ಗುರುವಾರ , ಮೇ 13, 2021
22 °C

ಶಿಕ್ಷಣ ಹಕ್ಕು ಕಾಯ್ದೆ: ಬಡವರಿಗೆ ಶೇ25 ಸೀಟು ಮೀಸಲು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ (ಪಿಟಿಐ):  ಸರ್ಕಾರಿ ಹಾಗೂ ಖಾಸಗಿ ಅನುದಾನಿತ ಶಾಲೆಗಳಲ್ಲಿ ಸುತ್ತಲಿನ ಪರಿಸರದ ಬಡಮಕ್ಕಳಿಗೆ ಕಡ್ಡಾಯವಾಗಿ ಶೇ 25ರಷ್ಟು ಸೀಟು ಮೀಸಲಿಡುವ ಶಿಕ್ಷಣ ಹಕ್ಕು ಕಾಯ್ದೆ (ಆರ್‌ಇಟಿ)ಯ ಸಾಂವಿಧಾನಿಕ ಸಿಂಧುತ್ವವನ್ನು ಸುಪ್ರೀಂಕೋರ್ಟ್ ಎತ್ತಿಹಿಡಿದಿದೆ.ಈ ಕಾಯ್ದೆ ದೇಶದಾದ್ಯಂತ ಅನುದಾನರಹಿತ ಅಲ್ಪಸಂಖ್ಯಾತರ ಶಿಕ್ಷಣ ಸಂಸ್ಥೆಗಳನ್ನು ಹೊರತುಪಡಿಸಿ ಸರ್ಕಾರಿ ಶಾಲೆಗಳು, ಅನುದಾನರಹಿತ ಖಾಸಗಿ ಶಾಲೆಗಳಿಗೆ ಏಕರೂಪದಲ್ಲಿ ಅನ್ವಯವಾಗುತ್ತದೆ ಎಂದು ಹೇಳಿದೆ.`ಶಿಕ್ಷಣ ಹಕ್ಕು ಕಾಯ್ದೆ-2009~ರ ಸಿಂಧುತ್ವ ಎತ್ತಿಹಿಡಿದು, ಸುಪ್ರೀಂಕೋಟ್ ಮುಖ್ಯ ನ್ಯಾಯಮೂರ್ತಿ ಎಸ್. ಎಚ್. ಕಪಾಡಿಯಾ ನೇತೃತ್ವದ ನ್ಯಾಯಪೀಠ ಗುರುವಾರ ಬಹುಮತದ ತೀರ್ಪು ನೀಡಿದೆ.ಮುಖ್ಯ ನ್ಯಾಯಮೂರ್ತಿ ಎಸ್.ಎಚ್. ಕಪಾಡಿಯಾ ಮತ್ತು ನ್ಯಾಯಮೂರ್ತಿ ಸ್ವತಂತ್ರ ಕುಮಾರ್ ಈ ಕಾಯ್ದೆಯಿಂದ ಅನುದಾನರಹಿತ ಅಲ್ಪಸಂಖ್ಯಾತರ ಶಿಕ್ಷಣ ಸಂಸ್ಥೆಗಳನ್ನು ಮಾತ್ರ ಹೊರಗಿಡಬೇಕು ಎಂಬ ಅಭಿಪ್ರಾಯ ವ್ಯಕ್ತಪಡಿಸಿದರು.ಆದರೆ, ನ್ಯಾಯಮೂರ್ತಿ ಕೆ. ಎಸ್. ರಾಧಾಕೃಷ್ಣನ್ ಖಾಸಗಿ ಅನುದಾನರಹಿತ ಶಾಲೆಗಳನ್ನು ಸಹ ಕಾಯ್ದೆ ವ್ಯಾಪ್ತಿಯಿಂದ ಹೊರಗೆ ಇಡಬೇಕು ಎಂದು ಹೇಳಿದರು. ಅಂತಿಮವಾಗಿ ನ್ಯಾಯಪೀಠ ಬಹುಮತದ ತೀರ್ಪು ಪ್ರಕಟಿಸಿತು.ಈ ತೀರ್ಪು ಗುರುವಾರದಿಂದಲೇ ಜಾರಿಯಲ್ಲಿ ಬರಲಿದೆ. ಶಿಕ್ಷಣ ಹಕ್ಕು ಕಾಯ್ದೆ ರೂಪುಗೊಂಡ ದಿನದಿಂದ ಪೂರ್ವಾನ್ವಯವಾಗುವುದಿಲ್ಲ ಎಂದೂ ನ್ಯಾಯಪೀಠ ಸ್ಪಷ್ಟಪಡಿಸಿತು.ಶಿಕ್ಷಣ ಹಕ್ಕು ಕಾಯ್ದೆಯಲ್ಲಿನ ಕೆಲ ಅಂಶಗಳನ್ನು ಪ್ರಶ್ನಿಸಿ ಸಲ್ಲಿಸಲಾಗಿದ್ದ ಸಾಲುಸಾಲು ಅರ್ಜಿಗಳ ಸುದೀರ್ಘ ವಿಚಾರಣೆ ನಡೆಸಿದ್ದ ಸುಪ್ರೀಂಕೋರ್ಟ್ ಪೀಠ, ಕಳೆದ ವರ್ಷದ ಆಗಸ್ಟ್ 3ರಂದು ತೀರ್ಪು ಕಾಯ್ದಿರಿಸಿತ್ತು.ಶಿಕ್ಷಣ ಹಕ್ಕು ಕಾಯ್ದೆಯ 3ನೇ ಕಲಂ ಅನ್ವಯ, ಖಾಸಗಿ ಅನುದಾನರಹಿತ ಶಿಕ್ಷಣ ಸಂಸ್ಥೆಗಳು ಹಾಗೂ ಅಲ್ಪಸಂಖ್ಯಾತರ ಶಿಕ್ಷಣ ಸಂಸ್ಥೆಗಳು ಸೇರಿದಂತೆ ಎಲ್ಲ ಶಾಲೆಗಳು, ಆಯಾ ಶಾಲೆಗಳಲ್ಲಿ ದಾಖಲಾತಿ ಬಯಸುವ ತಮ್ಮ ನೆರೆಹೊರೆಯ ಪ್ರದೇಶದ ಮಕ್ಕಳಿಗೆ ಕಡ್ಡಾಯವಾಗಿ ಪ್ರವೇಶ ನೀಡಬೇಕಿತ್ತು.  `ಸಂವಿಧಾನದ 19 (1) (ಜಿ) ವಿಧಿಯಡಿ ಖಾಸಗಿ ಶಿಕ್ಷಣ ಸಂಸ್ಥೆಗಳಿಗೆ ನೀಡಲಾದ ಸ್ವಾಯತ್ತತೆಗೆ `ಆರ್‌ಇಟಿ~ ಅಡ್ಡಿಯಾಗುತ್ತದೆ.  `ಆರ್‌ಇಟಿ~ ಅಸಾಂವಿಧಾನಿಕವಾಗಿದ್ದು, ಮೂಲಭೂತ ಹಕ್ಕನ್ನು ಉಲ್ಲಂಘಿಸುತ್ತದೆ~ ಎಂದು ಅನುದಾನರಹಿತ ಖಾಸಗಿ ಶಿಕ್ಷಣ ಸಂಸ್ಥೆಗಳು ವಾದಿಸಿದ್ದವು.ಕಾಯ್ದೆ ಪರವಾಗಿ ವಾದಿಸಿದ್ದ ಕೇಂದ್ರ ಸರ್ಕಾರ, `ಸಮಾಜದ ವಿವಿಧ ವರ್ಗಗಳ ನಡುವೆ ಇರುವ ಪ್ರತಿಭೆ ಮತ್ತು ಅರ್ಹತೆಯ ಅಂತರವನ್ನು ಅಳಿಸಿಹಾಕಬೇಕಿದೆ. ಒಂದೇ ಹಿನ್ನೆಲೆಯಿಂದ ಬಂದ ಮಕ್ಕಳು ಕಲಿಯುವ ಪ್ರತ್ಯೇಕ ಶಾಲೆಗಳ ಬದಲಾಗಿ ವಿಭಿನ್ನ ಹಿನ್ನೆಲೆಯ ಮಕ್ಕಳನ್ನು ಒಳಗೊಂಡ ವೈವಿಧ್ಯಮಯ ತರಗತಿಗಳನ್ನು ಹೊಂದಬೇಕಾಗಿದೆ~ ಎಂದು ಹೇಳಿತ್ತು.

ರಾಜ್ಯದಲ್ಲಿ ಜಾರಿಗೆ ಸಂಪುಟ ಅಸ್ತು

ಬೆಂಗಳೂರು:
ಕೇಂದ್ರ ಸರ್ಕಾರ ಎರಡು ವರ್ಷಗಳ ಹಿಂದೆ ಜಾರಿ ಮಾಡಿರುವ ಉಚಿತ ಮತ್ತು ಕಡ್ಡಾಯ ಶಿಕ್ಷಣ ಹಕ್ಕು ಕಾಯ್ದೆಯನ್ನು ರಾಜ್ಯದಲ್ಲೂ ಜಾರಿಗೊಳಿಸುವ ಸಂಬಂಧ ರೂಪಿಸಿರುವ ನಿಯಮಗಳಿಗೆ ರಾಜ್ಯ ಸಚಿವ ಸಂಪುಟ ಒಪ್ಪಿಗೆ ನೀಡಿದ್ದು, ಈ ವರ್ಷದಿಂದಲೇ ಕಾಯ್ದೆ ಅನುಷ್ಠಾನಕ್ಕೆ ಬರಲಿದೆ.

 

ಮುಖ್ಯಮಂತ್ರಿ ಡಿ.ವಿ.ಸದಾನಂದಗೌಡ ಅಧ್ಯಕ್ಷತೆಯಲ್ಲಿ ಗುರುವಾರ ನಡೆದ ಸಂಪುಟ ಸಭೆ ಶಿಕ್ಷಣ ಇಲಾಖೆ ರೂಪಿಸಿರುವ ನಿಯಮಗಳಿಗೆ ಅನುಮೋದನೆ ನೀಡಿದೆ. `ಇನ್ನು ಮುಂದೆ ಗುಣಮಟ್ಟದ ಶಿಕ್ಷಣ ಮಕ್ಕಳ ಮೂಲಭೂತ ಹಕ್ಕುಗಳಲ್ಲಿ ಒಂದಾಗಲಿದೆ~ ಎಂದು ಕಾನೂನು ಸಚಿವ ಎಸ್.ಸುರೇಶ್‌ಕುಮಾರ್ ಸುದ್ದಿಗಾರರಿಗೆ ತಿಳಿಸಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.