ಸೋಮವಾರ, ಮೇ 17, 2021
31 °C

ಬರಗೂರು ರಾಮಚಂದ್ರಪ್ಪ ಬರಹ: ಶ್ರೀಗಂಧದ ಮರ ರಾಜಕುಮಾರ್

ಬರಗೂರು ರಾಮಚಂದ್ರಪ್ಪ Updated:

ಅಕ್ಷರ ಗಾತ್ರ : | |

ವರನಟ ರಾಜಕುಮಾರ್ ಕಲೆಯ ಜೊತೆಗೆ ಕನ್ನಡದ ಜನತೆಗೂ ಬದ್ಧರಾಗಿ ಬದುಕಿದವರು. ಅವರ ಸಿನಿಮಾಗಳು ಸಾಂಸ್ಕೃತಿಕ - ಸಾಮಾಜಿಕ ವಿವೇಕದ ರೂಪಕಗಳು. ಸಿನಿಮಾದಾಚೆಗೂ ರಾಜ್ ಅವರ ಸಾಮಾಜಿಕ ಕಾಳಜಿಯ ಚಟುವಟಿಕೆಗಳು ಸದ್ದಿಲ್ಲದೆ ನಡೆದವು.

ರಷ್ಯಾದ ಲೇಖಕ ಪ್ಲಖನೋವ್ ಒಂದು ಕಡೆ ಹೀಗೆ ಹೇಳಿದ್ದಾರೆ: `ಕಲಾಕಾರರು ಜನರಿಂದ ಮನ್ನಣೆಯನ್ನು ಬಯಸುತ್ತಾರೆ. ಜನರು ಕಲಾಕಾರರಿಂದ ಜವಾಬ್ದಾರಿಯನ್ನು ಬಯಸುತ್ತಾರೆ~. ನಿಜ; ಯಾವುದೇ ಕಲಾಕಾರರು- ಸಾಹಿತಿ, ಕಲಾವಿದ ಯಾರೇ ಆಗಿರಲಿ- ಜನರಿಗೆ ಜವಾಬ್ದಾರರಾಗಬೇಕು.

ಆಗ ಅವರಲ್ಲಿ ಸದಭಿರುಚಿ ಮತ್ತು ಸಮಕಾಲೀನ ಸಾಮಾಜಿಕ ನೆಲೆಗಳು ಜಾಗೃತವಾಗಿರುತ್ತವೆ. ಕೆಲವರಲ್ಲಿ ಸೈದ್ಧಾಂತಿಕತೆಯ ರೂಪದಲ್ಲಿ, ಮತ್ತೆ ಕೆಲವರಲ್ಲಿ ನೈತಿಕತೆಯ ರೂಪದಲ್ಲಿ ಈ ಅಂಶಗಳು ಅನಾವರಣಗೊಳ್ಳುತ್ತವೆ. ತಾವು ನಂಬಿದ ನೈತಿಕತೆಯನ್ನೇ ಸೈದ್ಧಾಂತಿಕತೆಯೆಂದು ಭಾವಿಸಿ ಜನರಿಗೆ ಜವಾಬ್ದಾರರಾಗಿ ಬದುಕಿದ ಕಲಾವಿದ- ಡಾ. ರಾಜಕುಮಾರ್.

ಕುವೆಂಪು ನಿಸರ್ಗದಲ್ಲಿ ದೇವರನ್ನು ಕಂಡರು. ರಾಜಕುಮಾರ್ ಅಭಿಮಾನಿ ಜನರಲ್ಲಿ ದೇವರನ್ನು ಕಂಡರು. `ಅಭಿಮಾನಿ ದೇವರುಗಳೇ~ ಎಂದು ಜನರನ್ನು ಸಂಬೋಧಿಸುತ್ತಲೇ ಅದನ್ನು ಸತ್ಯವಾಗಿಸಿದರು.
 
ತಾವು ಯಾರನ್ನು `ದೇವರು~ ಎಂದು ಭಾವಿಸಿದರೊ ಆ ದೇವರುಗಳಿಗೆ ಅನ್ಯಾಯ ಮಾಡಬಾರದೆಂಬ ನೈತಿಕ ಪ್ರಜ್ಞೆಯಿಂದ ಸದಭಿರುಚಿಯ ಸಂರಕ್ಷಕರಾದರು. ನಿಜ; ಅವರ ಸದಭಿರುಚಿಯ ಕಲ್ಪನೆಯಲ್ಲಿ ಸಾಂಪ್ರದಾಯಿಕತೆಯೂ ಇತ್ತು; ಆಧುನಿಕತೆಯೂ ಇತ್ತು, ತಾವೇ ಹಾಕಿಕೊಂಡ ಲಕ್ಷ್ಮಣರೇಖೆ ಸದಾ ಎಚ್ಚರಿಸುತ್ತಲೇ ಇತ್ತು.

ಚಲನಚಿತ್ರ ರಂಗದಲ್ಲಿ ತಾರಾಮೌಲ್ಯ ಗಳಿಸಿದ ಮೇಲೆ, ಕತೆಯ ಆಯ್ಕೆಯ `ಅಧಿಕಾರ~ ತಾನಾಗಿಯೇ ಕಲಾವಿದರ ಕೈಗೆ ಬಂದು ಬಿಡುತ್ತದೆ! ತಮಗೆ ಇಷ್ಟವಾದ ಕಥಾವಸ್ತುವುಳ್ಳ ಚಿತ್ರಗಳಿಗೆ ಮಾತ್ರ ಅವರು ಸಹಿ ಮಾಡುತ್ತಾರೆ. ತಾರಾಮೌಲ್ಯದ ಕಾರಣದಿಂದ ನಷ್ಟವಾಗುವುದಿಲ್ಲವೆಂದು ನಂಬಿದ ನಿರ್ಮಾಪಕ-ನಿರ್ದೇಶಕರು ನಟರ ಇಷ್ಟಾನಿಷ್ಟಗಳಿಗೆ ಒಪ್ಪಿಬಿಡುತ್ತಾರೆ.

ರಾಜಕುಮಾರ್ ಅವರು ತಮಗೆ ಒದಗಿಬಂದ `ಆಯ್ಕೆಯ ಅಧಿಕಾರ~ವನ್ನು ಅನೈತಿಕಗೊಳಿಸಲಿಲ್ಲ ಎಂಬುದು ಬಹುದೊಡ್ಡ ಹೆಗ್ಗಳಿಕೆ. ತಾವು ಅಭಿನಯಿಸಿದ ಚಿತ್ರಗಳು ಜನರಿಗೆ ತಪ್ಪು ಸಂದೇಶ ನೀಡಬಾರದೆಂಬ ನೈತಿಕ ಪ್ರಜ್ಞೆಯು ಅವರ ಆಯ್ಕೆಯ ಅಧಿಕಾರವನ್ನು ಅಂತಃಕರಣವಾಗಿಸಿತ್ತು.
 
ಸಿದ್ಧ ಸಾಮಾಜಿಕ ಮೌಲ್ಯಗಳು ಮತ್ತು ಮನುಷ್ಯ ಸಂಬಂಧಗಳನ್ನು ಮಾದರಿಯಾಗಿ ಸ್ವೀಕರಿಸುತ್ತಲೇ ಚಲನಶೀಲತೆಯನ್ನು ಕಾಯ್ದುಕೊಂಡ ಮನಸ್ಸು ಅವರದಾಗಿತ್ತು. ಹೀಗಾಗಿ ರಾಜಕುಮಾರ್ ಚಿತ್ರಗಳು ಸದಭಿರುಚಿಯ ಸಾಮಾಜಿಕ ರೂಪಕಗಳಾದವು. ಇದು ಕಲಾವಿದರಾಗಿ ಅವರು ನೀಡಿದ ಮಹತ್ವದ ಕೊಡುಗೆ.

`ಕಾದಂಬರಿ ಸಾರ್ವಭೌಮ~ರೆಂದು ಕರೆಸಿಕೊಂಡ ಅ.ನ.ಕೃ. ಅವರು `ನಟಸಾರ್ವಭೌಮ~ರೆಂದು ಕರೆಸಿಕೊಂಡ ರಾಜಕುಮಾರ್ ಅವರನ್ನು ಕುರಿತು ಹೇಳಿದ ಒಂದು ಮಾತು ಹೀಗಿದೆ: `ರಾಜಕುಮಾರ್ ಅವರು ಕನ್ನಡ ಚಿತ್ರಗಳಲ್ಲಿ ಮಾತ್ರ ಅಭಿನಯಿಸುತ್ತೇನೆಂದು ನಿರ್ಧಾರ ತೆಗೆದುಕೊಳ್ಳದೆ ಹೋಗಿದ್ದರೆ ಕನ್ನಡ ಚಿತ್ರರಂಗವೆಂಬ ಪ್ರತ್ಯೇಕ ಅಸ್ತಿತ್ವಕ್ಕೆ ಅವಕಾಶವೇ ಆಗುತ್ತಿರಲಿಲ್ಲ~.
 
ಈ ಮಾತು, ಕನ್ನಡ ಚಿತ್ರರಂಗಕ್ಕೆ ರಾಜಕುಮಾರ್ ಅವರು ಅನಿವಾರ್ಯವಾದ ಆಯಾಮವನ್ನು ತಿಳಿಸುತ್ತದೆ; ಅವರ ಕೊಡುಗೆಯ ಮಹತ್ವವನ್ನು ಮನವರಿಕೆ ಮಾಡಿಸುತ್ತದೆ.

ಆದರೆ ಕೆಲವರಿಗೆ ರಾಜಕುಮಾರ್ ಅವರ ಕೊಡುಗೆಯ ಬಗ್ಗೆ ಅನಗತ್ಯ ಅನುಮಾನಗಳಿವೆ. `ಅವರು ದೊಡ್ಡ ಕಲಾವಿದರೆಂಬುದು ನಿಜ; ಆದರೆ ಸಮಾಜಕ್ಕೆ ಅವರ ಕೊಡುಗೆ ಏನು~ ಎಂಬ ಪ್ರಶ್ನೆಯನ್ನು ನಿರಂತರವಾಗಿ ಕೇಳುವವರು ಇದ್ದಾರೆ.
 
ಕಲಾವಿದರಾಗಿ ಕಲೆಗೆ ಹಾಗೂ ಸದಭಿರುಚಿಗೆ ಅನ್ಯಾಯ ಮಾಡದಿದ್ದರೆ ಅದೇ ಒಂದು ಸಾಮಾಜಿಕ ಕೊಡುಗೆಯೆಂಬ ತಿಳಿವಳಿಕೆ ಇಂಥವರಿಗೆ ಇಲ್ಲದಿರಬಹುದು. ಒಂದು ವೇಳೆ ಈ ತಿಳಿವಳಿಕೆಯಿದ್ದರೂ ಜನರಿಂದ ಅಪಾರ ಮನ್ನಣೆ ಗಳಿಸಿದ ರಾಜಕುಮಾರ್ ಅವರಿಂದ ಒಂದಷ್ಟು ಲೌಕಿಕ ಸೇವೆಯ ಅಗತ್ಯವಿದೆಯೆಂದು ಭಾವಿಸಿರಬಹುದು.

ರಾಜಕುಮಾರ್ ಅವರು ಏನೆಲ್ಲ ಮಾಡಿದರೆಂಬ ಮಾಹಿತಿ ಇಲ್ಲದೆ ಇರುವುದೂ ಇಂಥ ತಪ್ಪು ತಿಳಿವಳಿಕೆಗೆ ಕಾರಣವಿರಬಹುದು. ಇಂತಹ ಸಕಾರಣಗಳನ್ನು ಲೆಕ್ಕಿಸದೆ ಇರುವ, ಅಸಹನೆಯ ಆಕ್ಷೇಪಾನಂದರೂ ಕೆಲವರಿರಬಹುದು. ಈ ಎಲ್ಲ ಹಿನ್ನೆಲೆಯಲ್ಲಿ ರಾಜಕುಮಾರ್ ಅವರ ಕೆಲವು ಸಾಮಾಜಿಕ ಕಾರ್ಯಗಳನ್ನು ಸಾದರಪಡಿಸುವ ಅಗತ್ಯವಿದೆಯೆಂದು ಭಾವಿಸುತ್ತೇನೆ:

1. ರಾಜಕುಮಾರ್ ಅವರು ಚಲನಚಿತ್ರ ಕಲಾವಿದರಾದ ಮೇಲೆಯೂ ರಂಗಭೂಮಿಯನ್ನು ಮರೆಯಲಿಲ್ಲ. ಕಷ್ಟದಲ್ಲಿರುವ ವೃತ್ತಿರಂಗಭೂಮಿ ಸಂಸ್ಥೆಗಳಿಗಾಗಿ ಸಹಾಯಾರ್ಥ ನಾಟಕಗಳನ್ನಾಡಿ ಹೆಚ್ಚು ಹಣ ಸಂಗ್ರಹಕ್ಕೆ ಕಾರಣವಾದರು.

ಬಿಡುವಿನ ಸಂದರ್ಭಗಳಲ್ಲಿ ಯಾರು ಕರೆದರೂ ಬಂದು ನಾಟಕಗಳಲ್ಲಿ ಅಭಿನಯಿಸಿದರು. ರಂಗಭೂಮಿ ಕಲಾವಿದರ ಮಕ್ಕಳ ಮದುವೆಗಳಿಗೂ ಸಹಾಯಾರ್ಥ ಪ್ರದರ್ಶನ ಕೊಟ್ಟ ಉದಾಹರಣೆಗಳಿವೆ. ಕರೆದ ಕಡೆಯೆಲ್ಲ ಹೋಗಲು ಸಾಧ್ಯವಾಗದೆ ಇದ್ದಿರಬಹುದಾದರೂ ಈ ಸಹಾಯಾರ್ಥ ನಾಟಕ ಪ್ರದರ್ಶನಗಳನ್ನು ಮರೆಯಲಾಗದು.

2. ಕರ್ನಾಟಕದ ಜನರು 1961ರಲ್ಲಿ ಪ್ರವಾಹಪೀಡಿತರಾಗಿ ಕಷ್ಟನಷ್ಟಗಳಿಗೆ ಒಳಗಾದಾಗ `ಪ್ರಜಾವಾಣಿ~ ಪತ್ರಿಕೆಯ ಆಶಯದಂತೆ ರಾಜಕುಮಾರ್ ಅವರು ಕನ್ನಡದ ಎಲ್ಲ ಚಲನಚಿತ್ರ ಕಲಾವಿದರ ನೇತೃತ್ವ ವಹಿಸಿ ರಾಜ್ಯಾದ್ಯಂತ ಪ್ರವಾಸ ಮಾಡಿ ಸಂತ್ರಸ್ತ ಜನರಿಗಾಗಿ ನಿಧಿ ಸಂಗ್ರಹ ಮಾಡಿದರು. ಇದೊಂದು ಅಪರೂಪದ ಸಾಮಾಜಿಕ ಕಾರ್ಯವಾಗಿತ್ತು.

3. ಡಬ್ಬಿಂಗ್ ಚಿತ್ರಗಳ ಹಾವಳಿಯಿಂದ ಕನ್ನಡ ಚಿತ್ರರಂಗಕ್ಕೆ ಧಕ್ಕೆಯಾದಾಗ ಡಬ್ಬಿಂಗ್ ವಿರೋಧಿ ಚಳವಳಿಗೆ ಬೆಂಬಲವಾಗಿ ನಿಂತರು. ಕಡೇ ಉಸಿರಿರುವವರೆಗೆ ಕನ್ನಡ ಚಿತ್ರಗಳ ಉಳಿವಿಗಾಗಿ ಚಿತ್ರೋದ್ಯಮದ ಹೋರಾಟಗಳಲ್ಲಿ ಭಾಗವಹಿಸಿದರು.

4. ಬಹುಮುಖ್ಯವಾದ ಅಂಶವೊಂದನ್ನು ಇಲ್ಲಿ ಹೇಳಬೇಕು. ಚಿತ್ರರಂಗದ ಯಾವುದೇ ಕಲಾವಿದರು-ತಂತ್ರಜ್ಞರು ಕಾಯಿಲೆ ಬಿದ್ದಾಗ ರಾಜಕುಮಾರ್ ಸ್ಪಂದಿಸುತ್ತಿದ್ದ ರೀತಿ ಅಪರೂಪದ್ದು. ತಾವಾಗಿಯೇ ಹೋಗಿ ಅಥವಾ ಶ್ರಿಮತಿ ಪಾರ್ವತಮ್ಮನವರನ್ನು ಕಳಿಸಿ ಒಂದಿಷ್ಟು ಧನಸಹಾಯ ಮಾಡಿ ಆರ್ಥಿಕ ಹಾಗೂ ನೈತಿಕ ಬೆಂಬಲ ನೀಡುತ್ತಿದ್ದರು.
 
ಆದರೆ ಈ ಕೆಲಸಕ್ಕೆ ಪ್ರಚಾರ ಬಯಸುತ್ತಿರಲಿಲ್ಲ. ನಾನು ಈ ಬಗ್ಗೆ ಅವರಲ್ಲಿ ಕೇಳಿದಾಗ `ಬಲಗೈಯಲ್ಲಿ ಕೊಟ್ಟಿದ್ದು ಎಡಗೈಗೆ ಗೊತ್ತಾಗಬಾರ‌್ದು. ಇದಕ್ಕೆಲ್ಲ ಪ್ರಚಾರ ಯಾಕೆ~ ಎಂದು ನಸುನಕ್ಕರು. ಇವರಿಂದ ನೂರಾರು ಜನರಿಗೆ ಸಹಾಯವಾದದ್ದು ಮಾತ್ರ ಪ್ರಚಾರರಹಿತ ಸತ್ಯ.ಈ ರೀತಿಯ ಸಹಾಯ ರಾಜ್ ಕುಟುಂಬದವರಿಂದ ಈಗಲೂ ಮುಂದುವರೆದಿದೆ.

5. ತಮ್ಮ ಅಭಿನಯದ ಚಿತ್ರಗಳು ಸೋತಾಗ ನಿರ್ಮಾಪಕರಿಗೆ ನೆರವಾದ ನಟರ ಬಗ್ಗೆ ಈಗ ಸಾಕಷ್ಟು ಪ್ರಸ್ತಾಪವಾಗುತ್ತಿದೆ. ಹೀಗೆ ನಿರ್ಮಾಪಕರಿಗೆ ರಾಜಕುಮಾರ್ ಅವರು ಅವತ್ತಿನ ದಿನಗಳಲ್ಲೇ ನೆರವು ನೀಡಿದ ಅಂಶ ಕೆಲವರಿಗೆ ಮಾತ್ರ ಗೊತ್ತಿದೆ. ರಾಜಕುಮಾರ್ ಅವರ ಚಿತ್ರಗಳಿಂದ ತಮಗೆ ಲಾಭವಾಗಲಿಲ್ಲ ಎಂದು ಕೆಲವರು ಗೊಣಗುತ್ತಿದ್ದ ಸುದ್ದಿ ರಾಜ್ ಕಿವಿಗೆ ಬೀಳುತ್ತದೆ.
 
ಆಗ ಪ್ರಸಿದ್ಧರಾಗಿದ್ದ ಒಬ್ಬ ಪ್ರೊಡಕ್ಷನ್ ಮೇನೇಜರ್ ಅವರನ್ನು ಕರೆದು `ಯಾರ‌್ಯಾರು ಹೀಗೆ ಮಾತಾಡುತ್ತಿದ್ದಾರೆ ಪತ್ತೆಹಚ್ಚಿ ಹೇಳಿ~ ಎಂದು ಹೇಳಿದರು. ಆ ಪ್ರೊಡಕ್ಷನ್ ಮೇನೇಜರ್ ಒಟ್ಟು ಹನ್ನೊಂದು ಜನ ನಿರ್ಮಾಪಕರನ್ನು ಗುರುತಿಸಿದರು. ರಾಜ್ ಅವರು ಒಬ್ಬೊಬ್ಬ ನಿರ್ಮಾಪಕರನ್ನೂ ಕರೆದು, `ನಿಮಗೆ ಫ್ರೀ ಡೇಟ್ಸ್ ಕೊಡುತ್ತೇನೆ.

ಮತ್ತೊಂದು ಸಿನಿಮಾ ಮಾಡಿ~ ಎಂದು ಸಹಾಯಹಸ್ತ ನೀಡಿದರು. ಈ ನಿರ್ಮಾಪಕರ ಮಾಹಿತಿ ನೀಡಿದ ಪ್ರೊಡಕ್ಷನ್ ಮೇನೇಜರ್‌ಗೂ `ಫ್ರೀಡೇಟ್ಸ್ ಕೊಡುವೆ. ಸಿನಿಮಾ ಮಾಡಿ~ ಎಂದು ವಾಗ್ದಾನ ಮಾಡಿದರು.

ಹೀಗೆ ನಷ್ಟಕ್ಕೊಳಗಾದೆವೆಂದು ಪ್ರಚಾರ ಮಾಡುತ್ತಿದ್ದ ನಿರ್ಮಾಪಕರಿಗೆ ಅಂದಿನ ದಿನಗಳಲ್ಲೇ ಸ್ವಯಂ ಅಪೇಕ್ಷೆಯಿಂದ ನೆರವಿಗೆ ನಿಂತ ರಾಜಕುಮಾರ್ ಅವರು ತಮ್ಮ ಚಿತ್ರಗಳಿಂದ ಬೇರೆಯವರಿಗೇಕೆ ನಷ್ಟವಾಗಬೇಕೆಂದು ಭಾವಿಸಿ ಪಾರ್ವತಮ್ಮನವರಿಗೆ ಪ್ರೇರಣೆ ನೀಡಿದ ಫಲವಾಗಿ `ವಜ್ರೇಶ್ವರಿ ಕಂಬೈನ್ಸ್~ ಸಂಸ್ಥೆ ಹುಟ್ಟಿಕೊಂಡಿತು. ವಿತರಣೆ ಮತ್ತು ನಿರ್ಮಾಣಕ್ಕೆ ರಾಜ್ ಕುಟುಂಬ ಕೈಹಾಕಿತು.

6. ಕರ್ನಾಟಕದ ಜಿಲ್ಲಾ ಕೇಂದ್ರಗಳಲ್ಲಿ ನಿರ್ಮಾಣವಾಗಿರುವ ಅನೇಕ ರಂಗಮಂದಿರಗಳಿಗೆ ಸಹಾಯಾರ್ಥ ರಸಮಂಜರಿ ಕಾರ್ಯಕ್ರಮಗಳನ್ನು ನೀಡಿದ ಕೀರ್ತಿ ರಾಜಕುಮಾರ್ ಅವರಿಗೆ ಸಲ್ಲುತ್ತದೆ.

7. ರಾಜಕುಮಾರ್ ಅವರು `ರಸಮಂಜರಿ~ ಕಾರ್ಯಕ್ರಮಗಳಿಂದ ಬಂದ ಗೌರವಧನ ಹಾಗೂ ಗಾಯನದಿಂದ ಬಂದ ಸಂಭಾವನೆಯ ಬಹುಪಾಲನ್ನು `ಶಕ್ತಿಧಾಮ~ ಸಂಸ್ಥೆಗೆ ನೀಡುತ್ತಿರುವುದಾಗಿ ಅವರ ಕುಟುಂಬದವರು ಹೇಳಿದಾಗಲೇ ಗೊತ್ತಾದದ್ದು.

`ಶಕ್ತಿಧಾಮ~ವು ಪಾರ್ವತಮ್ಮನವರ ನೇತೃತ್ವದಲ್ಲಿ ನಡೆಯುತ್ತಿರುವ ಸಂಸ್ಥೆ. ಬೀದಿಗೆ ಬಿದ್ದ ಹೆಣ್ಣು ಮಕ್ಕಳಿಗೆ ಪುನರ್ವಸತಿ ಕಲ್ಪಿಸುವ ಈ ಸಂಸ್ಥೆ ಮೈಸೂರಿನಲ್ಲಿದ್ದು ನೂರಾರು ಮಹಿಳೆಯರಿಗೆ ಆಶ್ರಯ ನೀಡಿದೆ; ನೀಡುತ್ತಿದೆ. ಇದೊಂದು ಶ್ಲಾಘನೀಯ ಸಾಮಾಜಿಕ ಕಾರ್ಯವಾಗಿದೆ.

8. ದಾದಾ ಫಾಲ್ಕೆ ಪ್ರಶಸ್ತಿಯ ಹಣವನ್ನು ರಾಜಕುಮಾರ್ ಅವರು ಕನ್ನಡ ಸಾಹಿತ್ಯ ಪರಿಷತ್ತಿಗೆ ನೀಡಿದರು. ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ರ‌್ಯಾಂಕ್ ಪಡೆಯುವ ಕನ್ನಡ ಎಂ.ಎ. ವಿದ್ಯಾರ್ಥಿಗಳಿಗಾಗಿ ಪದಕ ನೀಡಲು ನಿಧಿಯೊಂದನ್ನು ನೀಡಿದರು. ಹೀಗೆ ಸಾಹಿತ್ಯ ಮತ್ತು ಶಿಕ್ಷಣಕ್ಕೆ ಕಿಂಚಿತ್ ಸೇವೆ ಸಲ್ಲಿಸಿದ್ದಕ್ಕೆ ಇವು ಸಾಂಕೇತಿಕ ಉದಾಹರಣೆ.

9. ಗೋಕಾಕ್ ಚಳವಳಿಯೆಂದೇ ಪ್ರಸಿದ್ಧವಾದ ಕನ್ನಡಪರ ಹೋರಾಟದಲ್ಲಿ ಸಕ್ರಿಯವಾಗಿ ಪಾಲ್ಗೊಂಡ ರಾಜಕುಮಾರ್ ಅವರು ಒಂದು ತಿಂಗಳ ಕಾಲ ಕರ್ನಾಟಕದಾದ್ಯಂತ ಸಂಚರಿಸಿ ಕನ್ನಡಪರ ಜಾಗೃತಿ ಮೂಡಿಸಿದ್ದು ಎಂದೂ ಮರೆಯಲಾಗದ ಸನ್ನಿವೇಶವಾಗಿದೆ.
 
ಇಡೀ ಕನ್ನಡ ಚಿತ್ರೋದ್ಯಮದ ತೊಡಗುವಿಕೆಯನ್ನೂ ಇಲ್ಲಿ ನೆನೆಯಬೇಕು. ಅಂತೆಯೇ ಕನ್ನಡ ಹಾಗೂ ಕರ್ನಾಟಕದ ವಿಷಯದಲ್ಲಿ ನಡೆಯುವ ಹೋರಾಟಗಳಿಗೆ ರಾಜಕುಮಾರ್ ಅವರ ಸಕ್ರಿಯ ಬೆಂಬಲ ಸದಾ ಇದ್ದದ್ದು ಇಲ್ಲಿ ಸ್ಮರಣೀಯ.

10. ಅಪಾರ ಕೀರ್ತಿ ಮತ್ತು ಹಣ ಸಂಪಾದಿಸಿದ ರಾಜಕುಮಾರ್ ಅವರು ಚಿತ್ರೋದ್ಯಮದ ಮೂಲ ಸೌಕರ್ಯಗಳಿಗಾಗಿ ಏನು ಮಾಡಿದರು ಎಂದು ಹಿಂದಿನಿಂದಲೂ ಕೆಲವರು ಕೇಳುತ್ತಿರುವುದುಂಟು. ರಾಜಕುಮಾರ್ ಅವರು ಕೀರ್ತಿ ಮತ್ತು ಜನಪ್ರೀತಿಯನ್ನು ಸಂಪಾದಿಸಿದಷ್ಟು ಹಣವನ್ನು ಸಂಪಾದಿಸಲಿಲ್ಲ.
 
ತಾವು ಅಭಿನಯಿಸಿದ ಅನೇಕ ಚಿತ್ರಗಳಿಗೆ ಪೂರ್ಣ ಸಂಭಾವನೆಯನ್ನೂ ಪಡೆಯದೆ ಕೆಲಸ ಮುಗಿಸಿಕೊಟ್ಟರು. ನೂರಾರು ಚಿತ್ರಗಳಲ್ಲಿ ನಟಿಸಿದ ನಂತರವೂ ಅವರು ಬೆಂಗಳೂರಲ್ಲಿ ಮನೆಯನ್ನು ಖರೀದಿಸಿದಾಗ 2 ಲಕ್ಷ ರೂಪಾಯಿ ಕೊರತೆಯುಂಟಾಗಿ ನಿರ್ಮಾಪಕರೊಬ್ಬರಿಂದ ಸಾಲ ಮಾಡಿದ್ದನ್ನು ಅವರೇ ನನಗೆ ಹೇಳಿದ್ದರು.

ವೃತ್ತಿರಂಗಭೂಮಿ ಸಂಸ್ಥೆಗಳ ಮಾಲೀಕರು ಮತ್ತು ಚಿತ್ರ ನಿರ್ಮಾಪಕರನ್ನು `ಅನ್ನದಾತ~ರೆಂದು ಭಾವಿಸಿದ ರಾಜಕುಮಾರ್ ಅವರಿಗೆಂದೂ ಹಣಕ್ಕಾಗಿ ತೊಂದರೆ ಕೊಡಲಿಲ್ಲ. ಇಷ್ಟಾದರೂ ಟಿ.ಎನ್. ಬಾಲಕೃಷ್ಣ ಅವರು ಸ್ಥಾಪಿಸಿದ `ಅಭಿಮಾನ್ ಸ್ಟುಡಿಯೊ~ಗೆ ಇವರೂ ಪಾಲುದಾರರಾಗಿದ್ದರೆಂದು ಅನೇಕರಿಗೆ ತಿಳಿದಿಲ್ಲ.

ಆನಂತರ ಹಣದ ವ್ಯವಹಾರವು ತನಗೆ ಒಗ್ಗುವುದಿಲ್ಲವೆಂದು ಭಾವಿಸಿ ತಮ್ಮ ಮೂಲ ಬಂಡವಾಳವನ್ನು ಬಾಲಕೃಷ್ಣ ಅವರಿಗೇ ಬಿಟ್ಟುಕೊಟ್ಟು ಪಾಲುದಾರಿಕೆಯನ್ನು ರದ್ದುಪಡಿಸಿಕೊಂಡರು.

11. ರಾಜ್ಯ ಮತ್ತು ದೇಶಕ್ಕೆ ಸಂಕಷ್ಟ ಎದುರಾದಾಗ ತಮ್ಮ ವತಿಯಿಂದ ಸರ್ಕಾರದ ನಿಧಿಗೆ ಹಣ ನೀಡಿದ್ದಲ್ಲದೆ ಬೀದಿ ಸಂಚಾರದ ಮೂಲಕ ಧನಸಂಗ್ರಹ ಮಾಡಿಕೊಟ್ಟ ಅನೇಕ ಉದಾಹರಣೆಗಳಿವೆ (ಉದಾ: ಕಾರ್ಗಿಲ್ ಯುದ್ಧ ಇತ್ಯಾದಿ).

12. ನೇತ್ರದಾನವನ್ನು ಒಂದು ಚಳವಳಿಯ ನೆಲೆಗೆ ಕೊಂಡೊಯ್ದ ಕ್ರಿಯೆಗೆ ರಾಜಕುಮಾರ್ ಅವರ ಚಾಲಕ ಶಕ್ತಿಯೂ ಒಂದು ಮುಖ್ಯ ಕಾರಣವಾಯಿತೆಂಬುದನ್ನು ಮರೆಯಲಾಗದು.
ಹೀಗೆ ಡಾ. ರಾಜಕುಮಾರ್ ಅವರ ಸಾಮಾಜಿಕ ಕ್ರಿಯಾಶೀಲತೆಗೆ ಉದಾಹರಣೆಗಳನ್ನು ಕೊಡುತ್ತಾ ಹೋಗಬಹುದು. ನನಗೆ ಇಷ್ಟವಾದ ಮುಖ್ಯ ಸಂಗತಿ ಮತ್ತೊಂದಿದೆ.

ಸಾಮಾಜಿಕವಾಗಿ, ಆರ್ಥಿಕವಾಗಿ, ಶೈಕ್ಷಣಿಕವಾಗಿ ಹಿಂದುಳಿದ ವಲಯಕ್ಕೆ ಸೇರಿದ `ಮುತ್ತುರಾಜ್~ ತನ್ನ ಶ್ರದ್ಧೆ, ಸಂಕಲ್ಪ, ಪ್ರತಿಭೆ ಮಾತ್ರದಿಂದಲೆ `ರಾಜಕುಮಾರ್~ ಆಗಿ ಬೆಳದದ್ದು, ಬೆಳೆದ ಮೇಲೂ ಅಂತರಂಗದಲ್ಲಿ `ಮುತ್ತುರಾಜ್~ ಆಗಿ ಉಳಿದದ್ದು ನಮ್ಮ ನಾಡಿನಲ್ಲೊಂದು ಅದ್ಭುತ ಸಂಗತಿಯೆಂದೇ ಹೇಳಬೇಕು.

ರಾಜಕುಮಾರ್ ಅವರು ಹೆಚ್ಚು ಓದದೆ ವಿನಯವನ್ನೇ ವಿದ್ವತ್ತಾಗಿಸಿದರು; ಹಣಕ್ಕೆ ಅಂಟಿಕೊಳ್ಳದೆ ಶ್ರಿಮಂತರಾದರು; ಜಾತಿಯನ್ನು ಮೀರಿದ ಸಾಮಾಜಿಕ ರೂಪಕವೂ ಆದರು. ಇವರ ವಿನಯವಂತಿಕೆಯು ಶಿವರಾಜ್‌ಕುಮಾರ್, ರಾಘವೇಂದ್ರ ರಾಜಕುಮಾರ್ ಮತ್ತು ಪುನೀತ್ ರಾಜಕುಮಾರ್ ಅವರ ಬದುಕಿನ ಭಾಗವಾಗಿರುವುದನ್ನು ಮೆಚ್ಚಲೇಬೇಕು.
 
ತಂದೆಯ ಕೆಲವು ಗುಣಗಳನ್ನು ಅಳವಡಿಸಿಕೊಂಡ ಮೂವರು ಮಕ್ಕಳು ತಮ್ಮ ಚಲನಚಿತ್ರಗಳ ಕಥಾವಸ್ತು ಆಯ್ಕೆಯಲ್ಲೂ ತಂದೆಯ ಆದರ್ಶವನ್ನು ಪಾಲಿಸಬೇಕೆಂಬುದು ಜನರ ಆಶಯವಾಗಿದೆ. ಈ ಆಶಯವು ಆತಂಕಕ್ಕೊಳಗಾಗಿದೆ ಎಂಬ ವಿಷಾದ ನನ್ನದಾಗಿದೆ. ಆದರೂ ನನ್ನಂಥವರ ವಿಷಾದ ಅರ್ಥವಾದೀತೆಂಬ ಆಶಾವಾದ ಇನ್ನೂ ಉಳಿದಿದೆ. ಯಾಕೆಂದರೆ ರಾಜಕುಮಾರ್ ಅವರ ಸಾಂಸ್ಕೃತಿಕ ವಿವೇಕಕ್ಕೆ ಸಾವಿಲ್ಲ.

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.