ಶನಿವಾರ, ಮಾರ್ಚ್ 6, 2021
25 °C
ಸಮಾಜ ಸೇವೆಗೆ ಹೆಸರಾದ ಹರನಹಳ್ಳಿ ಕೆಂಗಾಪುರದ ರಾಮಲಿಂಗೇಶ್ವರಸ್ವಾಮಿ ಮಠ

ಶಿವರಾತ್ರಿಯ ಮುಳ್ಳುಗದ್ದುಗೆ ಸಂಭ್ರಮಕ್ಕೆ ಕೆಂಗಾಪುರ ಸಜ್ಜು

ಪ್ರಜಾವಾಣಿ ವಾರ್ತೆ/ಎನ್‌.ವಿ.ರಮೇಶ್‌ Updated:

ಅಕ್ಷರ ಗಾತ್ರ : | |

ಶಿವರಾತ್ರಿಯ ಮುಳ್ಳುಗದ್ದುಗೆ ಸಂಭ್ರಮಕ್ಕೆ ಕೆಂಗಾಪುರ ಸಜ್ಜು

ಬಸವಾಪಟ್ಟಣ: ಜನಸೇವೆಯ ಮೂಲಕ ಪ್ರಸಿದ್ಧಿಗೆ ಬರುತ್ತಿರುವ ಚನ್ನಗಿರಿ ತಾಲ್ಲೂಕಿನ ಹರನಹಳ್ಳಿ ಕೆಂಗಾಪುರದ ರಾಮಲಿಂಗೇಶ್ವರಸ್ವಾಮಿ ಮಠದಲ್ಲಿ ಶಿವರಾತ್ರಿಯ ಮುಂಜಾನೆ ಮುಳ್ಳುಗದ್ದುಗೆ ಉತ್ಸವ ಮತ್ತು ಧಾರ್ಮಿಕ ಸಭೆಗೆ ಸಿದ್ಧಗೊಂಡಿದೆ.‘ಸಮಾಜ ಎದುರಿಸುತ್ತಿರುವ ವರದಕ್ಷಿಣೆ ಸಮಸ್ಯೆ ದೂರಮಾಡಲು ಪ್ರತಿವರ್ಷ ಶಿವರಾತ್ರಿಯ ದಿನ ಉಚಿತ ಸಾಮೂಹಿಕ ವಿವಾಹವನ್ನು ಮಠದಲ್ಲಿ ನಡೆಸಲಾಗುತ್ತಿದೆ. ವಧೂ–ವರರಿಗೆ ಮಾಂಗಲ್ಯ ಮತ್ತು ಬಟ್ಟೆ ನೀಡಿ ಹರಸುವ ರಾಮಲಿಂಗೇಶ್ವರ ಸ್ವಾಮೀಜಿ, ಯುವಜನತೆಯಲ್ಲಿ ವ್ಯಾಪಕವಾಗಿ ಹರಡುತ್ತಿರುವ ದುಶ್ಚಟ ದೂರಮಾಡಲು ನಿರಂತರ ಶ್ರಮಿಸುತ್ತಿದ್ದಾರೆ’ ಎನ್ನುತ್ತಾರೆ ಕೆಂಗಾಪುರದ ಮುಖಂಡ ಕೆ.ಪಿ.ಓಂಕಾರನಾಯಕ್‌.ಸಾವಿರಾರು ಭಕ್ತರನ್ನು ಸಮಾವೇಶಗೊಳಿಸಿ ಅವರಿಗೆ ಜ್ಞಾನ ಮತ್ತು ಅನ್ನ ದಾಸೋಹ ಏರ್ಪಡಿಸಲಾಗುತ್ತಿದೆ. ಪ್ರತಿ ಅಮಾವಾಸ್ಯೆಯಂದು ಮಠದಲ್ಲಿ ಧಾರ್ಮಿಕ ಸಭೆ ಮತ್ತು ಹೋಮ ನಡೆಸಲಾಗುತ್ತಿದ್ದು, ಜನರ ವಿವಿಧ ಸಮಸ್ಯೆಗಳಿಗೆ ಸ್ವಾಮೀಜಿ ಪರಿಹಾರ ಸೂಚಿಸುತ್ತಾರೆ. ಸುಮಾರು 4,000 ಜನರು ತ್ರಿವಿಧ ದಾಸೋಹದ ಪ್ರಯೋಜನ ಪಡೆಯುತ್ತಿದ್ದಾರೆ.ಅಲ್ಲದೇ, ಪ್ರತಿವರ್ಷ ದಸರಾ ಉತ್ಸವದಲ್ಲಿ ನಡೆಸಲಾಗುವ ಸಾಂಸ್ಕೃತಿಕ ಉತ್ಸವದಲ್ಲಿ ವಿವಿಧ ಜಾನಪದ ಕಲಾ ಪ್ರದರ್ಶನ ನಡೆಯುತ್ತದೆ. ಸ್ವಾಮೀಜಿ ಸ್ಥಳೀಯ ಕಲಾವಿದರ ಒಂದು ತಂಡವನ್ನು ಬೆಳೆಸಿದ್ದು, ನಶಿಸಿಹೋಗುತ್ತಿರುವ ಜನಪದ ಕಲಾ ಪ್ರಕಾರಗಳಿಗೆ ಮರುಜೀವ ತುಂಬುತ್ತಿದ್ದಾರೆ’ ಎಂದು ನಿವೃತ್ತ ಶಿಕ್ಷಕ ಕೆ. ಶಿವಲಿಂಗಪ್ಪ.ಮಠದ ಸದ್ಗುರು ರಾಮಲಿಂಗೇಶ್ವರ ಸ್ವಾಮೀಜಿ ಅವರು ಕೈಗೊಂಡಿರುವ ಶೈಕ್ಷಣಿಕ, ಸಾಮಾಜಿಕ  ಧಾರ್ಮಿಕ ಕಾರ್ಯಕ್ರಮ ಇದಕ್ಕೆ ಸಾಕ್ಷಿಯಾಗಿದೆ. ಸಮಾಜದಲ್ಲಿ ವ್ಯಾಪಕವಾಗಿರುವ ಅನಕ್ಷರತೆ ತೊಡೆದು ಹಾಕಲು ಹರನಹಳ್ಳಿಯ ಹೊರಮಠದಲ್ಲಿ ಸ್ವಾಮೀಜಿಯವರು ನರ್ಸರಿ, ಪ್ರಾಥಮಿಕ, ಪ್ರೌಢಶಾಲೆಗಳು ಮತ್ತು ಪದವಿಪೂರ್ವ ಕಾಲೇಜುಗಳನ್ನು ಸ್ಥಾಪಿಸಿದ್ದಾರೆ.‘ಮಠದ ವಿದ್ಯಾಸಂಸ್ಥೆಗಳಲ್ಲ ಒಂದು ಸಾವಿರ ಮಕ್ಕಳು ಅಭ್ಯಾಸ ಮಾಡುತ್ತಿದ್ದು, ಎಲ್ಲರಿಗೂ ಉಚಿತ ಶಿಕ್ಷಣ ನೀಡಲಾಗುತ್ತಿದೆ. ಅಲ್ಲದೇ, ಇಲ್ಲಿ ಸ್ಥಾಪಿಸಲಾಗಿರುವ ಉಚಿತ ವಿದ್ಯಾರ್ಥಿನಿಲಯದಲ್ಲಿ 300 ಮಕ್ಕಳಿಗೆ ಅವಕಾಶ ಕಲ್ಪಿಸಲಾಗಿದೆ. ನಿರುದ್ಯೋಗ ಸಮಸ್ಯೆ ನಿವಾರಣೆಗಾಗಿ ಕ್ರಮ ಕೈಗೊಂಡಿರುವ ಸ್ವಾಮೀಜಿ ಯುವಕ ಯುವತಿಯರಿಗಾಗಿ ಡಿ.ಇಡಿ ಮತ್ತು ಐಟಿಐ ಕಾಲೇಜು ತೆರೆದು ವೃತ್ತಿಶಿಕ್ಷಣಕ್ಕೆ ಅನುವು ಮಾಡಿಕೊಟ್ಟಿದ್ದಾರೆ.ಹೊನ್ನಾಳಿ ತಾಲ್ಲೂಕು ಕ್ಯಾಸಿನಕೆರೆ ಮತ್ತು ಭದ್ರಾವತಿ ತಾಲ್ಲೂಕು ನಿಂಬೆಗೊಂದಿ ಗ್ರಾಮಗಳಲ್ಲಿ ಪ್ರೌಢಶಾಲೆ ಸ್ಥಾಪಿಸಿ ಸುಮಾರು 700 ವಿದ್ಯಾರ್ಥಿಗಳು ಅಭ್ಯಾಸ ಮಾಡಲು ಅವಕಾಶ ಮಾಡಿಕೊಟ್ಟದ್ದಾರೆ’ ಎನ್ನುತ್ತಾರೆ ಮಠದ ಯೋಜನಾಧಿಕಾರಿ ರಾಘುದೊಡ್ಡಮನಿ.‘ನಮ್ಮದು ಜಾತ್ಯತೀತ ಮಠ. ಹರನಹಳ್ಳಿಯಲ್ಲಿ ₨ 1 ಕೋಟಿ ವೆಚ್ಚದಲ್ಲಿ ಕಾಲೇಜು ಕಟ್ಟಡ ಪೂರ್ಣಗೊಂಡಿದೆ. ನಮ್ಮ ಪ್ರಯತ್ನಕ್ಕೆ ಸರ್ಕಾರದ ಯಾವ ಸವಲತ್ತನ್ನೂ ಈವರೆಗೆ ಪಡೆಯಲಾಗಿಲ್ಲ. ಇದಕ್ಕಾಗಿ ಭಕ್ತರ ಬಳಿ ದೇಣಿಗೆ ಸಂಗ್ರಹಿಸುತ್ತಿದ್ದೇವೆ. ಇಲ್ಲಿ ನಡೆಯುತ್ತಿರುವ ಸಮಾಜಮುಖಿ ಕಾರ್ಯಗಳನ್ನು ಮೆಚ್ಚಿರುವ ಜನರು ನಮ್ಮ ಬೇಡಿಕೆಗೆ ಸ್ಪಂದಿಸುತ್ತಿದ್ದಾರೆ. ಮುಂಬರುವ ದಿನಗಳಲ್ಲಿ ನಮ್ಮ ಮಠದ ವತಿಯಿಂದ ವೃದ್ಧಾಶ್ರಮ, ಆಯುರ್ವೇದಿಕ್‌ ಆಸ್ಪತ್ರೆ, ಗೋಶಾಲೆ, ಅನಾಥಾಶ್ರಮಗಳನ್ನು ಸ್ಥಾಪಿಸುವ ಉದ್ದೇಶವಿದೆ. ನಿರಂತರವಾಗಿ

ಸಮಾಜಸೇವೆಗಾಗಿ ನಮ್ಮ ಮಠವನ್ನು ಮೀಸಲಾಗಿಡಲು ಶ್ರಮಿಸುತ್ತಿದ್ದೇವೆ’ ಎಂದು ಮಠದ ರಾಮಲಿಂಗೇಶ್ವರ ಸ್ವಾಮೀಜಿ ತಿಳಿಸಿದರು.

 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.