಪಾದಿಸಿದ್ದಾರೆ. ಬೆಳೆ ಹಾನಿಗೀಡಾದ ರೈತರಿಗೆ ಎಕರೆಗೆ ತಲಾ 25 ಸಾವಿರ ರೂಪಾಯಿ ಪರಿ­ಹಾರ ಕಲ್ಪಿಸಬೇಕು. ಬಗದಲ್ ಗ್ರಾಮ ಪಂಚಾಯಿತಿಯಲ್ಲಿ ಆಶ್ರಯ ಮನೆ ಹಂಚಿಕೆಗಾಗಿ ಸಲ್ಲಿಸಿರುವ ಅರ್ಜಿಗಳನ್ನು ವಿಲೇವಾರಿ ಮಾಡಬೇಕು.

ಗ್ರಾಮದಲ್ಲಿ ವಾಂತಿ ಬೇಧಿಯಿಂದ ಸಾವಿಗೀಡಾದವರ ಕುಟುಂಬಕ್ಕೆ ಪರಿ­ಹಾರ ಒದಗಿಸಬೇಕು. ಪ್ರಾಥಮಿಕ ಆರೋಗ್ಯ ಕೇಂದ್ರಗಳ ವ್ಯವಸ್ಥೆ ಸುಧಾರಿಸಬೇಕು. ಸರ್ವ ಶಿಕ್ಷಣ ಅಭಿಯಾನದಲ್ಲಿ ನಡೆದಿದೆ ಎನ್ನಲಾದ ಅವ್ಯವಹಾರ ಕುರಿತು ತನಿಖೆ ನಡೆಸ­ಬೇಕು. ಸಾಕ್ಷರ ಭಾರತ ಕಾರ್ಯಕ್ರಮದ ಆಡಿಟ್ ವರದಿ ಬಹಿರಂಗಪಡಿಸಬೇಕು. ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಮಾದರಿಯಲ್ಲಿ ಮುಸ್ಲಿಂ ಅಲ್ಪಸಂಖ್ಯಾತರಿಗಾಗಿಯೂ ಪ್ರತ್ಯೇಕ ಉಪ ಯೋಜನೆಯನ್ನು ರಚಿಸಬೇಕು. ಐಟಿಸಿ ತರಬೇತಿ ಹೊಂದಿದವರನ್ನು ನೇರ ನೇಮಕ ಮಾಡಿಕೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.ವಿವಿಧ ಸಂಘಟನೆಗಳ ಪ್ರಮುಖರಾದ ಈಶ್ವರಪ್ಪ ಚಾಕೋತೆ, ಶಂಕರರಾವ್ ಕಮಠಾಣ, ಬಾಬುರಾವ್ ಹೊನ್ನಾ, ಜಗನ್ನಾಥ ಮಹಾರಾಜ್, ಗುರುನಾಥ ಬಿರಾದಾರ್, ವಿಶ್ವನಾಥ ಬಿರಾದಾರ್, ಸಾಬೇರ್ ಹುಸೇನ್, ಮುನೀರಸಾಬ್, ಕೆ.ಎಸ್. ರವಿರಾಜ, ವೈಜಿನಾಥ ಭೈರನಳ್ಳಿ, ಗಫರ್ ಮತ್ತಿತರರು ಧರಣಿಯಲ್ಲಿ ಪಾಲ್ಗೊಂಡಿದ್ದರು.

ಪ್ರತಿಕ್ರಿಯಿಸಿ (+)