ಮಂಗಳವಾರ, ಜನವರಿ 28, 2020
17 °C

ಶ್ರಮ ಜೀವನದ ಅನಾವರಣವಾದ ಕೃಷಿ ವಸ್ತುಪ್ರದರ್ಶನ

ಪ್ರಜಾವಾಣಿ ವಾರ್ತೆ/ ರೇವಣ್ಣ ಮಾಕಳ Updated:

ಅಕ್ಷರ ಗಾತ್ರ : | |

ಮಂಗಳೂರು: ವಿಶಾಲವಾದ ಸಭೆಯ ಚಪ್ಪರ. ಅದರ ಮುಂಭಾಗ ಕಂಬಳ ಗದ್ದೆ. ಎರಡು ಬಾರು ಉಳುಮೆ ಮಾಡಿ ಗೊಬ್ಬರ ಹಾಕಿದ ಹೊಲ. ಬದುಗಳ ಸುತ್ತ ಬೆಳೆದಿರುವ ಬದನೆ ಗಿಡ. ಗದ್ದೆ ತೆವರಿಯ ಮೇಲೆ ಅಲ್ಲಲ್ಲಿ ಬಸಳೆ ಚಪ್ಪರಗಳು... ಮುಂದೆ ಬಂದಂತೆ ಕೃಷಿ ಪರಿಕರಗಳ ಮಳಿಗೆಗಳು. ಅದನ್ನು ಮೀರಿಸುವಂತೆ ತೋಟಗಾರಿಕಾ ಸಸ್ಯಗಳ, ತರಕಾರಿ ಬೆಳೆಗಳ, ಬಾಳೆ ಸಸಿಗಳ, ಫಲ ಪುಷ್ಪ ಸಸಿಗಳ ಮಾರಾಟ ಮಳಿಗೆಗಳು... ವಿಶ್ವ ಶಾಂತಿಗಾಗಿ ಸೊಂಡಿಲನ್ನು ಎತ್ತಿ ಪ್ರಾರ್ಥಿಸುವ ಚೆಂಗುಲಾಬಿಯ ಆನೆ... ಮುಂದೆ ಸಾಗಿದರೆ ಕೃಷಿ ಬದುಕಿನ ಸೊಗಡು ಬಿಂಬಿಸುವ ಕೃಷಿ ಗ್ರಾಮ, ಕಲಾ ಗ್ರಾಮ...ಇದು ಮೂಡುಬಿದಿರೆಯಲ್ಲಿ ಶುಕ್ರವಾರ ಆರಂಭವಾದ ರಾಜ್ಯಮಟ್ಟದ 34ನೇ ಕೃಷಿಮೇಳದ ಆ ಆವರಣದಲ್ಲಿ ಕಂಡು ಬಂದ ಕೃಷಿಯ ಬದುಕಿನ, ಬುದ್ಧಿಜೀವಿಗಳ ಸಮ್ಮೇಳನದ ಪಕ್ಕದಲ್ಲೇ ನಡೆಯುತ್ತಿರುವ ಶ್ರಮಜೀವಿಗಳ ಸಮ್ಮೇಳನದ ಹಸಿರ ನೋಟ.ಕೃಷಿ ಋಷಿಗಳ ಚಿಂತನೆಗಳ ಸಮಾಗಮ, ವಿನಿಮಯಕ್ಕೆ ವೇದಿಕೆ ನಿರ್ಮಿಸುವ ಕೃಷಿ ವಸ್ತು ಪ್ರದರ್ಶನದಲ್ಲಿ ರಾಜ್ಯದ ಎಲ್ಲ ಭಾಗಗಳ ಕೃಷಿ, ಪರಿಕರಗಳ ಚಿತ್ರಣದ ಅರಿವಿಗೆ ವೇದಿಕೆ ಸಿಕ್ಕಿದೆ. ಬೆಳಗಾವಿ ಜಿಲ್ಲೆಯ ಅಥಣಿ ತಾಲ್ಲೂಕಿನ ಗ್ರಾಮೀಣ ಕ್ರೀಡೆಯಲ್ಲಿ ಬಳಕೆಯಾಗುವ ಗುಂಡುಕಲ್ಲು, ಸಂಗ್ರಾಣಿ, ಮೂಟೆ ಕೃಷಿ ಆಸಕ್ತರನ್ನು ಸೆಳೆಯುತ್ತಿದೆ.ಹೂತೋಟಗಳನ್ನು ಹೇಗೆ ಬೆಳೆಸಬೇಕು, ಹೀಗೂ ಬೆಳೆಸಬಹುದು ಎಂದು ತೋರಿಸುವ ಫಲಪುಷ್ಪಗಳ ಸಸಿಗಳ ಮಳಿಗೆಗಳು ಮನ ಸೆಳೆಯುತ್ತಿದ್ದವು.ಬ್ರಹ್ಮಾವರದ ತೋಟಗಾರಿಕೆ ಇಲಾಖೆಯವರು ಸಿದ್ಧಪಡಿಸಿದ್ದ ಮಳಿಗೆಯಲ್ಲಿ ವಿವಿಧ ತಳಿಯ ಅಂಗಾಂಶ ಕೃಷಿಯ ಬಾಳೆಸಸಿಗಳು ರೈತರ ಗಮನ ಸೆಳೆದವು.ವಿವಿಧ ಜಿಲ್ಲೆಗಳ ಕೃಷಿ ಕೃಷಿ ಬದುಕಿನ ಅನಾವರಣಕ್ಕಾಗಿ ಪ್ರಾತ್ಯಕ್ಷಿಕೆಯೂ ನಡೆಯುತ್ತಿತ್ತು. ಕೈಮಗ್ಗ, ಕಂಬಳಿ ನೇಯ್ಗೆ ಮಳಿಗೆಗಳತ್ತ ಆಸಕ್ತರ ದೃಷ್ಟಿ ಹೆಚ್ಚು ಇತ್ತು. ಆಧುನಿಕ ಕೃಷಿ ಉಪಕರಣಗಳ ಮಳಿಗೆಗಳತ್ತ ಕೃಷಿ ಮನಗಳ ಚಿತ್ತವೂ ಹರಿಯುತ್ತಿತ್ತು.ಗ್ರಾಮೀಣ ಬದುಕಿನ ಚಿತ್ರಣದ ಪರಿಚಯಕ್ಕಾಗಿ ಕುಂಬಾರಿಕೆ, ಕಮ್ಮಾರಿಕೆ, ಬುಟ್ಟಿ ಹೆಣೆಯುವ ಪ್ರಾತ್ಯಕ್ಷಿಕೆಯೂ ನಡೆಯುತ್ತಿದೆ. ಒಟ್ಟಿನಲ್ಲಿ ರಾಜ್ಯದ ಕೃಷಿ ಬದುಕಿನ ಚಿತ್ರಣವನ್ನು 11.5 ಎಕರೆಯಲ್ಲಿ ಕಟ್ಟಿ ಕೊಡುವ ಪ್ರಯತ್ನ ನಡೆದಿದೆ. ಮೇಳದಲ್ಲಿ ಒಟ್ಟು 600 ಮಳಿಗೆಗಳು ಇವೆ.ವಿಶ್ವಶಾಂತಿಗೆ ಪ್ರಾರ್ಥಿಸಿದ ಚೆಂಗುಲಾಬಿಯ ಗಜವಸ್ತು ಪ್ರದರ್ಶದನ ವಿಶೇಷ ಆಕರ್ಷಣೆಯಾಗಿ ಮೈಸೂರಿನ ಉಮಾಶಂಕರ್‌ ನೇತೃತ್ವದ ತಂಡ ಸಿದ್ಧಪಡಿಸಿದ್ದ ಗುಲಾಬಿ ಹೂವಿನ ಎರಡು ಆನೆಗಳು ಆಕರ್ಷಣೆಯ ಕೇಂದ್ರವಾಗಿತ್ತು. ಡಚ್‌ ತಳಿಯ 2500 ಗುಲಾಬಿಗಳಿಂದ ರಚಿಸಿದ್ದ ಒಂದು ಆನೆ ಸೊಂಡಿಲನ್ನು ಎತ್ತಿ ವಿಶ್ವಶಾಂತಿಯನ್ನು ಕೋರುತ್ತಿತ್ತು. 8.5 ಅಡಿ ಎತ್ತರದ 11 ಅಡಿ ಅಗಲ ಇರುವ 3.5 ಅಡಿ ಅಗಲದ ಈ ಆನೆಯ ಪ್ರತಿಕೃತಿಯ ಪಕ್ಕದಲ್ಲಿರುವ 6 ಅಡಿ ಎತ್ತರ, 7.5 ಅಡಿ ಉದ್ದ 3 ಅಡಿ ಅಗಲದ ಸಣ್ಣ ಆನೆಯ ಮುಂಭಾಗವೂ ಸಾಕಷ್ಟು ಮಂದಿ ಛಾಯಾಚಿತ್ರ ತೆಗೆಸಿಕೊಳ್ಳುತ್ತಿದ್ದರು.ವೇದಿಕೆಯ ಬಲಭಾಗದಲ್ಲಿ ಅನಾನಸಿನ ಅರಮನೆ, ಮೆಕ್ಕೆಜೋಳದ ಮನೆ, ಭತ್ತದ ಮನೆ ವೇದಿಕೆಗೂ ಮೇಳಕ್ಕೂ ಕಳೆ ತುಂಬಿದೆ. ಎಡಭಾಗದಲ್ಲಿ ಬ್ಯಾಡಗಿನ ಮೆಣಸಿನ ಮನೆ ಅದರ ಪಕ್ಕದಲ್ಲೇ ನಾಗ ಮಂಡದಲ ವೇದಿಕೆಯಲ್ಲಿ ನಾಗ ಪಾತ್ರಿಯ ಪ್ರತಿಕೃತಿ, ಸಮೀಪದಲ್ಲಿ ಅಡಿಕೆ, ಸಿಯಾಳದಿಂದ ರಚಿಸಿದ ರಥ ಮೆರುಗು ನೀಡುತ್ತಿದೆ.ರೈತ ಮನೆ, ಆತನ ಪರಿಸರದಲ್ಲಿ ಇರಬೇಕಾದ ಹೊಲ–ಗದ್ದೆ, ತೋಟ, ದನಗಳ ಹಟ್ಟಿ, ಆಲೆಮನೆ, ಗಾಣದ ಮನೆ ಎಲ್ಲವೂ ಹಳ್ಳಿಯ ಸೊಬಗನ್ನು ಪೇಟೆಯ ಮಂದಿಗೆ ನೆನಪಿಸುತ್ತಿವೆ.

ಪ್ರತಿಕ್ರಿಯಿಸಿ (+)