ಷೇರುಪೇಟೆ: ಹೆಚ್ಚಿದ ದಲ್ಲಾಳಿ ಹಿಡಿತ
ನವದೆಹಲಿ(ಪಿಟಿಐ): ಮುಂಬೈ ಷೇರು ಪೇಟೆ (ಬಿಎಸ್ಇ) ಮತ್ತು ರಾಷ್ಟ್ರೀಯ ಷೇರುಪೇಟೆಯಲ್ಲಿ (ನಿಫ್ಟಿ) ಕಳೆದ ಎರಡು ದಶಕಗಳಿಂದ ದಲ್ಲಾಳಿಗಳ ಹಿಡಿತ ಬಿಗಿಗೊಳ್ಳುತ್ತಿದೆ ಎನ್ನುತ್ತವೆ ಭಾರತೀಯ ಷೇರು ಪೇಟೆ ನಿಯಂತ್ರಣ ಮಂಡಳಿ (ಸೆಬಿ) ಅಂಕಿಅಂಶಗಳು.
ಸದ್ಯ ಷೇರುಪೇಟೆಯ ಒಟ್ಟು ಬಂಡವಾಳದಲ್ಲಿ ಶೇ 50ಕ್ಕಿಂತಲೂ ಹೆಚ್ಚಿನ ಮೊತ್ತದ ಮೇಲೆ ಷೇರು ದಲ್ಲಾಳಿಗಳು ಬಿಗಿ ಹಿಡಿತ ಹೊಂದಿದ್ದಾರೆ. ಭಾಗಶಃ ಮೊತ್ತ ದಲ್ಲಾಳಿಗಳ ಮೂಲಕವೇ ಪೇಟೆಗೆ ಹರಿದು ಬರುತ್ತಿದ್ದು, ಇತ್ತೀಚಿನ ದಿನಗಳಲ್ಲಿ ಇದು ದಾಖಲೆ ಮಟ್ಟಕ್ಕೆ ಏರಿಕೆ ಕಂಡಿದೆ.
`ಸೆಬಿ~ ಇತ್ತೀಚೆಗೆ ಬಿಡುಗಡೆ ಮಾಡಿರುವ ಅಂಕಿ-ಅಂಶಗಳ ಪ್ರಕಾರ, `ಬಿಎಸ್ಇ~ಯ ಪ್ರಮುಖ 50 ಷೇರು ದಲ್ಲಾಳಿಗಳು ಇಡೀ ಷೇರುಪೇಟೆಯಲ್ಲಿನ ಶೇ 57.5ರಷ್ಟು ಬಂಡವಾಳದ ಮೇಲೆ ಹಿಡಿತ ಹೊಂದಿದ್ದಾರೆ.
`ಎನ್ಎಸ್ಇ~ಯಲ್ಲೂ ದಲ್ಲಾಳಿಗಳು ಶೇ 64.3ರಷ್ಟು ಪಾಲು ಹೊಂದಿದ್ದಾರೆ. 1994-05ರಲ್ಲಿ ದಲ್ಲಾಳಿಗಳ ಹಿಡಿತ ದಾಖಲೆ ಮಟ್ಟದಲ್ಲಿತ್ತು. ಅದಕ್ಕೆ ಹೋಲಿಸಿದರೆ ಈಗಿನದು ದಾಖಲೆ.
ಕಳೆದ ಹಣಕಾಸು ವರ್ಷದಲ್ಲಿ (2011-12) `ಎನ್ಎಸ್ಇ~ಯಲ್ಲಿ 25 ಷೇರು ದಲ್ಲಾಳಿಗಳು ಮೊದಲ 9 ತಿಂಗಳ ವರೆಗೆ ಶೇ 48.3ರಷ್ಟು ಬಂಡವಾಳದ ಮೇಲೆ ಹಿಡಿತ ಹೊಂದಿದ್ದರು. ಷೇರು ದಲ್ಲಾಳಿಗಳ ಮಾರುಕಟ್ಟೆ ಪಾಲು ಕಳೆದ ಎರಡು ವರ್ಷಗಳಲ್ಲಿ ಶೇ 51.9ರಷ್ಟು ಹೆಚ್ಚಿದೆ.
200 ಅಕ್ರಮ ವಹಿವಾಟು:
ಷೇರು ಬೆಲೆ ಏರಿಳಿತ, ಅಕ್ರಮ ವಹಿವಾಟು ಇತ್ಯಾದಿ ಪ್ರಕರಣಗಳಿಗೆ ಸಂಬಂಧಿಸಿದಂತೆ `ಸೆಬಿ~ ಪ್ರಕಸ್ತ ವರ್ಷ 200 ಸಂಶಯಾತ್ಮಕ ಪ್ರಕರಣಗಳನ್ನು ಗುರುತಿಸಿದೆ. ಈವರೆಗೆ 150 ಕಂಪೆನಿಗಳಿಗೆ ನೊಟೀಸ್ ಜಾರಿಗೊಳಿಸಲಾಗಿದೆ. ಷೇರು ದರದಲ್ಲಿ ವ್ಯತ್ಯಾಸ ತಂದ 60 ಕಂಪೆನಿಗಳ ಮೇಲೆ ಸತತ ನಿಗಾ ಇರಿಸಲಾಗಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ `ಬಿಎಸ್ಇ~ ಮತ್ತು `ಎನ್ಎಸ್ಇ~ಯಲ್ಲಿ ಅಕ್ರಮ ವಹಿವಾಟು ಕ್ರಮವಾಗಿ ಶೇ 90 ಮತ್ತು ಶೇ 60ರಷ್ಟು ಹೆಚ್ಚಿದೆ. ಈ ಹಿನ್ನೆಲೆಯಲ್ಲಿ ಷೇರು ದಲ್ಲಾಳಿಗಳಿಗೂ ಎಚ್ಚರಿಕೆ ರವಾನಿಸಲಾಗಿದೆ. ನೊಟೀಸ್ ಪಡೆದುಕೊಂಡ ಕಂಪೆನಿಗಳ ಪಟ್ಟಿಯಲ್ಲಿ ಸರ್ಕಾರಿ ಸ್ವಾಮ್ಯದ `ಎಂಎಂಟಿಸಿ~, `ಎಂಒಐಎಲ್~ ಮತ್ತು ಹಿಂದೂಸ್ತಾನ್ ಕಾಪರ್ ಸೇರಿವೆ.
ವಿಜಯ ಮಲ್ಯ ಒಡೆತನದ ಯುಬಿ ಸಮೂಹ, ಮಂಗಳೂರು ಕೆಮಿಕಲ್ಸ್ ಅಂಡ್ ಫರ್ಟಿಲೈಸರ್ಸ್, ಯುನೈಟೆಡ್ ಬ್ರಿವರೀಸ್, ಪಿರಾಮಲ್ ಲೈಫ್ ಸೈನ್ಸ್, ಬಜಾಜ್ ರಿಯಲನ್ಸ್ ಇಂಡಸ್ಟ್ರೀಸ್, ಸ್ಟೆರ್ಲೈಟ್, ಎಚ್ಸಿಎಲ್ ಇನ್ಫೋ, ಜಿವಿಕೆ ಪವರ್, ಸುಜ್ಲಾನ್ ಸೇರಿದಂತೆ ಹಲವು ಕಂಪೆನಿಗಳಿಂದ `ಸೆಬಿ~ ಸಷ್ಟೀಕರಣ ಕೋರಿದೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.