ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶ್ರೀಶಾಂತ್ `ಐಷಾರಾಮಿ ಜೀವನ'

ಗೆಳತಿಗೆ ದುಬಾರಿ ಬ್ಲ್ಯಾಕ್‌ಬೆರಿ, ಬಟ್ಟೆಗೆ ರೂ 1.95 ಕೋಟಿ!
Last Updated 21 ಮೇ 2013, 19:59 IST
ಅಕ್ಷರ ಗಾತ್ರ

ನವದೆಹಲಿ (ಪಿಟಿಐ/ಐಎಎನ್‌ಎಸ್): ಸ್ಪಾಟ್ ಫಿಕ್ಸಿಂಗ್ ಪ್ರಕರಣದಲ್ಲಿ ಬಂಧನದಲ್ಲಿರುವ ಕೇರಳದ ವೇಗಿ ಎಸ್.ಶ್ರೀಶಾಂತ್ ಅವರ ಐಷಾರಾಮಿ ಜೀವನದ ಕೆಲ ಅಂಶಗಳು ದೆಹಲಿ ಪೊಲೀಸರ ವಿಚಾರಣೆ ವೇಳೆ ಬಹಿರಂಗಗೊಂಡಿದೆ.

ಬಟ್ಟೆ ಖರೀದಿಸಲು ಸುಮಾರು 1.95 ಲಕ್ಷ ರೂಪಾಯಿ ಖರ್ಚು ಮಾಡಿರುವ ಶ್ರೀಶಾಂತ್, ತಮ್ಮ ಗೆಳತಿಗೆ 42 ಸಾವಿರ ರೂ. ಮೌಲ್ಯದ ಬ್ಲ್ಯಾಕ್‌ಬೆರಿ ಮೊಬೈಲ್‌ಯೊಂದನ್ನು (ಝೆಡ್ 10) ಉಡುಗೊರೆಯಾಗಿ ನೀಡಿರುವುದು ತಿಳಿದುಬಂದಿದೆ.  `ಈ ಹಣ ಸ್ಪಾಟ್ ಫಿಕ್ಸಿಂಗ್‌ನಿಂದ ಬಂದಿದ್ದು. ಅದನ್ನು ಬೇಗನೇ ಖರ್ಚು ಮಾಡಲು ಅವರು ಮುಂದಾಗಿದ್ದರು' ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ಜೈಪುರದಲ್ಲಿರುವ ಶ್ರೀಶಾಂತ್ ಅವರ ಸ್ನೇಹಿತನ ನಿವಾಸದ ಮೇಲೆ ದಾಳಿ ನಡೆಸಿದಾಗ 1.95 ಲಕ್ಷ ರೂ. ಮೊತ್ತದ ಬಟ್ಟೆಗಳು ಪತ್ತೆಯಾಗಿವೆ. ಇವುಗಳನ್ನು ಮುಂಬೈನ `ಡೀಸೆಲ್ ಶೋರೂಮ್'ನಿಂದ ಒಂದೇ ದಿನ ನಗದು ನೀಡಿ ಖರೀದಿಸಿರುವುದು ತಿಳಿದುಬಂದಿದೆ.

`ಶ್ರೀಶಾಂತ್ ತಮ್ಮ ಗೆಳತಿಗೆ ದುಬಾರಿ ಮೊತ್ತದ ಮೊಬೈಲ್‌ವೊಂದನ್ನು ಉಡುಗೊರೆಯಾಗಿ ನೀಡಿದ್ದಾರೆ. ವಿಚಾರಣೆ ವೇಳೆ ಈ ಕ್ರಿಕೆಟಿಗ ನೀಡಿದ ಮಾಹಿತಿ ಮೇರೆಗೆ ನಾವು ಆ ಯುವತಿ ನಿವಾಸಕ್ಕೆ ತೆರಳಿ ಮೊಬೈಲ್ ವಶಪಡಿಸಿಕೊಂಡಿದ್ದೇವೆ' ಎಂದು ಪೊಲೀಸರು ನುಡಿದಿದ್ದಾರೆ.

ಈ ನಡುವೆ, ಭಾರತ ದಂಡ ಸಂಹಿತೆ 409 (ನಂಬಿಕೆ ಉಲ್ಲಂಘಿಸಿದ ಅಪರಾಧ) ಸೆಕ್ಷನ್ ಅಡಿಯಲ್ಲಿ ಶ್ರೀಶಾಂತ್ ಅವರನ್ನು ವಿಚಾರಣೆಗೆ ಒಳಪಡಿಸಲು ಪೊಲೀಸರು ಮುಂದಾಗಿದ್ದಾರೆ. ಆರೋಪ ಸಾಬೀತಾದರೆ ಜೀವಾವಧಿ ಶಿಕ್ಷೆ ಅನುಭವಿಸಬೇಕಾಗುತ್ತದೆ.

ಪೊಲೀಸ್ ಕಸ್ಟಡಿ ವಿಸ್ತರಣೆ:  ಶ್ರೀಶಾಂತ್, ಅಜಿತ್ ಚಾಂಡಿಲ ಹಾಗೂ ಅಂಕಿತ್ ಚವಾಣ್ ಅವರ ಪೊಲೀಸ್ ಕಸ್ಟಡಿ ಅವಧಿ ಮಂಗಳವಾರ ಕೊನೆಗೊಂಡಿದೆ. ಆದರೆ ಹೆಚ್ಚಿನ ವಿಚಾರಣೆಗಾಗಿ ಮತ್ತೆ ಐದು ದಿನ ಸಮಯಾವಕಾಶ ಕೋರಿದ್ದ ದೆಹಲಿ ಪೊಲೀಸರ ಮನವಿಯನ್ನು ನ್ಯಾಯಾಲಯ ಪುರಸ್ಕರಿಸಿದೆ.

ಜೈಪುರಕ್ಕೆ ಶ್ರೀಶಾಂತ್: ರಾಜಸ್ತಾನ ರಾಯಲ್ಸ್ ವೇಗಿ ಶ್ರೀಶಾಂತ್ ಅವರನ್ನು ಹೆಚ್ಚಿನ ವಿಚಾರಣೆಗಾಗಿ ಪೊಲೀಸರು ಮಂಗಳವಾರ ಜೈಪುರಕ್ಕೆ ಕರೆದುಕೊಂಡು ಹೋಗಿದ್ದರು. ಅವರನ್ನು ನಗರದಲ್ಲಿರುವ ಮೇರಿಯಟ್ ಹೋಟೆಲ್‌ಗೆ ಕರೆದುಕೊಂಡು ಹೋಗಲಾಗಿತ್ತು ಎಂದು ಮೂಲಗಳು ತಿಳಿಸಿವೆ.

ಅಮಾನತು: ಮಾರುಕಟ್ಟೆ ವ್ಯವಹಾರ ವಿಭಾಗದಲ್ಲಿ ಸಹಾಯಕ ಮ್ಯಾನೇಜರ್ ಆಗಿ ಕಾರ್ಯನಿರ್ವಹಿಸುತ್ತಿದ್ದ ಶ್ರೀಶಾಂತ್ ಅವರನ್ನು ಭಾರತ್ ಪೆಟ್ರೋಲಿಯಂ ಕಾರ್ಪೊರೇಷನ್ ಲಿಮಿಟೆಡ್ (ಬಿಪಿಸಿಎಲ್) ಅಮಾನತುಗೊಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT