ಭಾನುವಾರ, ಮೇ 22, 2022
21 °C

ಶೌಚಾಲಯ ಕಟ್ಟಿಸಿ ಸ್ವಚ್ಛತೆಗೆ ಆದ್ಯತೆ ನೀಡಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಶೌಚಾಲಯ ಕಟ್ಟಿಸಿ ಸ್ವಚ್ಛತೆಗೆ ಆದ್ಯತೆ ನೀಡಿ

ಗದಗ: ಮನೆಯಲ್ಲಿ ಶೌಚಾಲಯ ಕಟ್ಟಿಸಿ; ಇಲ್ಲದಿದ್ದರೆ ನನ್ನ ತವರು ಮನೆಗೆ ಹೋಗುತ್ತೇನೆ ಎಂದು ಮಹಿಳೆಯರು ತಮ್ಮ ಗಂಡನಿಗೆ ತಾಕೀತು ಮಾಡಬೇಕು ಹೀಗೆಂದವರು ಜಿಲ್ಲಾ ಪಂಚಾಯ್ತಿ ಸಿಇಓ ವೀರಣ್ಣ ತುರಮರಿ.ಜಿಲ್ಲಾ ಪಂಚಾಯ್ತಿ ಸಭಾಂಗಣದಲ್ಲಿ ಭಾನುವಾರ ಏರ್ಪಡಿಸಿದ್ದ ಸಂಪೂರ್ಣ ಸ್ವಚ್ಛತಾ ಆಂದೋಲನ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಶೌಚಾಲಯವನ್ನು ಕಟ್ಟಿಸಲೇ ಬೇಕು ಎಂದು ಗೃಹಿಣಿಯರು ತಮ್ಮ ಯಜಮಾನ(ಪತಿ)ರನ್ನು, ಮಕ್ಕಳು ತಮ್ಮ ಪೋಷಕರನ್ನು ಒತ್ತಾಯಿಸಬೇಕು.ಮನೆಯಲ್ಲಿ ಗೃಹಿಣಿಯರು ಹಠ ಹಿಡಿದು ಕುಳಿತರೇ ಯಾವುದೇ ಕೆಲಸವೂ ಆಗಿ ಬಿಡುತ್ತದೆ. ಆದ್ದರಿಂದ ತಾಯಂದಿರು ಈ ರೀತಿಯಾದ `ಅಸ್ತ್ರ~ ಉಪಯೋಗಿಸಿಕೊಂಡು ಶೌಚಾಲಯವನ್ನು ಕಟ್ಟಿಸಬೇಕು ಎಂದು ಸಲಹೆಯನ್ನು ನೀಡಿದರು.ಜಿಲ್ಲೆಯ ಎಲ್ಲ ಶಾಲೆಗಳಿಗೂ ತಾವು ಸೂಚನೆ ಕಳುಹಿಸಿದ್ದು, ಮನೆಯಲ್ಲಿ ಶೌಚಾಲಯ ಕಟ್ಟಿಸಬೇಕು. ಇಲ್ಲದಿದ್ದರೆ ಶಾಲೆಗೆ ಹೋಗುವುದಿಲ್ಲ ಎಂದು ಮಕ್ಕಳು ಪೋಷಕರ ಮೇಲೆ ಒತ್ತಡ ಹೇರಬೇಕು ಎಂದು ತಿಳಿಸಲಾಗಿದೆ. ಶೌಚಾಲಯಗಳು ಮಹಿಳೆಯರ ಆತ್ಮ ಗೌರವಕ್ಕಾಗಿ, ಅಶಕ್ತರ, ಗರ್ಭಿಣಿಯರ, ಬಾಣಂತಿಯರ, ಅಂಗವಿಕಲರ ಅನುಕೂಲಕ್ಕಾಗಿ, ಗ್ರಾಮದ ಎಲ್ಲರ ಆರೋಗ್ಯಕ್ಕೆ ಅವಶ್ಯಕತೆ ಇರುತ್ತದೆ ಎನ್ನುವ ವಿಚಾರಗಳನ್ನು ಶಾಲಾ ಮಕ್ಕಳು ತಮ್ಮ ಪೋಷಕರಿಗೆ ತಿಳಿಸಬೇಕು ಎಂದು ತುರಮರಿ ಹೇಳಿದರು.ಮನೆಯಲ್ಲಿ ಬೈಕ್, ಕಲರ್ ಟಿವಿ, ಒಬ್ಬರಿಗೊಂದರಂತೆ ಮೊಬೈಲ್‌ಫೋನ್ ಇರುತ್ತದೆ. ಇವುಗಳಿಗಾಗಿ ವರ್ಷಕ್ಕೆ ಸಾವಿರಾರು ರೂಪಾಯಿ ಖರ್ಚು ಮಾಡುತ್ತಾರೆ. ಆದರೆ ತಮ್ಮ ಗೌರವಕ್ಕೆ ಕುಂದು ಬರುತ್ತದೆ ಎನ್ನುವ ಅರಿವಿದ್ದರೂ ಶೌಚಕ್ಕಾಗಿ ಬಯಲ ಕಡೆಗೆ ಹೋಗುತ್ತಾರೆ.ಆದ್ದರಿಂದ ಇಂತಹ ದುಂದುಗಾರಿಕೆಗೆ ಹಣ ಖರ್ಚು ಮಾಡುವುದಕ್ಕಿಂತ ಮನೆಯಲ್ಲಿ ಶೌಚಾಲಯ ಕಟ್ಟಿಸಿಕೊಂಡು, ಮನೆಯ ಹೆಣ್ಣು ಮಕ್ಕಳ, ತಾಯಂದಿರ ಗೌರವ ಕಾಪಾಡುವ ಜವಾಬ್ದಾರಿ ಮನೆಯ ಯಜಮಾನರ ಮೇಲಿದೆ ಎಂದು ತಿಳಿಸಿದರು.ಜಿಲ್ಲಾ ಮಟ್ಟದ ಯಾವುದೇ ಇಲಾಖೆಯ ಅಧಿಕಾರಿಗಳು ಸಹ ಗ್ರಾಮೀಣ ಪ್ರದೇಶಗಳಿಗೆ ಭೇಟಿ ನೀಡಿದ ಸಮಯದಲ್ಲಿ ತಮ್ಮ ಇಲಾಖೆ ಕಾರ್ಯದೊಂದಿಗೆ ಜನರಿಗೆ ಶೌಚಾಲಯದ ಮಹತ್ವವನ್ನು ತಿಳಿಸುವಂತಹ ಕೆಲಸ ಮಾಡಬೇಕು ಎಂದರು.ಕಾರ್ಯಕ್ರಮವನ್ನು ಜಿಲ್ಲಾ ಪಂಚಾಯ್ತಿ ಅಧ್ಯಕ್ಷೆ ಚಂಬವ್ವ ಪಾಟೀಲ ಉದ್ಘಾಟಿಸಿದರು. ಉಪಾಧ್ಯಕ್ಷ ಬೀರಪ್ಪ ಬಂಡಿ, ಜಿಲ್ಲಾಧಿಕಾರಿ ಎಸ್.ಶಂಕರನಾರಾಯಣ, ಜಿಲ್ಲಾ ಪಂಚಾಯ್ತಿ ಸದಸ್ಯರಾದ ಎಂ.ಎಸ್.ದೊಡ್ಡಗೌಡರ, ಸುನೀತಾ ಹಳೇಪ್ಪನವರ ಹಾಜರಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.