ಸೋಮವಾರ, ಮೇ 23, 2022
26 °C

ಸಂಕ್ಷಿಪ್ತ ರಾಷ್ಟ್ರೀಯ ಸುದ್ದಿಗಳು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಏಳು ತೈವಾನ್ ನಾಗರಿಕರ ಬಂಧನ

ಶಿಮ್ಲಾ (ಪಿಟಿಐ):
`ನನ್ನನ್ನು ಕೊಲ್ಲಲು ಮಹಿಳಾ ಏಜೆಂಟ್ ಒಬ್ಬರಿಗೆ ಚೀನಾ ತರಬೇತಿ ನೀಡುತ್ತಿದೆ~ ಎಂಬ ಬೌದ್ಧಗುರು ದಲೈಲಾಮ ಅವರ ಆರೋಪದ ಹಿನ್ನೆಲೆಯಲ್ಲಿ ಸಮೀಪದ ಮಂಡಿ ಜಿಲ್ಲೆಯ ಬೌದ್ಧ ಮಂದಿರದ ಮೇಲೆ ದಾಳಿ ನಡೆಸಿದ ಪೊಲೀಸರು ಏಳು ತೈವಾನ್ ನಾಗರಿಕರನ್ನು ಬಂಧಿಸಿ, ಅವರಿಂದ ನಗದು ಹಾಗೂ ಸಿಮ್ ಕಾರ್ಡ್‌ಗಳನ್ನು ವಶಪಡಿಸಿಕೊಂಡಿದ್ದಾರೆ.ಕೇಂದ್ರ ಬೇಹುಗಾರಿಕಾ ಸಂಸ್ಥೆಯ ಮಾಹಿತಿ ಮೇರೆಗೆ ಮಂಡಿ ಜಿಲ್ಲೆಯ ಚೌಂತ್ರ ಹಳ್ಳಿಯಲ್ಲಿರುವ ಬೌದ್ಧ ಮಂದಿರಗಳ ಮೇಲೆ ಮಂಗಳವಾರ ರಾತ್ರಿ ದಾಳಿ ನಡೆಸಿದ ಪೊಲೀಸರು 30 ಲಕ್ಷ ರೂಪಾಯಿ, 3000 ಡಾಲರ್, ಸಿಮ್ ಕಾರ್ಡ್‌ಗಳು, ಅಂತರರಾಷ್ಟ್ರೀಯ ಎಟಿಎಂ ಕಾರ್ಡ್‌ಗಳು ಹಾಗೂ ಮೊಬೈಲ್ ಫೋನ್‌ಗಳನ್ನು ವಶಪಡಿಸಿಕೊಂಡಿದ್ದಾರೆ. ದಾಳಿಯ ಸಮಯದಲ್ಲಿ ಕೆಲವರು ತಪ್ಪಿಸಿಕೊಂಡಿದ್ದಾರೆ.ವೀಸಾ ಅವಧಿ ಮುಗಿದ ನಂತರವೂ ಕಾನೂನು ಬಾಹಿರವಾಗಿ ಬೌದ್ಧ ಮಂದಿರಗಳಲ್ಲಿ ನೆಲೆಸಿದ್ದ ಆರೋಪದ ಮೇಲೆ ಪೊಲೀಸರು ಇವರನ್ನು ಬಂಧಿಸಿದ್ದಾರೆ.ರಸಗೊಬ್ಬರ ಬೆಲೆ ಇಳಿಕೆಗೆ ಒತ್ತಾಯ

ಭೋಪಾಲ್ (ಪಿಟಿಐ):
ಏರಿಸಿರುವ ರಸಗೊಬ್ಬರ ಬೆಲೆಯನ್ನು ತಕ್ಷಣದಿಂದಲೇ ಇಳಿಸುವಂತೆ ಕೇಂದ್ರ ಸರ್ಕಾರದ ಮೇಲೆ ಒತ್ತಡ ಹೇರುವ ಸಲುವಾಗಿ ಮಧ್ಯಪ್ರದೇಶದ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಇದೇ 15ರಂದು ಒಂದು ದಿನದ ಉಪವಾಸ ಸತ್ಯಾಗ್ರಹ ನಡೆಸುವುದಾಗಿ ತಿಳಿಸಿದ್ದಾರೆ.ಅಂದು ರಾಜ್ಯದ ಎಲ್ಲ ಜಿಲ್ಲಾ ಕೇಂದ್ರಗಳಲ್ಲೂ ಉಪವಾಸ ಸತ್ಯಾಗ್ರಹ ನಡೆಯಲಿದ್ದು, ಶಾಸಕರು, ಪಕ್ಷದ ಕಾರ್ಯಕರ್ತರು  ಪಾಲ್ಗೊಳ್ಳಲಿದ್ದಾರೆ ಎಂದು ಅವರು ಸುದ್ದಿಗಾರರಿಗೆ ಹೇಳಿದ್ದಾರೆ.ಕಳೆದ ಒಂದು ವರ್ಷದಿಂದ ಎಲ್ಲಾ ವಿಧದ ರಸಗೊಬ್ಬರಗಳ ಬೆಲೆ ದುಪ್ಪಟ್ಟಾಗಿದೆ. ಇದರಿಂದ ಕೃಷಿಯನ್ನೇ ನಂಬಿ ಜೀವನ ನಡೆಸುತ್ತಿರುವ ರೈತ ವರ್ಗದ ಮೇಲೆ ಆರ್ಥಿಕ ಹೊರೆ ಬೀಳುತ್ತಿದೆ ಎಂದು ಅವರು ಕಳವಳ ವ್ಯಕ್ತಪಡಿಸಿದ್ದಾರೆ.ಹರಿಯಾಣದಲ್ಲಿ ಲಘು ಭೂಕಂಪನ

ನವದೆಹಲಿ (ಪಿಟಿಐ):
ಹರಿಯಾಣದ ರೋಹ್ಟಕ್‌ನಲ್ಲಿ ಬುಧವಾರ ಮುಂಜಾನೆ ಲಘು ಭೂಕಂಪನ ಸಂಭವಿಸಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.ಭೂಕಂಪದ ತೀವ್ರತೆ ರಿಕ್ಟರ್ ಮಾಪಕದಲ್ಲಿ 2.8ರಷ್ಟು ಇತ್ತು. ಈ ಕಂಪನದಿಂದ ಯಾವುದೇ ಅನಾಹುತ ಸಂಭವಿಸಿದ ವರದಿಗಳಿಲ್ಲ.ಬೆಂಕಿ: 60 ಮಳಿಗೆ, 4 ಲಾರಿ ಭಸ್ಮ

ಹೈದರಾಬಾದ್ (ಪಿಟಿಐ):
ಇಲ್ಲಿನ ಕುಕತ್‌ಪಲ್ಲಿ  ಮೈದಾನದಲ್ಲಿ ಸಂಭವಿಸಿದ ಬೆಂಕಿ ಅನಾಹುತದಲ್ಲಿ 60 ವಸ್ತುಪ್ರದರ್ಶನದ ಮಳಿಗೆಗಳು, ನಾಲ್ಕು ಲಾರಿಗಳು ಭಸ್ಮವಾಗಿವೆ ಎಂದು ಪೊಲೀಸರು ತಿಳಿಸಿದ್ದಾರೆ.ಘಟನೆಯಲ್ಲಿ ಯಾವುದೇ ಸಾವು-ನೋವು ಸಂಭವಿಸಿಲ್ಲ. ಪೊಲೀಸರ ಮಾಹಿತಿ ಪ್ರಕಾರ ಮುಂಜಾನೆ ಮಳಿಗೆಗಳಿಗೆ ಬೆಂಕಿ ಹೊತ್ತಿಕೊಂಡಿದೆ. ನಂತರ ಲಾರಿಗಳನ್ನು ಪಾರ್ಕ್ ಮಾಡುವ ಪ್ರದೇಶಕ್ಕೆ ವ್ಯಾಪಿಸಿದೆ.

ಪರಿಣಾಮವಾಗಿ ಮಳಿಗೆಗಳೊಂದಿಗೆ ಲಾರಿಗಳು ಬೆಂಕಿಗೆ ಆಹುತಿಯಾಗಿವೆ. ಶಾರ್ಟ್ ಸರ್ಕೀಟ್‌ನಿಂದ ಈ ಅನಾಹುತ ಸಂಭವಿಸಿದೆ ಎಂದು ಪೊಲೀಸರು ಶಂಕಿಸಿದ್ದಾರೆ.ಭೂ ಕುಸಿತ: ರೈಲು ಮಾರ್ಗ ಅಸ್ತವ್ಯಸ್ತ

ಸಿಲ್ಚಾರ್ (ಅಸ್ಸಾಂ)(ಪಿಟಿಐ):
ಭಾರಿ ಮಳೆಯಿಂದಾಗಿ ವಿವಿಧ ಕಡೆಗಳಲ್ಲಿ ಭೂ ಕುಸಿತ ಉಂಟಾಗಿದ್ದು, ಗುವಾಹಟಿ ಮತ್ತು ಸಿಲ್ಚಾರ್ ನಡುವಿನ ರಸ್ತೆ ಮಾರ್ಗ ಬಂದ್ ಆಗಿದೆ.ಮೇಘಾಲಯ ಸಮೀಪದ ಮಲಿಧೋರ್ ಮತ್ತು ಕುಲಿಯಾಂಗ್ ನಡುವಿನ ಬಲೇಶ್ವರ್ ಪ್ರದೇಶದಲ್ಲಿ ಭೂ ಕುಸಿತ ಉಂಟಾಗಿದ್ದು, ಇದರಿಂದ ವಾಹನ ಸಂಚಾರ ಅಸ್ತವ್ಯಸ್ತವಾಗಿದೆ. ಭಾರಿ ಮಳೆಯಿಂದಾಗಿ ಈ ಮಾರ್ಗದಲ್ಲಿನ ರೈಲ್ವೆ ಸಂಚಾರವೂ ಅಸ್ತವ್ಯಸ್ತಗೊಂಡಿದೆ. ಜೂನ್ 1ರಿಂದ ಈ ಪ್ರದೇಶದಲ್ಲಿ ಭಾರಿ ಮಳೆಯಾಗುತ್ತಿದೆ.ವಿಮಾನ ತುರ್ತು ಭೂ ಸ್ಪರ್ಶ

ಜಮ್ಮು (ಐಎಎನ್‌ಎಸ್):
130 ಪ್ರಯಾಣಿಕರನ್ನು ಹೊತ್ತೊಯ್ಯುತ್ತಿದ್ದ ಇಂಡಿಗೋ ವಿಮಾನ ಬುಧವಾರ ಇಲ್ಲಿನ  ವಿಮಾನ ನಿಲ್ದಾಣದಲ್ಲಿ ತುರ್ತು ಭೂ ಸ್ಪರ್ಶ ಮಾಡಿದೆ.ದೆಹಲಿಯಿಂದ ಪ್ರಯಾಣ ಬೆಳಸಿದ ಈ ವಿಮಾನದಲ್ಲಿ ಹೊಗೆ ಕಾಣಿಸಿಕೊಂಡಿದೆ. ತಾಂತ್ರಿಕ ತೊಂದರೆ ಅರಿತ ಪೈಲಟ್‌ಗಳು ವಿಮಾನವನ್ನು ಜಮ್ಮುವಿನಲ್ಲಿ ಇಳಿಸಲು ತೀರ್ಮಾನಿಸಿದ್ದರು ಎಂದು ವಿಮಾನ ನಿಲ್ದಾಣದ ಮೂಲಗಳು ತಿಳಿಸಿವೆ.`ಆರೋಗ್ಯ ಸೇವೆ: ಸರ್ಕಾರ ತೋರುವ ಔದಾರ್ಯ ಅಲ್ಲ~

ನವದೆಹಲಿ (ಪಿಟಿಐ):
ನಿವೃತ್ತ ನೌಕರರಿಗೆ ಸರ್ಕಾರಿ ವೆಚ್ಚದಲ್ಲಿ ಆರೋಗ್ಯ ಸೇವೆ ಕಲ್ಪಿಸುವುದು ಔದಾರ್ಯವಲ್ಲ. ಆ ನೌಕರರು ತಾವು ಸಲ್ಲಿಸಿದ ಸೇವೆಗಾಗಿ ಪಡೆಯಬೇಕಾದ ಮೌಲ್ಯಯುತ ಹಕ್ಕು ಎಂದು ದೆಹಲಿ ಜಿಲ್ಲಾ ಗ್ರಾಹಕ ವೇದಿಕೆ ಹೇಳಿದೆ.ಈ ಪ್ರಕರಣದಲ್ಲಿ ದೆಹಲಿ ಮಹಾನಗರಪಾಲಿಕೆಗೆ ನಿವೃತ್ತ ನೌಕರರೊಬ್ಬರ ವೈದ್ಯಕೀಯ ವೆಚ್ಚ ಭರಿಸುವಂತೆ ಗ್ರಾಹಕ ವೇದಿಕೆ ಸೂಚಿಸಿದೆ. ದೆಹಲಿ ಪಾಲಿಕೆಯ ಮಾಜಿ ನೌಕರ ರಾಮ್ ರತನ್ ಅಗರವಾಲ್ ಎಂಬುವವರು ಸಲ್ಲಿಸಿದ ಅರ್ಜಿಯ ಹಿನ್ನೆಲೆಯಲ್ಲಿ ಗ್ರಾಹಕ ವೇದಿಕೆ ಈ ಅಭಿಪ್ರಾಯ ವ್ಯಕ್ತಪಡಿಸಿದೆ.ದೆಹಲಿ ಸರ್ಕಾರದ ನೌಕರರು ಆರೋಗ್ಯ ಕಾರ್ಯಕ್ರಮ ಯೋಜನೆಯಡಿ ಅರ್ಹತೆ ಪಡೆದಿದ್ದರೂ ಪಾಲಿಕೆ ತಮ್ಮ ವೈದ್ಯಕೀಯ ವೆಚ್ಚ ಭರಿಸಲು ಹಿಂದೇಟು ಹಾಕುತ್ತಿದೆ ಎಂದು ಅಗರವಾಲ್ ದೂರಿದ್ದರು.ವೈದ್ಯಕೀಯ ಚಿಕಿತ್ಸೆ ಪಡೆಯುವ ಮುನ್ನ ಅರ್ಹ ಅಧಿಕಾರಿಯಿಂದ ಅವರು ಅನುಮತಿ ಪಡೆದಿರಲಿಲ್ಲ ಎಂದು ದೆಹಲಿ ಪಾಲಿಕೆ ವಾದಿಸಿತ್ತು.`ಯುಪಿಎ ಆರ್ಥಿಕ ನೀತಿಗೆ ಪಾರ್ಶ್ವವಾಯು~

ನವದೆಹಲಿ (ಐಎಎನ್‌ಎಸ್):
ಕುಸಿಯುತ್ತಿರುವ ಅಭಿವೃದ್ಧಿ ದರ ಮತ್ತು ರಾಜಕೀಯ ಬಿಕ್ಕಟ್ಟಿನಿಂದ ದೇಶದಲ್ಲಿ ಬಂಡವಾಳ ಹೂಡಿಕೆ ಪ್ರಮಾಣ ಕಡಿಮೆಯಾಗಿದೆ ಎಂದು ಜಾಗತಿಕ ಸಾಲ ಮೌಲ್ಯ ಮಾಪನ ಸಂಸ್ಥೆ ಸ್ಟಾಂಡರ್ಡ್ ಅಂಡ್ ಪೂರ್ಸ್‌ (ಎಸ್ ಅಂಡ್ ಪಿ) ಎಚ್ಚರಿಕೆ ನೀಡಿದ ಬೆನ್ನ್ಲ್ಲಲೇ, ಯುಪಿಎ ಸರ್ಕಾರದ ವಿರುದ್ಧ ಬಿಜೆಪಿ ಮಂಗಳವಾರ ತೀವ್ರ ವಾಗ್ದಾಳಿ ನಡೆಸಿದೆ.ಸರ್ಕಾರ ಎಸ್ ಅಂಡ್‌ಪಿ ವರದಿ ತಳ್ಳಿ ಹಾಕುವ ಕ್ರಮ ಅನುಸರಿಸಿದೆ. ಸರ್ಕಾರದ ನೀತಿ ವೈಫಲ್ಯದಿಂದಾಗಿ ಆರ್ಥಿಕ ಸ್ಥಿತಿ ಕುಸಿದಿದೆ ಎಂದು ಬಿಜೆಪಿ ವಕ್ತಾರ ಪ್ರಕಾಶ್ ಜಾವಡೇಕರ್ ಟೀಕಿಸಿದ್ದಾರೆ.ಈ ವರದಿಯನ್ನು ನೀವು ತಿರಸ್ಕರಿಸಬಹುದು, ಆದರೆ ಜಗತ್ತಿನಾದ್ಯಂತ ಇರುವ ಹೂಡಿಕೆದಾರರು ಇದನ್ನು ತಿರಸ್ಕರಿಸುವುದಿಲ್ಲ. ಆದರೆ ಅಂತಿಮವಾಗಿ ಭಾರತದ ಸಾಲ ಹೆಚ್ಚಾಗಲಿದೆ ಎಂದು ಅವರು ಹೇಳಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.