ಬುಧವಾರ, ಮಾರ್ಚ್ 3, 2021
25 °C

ಶ್ರಮದಾನ: ಸ್ವಚ್ಛಗೊಂಡ ಐತಿಹಾಸಿಕ ಕೊಳ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಶ್ರಮದಾನ: ಸ್ವಚ್ಛಗೊಂಡ ಐತಿಹಾಸಿಕ ಕೊಳ

ಮಂಡ್ಯ: ಐತಿಹಾಸಿಕ ಮಹತ್ವ ಪಡೆದಿರುವ ಮದ್ದೂರು ತಾಲ್ಲೂಕಿನ ಅರೆ ತಿಪ್ಪೂರು ಗ್ರಾಮದಲ್ಲಿ ವಿವಿಧ ಕಾಲೇಜಿನ ವಿದ್ಯಾರ್ಥಿಗಳು, ಅಧಿಕಾರಿಗಳು ಹಾಗೂ ಗ್ರಾಮಸ್ಥರು ಶನಿವಾರ ಕನಕತೀರ್ಥ ಕೊಳವನ್ನು ಶ್ರಮದಾನ ಮಾಡುವ ಮೂಲಕ ಸ್ವಚ್ಛಗೊಳಿಸಿದರು.ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಅಮರನಾರಾಯಣ್‌ ಅವರು ‘ಗ್ರಾಮದಲ್ಲಿ ವಾಸ್ತವ್ಯ ಮಾಡಿ ವಾಸ್ತವ ನೋಡು’ ಕಾರ್ಯಕ್ರಮದಡಿ ಶುಕ್ರವಾರ ರಾತ್ರಿ ಗ್ರಾಮದಲ್ಲಿಯೇ ವಾಸ್ತವ್ಯ ಮಾಡಿದ್ದರು.ಪರಿಸರವನ್ನು ಉಳಿಸುವ ಕುರಿತು ಅಮರನಾರಾಯಣ್‌ ಅವರು ಗ್ರಾಮಸ್ಥರಿಗೆ ಪವರ್‌ ಪಾಯಿಂಟ್‌ ಮೂಲಕ ವಿವರಿಸಿದರು. ತಾವೂ ಪರಿಸರ ಬೆಳೆಸಲು ಮಾಡಿದ ಕಾರ್ಯಗಳನ್ನೂ ತಿಳಿಸಿದರು. ನಂತರ ಪಟ, ವೀರಗಾಸೆ ಮುಂತಾದ ಜನಪದ ಕಲಾ ತಂಡಗಳು ಪ್ರದರ್ಶನವನ್ನು ನೀಡಿದವು.ಗ್ರಾಮಸ್ಥರು ಕುಡಿಯಲು ಬಳಸುವ ಕನಕತೀರ್ಥ ಕೊಳದಲ್ಲಿ ಬಹಳಷ್ಟು ಮಣ್ಣು ಸೇರಿಕೊಂಡಿತ್ತು. ಅದನ್ನು ಸ್ವಚ್ಛಗೊಳಿಸಲು ಸ್ವಾಮಿ ವಿವೇಕಾನಂದ ಯುವಕರ ತಂಡ ನಿರ್ಧರಿಸಿತ್ತು. ಅದಕ್ಕೆ ಕಾರ್ಯದರ್ಶಿ ಅವರ ಗಮನಕ್ಕೆ ತಂದಾಗ ಅವರೂ ಮುಂದಾದರು.

ಮಂಡ್ಯದ ಪಿಇಎಸ್‌, ಮದ್ದೂರಿನ ಎಚ್‌ .ಕೆ. ವೀರಣ್ಣಗೌಡ ಹಾಗೂ ಸರ್ಕಾರಿ ಮಹಿಳಾ ಕಾಲೇಜಿನ ಎನ್‌ಎಸ್‌ ಎಸ್‌ ವಿದ್ಯಾರ್ಥಿಗಳು ಉತ್ಸಾಹದಿಂದ ಸ್ವಚ್ಛತಾ ಕಾರ್ಯದಲ್ಲಿ ಪಾಲ್ಗೊಂಡಿದ್ದರು.ಕೊಳದಲ್ಲಿ ಮಣ್ಣು, ಕಲ್ಲನ್ನು ಹೊರಕ್ಕೆ ತೆಗೆದು ಹಾಕಲಾಯಿತು. ಕೊಳವೆಬಾವಿಯಿಂದ ಕೊಳಕ್ಕೆ ಸಂಪರ್ಕ ಕೊಡಿಸಲಾಗಿತ್ತು. ಸ್ವಚ್ಛತೆಯ ನಂತರ ಭರ್ತಿ ಮಾಡಲು ಉದ್ದೇಶಿಸಲಾಗಿದೆ. ಜೈನಮುನಿಗಳ ವಿಗ್ರಹ, ಕೆತ್ತನೆ ಮಾಡಿದ ಕಲ್ಲುಗಳೂ ಪತ್ತೆಯಾದವು.ಅಮರನಾರಾಯಣ್‌ ಮಾತನಾಡಿ, ಐತಿಹಾಸಿಕ ಮಹತ್ವ ಪಡೆದಿರುವ ಇಂತಹ ಕೊಳವನ್ನು ಉಳಿಸುವುದು ಬಹುಮುಖ್ಯ ಕೆಲಸವಾಗಿದೆ. ಇಲ್ಲಿನ ಐತಿಹಾಸಿಕ ಮಹತ್ವವನ್ನು ಸಾರಬೇಕಾಗಿದೆ. ಜೊತೆಗೆ ಸಂರಕ್ಷಿಸುವ ಕೆಲಸವೂ ಆಗಬೇಕಿದೆ ಎಂದರು.ಜಿಲ್ಲಾಧಿಕಾರಿ ಬಿ.ಎನ್‌ . ಕೃಷ್ಣಯ್ಯ, ಜಿಲ್ಲಾ ಪಂಚಾಯ್ತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಪಿ.ಸಿ. ಜಯಣ್ಣ, ಉಪವಿಭಾಗಾಧಿಕಾರಿ ಶಾಂತಾ ಹುಲ್ಮನಿ, ಕ್ರೀಡಾ ಮತ್ತು ಯುವ ಸಬಲೀಕರಣ ಇಲಾಖೆಯ ಸಹಾಯಕ ನಿರ್ದೇಶಕಿ ಎಚ್‌ .ಪಿ. ಮಂಜುಳಾ ಸೇರಿದಂತೆ ನೂರಾರು ವಿದ್ಯಾರ್ಥಿಗಳು ಶ್ರಮದಾನದಲ್ಲಿ ಪಾಲ್ಗೊಂಡಿದ್ದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.