ಶುಕ್ರವಾರ, ಜೂಲೈ 10, 2020
22 °C

ಶೂನ್ಯದಿಂದ ವಿಶ್ವ ಸಂಗೀತ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಶೂನ್ಯದಿಂದ ವಿಶ್ವ ಸಂಗೀತ

ಸಂಗೀತ ನಿಂತ ನೀರಲ್ಲ. ಅದು ಹೀಗೆಯೇ ಇರಬೇಕು ಎಂಬ ಸಂಪ್ರದಾಯವಾದಿಗಳ ಅಪಸ್ವರವನ್ನು ಸಂಗೀತ ಕ್ಷೇತ್ರದ ಪ್ರಯೋಗಶೀಲರು ಒಪ್ಪುವುದೂ ಇಲ್ಲ. ಆಧುನಿಕ ವಾದ್ಯ ಸಾಧನಗಳನ್ನು ಬಳಸಿ ಶಾಸ್ತ್ರೀಯ ಸಂಗೀತಕ್ಕೆ ಹೊಸ ಆಯಾಮವನ್ನು ನೀಡುವ ಪ್ರಯತ್ನ ನಡೆದೇ ಇದೆ. ಇಂತಹ ಪ್ರಯತ್ನದ ಫಲವಾಗಿ ಹುಟ್ಟಿಕೊಂಡ ಫ್ಯೂಶನ್‌ಗೆ ಈಗ ಸಾಂಪ್ರದಾಯಿಕ ಸಂಗೀತಗಾರರಿಂದಲೂ ಮನ್ನಣೆ ಸಿಗುತ್ತಿದೆ.ಜಾನಪದ, ಹಿಂದುಸ್ತಾನಿ, ಕರ್ನಾಟಕ, ಘಜಲ್ ಹೀಗೆ ನೂರಾರು ಪ್ರಕಾರಗಳು ಸಂಗೀತದಲ್ಲಿದ್ದರೂ, ಇವೆಲ್ಲವುಗಳ ಬೇರು ಒಂದೇ. ಇದು ಭಾರತೀಯ ಸಂಗೀತಕ್ಕೆ ಮಾತ್ರ ಸೀಮಿತವಲ್ಲ.

 

ಪಾಶ್ಚಾತ್ಯ ಸಂಗೀತದಲ್ಲಿನ ಅಭಿರುಚಿಯಲ್ಲಿ ಬೇರೆಯದೇ ಲಯ ಕಂಡರೂ ಅದರ ಆಳ ಹೊಕ್ಕಾಗ ಎಲ್ಲಾ ಬಗೆಯ ಸಂಗೀತಗಳಲ್ಲಿಯೂ ಸಾಮ್ಯತೆ ಇರುವುದು ತಿಳಿಯುತ್ತದೆ. ನಾವು ಕಂಡು ಕೇಳರಿಯದ ವಾದ್ಯಗಳು ಶಾಸ್ತ್ರೀಯ ಮತ್ತು ಸಿನಿಮಾ ಸಂಗೀತದ ಮೂಲಕ ನಿಧಾನವಾಗಿ ಪರಿಚಯವಾಗುತ್ತಿವೆ.ಇಂತಹ ಸ್ವರಮಾಧುರ್ಯದ ವೈವಿಧ್ಯಗಳು ಒಂದೇ ವೇದಿಕೆಯಲ್ಲಿ ಸಮ್ಮಿಲನಗೊಂಡರೆ... ಸಂಗೀತ ರಸಿಕರಿಗೆ ಇದಕ್ಕಿಂತ ಹೆಚ್ಚು ಇನ್ನೇನು ಬೇಕು? ನಿಜ. ಸಂಗೀತ ಲೋಕದ ಈ ಎಲ್ಲಾ ಪ್ರಾಕಾರಗಳ ಸಂಗಮ `ಶೂನ್ಯ~ ಕಾರ್ಯಕ್ರಮ ಉದ್ಯಾನನಗರಿಯಲ್ಲಿ ನಡೆಯಲಿದೆ.ಹಿಂದುಸ್ತಾನಿ, ಕರ್ನಾಟಕ ಶಾಸ್ತ್ರೀಯ ಸಂಗೀತ, ಜಾನಪದ, ಸೂಫಿ ಸಂಗೀತಗಳನ್ನು ಸಾಂಪ್ರದಾಯಿಕ ಮತ್ತು ಆಧುನಿಕ ಸಂಗೀತ ವಾದ್ಯಗಳ ಜೊತೆ ಜೊತೆಗೆ ಹಾಡುಗಾರಿಕೆ, ನೃತ್ಯಗಳ ಮೂಲಕ ಪ್ರದರ್ಶಿಸುವ ಅಪರೂಪದ ಪ್ರಯತ್ನ ಮಾಡಲಿದೆ ಕಲಾವಿದ ಅಶೋಕ್ ಕುಮಾರ್ ನೇತೃತ್ವದ `ಶೂನ್ಯ~ ತಂಡ.ನಗರದ ವಿವಿಧ ಕಾಲೇಜುಗಳಲ್ಲಿ ಅಧ್ಯಯನ ಮಾಡುತ್ತಿರುವ ಆಫ್ರಿಕಾದ ನಾಲ್ವರು ವಿದ್ಯಾರ್ಥಿಗಳು ತಮ್ಮ ದೇಶದ ಸಾಂಪ್ರದಾಯಿಕ ಬುಡಕಟ್ಟಿನ ತಂತಿ ವಾದ್ಯ `ಖೋರಾ~ವನ್ನು ಇವುಗಳೊಂದಿಗೆ ನುಡಿಸಲಿರುವುದು ಮತ್ತೊಂದು ವಿಶೇಷ.ರಂಗಭೂಮಿ ಕಲಾವಿದರಾಗಿ, ಸಂಗೀತ ನಿರ್ದೇಶಕರಾಗಿ ಹೆಸರು ಗಳಿಸಿದ ಅಶೋಕ್ ಕುಮಾರ್ ಅವರದ್ದು `ಶೂನ್ಯ~ದ ಮೂಲಕ ವಿವಿಧ ರೂಪಗಳಲ್ಲಿ ವಿಶ್ವದೆಲ್ಲೆಡೆ ಹಂಚಿ ಹೋಗಿರುವ ಸಂಗೀತದ ಬೇರುಗಳನ್ನು ಒಂದೆಡೆ ಸೇರಿಸಿ ಅದರ ಆಲಾಪದ ಲಾಲಿತ್ಯವನ್ನು ಸಂಗೀತ ಪ್ರಿಯರಿಗೆ ಉಣಬಡಿಸುವ ಕನಸು.ಇದಕ್ಕಾಗಿ ಸ್ವಿಟ್ಜರ್ಲೆಂಡ್, ಕೆನಡಾ, ಬೆಲ್ಜಿಯಂ, ನಾರ್ವೆ ಮುಂತಾದ ದೇಶಗಳಲ್ಲಿನ ಸಂಗೀತಗಾರರ ಜೊತೆಗೂಡಿ ನೀಡಿದ ಪ್ರದರ್ಶನಗಳ ಅನುಭವದ ಸಾರವನ್ನು ಈ ವಿಭಿನ್ನ ಪ್ರಯೋಗದ ಮೂಲಕ ಹಂಚುವ ಪ್ರಯತ್ನ ಮಾಡುತ್ತಿದ್ದಾರೆ.ಆರು ವರ್ಷಗಳಿಂದ `ಶೂನ್ಯ~ ತಂಡವನ್ನು ನಡೆಸಿಕೊಂಡು ಹೋಗುತ್ತಿರುವ ಅವರು ನೂರಾರು ಸಂಗೀತ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡಿದ್ದಾರೆ. ಆಫ್ರಿಕಾದ ಆದಿವಾಸಿಗಳ `ಜಂಬೆ~ ಎಂಬ ಚರ್ಮವಾದ್ಯವನ್ನು ಭಾರತಕ್ಕೆ ಪರಿಚಯಿಸಿದ ಕೀರ್ತಿ ಅವರದ್ದು.ಕಳೆದ 14 ವರ್ಷಗಳಿಂದ `ಜಂಬೆ~ಯನ್ನು ದೇಶ ವಿದೇಶಗಳಲ್ಲಿ ಶಾಸ್ತ್ರೀಯ ಮತ್ತು ಆಧುನಿಕ ಸಂಗೀತಗಳ ಜೊತೆ ಸಂಯೋಜನೆ ಮಾಡಿ ಪ್ರಯೋಗಿಸಿ ಯಶಸ್ವಿಯಾಗಿದ್ದಾರೆ. `ಭಾರತೀಯರಿಗೆ ಇತ್ತೀಚೆಗೆ ಪ್ರಚಲಿತಕ್ಕೆ ಬರುತ್ತಿರುವ ಕೆಲವು ಜನಪ್ರಿಯ ಸಂಗೀತ ವಾದ್ಯಗಳನ್ನು ಹೊರತುಪಡಿಸಿ, ಅನೇಕ ವಿದೇಶಿ ವಾದ್ಯಗಳ ಪರಿಚಯವಿಲ್ಲ. ಅದೇ ರೀತಿ ವಿದೇಶಿಯರಿಗೂ ನಮ್ಮ ಸಂಗೀತದ ಸೊಗಡಿನ ಬಗ್ಗೆ ತಿಳಿದಿಲ್ಲ.ಆದರೆ ಸಾಧ್ಯವಾದ ಸಂಗೀತ ಸಾಧನಗಳನ್ನು ಒಂದೇ ವೇದಿಕೆಯಲ್ಲಿ ತರುವ ಮೂಲಕ ಸಾಂಸ್ಕೃತಿಕ ವಿನಿಮಯ ಸಾಧಿಸಬಹುದು~ ಎನ್ನುತ್ತಾರೆ ಅಶೋಕ್ ಕುಮಾರ್.

`ಜಾನಪದ, ಶಾಸ್ತ್ರೀಯ, ಫ್ಯೂಶನ್, ಪಾಶ್ಚಿಮಾತ್ಯ ಹೀಗೆ ಸಂಗೀತವನ್ನು ವಿಂಗಡಿಸಿ ನೋಡುವ ಕ್ರಮ ಸರಿಯಲ್ಲ. ಸಂಗೀತಕ್ಕೆ ಜಾತಿ, ಭಾಷೆಗಳಿಗೆ ಇರುವಂತಹ ತಾರತಮ್ಯವಿಲ್ಲ.ಎಲ್ಲಾ ಬಗೆಯ ಸಂಗೀತಗಳೂ ಒಂದೇ. ಈ ವೈವಿಧ್ಯಗಳನ್ನು ಒಗ್ಗೂಡಿಸಿದರೆ `ವಿಶ್ವ ಸಂಗೀತ~ ಎಂಬ ಸುಂದರ ಕಲ್ಪನೆ ಮೂಡುತ್ತದೆ. ಇವೆಲ್ಲವನ್ನೂ ಒಂದೇ ಮನಸಿನಿಂದ ಅನುಭವಿಸಿದಾಗ ಮೂಡಿಸುವ ಭಾವನೆಯಲ್ಲಿ ಸಹ ವ್ಯತ್ಯಾಸವಿಲ್ಲ~ ಎಂದು ಅವರು ಹೇಳುತ್ತಾರೆ.ವಿಶ್ವ ಸಂಗೀತ

ಶೂನ್ಯ: ಶುಕ್ರವಾರ ಭಾರತೀಯ ಮತ್ತು ಪಾಶ್ಚಾತ್ಯ ಅಪರೂಪದ ಸಂಗೀತ ವಾದ್ಯಗಳ ಮಿಲನ `ವಿಶ್ವ ಸಂಗೀತ~. ಸ್ಥಳ: ವಸಂತನಗರದ ಅಲಯನ್ಸ್ ಫ್ರಾನ್ಸೆ. ಸಂಜೆ 7.30. ಟಿಕೆಟ್‌ಗಳಿಗೆ: ಚರ್ಚ್ ಸ್ಟ್ರೀಟ್ ಕೆ ಸಿ ದಾಸ್, www.indianstage.in   www.shoonya.co.in.

 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.