ಭಾನುವಾರ, ಜನವರಿ 19, 2020
22 °C
ಮಕ್ಕಳ ಕಥೆ

ಶುಭವಾಗತೈತೆ!

ಕೆ.ವಿ. ತಿರುಮಲೇಶ್ Updated:

ಅಕ್ಷರ ಗಾತ್ರ : | |

ನನ್ನ ಉದ್ದ ಹೆಸರು ರಾಘವೇಂದ್ರ ರಾವ್ ಅಂತ. ಅಡ್ಡ ಹೆಸರು ರಘು ಅಂತ. ಅಡ್ಡ ಹೆಸರೇ ನನಗೆ ಇಷ್ಟವಾದ ಹೆಸರು. ನನ್ನ ಉದ್ದ ಹೆಸರು ನನಗೆ ಗೊತ್ತಾದುದು ಶಾಲೆಗೆ ಸೇರಿದ ಮೇಲೆ. ಅದು ಗೊತ್ತಾದಾಗ ನಾನು ನಾನಲ್ಲ, ಇನ್ನೊಬ್ಬ ಎಂಬ ಭಾವನೆ ಬಂತು. ನಾನಿನ್ನೂ ಬರೇ ರಘುವಾಗಿದ್ದ ಕಾಲದಲ್ಲಿ ಹಾಯಾಗಿ ನನ್ನ ವಯಸ್ಸಿನ ಕೇರಿಯ ಮಕ್ಕಳೊಂದಿಗೆ ಏನೇನೋ ಆಟಗಳನ್ನು ಆಡುತ್ತ ದಿನ ಕಳೆಯುತ್ತಿದ್ದೆ.ಚಿಕ್ಕಂದಿನಲ್ಲಿ ಕಂಡದ್ದೆಲ್ಲ ಆಕರ್ಷಣೆ. ಹೊಸಬರು ಯಾರು ಬೀದಿಗೆ ಬಂದರೂ ಅವರು ಯಾರು, ಎಲ್ಲಿಂದ ಬಂದವರು, ಎಲ್ಲಿಗೆ ಹೋಗುವವರು ಎಂದು ತಿಳಿಯುವ ಕುತೂಹಲವೇ. ಹಲವಾರು ಮಂದಿ ಬರುತ್ತಿದ್ದರು ಸಹ. ದಾರಿ ಕೇಳಿಕೊಂಡು ಬರುವವರು, ನೀರು ಕೇಳಿಕೊಂಡು ಬರುವವರು, ಮನೆಗೆಲಸ ಕೇಳಿಕೊಂಡು ಬರುವವರು, ಭಿಕ್ಷುಕರು, ತಲೆ ಹೊರೆ ವ್ಯಾಪಾರಿಗಳು, ಬಸವನ ಆಡಿಸುವವರು, ಕರಡಿ ಕುಣಿಸುವವರು, ಮಂಗನ ಕುಣಿಸುವವರು, ದೊಂಬರಾಟದವರು ಮುಂತಾಗಿ. ಆಗ ಅಮ್ಮನೋ ಅಪ್ಪನೋ ಅಜ್ಜಿಯೋ ಅಥವಾ ಅಕ್ಕನೋ ಅವರ ಜೊತೆ ವ್ಯವಹರಿಸುತ್ತಿದ್ದರಾದರೂ ನಾನೂ ಜತೆ ಸೇರಿಕೊಳ್ಳುತ್ತಿದ್ದೆ. ನನಗೆ ಇನ್ನೇನೂ ಕೆಲಸವಿರಲಿಲ್ಲವಷ್ಟೆ!ಹಾಗೆ ನಮ್ಮ ಬೀದಿಗೆ ಬರುತ್ತಿರುವವರಲ್ಲಿ ಒಬ್ಬ ನರಸಣ್ಣನೂ ಇದ್ದ. ಅವನು ಮನೆ ಗೇಟಿಗೆ ಬಂದು ಒಂದು ಶಂಖ ಊದಿ, ಜಾಗಟೆ ಬಡಿದು, “ಶುಭವಾಗತೈತೆ, ಶುಭವಾಗತೈತೆ, ನರಸಣ್ಣ ಹೇಳಿದ್ದು ನಿಜವಾಗತೈತೆ!” ಎನ್ನುತ್ತಿದ್ದ. ಆಗ ಮನೆಯ ಯಾರಾದರೂ ಹೊರ ಬಂದು ಅವನ ಜೋಳಿಗೆಯಲ್ಲಿ ಅಕ್ಕಿಯನ್ನೋ ಕೈಯಲ್ಲಿ ಕಾಸನ್ನೋ ಹಾಕಬೇಕು. ಅವರು ಅದು ಮಾಡುವವರೆಗೆ ಅವನು ಏನಾದರೂ ಶಕುನ ಹೇಳುತ್ತಿದ್ದ. ನನ್ನ ಅಮ್ಮನಿಗೆ ಅವನ ಶಕುನದಲ್ಲಿ ಅಗಾಧ ವಿಶ್ವಾಸವಿತ್ತು. ಯಾರಾದರೂ ಅದಕ್ಕೆ ತಮಾಷೆ ಮಾಡಿದರೆ, ಅಮ್ಮ ಹೇಳುತ್ತಿದ್ದಳು: “ಅವನು ನೂರು ಹೇಳುತ್ತಾನೆ, ಅದರಲ್ಲಿ ಒಂದಾದರೂ ನಿಜ ಇರಬಹುದಲ್ಲ? ನಂಬಿದರೆ ತಪ್ಪೇನು?”. ಇದೆಂಥ ತರ್ಕ ಎನ್ನುವುದು ಅಕ್ಕನ ವಾದ. ಅಮ್ಮನಿಗಿಂತ ಅಕ್ಕ ಹೆಚ್ಚು ವಿಚಾರವಾದಿಯಾಗಿದ್ದಳು.“ನಾನು ಕೂಡ ನೂರು ಹೇಳಿದರೆ ಒಂದೆರಡಾದರೂ ನಿಜವಾಗುತ್ತದೆ!” ಎನ್ನುತ್ತಿದ್ದಳು ಅಕ್ಕ. “ಆದರೆ ನೀನು ನರಸಣ್ಣನಲ್ಲವಲ್ಲ!” ಎಂದು ಅಮ್ಮ. ಒಮ್ಮೆ ನರಸಣ್ಣ “ಬೆಳ್ಳಿ ಹೋಗುತೈತೆ ಬಂಗಾರ ಬರುತೈತೆ!” ಎಂದು ಹೇಳಿ ಹೋಗಿದ್ದ. ಅದಾದ ಮೇಲೆ ಅಮ್ಮ ಮನೆಯಲ್ಲಿದ್ದ ಬೆಳ್ಳಿ ಸಾಧನಗಳನ್ನು ಯಾರಿಗೂ ತಿಳಿಯದ ಕಡೆ ಇರಿಸಿ ಭದ್ರಪಡಿಸಿದಳು. ಅಜ್ಜಿ ಅಂದಳು: “ಬೆಳ್ಳಿ ಹೋಗಿ ಬಂಗಾರ ಬಂದರೆ ಒಳ್ಳೇದೇ ಅಲ್ಲವೇ? ಬೆಳ್ಳಿ ಅಡಗಿಸಿಟ್ಟರೆ ಅದು ಹೋಗೋದು ಹೇಗೆ? ಬಂಗಾರ ಸಿಗೋದು ಹೇಗೆ?”– ಇದಕ್ಕೆ ಅಮ್ಮನಲ್ಲಿ ಉತ್ತರವಿರಲಿಲ್ಲ. ನಾನು ಮನಸ್ಸಿನಲ್ಲೇ, ನರಸಣ್ಣನ ಶಕುನ ನಿಜವಾಗಲಪ್ಪ ಎಂದು ದೇವರನ್ನು ಪ್ರಾರ್ಥಿಸುತ್ತಿದ್ದೆ. ಬೆಳ್ಳಿ ಮತ್ತು ಬಂಗಾರದ ಮೌಲ್ಯ ವ್ಯತ್ಯಾಸ ನನಗೆ ಗೊತ್ತಿದ್ದು ನಾನು ಹಾಗೆ ಪ್ರಾರ್ಥಿಸಿದ್ದಲ್ಲ. ಅದೇನೋ ಶಕುನ ಹೇಳುವಲ್ಲಿನ ಕುತೂಹಲದಿಂದ ಮಾತ್ರ; ನರಸಣ್ಣ ಸೋಲುವುದು ನನಗೆ ಬೇಕಿರಲಿಲ್ಲ.ಒಂದು ದಿನ ನಮ್ಮ ಮನೆಗೆಲಸದವಳು ಕೆಲಸಕ್ಕೆ ಬರಲಿಲ್ಲ; ಅವಳು ಇನ್ನು ಮುಂದೆ ಬರುವವಳಲ್ಲ ಎನ್ನುವುದು ಗೊತ್ತಾಯಿತು. ಯಾಕೆಂದರೆ ಅವಳ ಮದುವೆ ನಿಶ್ಚಯವಾಗಿತ್ತಂತೆ. ಸರಿ, ಹೊಸ ಕೆಲಸದವರನ್ನ ಹುಡುಕುವುದು ಅಗತ್ಯವಾಯಿತು. ಅದೇನೂ ನಮ್ಮ ಬೀದಿಯಲ್ಲಿ ಕಷ್ಟದ ಸಂಗತಿಯಾಗಿರಲಿಲ್ಲ.ಇನ್ನೊಬ್ಬಳು ಬಂದಳು. ಆ ವರ್ಷ ಅಕ್ಕ ಸ್ಕೂಲ್ ಫೈನಲಿನಲ್ಲಿ ಇಡೀ ಜಿಲ್ಲೆಗೆ ಫಸ್ಟ್ ಬಂದಳು. ಜಿಲ್ಲೆಗೆ ಫಸ್ಟ್ ಬಂದವರಿಗೆ ಚಿನ್ನದ ಪದಕ ಗ್ಯಾರಂಟಿಯಾಗಿತ್ತು! ನರಸಣ್ಣ ಹೇಳಿದ ಭವಿಷ್ಯ ಈ ರೀತಿ ಸತ್ಯವಾಯಿತೇ? ಈ ಬಗ್ಗೆ ಮನೆಯಲ್ಲಿ ಚರ್ಚೆ ನಡೆಯಿತು. ಇದು ಅರ್ಧ ಸತ್ಯ, ಇಡೀ ಸತ್ಯ ಮಾತ್ರವೇ ಸತ್ಯ ಎಂದಳು ಅಕ್ಕ. ಮನೆಯ ಹೆಚ್ಚಿನವರೂ ಅಕ್ಕನ ಪರ ವಹಿಸಿದರು. ಅಮ್ಮ ಒಂಟಿಯಾದಂತೆ ತೋರಿತು. ಅವಳು ಭದ್ರ ಪಡಿಸಿ ಇರಿಸಿದ್ದ ಬೆಳ್ಳಿಯ ಸಾಧನಗಳು ಹಾಗೇ ಇದ್ದವು! ಆಗ ಥಟ್ಟನೆ ಅಜ್ಜಿ ಅಂದಳು: “ಬೆಳ್ಳಿ! ಮದುವೆಯಾಗಲು ಮನೆ ಕೆಲಸ ಬಿಟ್ಟವಳ ಹೆಸರು ಬೆಳ್ಳಿಯೇ ಅಲ್ಲವೇ! ಬೆಳ್ಳಿ ಹೋಗತೈತೆ, ಬಂಗಾರ ಬರತೈತೆ! ಎಷ್ಟು ನಿಜವಾಯಿತಪ್ಪಾ ನರಸಣ್ಣನ ಶಕುನ!”. ಹೌದಲ್ಲ! ನಾವು ಬೆಳ್ಳಿ ಎಂದರೆ ಆಭರಣ ಅಂತ ತಿಳಿದುಕೊಂಡು ಮೋಸಹೋಗಿದ್ದೆವು. ಬೆಳ್ಳಿ ಎಂದರೆ ನಮ್ಮ ಮನೆ ಬಿಟ್ಟು ಹೋದ ಕೆಲಸದಾಕೆ! “ಶಕುನದ ಮಾತುಗಳನ್ನು ನಾವು ನೇರ ನೋಡಬಾರದು, ವಾರೆಯಾಗಿ ನೋಡಬೇಕು” ಎಂದು ಅಮ್ಮ ತಾನು ಗೆದ್ದುದಕ್ಕೆ ಬೀಗಿದಳು.ಕೆಲವು ದಿವಸ ನಾನು ಮನೆಯಲ್ಲಿನ ಶಂಖ ತೆಗೆದುಕೊಂಡು ನರಸಣ್ಣನ ಅಣಕದಾಟ ಅಡುತ್ತಿದ್ದೆ. ಏನೇನೋ ಮನಸ್ಸಿಗೆ ಬಂದ ಭವಿಷ್ಯ ಹೇಳುತ್ತಿದ್ದೆ. “ಹಾಗೆಲ್ಲ ಮಾಡಬಾರದು, ರಘು, ಅದು ತಪ್ಪು” ಎಂದು ಅಮ್ಮ ನನ್ನನ್ನು ಗದರಿಸುತ್ತಿದ್ದಳು.ಮುಂದೆ ನಾನು ಶಾಲೆಗೆ ಸೇರಿದ ಕಾರಣ ನರಸಣ್ಣನ ಭೇಟಿ ಅಪರೂಪವಾಯಿತು. ಬಹುಶಃ ಅವನು ನಾನಿಲ್ಲದಾಗ ಬರುತ್ತಿದ್ದ ಎಂದು ತೋರುತ್ತದೆ. ಅವನನ್ನು ನೋಡಲು, ಅವನ ಶಕುನವನ್ನು ಇನ್ನೊಮ್ಮೆ ಕೇಳಲು ಮನಸ್ಸು ಹಾತೊರೆಯುತ್ತಿತ್ತು. ನನ್ನ ನಿಜವಾದ ಆಸಕ್ತಿಯಿದ್ದುದು ಅವನ ಶಕುನವನ್ನು ಇನ್ನೊಮ್ಮೆ ಒರೆಗೆ ಹಚ್ಚಬೇಕೆನ್ನುವುದರಲ್ಲಿ. ಆದರೆ ಆ ಅವಕಾಶವೇ ನನಗೆ ಸಿಗುತ್ತಿರಲಿಲ್ಲ.ಒಮ್ಮೆ ಹೀಗಾಯಿತು. ನಮ್ಮೂರಲ್ಲಿ ಪ್ರತಿ ವರ್ಷ ಒಂದು ರಾಮ ಕೃಷ್ಣ ಉತ್ಸವ ನಡೆಯುತ್ತದೆ. ರಾಮ ಮತ್ತು ಕೃಷ್ಣರ ಮೂರ್ತಿಗಳನ್ನು ಇಬ್ಬಿಬ್ಬರು ಹೊತ್ತುಕೊಂಡು ತಿರುಗುವುದು ಇದರ ಒಂದು ವಿಶೇಷ. ಉಳಿದಂತೆ, ಜಾತ್ರೆ ಜನಜಂಗುಳಿ ಇದ್ದದ್ದೇ. ಊರ ಪರವೂರ ಜನ ಬರುತ್ತಿದ್ದರು. ಸಂತೆಯೇ ಹೆಚ್ಚಿನ ಆಕರ್ಷಣೆ. ಅಲ್ಲಿ ಸಿಗದ ವಸ್ತುಗಳೇ ಇಲ್ಲ. ಈ ಜಾತ್ರೆಗೆ ನಮ್ಮ ಮನೆಯಿಂದ ನಾವೆಲ್ಲ ಹೋಗುವುದಿತ್ತು. ಒಂದು ವರ್ಷದ ಜಾತ್ರೆಯಲ್ಲಿ ಒಂದು ಘಟನೆ ನಡೆಯಿತು. ರಾಮು ಎಂಬ ಹೆಸರಿನ ಒಬ್ಬ ಗಿಸೆಗಳ್ಳ ಇದ್ದ; ಅವನ ಸಹಾಯಕ ಕಿಟ್ಟು ಅಂತ. ಜಾತ್ರೆ ಎಂದರೆ ಅವರು ತಮ್ಮ ಕೈಚಳಕ ತೋರಿಸುವುದು ನಿಶ್ಚಿತ.ಅಂದು ರಾತ್ರೆ ರಾಮು ಒಬ್ಬರ ಜೇಬಿನಿಂದ ಸೆಲ್ ಫೋನ್ ಕದ್ದು ಕಿಟ್ಟುವಿಗೆ ಕೈದಾಟಿಸಿದ. ಕಿಟ್ಟು ಅದನ್ನು ಎತ್ತಿಕೊಂಡು ಅಲ್ಲಿಂದ ದೂರ ಒಂದು ನಿಗದಿತ ಸ್ಥಳಕ್ಕೆ ಹೋಗಿ ರಾಮುವಿಗೋಸ್ಕರ ಕಾಯಬೇಕಿತ್ತು. ಆದರೆ ಈ ಘಟನೆ ನಡೆಯುವಾಗ ಸುತ್ತು ಮುತ್ಲು ಮುಫ್ತಿಯಲ್ಲಿ ಪೋಲೀಸರಿದ್ದಾರೆ ಎನ್ನುವುದು ಕಿಟ್ಟುವಿಗೆ ಗೊತ್ತಾಗಿಹೋಯಿತು. ತನ್ನ ಕೈಲಿದ್ದ ಸೆಲ್ ಫೋನನ್ನು ಅಡಿಗಿಸುವುದು ಹೇಗೆ? ಗಾಬರಿಯಲ್ಲಿ ಕಿಟ್ಟು ಪಕ್ಕದಲ್ಲಿದ್ದ ವ್ಯಕ್ತಿಯೊಬ್ಬನ ಜೋಳಿಗೆಯಲ್ಲಿ ಅದನ್ನು ಹಾಕಿಬಿಟ್ಟು ಅಲ್ಲಿಂದ ದೂರ ನಿಂತ. ಈ ಜೋಳಿಗೆಯ ವ್ಯಕ್ತಿ ಬೇರಾರೂ ಅಗಿರಲಿಲ್ಲ. ನಮ್ಮ ನರಸಣ್ಣನೇ.ಆ ದಿನ ಅವನ ಮುಖ್ಯ ವಾಕ್ಯ “ಕಟ್ಟಿದ ಮನೆ ಮುರಿಯನು ರಾಮ, ಹುಟ್ಟಿದ ಮನೆ ಮರೆಯನು ಕೃಷ್ಣ!” ಎಂಬುದಾಗಿತ್ತು. ಅದರ ಜತೆಗೇ “ಶುಭವಾಗತೈತೆ ಶುಭವಾಗತೈತೆ! ನರಸಣ್ಣ ಹೇಳಿದ್ದು ನಿಜವಾಗತೈತೆ!” ಅಂತೂ ಇದ್ದೇ ಇತ್ತು. ಈ ಜಾತ್ರೆಯಲ್ಲಿ ಅವನ ಜೋಳಿಗೆ ಸಾಕಷ್ಟು ತುಂಬುತ್ತಿತ್ತು. ಈಗ ಈ ಸೆಲ್ ಫೋನ್ ತನ್ನ ಜೋಳಿಗೆಗೆ ಹಾಕಿದ್ದು ಅವನಿಗೆ ಗೊತ್ತಾಗಲಿಲ್ಲ. ಆದರೆ ಸೆಲ್ ಫೋನ್ ಕಳಕೊಂಡವರಿಗೆ ಯಾರೋ ಕಿಸೆಗಳ್ಳರು ತಮ್ಮ ಫೋನ್ ಎಗರಿಸಿದ್ದಾರೆ ಎನ್ನುವುದು ಗೊತ್ತಾಗಿ ಅವರು ಬೊಬ್ಬೆ ಹಾಕತೊಡಗಿದರು. ಒಡನೆಯೇ ಮುಫ್ತಿ ಪೋಲೀಸರು ಚುರುಕಾದರು. ಹತ್ತಿರ ಇದ್ದವರನ್ನು ತಡೆದು ನಿಲ್ಲಿಸಿದರು. ಬಹುಶಃ ಅವರು ನರಸಣ್ಣನ ಗೊಡವೆಗೆ ಹೋಗುತ್ತಿರಲಿಲ್ಲವೋ ಏನೋ. ಆದರೆ ಪೋಲೀಸರು ಸ್ವಂತ ಸೆಲ್‌ನಿಂದ ಈ ಕಳೆದುಹೋದ ಸೆಲ್‌ನ ನಂಬರಿಗೆ ಫೋನ್ ಮಾಡಿದಾಗ ನರಸಣ್ಣನ ಜೋಳಿಗೆಯಲ್ಲಿ ರಿಂಗ್ ಟೋನ್ ಮೂಡಿ ಬಂತು! ಪೋಲೀಸರು ಅವನ ಜೋಳಿಗೆಯನ್ನು ವಶಪಡಿಸಿಕೊಂಡು ಇನ್ನೇನು ನರಸಣ್ಣನ ವಿಚಾರಣೆ ಮಾಡಬೇಕು ಎನ್ನುವಷ್ಟರಲ್ಲಿ ಆತ ಅಲ್ಲಿಂದ ನಾಗಾಲೋಟ ಓಡಿ ಕತ್ತಲಲ್ಲಿ ಮಾಯವಾಗಿಬಿಟ್ಟ.ಜಾತ್ರೆ ನಡೆಯುವ ಜಾಗ ಜಗಜಗಿಸುತ್ತಿದ್ದರೂ ಅದರ ಸುತ್ತಲ ಬಯಲಲ್ಲಿ ಕಾರಿರುಳ ಕರಾಳ ಕತ್ತಲು ಮನೆಮಾಡಿತ್ತು. ನರಸಣ್ಣನಿಗೆ ಇದ್ದುದು ಒಂದೇ ಒಂದು ಗುರಿ: ಪೋಲೀಸರಿಂದ ತಪ್ಪಿಸಿಕೊಳ್ಳುವುದು. ಅವರಿಂದ ಇಂದು ತಪ್ಪಿಸಿಕೊಂಡರೂ, ತನ್ನನ್ನು ಅವರು ಒಂದಲ್ಲ ಒಂದು ದಿನ ಹಿಡಿದೇ ಹಿಡಿಯುತ್ತಾರೆ ಎನ್ನುವ ಬುದ್ಧಿ ಅವನಿಗೆ ಅದೇಕೆ ಬರಲಿಲ್ಲವೋ. ತಪ್ಪು ಮಾಡದವನ ಅದೇನೋ ಭರವಸೆ ಅವನಲ್ಲಿ ಇತ್ತು. ಆದರೇನು? ಓಡುತ್ತ ಓಡುತ್ತ ಒಂದು ಪಾಳು ಬಾವಿಯೊಳಕ್ಕೆ ಬಿದ್ದುಬಿಟ್ಟ!ಅವನು ಪೋಲೀಸರ ಕೈಗೆ ಸಿಕ್ಕಿದ್ದು ಮರುದಿವಸ. ಕಾಲು ಮುರಿದು ನರಳುತ್ತಿದ್ದ ನರಸಣ್ಣನನ್ನು ಮೇಲೆತ್ತುವುದೊಂದು ಹರಸಾಹಸವೇ ಆಯಿತು. ಅಂತೂ ಎತ್ತಿದರು. ಆಸ್ಪತ್ರೆಗೆ ಕರಕೊಂಡು ಹೋಗಿ ಚಿಕಿತ್ಸೆ ಕೊಡಿಸಿ ನಂತರ ವಿಚಾರಣೆ ನಡೆಸಿ ನರಸಣ್ಣನಿಗೆ ಎರಡು ತಿಂಗಳ ಕಠಿಣ ಶಿಕ್ಷೆ ವಿಧಿಸಿದರು. ತಾನು ಫೋನ್ ಕದ್ದಿಲ್ಲ ಎಂದು ಅವನು ಎಷ್ಟು ಹೇಳಿಕೊಂಡರೂ ಉಪಯೋಗವಾಗಲಿಲ್ಲ. ಯಾಕೆಂದರೆ ಅವನು ‘ರೆಡ್ ಹ್ಯಾಂಡೆಡ್’ ಆಗಿ ಸಿಕ್ಕಿಬಿದ್ದಿದ್ದ, ಮತ್ತು ಪೋಲೀಸರಿಂದ ತಪ್ಪಿಸಿಕೊಂಡು ಓಡಿಹೋಗಿದ್ದ. ಈ ಸೆಲ್ ಫೋನ್ ಘಟನೆಯ ಹಿನ್ನೆಲೆ ಕೆಲವು ಕಾಲದ ನಂತರವೇ ಇಡಿಯಾಗಿ ಬೆಳಕಿಗೆ ಬಂದದ್ದು.ಸ್ವತಃ ಇತರರ ಭವಿಷ್ಯ ನುಡಿಯುವ ನರಸಣ್ಣನಿಗೇ ತನ್ನ ಭವಿಷ್ಯ ಯಾಕೆ ತಿಳಿಯಲಿಲ್ಲ ಎಂದು ನಾವು ಅಮ್ಮನ ಜತೆ ವಾದಿಸತೊಡಗಿದೆವು. ಅದಕ್ಕೆ ಅಮ್ಮ ಹೇಳಿದ್ದು: “ನಿಮಗೆ ಬುದ್ಧಿಯಿಲ್ಲ. ನರಸಣ್ಣ ಸ್ವಂತ ಭವಿಷ್ಯದ ಕುರಿತು ಯೋಚಿಸಿರಲಿಲ್ಲ. ಯಾರಾದ್ರೂ ಡಾಕ್ಟರ್‌ಗೆ ರೋಗ ಬಂದರೆ ಅವರು ಸ್ವಯಂ ಚಿಕಿತ್ಸೆ ಮಾಡಿಕೊಳ್ಳುತ್ತಾರೆಯೇ? ಇನ್ನೊಬ್ಬ ಡಾಕ್ಟರರ ಸಲಹೆ ಕೇಳುತ್ತಾರೆ. ಹಾಗೇ ನರಸಣ್ಣ ಕೂಡ. ಇನ್ನು ಅವನು ಜಾತ್ರೆಯಲ್ಲಿ ಹೇಳುತ್ತಿದ್ದ ತತ್ವಪದ ನೋಡಿ– ಕಟ್ಟಿದ ಮನೆ ಮುರಿಯನು ರಾಮ, ಹುಟ್ಟಿದ ಮನೆ ಮರೆಯನು ಕೃಷ್ಣ! ಅಂದರೆ ಏನರ್ಥ? ರಾಮ ತಾನೇ ರಾಜನಾಗಬೇಕು ಎಂದು ಹಟ ಹಿಡಿದಿದ್ದರೆ ಅಯೋಧ್ಯಾ ರಾಜ್ಯ ಹರಿಹಂಚಾಗಿ ಹೋಗುತ್ತಿತ್ತು; ಅದೇ ರೀತಿ, ಕೃಷ್ಣ ಹುಟ್ಟಿದ್ದು ಸೆರೆಮನೆಯಲ್ಲಿ. ಅದನ್ನೂ ಮರೀಬಾರದು. ಪಾಪ ನರಸಣ್ಣ ತನ್ನದಲ್ಲದ ತಪ್ಪಿಗೆ ಹೇಗೆ ಜೇಲಿಗೆ ಹೋಗಬೇಕಾಯ್ತು ಅಲ್ಲವೇ?”.“ಅಮ್ಮಾ, ನೀನು ಹೇಳಿದ್ದು ಶಾಣೆತನದ ಮಾತು. ಆದರೆ ಇದೆಲ್ಲಾ ಒಂದಕ್ಕೆ ಒಂದು ಎಂಥಾ ಸಂಬಂಧ?” ಎಂದೆವು ನಾವು.

“ಸಂಬಂಧ ಇದೆ!” ಎಂದಳು ಅಮ್ಮ. “ಜೇಲಿಗೆ ಹೋದವರೆಲ್ಲ ತಪ್ಪಿತಸ್ಥರಲ್ಲ, ಹೊರಗಿರುವವರೆಲ್ಲ ಸಾಚಾನೂ ಅಲ್ಲ; ರಾಮು ಕಿಟ್ಟು ಅಂತ ದೇವ್ರ ಹೆಸರು ಇರಿಸಿಕೊಂಡು ಆ ದೇವ್ರ ಜಾತ್ರೆಯಲ್ಲೇ ಕಳ್ಳತನ ಮಾಡ್ತಾರೆ; ಅಮಾಯಕ ಒಳಗೆ, ಖದೀಮರು ಹೊರಗೆ. ಇದಕ್ಕೇನನ್ನುತ್ತೀಯೋ, ರಾಘವೇಂದ್ರ?”.

ನಾನು ಅವಾಕ್ಕಾದೆ! ಅಮ್ಮನ ತರ್ಕ ಕಂಡು. ಅಮ್ಮ ನನ್ನನ್ನು ಉದ್ದ ಹೆಸರಿನಿಂದ ಕರೆಯುವುದು ನಾನು ಶಾಲೆಗೆ ಹೋಗಲು ಸುರುಮಾಡಿದ ಮೇಲೆ ಕೆಲವೇ ಸಂದರ್ಭಗಳಲ್ಲಿ. ಇದು ಅಂಥದೊಂದು ಸಂದರ್ಭವಾಗಿತ್ತು.ಉಳಿದವರೆಲ್ಲ ಗೊಳ್ಳನೆ ನಗಾಡಿದರು. ಸ್ವಲ್ಪ ಹೆಚ್ಚೇ ಗೊಳ್ಳನೆ ಎಂದು ತೋರುತ್ತದೆ. ಅಮ್ಮನಿಗೆ ಸಿಟ್ಟು ಬಂದುದು ಸ್ಪಷ್ಟವಾಗಿತ್ತು. ಅಂದು ಸಂಜೆ ತಿಂಡಿ ಸಿಗಲಿಲ್ಲ!ಇತ್ತ ನರಸಣ್ಣನ ಕಾಲು ಗುಣವಾದರೂ ಡೊಂಕು ಹಾಗೇ ಉಳಿದಿದೆ. ಕುಂಟುತ್ತಲೇ ಅವನು ಮನೆ ಮನೆಗೆ ಬಂದು ಭೂಂ ಭೂಂ ಶಂಖ ಊದುವುದು, ಶಕುನ ಹೇಳುವುದು ಮಾಡುತ್ತಿದ್ದಾನೆ– ಒಂದು ಕರ್ತವ್ಯದ ಹಾಗೆ. ನಮಗೀಗ ಅವನನ್ನು ಕಂಡರೆ ಸ್ವಲ್ಪ ಹೆಚ್ಚೇ ಆದರ; ಅವನನ್ನು ಸ್ವಲ್ಪ ಹೆಚ್ಚು ಹೊತ್ತು ನಿಲ್ಲಿಸಿಕೊಂಡು ಮಾತಾಡಿಸುತ್ತೇವೆ. ಮತ್ತು ಅವನಿಗೆ ಸ್ವಲ್ಪ ಹೆಚ್ಚೇ ಹಣ ಕೊಡುತ್ತೇವೆ. ಅವನು ನುಡಿಯುತ್ತಿದ್ದ ಶಕುನವನ್ನು ನಾವು ನಂಬದಿದ್ದರೂ ಅದಕ್ಕೆ ಅರ್ಥ ಕಟ್ಟುವುದರಲ್ಲಿ ಹೆಚ್ಚೆಚ್ಚು ಪೈಪೋಟಿ ನಡೆಸುತ್ತೇವೆ.

ಪ್ರತಿಕ್ರಿಯಿಸಿ (+)