ಶನಿವಾರ, ಮಾರ್ಚ್ 6, 2021
31 °C

ಶಿಕ್ಷೆಗೊಳಗಾದ ದಿನದಿಂದಲೇ ಸಂಸದ, ಶಾಸಕರು ಅನರ್ಹರು: ಸುಪ್ರೀಂ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಶಿಕ್ಷೆಗೊಳಗಾದ ದಿನದಿಂದಲೇ ಸಂಸದ, ಶಾಸಕರು ಅನರ್ಹರು: ಸುಪ್ರೀಂ

ನವದೆಹಲಿ (ಪಿಟಿಐ): ತಮ್ಮ ಶಿಕ್ಷೆಯ ವಿರುದ್ಧ ಮೇಲಿನ ನ್ಯಾಯಾಲಯಗಳಲ್ಲಿ ಸಲ್ಲಿಸಿದ ಮೇಲ್ಮನವಿ ಇತ್ಯರ್ಥಕ್ಕಾಗಿ ಬಾಕಿ ಇರುವ ನೆಲೆಯಲ್ಲಿ ಶಿಕ್ಷಿತ ಶಾಸನಕರ್ತರನ್ನು ಅನರ್ಹಗೊಳಿಸದಂತೆ  ಜನತಾ  ಪ್ರಾತಿನಿಧ್ಯ ಕಾಯ್ದೆಯಲ್ಲಿ ಒದಗಿಸಲಾಗಿರುವ ವಿಧಿಯು 'ಅಸಿಂಧು' ಎಂದು ಬುಧವಾರ ಘೋಷಿಸಿದ ಸುಪ್ರೀಂಕೋರ್ಟ್ ಈ ವಿಧಿಯನ್ನು ರದ್ದುಪಡಿಸಿತು.'ಇರುವ ಏಕೈಕ ಪ್ರಶ್ನೆ ಏನೆಂದರೆ ಜನತಾ ಪ್ರಾತಿನಿಧ್ಯ ಕಾಯ್ದೆಯ ಸೆಕ್ಷನ್ 8(4)ರ ಸಿಂಧುತ್ವಕ್ಕೆ ಸಂಬಂಧಿಸಿದ್ದು. ನಾವು ಇದನ್ನು ಅಸಿಂಧು ಎಂಬುದಾಗಿ ಘೋಷಿಸುತ್ತಿದ್ದೇವೆ. ಮತ್ತು ಅನರ್ಹತೆಯು ಶಿಕ್ಷೆಗೆ ಒಳಗಾದ ದಿನಾಂಕದಿಂದಲೇ ಅನ್ವಯವಾಗುತ್ತದೆ' ಎಂದು ನ್ಯಾಯಮೂರ್ತಿಗಳಾದ ಎ.ಕೆ. ಪಟ್ನಾಯಕ್ ಮತ್ತು ಎಸ್. ಜೆ. ಮುಖ್ಯೋಪಾಧ್ಯಾಯ ಹೇಳಿದರು.ಏನಿದ್ದರೂ ತನ್ನ ನಿರ್ಣಯವು ಈ ತೀರ್ಪಿನ ಪ್ರಕಟಣೆಗೆ ಮುನ್ನ ಉನ್ನತ ನ್ಯಾಯಾಲಯಗಳಲ್ಲಿ ಮೇಲ್ಮನವಿ ಸಲ್ಲಿಸಿದ ಸಂಸತ್ ಸದಸ್ಯರು, ಶಾಸಕರು ಅಥವಾ ಇತರ ಶಾಸನಕರ್ತರಿಗೆ ಅನ್ವಯಿಸುವುದಿಲ್ಲ ಎಂದು ನ್ಯಾಯಾಲಯ ಸ್ಪಷ್ಟ ಪಡಿಸಿತು.ಲಿಲಿ ಥಾಮಸ್ ಮತ್ತು ಸರ್ಕಾರೇತರ ಸಂಘಟನೆ ಲೋಕ್ ಪ್ರಹರಿ ಕಾರ್ಯದರ್ಶಿ ಎಸ್.ಎನ್ ಶುಕ್ಲ  ಅವರು ಜನತಾ ಪ್ರಾನಿನಿಧ್ಯ ಕಾಯ್ದೆಯ ವಿವಿಧ ವಿಧಿಗಳನ್ನು ರದ್ದು ಪಡಿಸುವಂತೆ ಕೋರಿ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ಬಳಿಕ ಸುಪ್ರೀಂಕೋರ್ಟ್ ಈ ತೀರ್ಪು ನೀಡಿತು.ಕಾಯ್ದೆಯ ಉಲ್ಲೇಖಿತ ವಿಧಿಗಳು ಅಪರಾಧಿಗಳಿಗೆ ಮತದಾರರಾಗಿ ನೋಂದಾಯಿಸಿಕೊಳ್ಳಲು ಇಲ್ಲವೇ ಸಂಸತ್ ಸದಸ್ಯರು ಅಥವಾ ಶಾಸಕರಾಗಲು ಬಹಿರಂಗವಾಗಿ ತಡೆ ಹಾಕುವ ಕೆಲವೊಂದು ಸಂವಿಧಾನಾತ್ಮಕ ವಿಧಿಗಳನ್ನು ಉಲ್ಲಂಘಿಸುತ್ತವೆ ಎಂಬ ನೆಲೆಯಲ್ಲಿ ಅರ್ಜಿದಾರರು ಈ ವಿಧಿಗಳನ್ನು ರದ್ದು ಪಡಿಸುವಂತೆ ಕೋರಿ ಅರ್ಜಿ ಸಲ್ಲಿಸಿದ್ದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.