ಭಾನುವಾರ, ಜೂನ್ 20, 2021
26 °C

ಶ್ರೀ ಕ್ಷೇತ್ರ ಒಡಿಯೂರು

ನವೀನ್ ಭಟ್,ಇಳಂತಿಲ Updated:

ಅಕ್ಷರ ಗಾತ್ರ : | |

ಶ್ರೀ ಕ್ಷೇತ್ರ ಒಡಿಯೂರು

ದಕ್ಷಿಣ ಕನ್ನಡ ಜಿಲ್ಲೆ ಬಂಟ್ವಾಳ ತಾಲ್ಲೂಕಿನ ಒಡಿಯೂರು ಕ್ಷೇತ್ರವನ್ನು ದಕ್ಷಿಣದ ಗಾಣಗಾಪುರ ಎಂದೂ ಕರೆಯುತ್ತಾರೆ. ಇದು ರಮಣೀಯ ಪ್ರಕೃತಿಯ ಮಧ್ಯೆ ಬೆಟ್ಟ ಗುಡ್ಡಗಳಿಂದ ಆವೃತ್ತವಾಗಿದ್ದು ಅಪಾರ ಭಕ್ತರನ್ನು ಆಕರ್ಷಿಸುತ್ತಿದೆ.ಶ್ರೀ ಕ್ಷೇತ್ರವನ್ನು ಪ್ರವೇಶಿವಾಗ ನಲವತ್ತು ಅಡಿ ಎತ್ತರದ ಭವ್ಯ ಗೋಪುರ ಎದುರಾಗುತ್ತದೆ. ಇದರಲ್ಲಿನ ಪುರಾಣ, ಇತಿಹಾಸ, ನೀತಿ ಬೋಧಕ ಚಿತ್ರಗಳು ಕಣ್ಮನ ಸೆಳೆಯುತ್ತವೆ. ಪೂರ್ವ ಭಾಗದಲ್ಲಿ ಹನುಮದ್ವಿಲಾಸದ ಕಥಾನಕ, ದಕ್ಷಿಣ ಭಾಗದಲ್ಲಿ ಶಿವಲೀಲೆಯ ಕಥೆಗಳು ಚಿತ್ರದ ರೂಪ ತಳೆದಿವೆ.

 

ಗೋಪುರದಲ್ಲಿ ಗುರು ದತ್ತಾತ್ರೇಯರ ಮಹಿಮೆ ಸಾರುವ ಕಲಾಕೃತಿಗಳು ಮತ್ತು ಪೌರಾಣಿಕ ವರ್ಣಚಿತ್ರಗಳಿವೆ. ಒಡಿಯೂರು ಕ್ಷೇತ್ರದ ಶಿಲ್ಪಕಲೆಯು ವೇಸರ ಶೈಲಿಯಲ್ಲಿದ್ದು, ಅಷ್ಟಪಟ್ಟಿಯಾಕಾರದಲ್ಲಿ ರಚಿತವಾಗಿದೆ.ಶಿಲಾಮಯ ಗರ್ಭಗುಡಿಯ ನಾಲ್ಕೂ ದಿಕ್ಕಿನಲ್ಲಿ ಚತುರ್ವೇದಗಳ ಸ್ವರೂಪವನ್ನು ಚಿತ್ರಿಸಲಾಗಿದೆ. ಶಿಖರ ಭಾಗದಲ್ಲಿ ವಿರಾಜಮಾನವಾಗಿರುವ 5 ಕಲಶಗಳು ಪಂಚಭೂತ, ಪಂಚತತ್ವದ ಪ್ರತೀಕವಾಗಿವೆ.ಗುರು ಶ್ರೀ ದತ್ತಾತ್ರೇಯ ಮತ್ತು ಆಂಜನೇಯ ಸ್ವಾಮಿ ಇಲ್ಲಿನ ಪ್ರಧಾನ ದೇವರು. ಮತ್ತೊಂದು ವಿಷೇಷವೆಂದರೆ ವಿಷ್ಣು ಮತ್ತು ಶಿವನ ಸ್ವರೂಪವನ್ನು ಇಲ್ಲಿ ಒಂದೇ ಕಡೆ ಆರಾಧಿಸಲಾಗುತ್ತದೆ.ಗರ್ಭಗುಡಿಯಲ್ಲಿ ಇರುವ ದತ್ತಾತ್ರೆಯರ ಸ್ಫಟಿಕ ವಿಗ್ರಹ ಹಾಗೂ ಕೃಷ್ಣಶಿಲೆಯಿಂದ ರೂಪುಗೊಂಡ ಐದು ಅಡಿ ನಾಲ್ಕು ಇಂಚು ಎತ್ತರದ ಆಂಜನೇಯ ಸ್ವಾಮಿ ವಿಗ್ರಹ ಎಂಥವರಲ್ಲೂ ಪೂಜ್ಯ ಭಾವನೆ ಮೂಡಿಸುತ್ತದೆ.

 

ಇಲ್ಲಿ ನಾಗಾರಾಧನೆಗೂ ಅವಕಾಶವಿದೆ. ಪರಿವಾರ ದೇವತೆಗಳಾಗಿ ಬಲಮುರಿ ಗಣಪ, ಸ್ಕಂದಾನುಗ್ರಹಕಾರ, ಸುಬ್ರಹ್ಮಣ್ಯ, ವಜ್ರಮಾತೆ, ಭದ್ರಕಾಳಿಯನ್ನು ಆರಾಧಿಸುತ್ತಾರೆ. ಇಲ್ಲಿನ ಶ್ರೀ ನಿತ್ಯಾನಂದ ಗುಹೆಯ ತಳಭಾಗದಲ್ಲಿ ಕಿವಿಗೊಟ್ಟು ಆಲಿಸಿದರೆ  ಓಂಕಾರ  ಪ್ರತಿಧ್ವನಿಸುತ್ತದೆ.ಈ ಕ್ಷೇತ್ರದಲ್ಲಿ ಹನುಮಜಯಂತಿ, ಲಲಿತಾಪಂಚಮಿ, ನಾಗರಪಂಚಮಿ, ಪ್ರತಿಷ್ಠಾ ವರ್ದಂತಿ ಸೇರಿದಂತೆ ವಿಶೇಷ ಉತ್ಸವ, ಪರ್ವಗಳು ನಡೆಯುತ್ತವೆ.ಶ್ರೀ ಸಂಸ್ಥಾನದ ಗುರುದೇವಾನಂದ ಸ್ವಾಮೀಜಿಯವರ ಆಸಕ್ತಿಯ ಪ್ರತೀಕವಾಗಿ ವಿಶಾಲ ಗೋಶಾಲೆಯಿದ್ದು ನೂರಕ್ಕೂ ಮಿಕ್ಕಿ ಗೋವುಗಳಿವೆ. ಸಂಸ್ಕಾರಯುತ ಶಿಕ್ಷಣಕ್ಕೆಂದು ಗುರುದೇವ ವಿದ್ಯಾಪೀಠ, ಗುರುಕುಲ ಸಂಗೀತ ಶಾಲೆಯಿದ್ದು ಶಿಕ್ಷಣಕ್ಕೆ ಹೆಚ್ಚಿನ ಪ್ರಾಮುಖ್ಯತೆ ನೀಡುತ್ತಿದೆ. ಕ್ಷೇತ್ರಕ್ಕೆ ಬರುವ ಭಕ್ತರಿಗಾಗಿ ನಿತ್ಯ ಮಧ್ಯಾಹ್ನ ಮತ್ತು ರಾತ್ರಿ ಅನ್ನದಾನದ, ಹೊರ ರಾಜ್ಯದ ಭಕ್ತಾದಿಗಳಿಗೆ ರಾತ್ರಿ ವಸತಿ ವ್ಯವಸ್ಥೆಯಿದೆ. ಮಾಹಿತಿಗೆ: 08255- 266211, 266282ಸೇವಾ ವಿವರ

ಶಾಶ್ವತ ನಿತ್ಯ ಪೂಜೆ  1001 ರೂ

ರಂಗಪೂಜೆ             1001 ರೂ

ಸರ್ವಸೇವೆ               501 ರೂ

ಸಾಮೂಹಿಕ ಗಾಯತ್ರೀ ಹವನ (ಪ್ರತೀ ಸಂಕ್ರಮಣದಂದು) 251 ರೂ

ಮಹಾಪೂಜೆ              101 ರೂ

ತುಲಾಭಾರ ಸೇವೆ       101 ರೂವಿಶೇಷ ಬೆಳ್ಳಿರಥ ಸೇವೆ  ಮಾಡಿಸುವವರಿಗೆ ಶ್ರೀ ಸಂಸ್ಥಾನದಲ್ಲಿ ಅವಕಾಶವಿದೆ. ಅಂಚೆ ಮೂಲಕ ಹಣ ಕಳಿಸುವವರಿಗೆ ಅವರವರ ಸಂಕಲ್ಪದ ಪ್ರಕಾರ ಪೂಜೆ ನೆರವೇರಿಸಿ ಪ್ರಸಾದವನ್ನು ಕಳುಹಿಸಲಾಗುವುದು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.