ಶನಿವಾರ, ಮೇ 15, 2021
24 °C

ಶೂಟಿಂಗ್ ಊಟದ ಪರಪಂಚ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಸ್ಪಾಟ್ ಲೈಟ್ ಹಿಡಿದಿದ್ದ ಹುಡುಗ ಚಡಪಡಿಸುತ್ತಿದ್ದ. ಸುಡುತ್ತಿದ್ದ ಲೈಟ್ ಜೊತೆಗೆ ಒಡಲು ಕೂಡ ಬಿಸಿಯಾಗಿತ್ತು. ನಿರ್ದೇಶಕ ಹೇಳಿದ ಕಡೆಗೆ ದೊಡ್ಡ ದೀಪ ತಿರುಗಿಸುತ್ತಿದ್ದರೂ ಗಮನ ಮಾತ್ರ ಸ್ಟುಡಿಯೋ ಅಂಚಿನ ಗೇಟ್ ಕಡೆಗೆ. ಶೂಟಿಂಗ್ ಸೆಟ್‌ನಲ್ಲಿದ್ದ ಹೆಚ್ಚಿನವರ ಚಿತ್ತ ಅತ್ತ ತಿರುಗಿತ್ತು. ಯಾರೋ ಆಪ್ತರು ಬರುವರೆನ್ನುವಂಥ ಕಾಯುವಿಕೆ ಅದು! ಸದ್ದು ಮಾಡುತ್ತಾ ವ್ಯಾನ್ ಬಂದೇಬಿಟ್ಟಿತು. ಆಗ ಸಪ್ಪಗಾಗಿದ್ದ ಮುಖಗಳೆಲ್ಲಾ ಅರಳಿದವು. ಯಾಕೆಂದರೆ, ಗೇಟ್‌ನೊಳಗೆ ಬಂದಿದ್ದು ಊಟದ ವ್ಯಾನ್.ಇಂಥ ನಿರೀಕ್ಷೆಯು ನಿತ್ಯ ಶೂಟಿಂಗ್ ಮಾಡುವ ಜನರಿಗೆ ಹೊಸತೇನಲ್ಲ. ಆದರೂ ಪ್ರತಿಯೊಂದು ದಿನವೂ ಆ ವ್ಯಾನ್ ಬರುವುದನ್ನು ಕಾಯುವುದೇ ಅವರಿಗೆ ವಿಶಿಷ್ಟ ಕ್ಷಣ. ತಟ್ಟೆಗೆ ಬಡಿಸಿಟ್ಟು ಊಟಕ್ಕೆ ಕರೆಯುವ ಅಮ್ಮನನ್ನು ನೋಡಿದಂಥ ಸಂತಸಕ್ಕದು ಸಮ. ವ್ಯಾನ್‌ನಿಂದ ಇಳಿಸಿಡುವ ಕ್ಯಾರಿಯರ್ ಹಾಗೂ ತಟ್ಟೆಗಳ ಸದ್ದು ಕೇಳುವುದೇ ಶೂಟಿಂಗ್ ಸೆಟ್‌ನಲ್ಲಿ ಬೆವರು ಸುರಿಸುವವರಿಗೆ ಹಿಗ್ಗು. ನಿರ್ದೇಶಕ `ಬ್ರೇಕ್~ ಎಂದು ಹೇಳುವುದೇ ತಡ, ತಾಳ ತಟ್ಟುತ್ತಿದ್ದ ಹೊಟ್ಟೆಗೂ ಸಮಾಧಾನ.ಅರ್ಧ ವೃತ್ತಾಕಾರದಲ್ಲಿ ಕುಳಿತು `ಶೂಟಿಂಗ್ ಊಟ~ ಸವಿಯುವಾಗ ಹತ್ತಾರು ವಿಷಯಗಳು ಮಾತುಗಳ ರೆಕ್ಕೆ ಕಟ್ಟಿಕೊಂಡು ಹಾರಾಡುತ್ತವೆ. ನಿತ್ಯ ಸಿನಿಮಾ ಹಾಗೂ ಧಾರಾವಾಹಿ ಸೆಟ್‌ಗಳಲ್ಲಿ ನಡೆಯುವ ಈ ಭೋಜನ ಕೂಟದ ನಡುವೆ ಸ್ನೇಹದ ಕೊಂಡಿಯೂ ಬಲವಾಗುತ್ತದೆ. ಒಂದೊಂದು ವಿಭಾಗದಲ್ಲಿ ಕೆಲಸ ಮಾಡುವವರು ಒಂದಾಗಿ ಕುಳಿತುಕೊಂಡು ಊಟ ಮಾಡುತ್ತಾರೆ. ಆದರೆ ಪ್ರಮುಖ ಪಾತ್ರಧಾರಿಗಳು ಹಾಗೂ ನಿರ್ಮಾಣ ವಿಭಾಗದಲ್ಲಿ ಉನ್ನತ ಸ್ಥಾನದಲ್ಲಿ ಇರುವವರದ್ದು ಬೇರೆ ವೃತ್ತ. ಔಟ್‌ಡೋರ್ ಶೂಟಿಂಗ್‌ನಲ್ಲಿ ಅನೇಕ ಬಾರಿ ಈ ಎರಡೂ ವರ್ಗದವರಿಗೆ ಒಂದೇ ಊಟದ ಮೆನೂ.ಒಟ್ಟಿನಲ್ಲಿ ತಿಂಡಿ-ಊಟ ಯಾವುದೇ ಇರಲಿ; ಶೂಟಿಂಗ್ ನಡೆಯುವ ಸ್ಥಳಕ್ಕೆ ಅದನ್ನು ಸರಬರಾಜು ಮಾಡುವವರಿಗೆ ಕೈತುಂಬಾ ಕೆಲಸ. ಶೂಟಿಂಗ್ ಸ್ಪಾಟ್‌ಗಳಿಗೆ ಊಟೋಪಚಾರದ ಸೇವೆ ನೀಡುವುದೇ ಒಂದು ದೊಡ್ಡ ಉದ್ಯಮವಾಗಿ ಬೆಳೆದಿದೆ.ಮೊದಲು ಸಿನಿಮಾಗಳನ್ನು ಮಾತ್ರ ನೆಚ್ಚಿಕೊಂಡು ಕೇಟರಿಂಗ್ ಉದ್ಯಮ ನಡೆಸುತ್ತಿದ್ದವರ ಸ್ಥಿತಿ ಈಗ ಬದಲಾಗಿದೆ. ಚಾನೆಲ್‌ಗಳು ಹೆಚ್ಚಾಗಿ ಮೆಗಾ ಧಾರಾವಾಹಿಗಳನ್ನು ಪ್ರಸಾರ ಮಾಡುತ್ತಿವೆ. ಹಾಗಾಗಿ ಚಿತ್ರೀಕರಣವೂ ನಿರಂತರ. ಆದ್ದರಿಂದ ಅಡುಗೆ ಮಾಡುವವರಿಂದ ಹಿಡಿದು ಊಟ ಬಡಿಸುವ ಹುಡುಗರವರೆಗೆ ಸಾಕಷ್ಟು ಕೆಲಸ, ಸಾವಿರಾರು ಮಂದಿಗೆ ಉದ್ಯೋಗಾವಕಾಶ.ಇತ್ತೀಚೆಗಂತೂ ಸಿನಿಮಾ ಹಾಗೂ ಟೆಲಿವಿಷನ್ ಚಿತ್ರೀಕರಣ ತಾಣಗಳಿಗೆ ಊಟ ಪೂರೈಸುವ ಪರಿಣತರ ದಂಡೇ ಹುಟ್ಟಿಕೊಂಡಿದೆ. ಸರಿಯಾದ ಸಮಯಕ್ಕೆ ಎಷ್ಟೇ ದೂರದ ಸ್ಥಳಕ್ಕೆ ಸಿದ್ಧವಾದ ಆಹಾರವನ್ನು ಸಾಗಿಸಲು ಅಗತ್ಯವಾದ ದೊಡ್ಡ ದೊಡ್ಡ ಕ್ಯಾರಿಯರ್‌ಗಳು ಹಾಗೂ ಹಾಟ್‌ಬಾಕ್ಸ್‌ಗಳು ಇವರಲ್ಲಿ ಲಭ್ಯ. ಶೂಟಿಂಗ್ ಸೆಟ್‌ಗಳಲ್ಲಿ ಸಾಮಾನ್ಯವಾಗಿ ಅಡುಗೆ ಮಾಡುವುದಕ್ಕೆ ಸ್ಥಳಾವಕಾಶ ಇರುವುದು ಕಡಿಮೆ. ಆದ್ದರಿಂದ ಬೇರೆಲ್ಲೋ ಸಿದ್ಧಪಡಿಸಿಕೊಂಡು ಕ್ಯಾರಿಯರ್‌ಗಳಲ್ಲಿ ಸಾಗಿಸಲಾಗುತ್ತದೆ.ಮುಖ್ಯವಾಗಿ ಸರಿಯಾದ ಸಮಯಕ್ಕೆ ತಿಂಡಿ ಹಾಗೂ ಊಟ ತಲುಪಬೇಕು. ಬ್ರೇಕ್ ಸಮಯದಲ್ಲಿ ವ್ಯತ್ಯಾಸ ಆದರೆ ನಂತರದ ಶೆಡ್ಯೂಲ್ ಎಲ್ಲಾ ಏರುಪೇರಾಗುತ್ತದೆ. ಆದ್ದರಿಂದ ಸಮಯಪ್ರಜ್ಞೆಯಿಂದ ಕ್ಯಾರಿಯರ್‌ಗಳನ್ನು ತಲುಪಿಸುವವರು ಹೆಚ್ಚು ಹೆಚ್ಚು ಆರ್ಡರ್‌ಗಳನ್ನು ಪಡೆಯುತ್ತಾ ಸಾಗಿದ್ದಾರೆ. ಜೊತೆಗೆ ಗುಣಮಟ್ಟವೂ ಇರಬೇಕು. ಆದರೆ ಎಲ್ಲರೂ ಈ ಬಗ್ಗೆ ಕಾಳಜಿ ವಹಿಸುತ್ತಾರೆಂದು ಹೇಳಲಾಗದು. ಅದಕ್ಕೆ ನಿರ್ಮಾಪಕರು ಹಾಗೂ ಪ್ರೊಡಕ್ಷನ್ ಉಸ್ತುವಾರಿ ನೋಡಿಕೊಳ್ಳುವವರು ಪ್ಲೇಟ್ ಲೆಕ್ಕದಲ್ಲಿ ನಿಗದಿ ಮಾಡುವ ಬೆಲೆಯೂ ಕಾರಣ.ಗಮನ ಸೆಳೆಯುವ ಅಂಶವೆಂದರೆ ಅನೇಕ ಸೀರಿಯಲ್ ಹಾಗೂ ಸಿನಿಮಾ ನಿರ್ಮಾಪಕರು ಕೇಟರಿಂಗ್ ಸರ್ವಿಸ್ ನೀಡುವವರಿಂದ ಹತ್ತು ವರ್ಷಗಳ ಹಿಂದಿನ ಬೆಲೆಗೇ ಊಟ ಸಿಗಬೇಕೆಂದು ಬಯಸುತ್ತಾರೆ. ಅದು ಕೂಡ ಗುಣಮಟ್ಟ ಕಡಿಮೆ ಆಗಲು ಕಾರಣ.ಶೂಟಿಂಗ್ ಸೆಟ್‌ಗಳಲ್ಲಿ ಬೆಳಿಗ್ಗೆ ತಿಂಡಿ ಹಾಗೂ ಮಧ್ಯಾಹ್ನ ಊಟ ಮತ್ತು ಸಂಜೆ ಕಾಫಿ ಜೊತೆಗೆ ಲಘು ಉಪಾಹಾರ ಇರುತ್ತದೆ. ವಾರಗಟ್ಟಲೆ ಒಂದೇ ಶೂಟಿಂಗ್ ಇದ್ದರೆ ಅಲ್ಲಿ ದಿನವೂ ಬೇರೆ ಬೇರೆ ತಿಂಡಿ ಕಳುಹಿಸುವ ಪ್ರಯತ್ನ ಕೇಟರಿಂಗ್ ಸರ್ವಿಸ್‌ನವರದ್ದು.ಚಿತ್ರಾನ್ನ, ಖಾರಾಭಾತ್, ಇಡ್ಲಿ-ವಡೆ ಇಷ್ಟು ಸಹಜವಾಗಿ ಸೆಟ್‌ಗಳಲ್ಲಿ ತಟ್ಟೆಗೆ ಬೀಳುವ ತಿನಿಸು. ಪ್ಲೇಟ್ ಊಟವು ಉಡುಪಿ ಹೋಟೆಲ್ ಸ್ಟೈಲ್‌ನಲ್ಲಿ ಇರುತ್ತದೆ. ನಿರ್ಮಾಪಕ ಸ್ವಲ್ಪ ಉದಾರಿ ಆಗಿದ್ದರೆ ಮಾತ್ರ ನಾರ್ತ್ ಇಂಡಿಯನ್ ಫುಡ್. ಆದರೆ ಕೆಲವು ನಿರ್ಮಾಪಕರಿಗೆ ಮುಖ್ಯ ಪಾತ್ರಗಳನ್ನು ನಿರ್ವಹಿಸುವವರ ಮೇಲೆ ಮಾತ್ರ ಕಾಳಜಿ ಹೆಚ್ಚು. ಆದ್ದರಿಂದ ಅವರಿಗಾಗಿಯೇ ವಿಶೇಷ ಕ್ಯಾರಿಯರ್ ತರಿಸುತ್ತಾರೆ. ಆಗ ಸೆಟ್‌ನಲ್ಲಿರುವ ಸಹ ಕಲಾವಿದರ ಗಮನವೆಲ್ಲ ಆ ಕ್ಯಾರಿಯರ್‌ನತ್ತ ಇದ್ದರೂ ತಮ್ಮ ತಟ್ಟೆಯಲ್ಲಿನ ಅನ್ನ ಹಾಗೂ ತಿಳಿಸಾರು ಜೊತೆಗೆ ನಂಜಿಕೊಳ್ಳಲು ಇರುವ ಹಿಡಿ ಪಲ್ಯ ತಿನ್ನುವುದೇ ಗತಿ.ಹೆಚ್ಚಿನ ಶೂಟಿಂಗ್ ಸೆಟ್‌ಗಳಲ್ಲಿ ಎಲ್ಲರೂ ಒಟ್ಟಿಗೇ ಕುಳಿತು ಊಟ ಮಾಡುತ್ತಾರೆ. ಆದ್ದರಿಂದ ಎಲ್ಲಿ ಸರ್ವ್ ಮಾಡಲಾಗುತ್ತದೋ ಅಲ್ಲಿಗೇ ಎಲ್ಲರೂ ಬರಬೇಕು. ಕೆಲವು ಸೆಟ್‌ಗಳು ಮಾತ್ರ ಇದಕ್ಕೆ ಅಪವಾದ. ಮುಖ್ಯ ಪಾತ್ರ ನಿರ್ವಹಿಸುವ ನಟ-ನಟಿ ಇದ್ದಲ್ಲಿಗೇ ಪ್ಲೇಟ್ ತೆಗೆದುಕೊಂಡು ಹೋಗಿ ಕೊಡುವಂಥ ವ್ಯವಸ್ಥೆ ಮಾಡಲು ಕೆಲವು ಪ್ರೊಡಕ್ಷನ್ ಮ್ಯಾನೇಜರ್‌ಗಳು ಉತ್ಸಾಹ ತೋರಿಸುತ್ತಾರೆ. ಊಟದ ವಿಷಯದಲ್ಲಿ ಇಂಥದೊಂದು ತಾರತಮ್ಯ ನಡೆದುಕೊಂಡು ಬಂದಿದ್ದು ಬಹಳ ಹಿಂದಿನಿಂದ. ಆದ್ದರಿಂದ ಕಿರಿಯ ಕಲಾವಿದರು ಹಾಗೂ ತಂತ್ರಜ್ಞರು ಈ ಕಹಿಯನ್ನು ಸಹಿಸಿಕೊಂಡು ಇದ್ದುಬಿಟ್ಟಿದ್ದಾರೆ. ಊಟದ ವಿಷಯದಲ್ಲಿ ತಾರತಮ್ಯ ಆಗಿದೆ ಎಂದು ಧ್ವನಿ ಎತ್ತಿ ಅವಕಾಶ ಕಳೆದುಕೊಂಡಿರುವವರೂ ಇದ್ದಾರೆ.ಆದ್ದರಿಂದ `ನಮ್ಮ ಪಾಲಿಗೆ ಬಂದದ್ದೇ ಇಷ್ಟು~ ಎಂದುಕೊಂಡು ಬೇಳೆಯೂ ಇಲ್ಲದ ಸಾಂಬಾರಿನ ಜೊತೆಗೆ ಅನ್ನ ಬೆರೆಸಿಕೊಂಡು ನುಂಗಿ ಕೈತೊಳೆಯುವ `ಸೌಜನ್ಯ~ವನ್ನು ಮೈಗೂಡಿಸಿಕೊಂಡಿದ್ದಾರೆ.

ಹೀಗೆಲ್ಲ ಆಗುವುದಕ್ಕೆ ಕೇಟರಿಂಗ್ ಸೇವೆ ಮಾಡುವವರು ಕಾರಣವಂತೂ ಅಲ್ಲ. ನಿರ್ಮಾಪಕ ಕೊಟ್ಟ ಬೆಲೆಗೆ ಊಟ ಕಟ್ಟಿ ತರುತ್ತಾರೆ ಇವರು. ಇನ್ನೊಂದು ಹಪ್ಪಳ ಹಾಕೆಂದು ಕೇಳಿದರೆ ಇಲ್ಲ ಎಂದು ಹೇಳುವಂತೆ ತಾಕೀತು ಮಾಡುವ ಪ್ರೊಡಕ್ಷನ್ ಮ್ಯಾನೇಜರ್‌ಗಳ ಒತ್ತಡವೂ ಇರುತ್ತದೆ. ಒಂದಿಷ್ಟು ಲಾಭ ಗಳಿಸಿ, ಜೀವನ ಕಟ್ಟಿಕೊಳ್ಳುವ ಆಸೆ ಹೊಂದಿರುವ ಊಟೋಪಚಾರದವರನ್ನು ಕಲಾವಿದರಾಗಲಿ, ತಂತ್ರಜ್ಞರಾಗಲಿ ದೂರುವುದಿಲ್ಲ. ಏಕೆಂದರೆ ಅವರಿಗೂ ಗೊತ್ತು ನಿರ್ಮಾಪಕರು ಕೈಬಿಗಿಹಿಡಿದು ಕೊಟ್ಟ ದುಡ್ಡಲ್ಲಿ ಬರುವ ಊಟದ ಗುಣಮಟ್ಟವೇ ಇಷ್ಟೆಂದು!ಊಟದ ಬಗ್ಗೆ ಏನು ಹೇಳುತ್ತಾರೆ?

ಕನ್ನಡದಲ್ಲಿನ ಸೀರಿಯಲ್ ಬಡ್ಜೆಟ್‌ನಲ್ಲಿ ಎಷ್ಟು ಸಾಧ್ಯವೋ ಅಷ್ಟು ಒಳ್ಳೆಯ ಊಟ ಕೊಡುವ ಪ್ರಯತ್ನ ನಮ್ಮದು. ನಾನು ಮುಂಬೈನಲ್ಲಿ ಸಾಕಷ್ಟು ಸಮಯ ಕೆಲಸ ಮಾಡಿದವನು. ಅಲ್ಲಿ ಸಸ್ಯಾಹಾರ ಹಾಗೂ ಮಾಂಸಾಹಾರ ಎರಡೂ ಬಗೆಯ ಊಟದ ವ್ಯವಸ್ಥೆ ಇರುತ್ತದೆ. ಆದರೆ ಇಲ್ಲಿ ಅಂಥ ಊಟ ಕೊಡುವ ಧನಬಲ ಬೇಕಲ್ಲ! ಒಂದು ವಿಷಯದಲ್ಲಿ ಇಲ್ಲಿನ ಒಳಿತೆಂದರೆ ಕಲಾವಿದರು ಹಾಗೂ ಪ್ರೊಡಕ್ಷನ್ ಹುಡುಗರ ನಡುವೆ ತಾರತಮ್ಯ ಮಾಡುವುದಿಲ್ಲ. ಆದರೆ ಮುಂಬೈನಲ್ಲಿ ಒಂದೇ ಶೂಟಿಂಗ್ ಸೆಟ್‌ಗೆ ಮೂರು ಬಗೆಯ ಊಟ ಬರುವುದನ್ನು ನಾನು ಕಣ್ಣಾರೆ ಕಂಡಿದ್ದೇನೆ.

 -ವಿಘ್ನೇಶ್ ರಾವ್, ನಿರ್ದೇಶಕ

ನಾನು ಸಾಕಷ್ಟು ಸೆಟ್‌ಗಳಲ್ಲಿ ಕೆಲಸ ಮಾಡಿದ್ದೇನೆ. ಆದರೆ ಸಿಹಿ ಕಹಿ ಚಂದ್ರು ಅವರ ನಿರ್ಮಾಣದ ಶೂಟಿಂಗ್‌ನಲ್ಲಿ ಪಾಲ್ಗೊಂಡಾಗ ತಿಂದ ಸವಿಯೂಟ ಮರೆಯಲು ಸಾಧ್ಯವೇ ಇಲ್ಲ. ಸ್ವತಃ ಚಂದ್ರು ಭೋಜನ ಪ್ರಿಯರು. ಅವರು ತಮಗೆ ಇಷ್ಟವಾಗುವ ಸವಿಯೂಟವನ್ನು ಕಲಾವಿದರಿಗೆ ಹಾಗೂ ತಂತ್ರಜ್ಞರಿಗೂ ಉಣಬಡಿಸಲು ವ್ಯವಸ್ಥೆ ಮಾಡುತ್ತಾರೆ. ಶೂಟಿಂಗ್ ಊಟದಲ್ಲಿ ತುಪ್ಪವನ್ನು ಕಂಡಿದ್ದೇ ನಾನು ಅವರ ಸೆಟ್‌ನಲ್ಲಿ.

 -ಸುದೇಶ್, ಕಿರುತೆರೆ ನಟ

ಶೂಟಿಂಗ್ ಊಟ ಎಂದರೆ ನನಗೆ ಇಷ್ಟವಾಗುವುದೇ ಇಲ್ಲ. ಗುಣಮಟ್ಟದ ಬಗ್ಗೆ ಕೇಳಲೇ ಬೇಡಿ! ಅನಿವಾರ್ಯ ಸ್ಥಿತಿ ಎಂದಾಗ ಮಾತ್ರ ಸೆಟ್‌ನಲ್ಲಿ ಊಟ ಮಾಡುತ್ತೇನೆ. ಸಾಮಾನ್ಯವಾಗಿ ಮನೆಯಿಂದಲೇ ಕ್ಯಾರಿಯರ್ ತೆಗೆದುಕೊಂಡು ಹೋಗುತ್ತೇನೆ. ಅಂದರೆ ನೀವೇ ಅರ್ಥ ಮಾಡಿಕೊಳ್ಳಿ ಎಷ್ಟು ಒಳ್ಳೆಯ ಊಟ ಶೂಟಿಂಗ್‌ನಲ್ಲಿ ಇರುತ್ತದೆ ಎಂದು!

 -ದೀಪಾ ಅಯ್ಯರ್, ಕಿರುತೆರೆ ನಟಿ

ಇತ್ತೀಚೆಗೆ ನಾವು ಶೂಟಿಂಗ್ ನಡೆಯುವ ಲೊಕೇಷನ್‌ಗೆ ಹತ್ತಿರ ಇರುವ ಒಳ್ಳೆಯ ಹೋಟೆಲ್‌ನಿಂದಲೇ ತಿಂಡಿ ಹಾಗೂ ಊಟವನ್ನು ತರಿಸುತ್ತೇವೆ. ಅದು ಒಂದು ರೀತಿಯಲ್ಲಿ ಒಳ್ಳೆಯದು. ಕೇಟರಿಂಗ್‌ನವರು ದೂರದಿಂದ ತರುವ ಹೊತ್ತಿಗೆ ತಣ್ಣಗಾಗಿರುವ ಊಟಕ್ಕಿಂತ ಅದು ಹೆಚ್ಚು ಫ್ರೆಶ್ ಆಗಿರುತ್ತದೆ.

 -ಪ್ರಶಾಂತ್, ಪ್ರೊಡಕ್ಷನ್ ಮ್ಯಾನೇಜರ್

ಊಟದ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿ ಧಾರಾವಾಹಿಯಲ್ಲಿ ಫೋಟೊಕ್ಕೆ ಮಾಲೆ ಹಾಕಿಸಿಕೊಂಡಿದ್ದೇನೆ. ಯಾರು ಸೆಟ್‌ನಲ್ಲಿ ತಿಂಡಿ ಹಾಗೂ ಊಟದ ಬಗ್ಗೆ ಆಕ್ಷೇಪ ವ್ಯಕ್ತಪಡಿಸುತ್ತಾರೋ ಅವರಿಗೆ ಇಂಥ ಗತಿ ಬರುವುದು ಅಚ್ಚರಿ ಏನೂ ಇಲ್ಲ.

 -ಶೋಭಾ, ಕಿರುತೆರೆ ನಟಿ

 

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.