ಗುರುವಾರ , ಫೆಬ್ರವರಿ 25, 2021
18 °C

ಶ್ರೀಮತಿ ಶರಣ್ ಮತ್ತು ‘ಶರಣಿಸಂ’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಶ್ರೀಮತಿ ಶರಣ್ ಮತ್ತು ‘ಶರಣಿಸಂ’

ಚೂಡಿದಾರ, ಉದ್ದನೆ ಕೂದಲ ವಿಗ್, ಹಣೆಯಲ್ಲಿ ಕುಂಕುಮ, ಮೇಕಪ್ ಹಚ್ಚಿಕೊಂಡು ಹೈಹೀಲ್ಡ್ ಚಪ್ಪಲಿ ಧರಿಸಿ ಮನೆಯೊಳಗೆಲ್ಲಾ ಓಡಾಡುತ್ತಿದ್ದರಂತೆ ಶರಣ್. ಮನೆಯ ತುಂಬ ಎತ್ತರದ ನಿಲುವುಗನ್ನಡಿ.ನಡೆವಾಗ, ನುಡಿವಾಗ, ನೋಟದಲ್ಲಿ ಎಲ್ಲದರಲ್ಲಿಯೂ ಹೆಣ್ಣಿನಂತೆಯೇ ಕಾಣಬೇಕು ಎಂದು ಸಮಯ ಸಿಕ್ಕಾಗಲೆಲ್ಲಾ ಪ್ರಯತ್ನ ಪಡುತ್ತಿದ್ದರು ಅವರು. ಆ ಬದ್ಧತೆಯ ಪ್ರಯತ್ನ ಫಲ ಕೊಟ್ಟಿದೆ ಎನ್ನುವ ನಂಬಿಕೆ ಅವರದು.ನಿರ್ಮಾಪಕರು ಮತ್ತು ನಿರ್ದೇಶಕರು ಮಲಯಾಳಂನ ‘ಮಾಯಾ ಮೋಹಿನಿ’ ಎಂಬ ಚಿತ್ರದ ಸೀಡಿ ಹಿಡಿದುಕೊಂಡು ಮನೆಗೆ ಬಂದಾಗ ‘ಹೆಣ್ಣಿನ ಪಾತ್ರವೇ? ಒಲ್ಲೆ’ ಎಂದರಂತೆ ಶರಣ್. ಛಲ ಬಿಡದ ನಿರ್ಮಾಪಕರು ಮತ್ತೆ ಶರಣ್ ಮನೆ ಎಡತಾಕಿದರು. ಕೊನೆಗೂ ಶರಣ್ ಅವತಾರ ಬದಲಿಸಿದರು.ಕುತೂಹಲದ ಜೊತೆಗೆ ವಿವಾದಗಳನ್ನೂ ಅಂಟಿಸಿಕೊಂಡಿರುವ ‘ಶ್ರೀಮತಿ ಜಯಲಲಿತಾ’ದಲ್ಲಿ ವಿವಾದಕ್ಕೆ ಆಸ್ಪದ ಎಡೆಮಾಡಿಕೊಡುವಂಥದ್ದು ಏನೂ ಇಲ್ಲ ಎಂದು ಸ್ಪಷ್ಟಪಡಿಸಿತು ಚಿತ್ರತಂಡ.ಶೀರ್ಷಿಕೆ ಬಗ್ಗೆ ಅಪಸ್ವರ ಎತ್ತಿರುವ ತಮಿಳುನಾಡು ಮುಖ್ಯಮಂತ್ರಿ ಜಯಲಲಿತಾ ಬರೆದ ಪತ್ರಕ್ಕೆ ವಾಣಿಜ್ಯ ಮಂಡಳಿಯ ಮೂಲಕ ಚಿತ್ರತಂಡ ಉತ್ತರ ನೀಡಿದೆಯಂತೆ. ಸಿನಿಮಾ ಬಿಡುಗಡೆ ವೇಳೆ ಮತ್ತೆ ತಕರಾರು ಬಂದರೆ ಆಗ ಎದುರಿಸೋಣ ಎನ್ನುವ ನಿಲುವು ಅವರದು.‘ವಿಷ್ಣುವರ್ಧನ’, ‘ಚಾರುಲತಾ’ ಚಿತ್ರಗಳನ್ನು ನಿರ್ದೇಶಿಸಿದ್ದ ಪಿ. ಕುಮಾರ್ ಮೊದಲ ಬಾರಿಗೆ ಪರಿಪೂರ್ಣ ಹಾಸ್ಯಮಯ ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದಾರೆ. ಮೂಲಚಿತ್ರದಲ್ಲಿನ ಅನೇಕ ಸನ್ನಿವೇಶಗಳನ್ನು ಅವರು ಬದಲಿಸಿಕೊಂಡಿದ್ದಾರೆ.ಹಾಸ್ಯಕ್ಕೂ ಹಾಸ್ಯಾಸ್ಪದಕ್ಕೂ ಇರುವುದು ತೆಳುವಾದ ಗೆರೆಯಷ್ಟೇ. ತುಸು ಎಚ್ಚರ ತಪ್ಪಿದರೂ ಹಾಸ್ಯ ದಿಕ್ಕುತಪ್ಪಬಹುದು ಎನ್ನುವ ಆತಂಕದಲ್ಲಿಯೇ ಶರಣ್ ಕೆಲಸ ಮಾಡಿದ್ದಾರೆ. ಹೆಣ್ಣಿನ ರೀತಿಯಲ್ಲ, ಹೆಣ್ಣಾಗಿಯೇ ಕಾಣಿಸಿಕೊಳ್ಳಬೇಕಾದ ಪಾತ್ರ ನಿಜಕ್ಕೂ ಸವಾಲಿನದ್ದು ಎನ್ನುವುದು ಅವರ ಅನುಭವ.ಸ್ತ್ರೀ ಪಾತ್ರಕ್ಕೆ ಸ್ವತಃ ಡಬ್ ಮಾಡಿರುವ ಶರಣ್‌ಗೆ, ಕಲಾವಿದನಿಗೆ ಆತನ ವೃತ್ತಿಜೀವನದಲ್ಲಿ ಒಮ್ಮೆ ಸಿಗಬಹುದಾದ ಅಪರೂಪದ ಪಾತ್ರವಿದು ಎಂದೆನಿಸಿದೆ. ಮೇಕಪ್‌ಗಾಗಿಯೇ 4-5 ಗಂಟೆ ವ್ಯಯಿಸಬೇಕಾಗಿದ್ದನ್ನು ಅವರು ನೆನಪಿಸಿಕೊಂಡರು. ಹೆಣ್ಣಿನ ವೇಷದಲ್ಲಿದ್ದರೂ ಇದು ಪಕ್ಕಾ ‘ಶರಣಿಸಂ’ನ ಚಿತ್ರ ಎಂದರು ಶರಣ್.ಹರೀಶ್ ರಾಜ್ ಹಳ್ಳಿಹುಡುಗನ ಪಾತ್ರಕ್ಕಾಗಿ ಮೀಸೆ ಬೆಳೆಸಿದ್ದರು. ಜಯಲಲಿತಾರನ್ನು ಒಲಿಸಿಕೊಳ್ಳಲು ಹಲವು ಗೆಟಪ್‌ಗಳನ್ನು ಬದಲಿಸುವ ಪಾತ್ರ ತಮ್ಮದು ಎಂದರು ರವಿಶಂಕರ್.ಶರಣ್‌ ಇಲ್ಲಿ ‘ನಾಯಕಿ’ಯಾಗಿದ್ದರೂ ನಿಜದ ನಾಯಕಿಯರು ಇಬ್ಬರಿದ್ದಾರೆ. ದಿಶಾ ಪಾಂಡೆ ಮತ್ತು ಐಶ್ವರ್ಯಾ ದೇವನ್ ಇಬ್ಬರಿಗೂ ಚಿತ್ರದಲ್ಲೇನು ಕೆಲಸ ಎನ್ನುವುದನ್ನು ತೆರೆಯ ಮೇಲೆಯೇ ನೋಡಬೇಕಂತೆ.ಶರಣ್ ನಾಯಕರಾಗಿದ್ದ ಮೊದಲ ಎರಡು ಸಿನಿಮಾಗಳ ಹಾಡುಗಳು ಗೆದ್ದಿದ್ದರಿಂದ, ಈ ಚಿತ್ರಕ್ಕೆ ಸಂಗೀತ ಹೊಸೆಯುವ ಜವಾಬ್ದಾರಿಯನ್ನು ಸ್ವಲ್ಪ ಹಿಂಜರಿಕೆಯಿಂದಲೇ ಒಪ್ಪಿಕೊಂಡರಂತೆ ಶ್ರೀಧರ್ ಸಂಭ್ರಮ್.ಕನ್ನಡದ ಮೇಲೆ ಹಾಡು ಮಾಡುವ ಅವರ ಕನಸು ಈ ಚಿತ್ರದಲ್ಲಿ ಈಡೇರಿದೆ. ಚಿತ್ರಕ್ಕೆ ಪಿ. ಇಂದಿರಾ, ಅರುಣ್‌ಕುಮಾರ್, ಮಂಜುಳಾ ಶಂಕರ್ ಮತ್ತು ಗಿರಿಧರ್ ಬಂಡವಾಳ ಹೂಡಿದ್ದಾರೆ.   

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.