ಸೋಮವಾರ, ಜುಲೈ 26, 2021
24 °C

ಶ್ರೀಲಂಕಾ ಚುನಾವಣೆ ಫಲಿತಾಂಶ ಭಾರತ ಹಿತಾಸಕ್ತಿಗೆ ಪೂರಕ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಈ ಫಲಿತಾಂಶದಿಂದ  ನೆರೆರಾಷ್ಟ್ರ ಶ್ರೀಲಂಕಾದಲ್ಲಿ ಚೀನಾದ ಪ್ರಭಾವ ಕಡಿಮೆಯಾಗಲಿದೆ.ಶ್ರೀಲಂಕಾ  ಪ್ರಧಾನಿಯಾಗಿ ರಾನಿಲ್ ವಿಕ್ರಮಸಿಂಘೆ ಅಧಿಕಾರ ಸ್ವೀಕರಿಸಿದ್ದಾರೆ. ನಾಲ್ಕನೇ ಬಾರಿಗೆ ಪ್ರಧಾನಿಯಾಗಿ ಅಧಿಕಾರ ಸ್ವೀಕರಿಸಿದ ದಾಖಲೆ ಅವರದು. ರಾಷ್ಟ್ರದ ಪ್ರಧಾನಿಯಾಗಿ ಅಧಿಕಾರಕ್ಕೆ ಮರಳಲು ಶ್ರೀಲಂಕಾ ಮಾಜಿ ಅಧ್ಯಕ್ಷ ಮಹಿಂದ ರಾಜಪಕ್ಸೆ ನಡೆಸಿದ ಹತಾಶ ಪ್ರಯತ್ನಗಳನ್ನು ಶ್ರೀಲಂಕಾ ಮತದಾರರು ನಿಷ್ಫಲಗೊಳಿಸಿದ್ದಾರೆ.  ಸಂಸತ್‌ನಲ್ಲಿ ಪ್ರತಿಪಕ್ಷದ ಸದಸ್ಯ ಸ್ಥಾನದ ಪಾತ್ರಕ್ಕೆ  ಅವರು ತೃಪ್ತಿಪಟ್ಟುಕೊಳ್ಳಬೇಕಾಗಿದೆ. ಇದೇ ವರ್ಷ ಜನವರಿಯಲ್ಲಿ ನಡೆದ ಅಧ್ಯಕ್ಷೀಯ ಚುನಾವಣೆಯಲ್ಲಿ,  ಮೂರನೇ ಬಾರಿಗೆ ಅಧ್ಯಕ್ಷರಾಗಿ ಮುಂದುವರಿಯುವ  ಅವಕಾಶವನ್ನು ರಾಜಪಕ್ಸೆ ಕಳೆದುಕೊಂಡಿದ್ದರು. ಈಗ,  ಏಳು ತಿಂಗಳ ನಂತರ  ಸಂಸತ್  ಚುನಾವಣೆಯಲ್ಲಿ ಮತ್ತೆ ಸೋಲನುಭವಿಸಿದ್ದಾರೆ. ಎಂದರೆ  ರಾಜಪಕ್ಸೆ  ಅವರ  ಸರ್ವಾಧಿಕಾರಿ ಧೋರಣೆ ಹಾಗೂ ಭ್ರಷ್ಟಾಚಾರ ತುಂಬಿದ  ಆಡಳಿತವನ್ನು ಶ್ರೀಲಂಕಾ ಮತದಾರರು ಮರೆತಿಲ್ಲ ಎಂದಾಯಿತು.  ನಿಜ.  2009ರಲ್ಲಿ ಎಲ್‌ಟಿಟಿಇ  ಸದೆಬಡಿದು  ರಾಷ್ಟ್ರದಲ್ಲಿ ಅಂತರ್ಯುದ್ಧ ಅಂತ್ಯಗೊಳಿಸಿದ ಕಾರಣಕ್ಕಾಗಿ ಸಿಂಹಳೀಯರು ಮಹಿಂದ ರಾಜಪಕ್ಸೆ ಅವರಿಗೆ ಕೃತಜ್ಞರಾಗಿದ್ದಾರೆ. ಆದರೆ ಆದೇ ಕಾರಣಕ್ಕಾಗಿ ಚುನಾವಣಾ ಲಾಭವನ್ನು ನಿರಂತರವಾಗಿ ಗಳಿಸುವುದು ಸಾಧ್ಯವಿಲ್ಲ  ಎಂಬುದನ್ನು   ಮತದಾರರು ತೋರಿಸಿಕೊಟ್ಟಿದ್ದಾರೆ. ಆರ್ಥಿಕ ಪ್ರಗತಿ ಹಾಗೂ ಸಾಮರಸ್ಯದ ಬದುಕಿಗಾಗಿ ಜನ ಈಗ ಹಂಬಲಿಸುತ್ತಿದ್ದಾರೆ. ಈ ನಿಟ್ಟಿನಲ್ಲಿ ರಾಜಪಕ್ಸೆ ಅವರು ಅಧ್ಯಕ್ಷರಾಗಿ ವಿಫಲರಾಗಿದ್ದರು.  ಅಲ್ಲದೆ ಅಧ್ಯಕ್ಷ ಸ್ಥಾನದಿಂದ ಕೆಳಗಿಳಿದ ನಂತರದ ಈ  ಏಳು ತಿಂಗಳಲ್ಲೂ, ತಮ್ಮ  ನಿಲುವುಗಳನ್ನು ಬದಲಿಸಿಕೊಳ್ಳಲು ಅವರು ಬಯಸಿರಲಿಲ್ಲ ಎಂಬುದು ಸುವ್ಯಕ್ತವಾಗಿತ್ತು. ಅವರ ಚುನಾವಣಾ ಪ್ರಚಾರ ಭಾಷಣಗಳು ಭೀತಿ ಹುಟ್ಟು ಹಾಕುವಂತಹದ್ದಾಗಿದ್ದವು.  ಜನಾಂಗೀಯ ದೃಷ್ಟಿಯಲ್ಲಿ ರಾಷ್ಟ್ರವನ್ನು ವಿಭಜಿಸುವಂತಹ ಮಾತುಗಳಾಗಿರುತ್ತಿದ್ದವು. ಇಂತಹ ಮಾತುಗಳು ಉದಾರ ಮನದ ಸಿಂಹಳೀಯರನ್ನು ಸೆಳೆಯುವಲ್ಲಿ ವಿಫಲವಾಗಿವೆ ಎಂಬುದಕ್ಕೆ ಈ ಚುನಾವಣಾ ಫಲಿತಾಂಶವೇ ಸಾಕ್ಷಿ. ಆದರೆ ಇದರಿಂದ  ರಾಜಪಕ್ಸೆ ಅವರ ರಾಜಕೀಯ ಹಾದಿ ಮುಕ್ತಾಯವಾಯಿತು ಎಂದೇನೂ ಭಾವಿಸಬೇಕಿಲ್ಲ.ರಾಜಪಕ್ಸೆ ಅವರು ಮಹತ್ವಾಕಾಂಕ್ಷೆಯ ರಾಜಕಾರಣಿ. ಜೊತೆಗೆ  ಯುಎನ್‌ಪಿ ಸರ್ಕಾರಕ್ಕೆ ತೊಂದರೆ ಕೊಡುವಷ್ಟು ಬೆಂಬಲವೂ ಸಂಸತ್‌ನಲ್ಲಿ ಅವರಿಗಿದೆ.  ಯುಎನ್‌ಪಿ ಸರ್ಕಾರದ ಸಾಂವಿಧಾನಿಕ ಹಾಗೂ ಚುನಾವಣಾ ಸುಧಾರಣೆಗಳ ಕಾರ್ಯಸೂಚಿಯನ್ನು ಅವರು ಖಂಡಿತವಾಗಿಯೂ ತಡೆಹಿಡಿಯಬಲ್ಲರು. ಏಕೆಂದರೆ, ಸಂವಿಧಾನ ತಿದ್ದುಪಡಿಗೆ ಸರ್ಕಾರಕ್ಕೆ ಮೂರನೇ ಎರಡರಷ್ಟು  ಬಹುಮತ ಅಗತ್ಯವಾಗುತ್ತದೆ. ಇದಕ್ಕಾಗಿ ಪ್ರಧಾನಿ ರಾನಿಲ್ ವಿಕ್ರಮಸಿಂಘೆ  ಅವರು ಪ್ರತಿಪಕ್ಷದ   ಎಂ.ಪಿ.ಗಳ ವಿಶ್ವಾಸ ಗಳಿಸಿಕೊಂಡು ಒಮ್ಮತ ಮೂಡಿಸಿ ಸುಧಾರಣಾ ನೀತಿಗಳನ್ನು ಮುಂದಕ್ಕೊಯ್ಯಬೇಕಾಗಿದೆ. ತಮಿಳರೊಂದಿಗೆ ಸಾಮರಸ್ಯ ವರ್ಧನೆಯೂ ಆದ್ಯತೆಯ ಸಂಗತಿಯೇ.ಅಧಿಕಾರಕ್ಕೆ ರಾಜಪಕ್ಸೆ ಅವರು  ಮರಳಬಹುದಾದ ಸಾಧ್ಯತೆ ಬಗ್ಗೆ ಭಾರತಕ್ಕೆ ಆತಂಕವಿತ್ತು.  ಈಗ ಈ  ಚುನಾವಣಾ ಫಲಿತಾಂಶದಿಂದ ಭಾರತ ನಿರಾಳವಾಗಿದೆ. ರಾಜಪಕ್ಸೆ ಅವರು ಅಧ್ಯಕ್ಷರಾಗಿದ್ದ ಅವಧಿಯಲ್ಲಿ ಕಡೆಕಡೆಗೆ   ಭಾರತ–ಶ್ರೀಲಂಕಾ ದ್ವಿಪಕ್ಷೀಯ ಬಾಂಧವ್ಯ  ಜಾಳುಜಾಳಾಗಿತ್ತು.  ಜೊತೆಗೆ, ಅವರ  ಅಧ್ಯಕ್ಷ  ಆವಧಿಯಲ್ಲಿ ಚೀನೀಯರ ಜೊತೆ ನಡೆಸಲಾದ ವ್ಯವಹಾರಗಳು ಹಾಗೂ ಇತರ  ಒಪ್ಪಂದಗಳು ಭಾರತದ ಭದ್ರತಾ ಹಿತಾಸಕ್ತಿಗಳನ್ನು ಕುಗ್ಗಿಸುವಂತಹದ್ದಾಗಿದ್ದವು.  ಚೀನಾದತ್ತ  ಶ್ರೀಲಂಕಾ ಅತಿಯಾಗಿ ವಾಲಿರುವುದನ್ನು ಸರಿಪಡಿಸುವ ಯತ್ನಗಳನ್ನು ಕಳೆದ ಆರು ತಿಂಗಳಿಂದೀಚೆಗೆ  ಅಧ್ಯಕ್ಷ ಸಿರಿಸೇನಾ ಹಾಗೂ ಪ್ರಧಾನಿ ವಿಕ್ರಮಸಿಂಘೆ ಮಾಡಿದ್ದಾರೆ. ಈಗ ಈ ಜನಾದೇಶ, ಭಾರತದೊಂದಿಗಿನ  ಬಾಂಧವ್ಯವನ್ನು ಶ್ರೀಲಂಕಾ  ಮರು ನಿರ್ಮಿಸಲು ಸಾಧ್ಯವಾಗುತ್ತದೆ ಎಂಬುದು ಭಾರತದ ನಿರೀಕ್ಷೆ. ಬೆನ್ನಿಗಿರುವ ಈ ನೆರೆ ರಾಷ್ಟ್ರದೊಂದಿಗೆ ದೊಡ್ಡಣ್ಣನಂತಲ್ಲದ ಸೌಹಾರ್ದದ ಬಾಂಧವ್ಯವನ್ನು ಭಾರತ ಮುಂದುವರಿಸಬೇಕು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.