ಗುರುವಾರ , ಮೇ 19, 2022
21 °C

ಶೇಂಗಾ ಬಿತ್ತನೆಬೀಜ ಆಯಿಲ್‌ಮಿಲ್‌ಗೆ!

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಚಿತ್ರದುರ್ಗ: ಸಬ್ಸಿಡಿ ದರದಲ್ಲಿ ರೈತರಿಗೆ ನೀಡುವ ಶೇಂಗಾ ಬಿತ್ತನೆಬೀಜವನ್ನು ಆಯಿಲ್ ಮಿಲ್‌ಗಳಿಗೆ ಸಾಗಿಸಲಾಗುತ್ತಿದೆ ಎನ್ನುವ ಮಾಹಿತಿ ಲಭ್ಯವಾಗಿದ್ದು, ಈ ಬಗ್ಗೆ ನಿಗಾವಹಿಸಿ ಸೂಕ್ತಕ್ರಮ ಕೈಗೊಳ್ಳುವಂತೆ ಜಿಲ್ಲಾ ಪಂಚಾಯ್ತಿ ಅಧ್ಯಕ್ಷ ರವಿಕುಮಾರ್ ಕೃಷಿ ಇಲಾಖೆ ಅಧಿಕಾರಿಗಳಿಗೆ ಸೂಚನೆ ನೀಡಿದರು.ಮಂಗಳವಾರ ನಡೆದ ಕೆಡಿಪಿ ಸಭೆಯಲ್ಲಿ ಮಾತನಾಡಿದ ಅವರು, ಶೇಂಗಾ ಬಿತ್ತನೆಬೀಜದಲ್ಲಿ ಎಣ್ಣೆ ಅಂಶ ಹೆಚ್ಚಾಗಿರುವುದರಿಂದ ಬೇಡಿಕೆ ಹೆಚ್ಚಾಗಿದೆ. ಆದ್ದರಿಂದ ಬಿತ್ತನೆಬೀಜವನ್ನು ಆಯಿಲ್ ಮಿಲ್‌ಗಳಿಗೆ ಪೂರೈಸಲಾಗುತ್ತಿದೆ ಎಂದು ತಿಳಿಸಿದರು.ಇದೇ ರೀತಿ ಇತ್ತೀಚೆಗೆ ಕಡಬನಕಟ್ಟೆ ಗ್ರಾಮದಲ್ಲಿ ಕಳಪೆ ಬಿತ್ತನೆಬೀಜ ಪ್ರಕರಣ ವರದಿಯಾಗಿತ್ತು. ಸಂದೀಪ್ ಸೀಡ್ಸ್ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸಲು ಸೂಚಿಸಲಾಗಿತ್ತು. ಈ ಕಂಪೆನಿ ವಿರುದ್ಧ ಯಾವ ಕ್ರಮ ಕೈಗೊಳ್ಳಲಾಗಿದೆ ಎಂದು ರವಿಕುಮಾರ್ ಪ್ರಶ್ನಿಸಿದರು.ಸಿಇಒ ಜಯರಾಂ ಮಾತನಾಡಿ, ಕೃಷಿ ಇಲಾಖೆ ಕ್ರಿಯಾಶೀಲವಾಗಿ ಕಾರ್ಯ ನಿರ್ವಹಿಸಬೇಕು. ಸಬ್ಸಿಡಿ ಲಾಭ ದುರುಪಯೋಗಪಡಿಸಿಕೊಳ್ಳುವ ಪ್ರಕರಣ ನಡೆದಿರಬಹುದು. ಸಂದೀಪ ಕಂಪೆನಿಯ ಬಿತ್ತನೆಬೀಜದ ರೀತಿಯಲ್ಲಿ ಇತರೆ ಸ್ಥಳಗಳಲ್ಲಿ ಕಳಪೆ ಬೀಜಗಳು ಬಂದಿರಬಹುದು. ಈ ಬಗ್ಗೆ ಅಧಿಕಾರಿಗಳು ಪರಿಶೀಲನೆ ನಡೆಸಬೇಕು ಎಂದು ಸೂಚಿಸಿದರು.ಈ ಬಗ್ಗೆ ವಿವರ ನೀಡಿದ ಕೃಷಿ ಇಲಾಖೆ ಜಂಟಿ ನಿರ್ದೇಶಕ ಕೃಷ್ಣಮೂರ್ತಿ, ಒಂದು ಕೆ.ಜಿ. ಶೇಂಗಾ ಬಿತ್ತನೆ ಬೀಜಕ್ಕೆ ರೂ. 58 ನಿಗದಿಪಡಿಸಲಾಗಿದೆ. ಮಾರುಕಟ್ಟೆಯಲ್ಲಿ ಇನ್ನೂ ಕಡಿಮೆ ದರಕ್ಕೆ ದೊರೆಯುತ್ತಿದೆ. ಇತ್ತೀಚೆಗೆ ಬಿತ್ತನೆಬೀಜ ಆಂಧ್ರಪ್ರದೇಶದ ರಾಯದುರ್ಗಕ್ಕೆ ಪೂರೈಕೆಯಾಗುತ್ತಿರುವುದನ್ನು ಕೃಷಿ ಇಲಾಖೆ ಅಧಿಕಾರಿಗಳು ಪತ್ತೆ ಮಾಡಿದ್ದಾರೆ.

 

ಇಂತಹ ಪ್ರಕರಣಗಳನ್ನು ಪತ್ತೆ ಮಾಡಲು ಮೂರು ಜಾಗೃತ ದಳ ರಚಿಸಲಾಗಿದೆ. ಇನ್ನೂ ಕಡಬನಕಟ್ಟೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಂದೀಪ್ ಸೀಡ್ಸ್ ವಿರುದ್ಧ ದೂರು ದಾಖಲಾಗಿದ್ದು, ದಾವಣಗೆರೆಯ ಪ್ರಯೋಗಾಲಯಕ್ಕೆ ಬೀಜಗಳನ್ನು ಪರೀಕ್ಷೆಗೆ ಕಳುಹಿಸಲಾಗಿದೆ. ಇಡೀ ಜಿಲ್ಲೆಯಲ್ಲಿ ಆ ಕಂಪೆನಿಯ ಬೀಜಗಳ ಪೂರೈಕೆ ನಿಲ್ಲಿಸಲಾಗಿದೆ ಎಂದು ತಿಳಿಸಿದರು.ಬರದ ಮುನ್ಸೂಚನೆ

ಪ್ರಸಕ್ತ ಮುಂಗಾರು ಮಳೆಯು ಬಾರದೇ ಇರುವುದರಿಂದ ಜಿಲ್ಲೆಯಲ್ಲಿ ರೈತರು ಬಿತ್ತನೆ ಕೈಗೊಂಡಿಲ್ಲ. ಜಿಲ್ಲೆಯಲ್ಲಿ ಅಗತ್ಯವಾಗಿ ಬೇಕಾಗಿರುವ ಬಿತ್ತನೆಬೀಜ, ರಸಗೊಬ್ಬರ ದಾಸ್ತಾನು ವ್ಯವಸ್ಥೆ ಕೈಗೊಂಡು ರೈತರಿಗೆ ಪೂರೈಕೆಗೆ ಎಲ್ಲ ಸಿದ್ಧತೆ ಮಾಡಿಕೊಳ್ಳಬೇಕು. ಜಾನುವಾರುಗಳಿಗೆ ಮೇವಿನ ವ್ಯವಸ್ಥೆ, ಕುಡಿಯುವ ನೀರಿನ ಸಮಸ್ಯೆ ಉಂಟಾಗದಂತೆ ಕ್ರಮ ವಹಿಸುವುದು ಇತ್ಯಾದಿ ಪೂರ್ವಸಿದ್ಧತೆ ಕಾರ್ಯಗಳನ್ನು ಸಂಬಂಧಿಸಿದ ಅಧಿಕಾರಿಗಳು ಕೈಗೊಳ್ಳಬೇಕು ಎಂದು ಜಿಲ್ಲಾ ಪಂಚಾಯ್ತಿ ಅಧ್ಯಕ್ಷ ರವಿಕುಮಾರ್ ಸೂಚಿಸಿದರು.ಕೃಷಿ ಇಲಾಖೆಯ ಜಂಟಿ ನಿದೇರ್ಶಕ ಕೃಷ್ಣಮೂರ್ತಿ ಮಾತನಾಡಿ, ಜಿಲ್ಲೆಯಲ್ಲಿ 1.46 ಲಕ್ಷ ಹೆಕ್ಟೇರ್ ಪ್ರದೇಶದ ಪೈಕಿ 1320 ಹೆಕ್ಟೇರ್ ಪ್ರದೇಶದಲ್ಲಿ ಶೇಂಗಾ ಬಿತ್ತನೆಯಾಗಿದೆ. 67,500 ಕ್ವಿಂಟಲ್ ಬಿತ್ತನೆ ಬೀಜದ ಪೈಕಿ 11,489 ಕ್ವಿಂಟಲ್ ಬಿತ್ತನೆಬೀಜ ವಿತರಿಸಲಾಗಿದೆ.ಮಳೆಯ ಅಭಾವದಿಂದ ಉಳಿದ ಪ್ರದೇಶದಲ್ಲಿ ಬಿತ್ತನೆಯಾಗಿಲ್ಲ. 1 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಮೆಕ್ಕೆಜೋಳ ಬಿತ್ತನೆ ಗುರಿ ಹೊಂದಿದ್ದ, ಈ ತಿಂಗಳ ಅಂತ್ಯದವರೆಗೆ ಕಾಲಾವಕಾಶವಿದೆ. ಶೇಂಗಾ ಬಿತ್ತನೆಗೆ ಜುಲೈ 15ರವರೆಗೆ ಕಾಲಾವಕಾಶವಿದೆ ಎಂದು ಮಾಹಿತಿ ನೀಡಿದರು.ಜಿಲ್ಲೆಯಲ್ಲಿ 13,098 ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆ ಮಾಡಲಾಗಿದೆ. ಹಿರಿಯೂರು, ಚಳ್ಳಕೆರೆ, ಹೊಸದುರ್ಗ, ಮೊಳಕಾಲ್ಮುರು ತಾಲ್ಲೂಕುಗಳಲ್ಲಿ ಹೆಚ್ಚು ಬಿತ್ತನೆ ಮಾಡಲಾಗಿದೆ. ಮಳೆ ಇಲ್ಲದೆ ಹತ್ತಿ ಬಾಡುವ ಹಂತ ತಲುಪಿದೆ ಎಂದು ತಿಳಿಸಿದರು.ಜಿಲ್ಲೆಯಲ್ಲಿನ ಕೃಷಿ ಪರಿಸ್ಥಿತಿ ಬಗ್ಗೆ ವಿವರ ನೀಡಿದ ಕೃಷಿ ಇಲಾಖೆಯ ಹಿಂದಿನ ಜಂಟಿ ನಿರ್ದೇಶಕ ಹಾಗೂ ಜಲಾನಯನ ಇಲಾಖೆಯ ಜಂಟಿ ನಿರ್ದೇಶಕ ಡಾ.ರಾಮದಾಸ್, ಜನವರಿಯಿಂದ ಮೇ 16ರವರೆಗೆ ವಾಡಿಕೆಗಿಂತ ಹೆಚ್ಚು ಮಳೆಯಾಗಿದೆ.

 

ಆದರೆ, ನಂತರದ ದಿನಗಳಲ್ಲಿ ಮಳೆಯಾಗಿಲ್ಲ. ಹೊಸದುರ್ಗ, ಹೊಳಲ್ಕೆರೆಯಲ್ಲಿ ಬಿತ್ತನೆ ಮಾಡಿರುವ ಹೆಸರು, ಎಳ್ಳು, ಸೂರ್ಯಕಾಂತಿ ಬಿತ್ತನೆಯಾಗಿವೆ. ಆದರೆ, ಈಗ ಮಳೆ ಬಂದರೂ ಶೇ 5ರಷ್ಟು ಉತ್ಪನ್ನ ದೊರೆಯುವುದಿಲ್ಲ ಎಂದು ತಿಳಿಸಿದರು.ಜಿಲ್ಲೆಯಲ್ಲಿ 45 ಸಾವಿರ ಕ್ವಿಂಟಲ್ ಶೇಂಗಾ ಸೇರಿದಂತೆ ಒಟ್ಟು 83 ಸಾವಿರ ಕ್ವಿಂಟಲ್ ಬಿತ್ತನೆಬೀಜ ಸಂಗ್ರಹಿಸಲಾಗಿದೆ. ಜಿಲ್ಲೆಗೆ 65 ಸಾವಿರ ಮೆಟ್ರಿಕ್ ಟನ್ ರಸಗೊಬ್ಬರ ಬೇಡಿಕೆ ಇದ್ದು, 33 ಸಾವಿರ ಮೆಟ್ರಿಕ್ ಟನ್ ಸಂಗ್ರಹವಿದ್ದು, 12 ಸಾವಿರ ಮಾರಾಟವಾಗಿದೆ ಎಂದು ವಿವರಿಸಿದರು.ಕೇಂದ್ರ ಸ್ಥಾನದಲ್ಲಿರಲು ಅಧಿಕಾರಿಗಳಿಗೆ ಸೂಚನೆ


ರೈತ ಸಂಪರ್ಕ ಕೇಂದ್ರಗಳಲ್ಲಿ ಸಿಬ್ಬಂದಿ ಅನಗತ್ಯವಾಗಿ ಗೈರು ಹಾಜರಾಗಿರುವುದು ಬೆಳಕಿಗೆ ಬಂದಿದೆ. ಸಿಬ್ಬಂದಿ ಮತ್ತು ಅಧಿಕಾರಿಗಳು ಕೇಂದ್ರ ಸ್ಥಾನದಲ್ಲಿ ಇರುವುದಿಲ್ಲ ಎನ್ನುವ ದೂರುಗಳು ಸಾಮಾನ್ಯ. ಹೊಸದುರ್ಗದಲ್ಲಿ ಇಂಥ ಪ್ರಕರಣ ನಡೆದಿವೆ. ಸಿಬ್ಬಂದಿ ಮತ್ತು ಅಧಿಕಾರಿಗಳಿಗೆ ಎಚ್ಚರಿಕೆ ಮತ್ತು ಮಾರ್ಗದರ್ಶನ ನೀಡಿದ ನಂತರವೂ ಉದ್ದಟತನ ಪ್ರದರ್ಶಿಸಿದರೆ ಶಿಸ್ತು ಕ್ರಮ ಜರುಗಿಸಲಾಗುವುದು ಎಂದು ಸಿಇಒ ಎನ್. ಜಯರಾಂ ಕೃಷಿ ಇಲಾಖೆ ಅಧಿಕಾರಿಗೆ ಸೂಚಿಸಿದರು.ಅಧಿಕಾರಿಗಳು ಕಚೇರಿಯಲ್ಲಿರುವ ಸಮಯ ಮತ್ತು ಸಭೆ ಅಥವಾ ಪ್ರವಾಸದಲ್ಲಿರುವ ಸಮಯದ ಬಗ್ಗೆ ಕಚೇರಿ ಹೊರಗೆ ಫಲಕ ಹಾಕುವಂತೆ ಸೂಚಿಸಿದರು.ಜಿಲ್ಲಾ ಪಂಚಾಯ್ತಿ ಉಪಾಧ್ಯಕ್ಷೆ ಭಾರತಿ ಕಲ್ಲೇಶ್, ಸ್ಥಾಯಿ ಸಮಿತಿಯ ಅಧ್ಯಕ್ಷರಾದ ಅನಿತಾ, ರಂಗಸ್ವಾಮಿ, ಚಂದ್ರಪ್ಪ, ಯೋಜನಾಧಿಕಾರಿ ಚಂದ್ರಪ್ಪ ಹಾಜರಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.