ಶನಿವಾರ, ಮಾರ್ಚ್ 6, 2021
32 °C
ಮತ ಚಲಾವಣೆಗೆ ರಾಜಧಾನಿಯಲ್ಲಿ ನಾಗರಿಕರ ನಿರುತ್ಸಾಹ

ಸಂಖ್ಯೆಯಲ್ಲಿ ಗರಿಷ್ಠ: ಮತದಾನದಲ್ಲಿ ಕನಿಷ್ಠ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಸಂಖ್ಯೆಯಲ್ಲಿ ಗರಿಷ್ಠ: ಮತದಾನದಲ್ಲಿ ಕನಿಷ್ಠ

ಬೆಂಗಳೂರು: ಪಾಲಿಕೆ ಚುನಾವಣೆಯಲ್ಲಿ ಇದುವರೆಗೆ ಮತದಾನ ಒಮ್ಮೆಯೂ ಶೇ 45 ದಾಟಿಲ್ಲ. ರಾಜ್ಯ ಚುನಾವಣಾ ಆಯೋಗವನ್ನು ಈ ಸಂಗತಿ ಕಳವಳಕ್ಕೆ ಈಡುಮಾಡಿದೆ. ‘ಶೇ ನೂರರಷ್ಟು ಮತದಾನ ನಡೆಯುತ್ತದೆ ಎಂಬ ನಿರೀಕ್ಷೆ ಇಟ್ಟುಕೊಂಡೇ ನಾವು ಚುನಾವಣೆಗೆ ಸಿದ್ಧತೆ ಮಾಡಿಕೊಳ್ಳುತ್ತೇವೆ. ಆದರೆ, ಬೆಂಗಳೂರು ಪಾಲಿಕೆ ಚುನಾವಣೆಯಲ್ಲಿ ಇದುವರೆಗೆ ಮತದಾನದ ಪ್ರಮಾಣ ಶೇ 45 ದಾಟಿಲ್ಲ’ ಎಂದು ಹೇಳುತ್ತಾರೆ ರಾಜ್ಯ ಚುನಾವಣಾ ಆಯೋಗದ ಆಯುಕ್ತ ಪಿ.ಎನ್‌. ಶ್ರೀನಿವಾಸಾಚಾರಿ.ರಾಜ್ಯ ಸರ್ಕಾರ ಬೆಂಗಳೂರು ಮಹಾನಗರ ಪಾಲಿಕೆಗೆ ಏಳು ನಗರಸಭೆ, ಒಂದು ಪುರಸಭೆ ಹಾಗೂ 11 ಹಳ್ಳಿಗಳನ್ನು ಸೇರ್ಪಡೆ ಮಾಡಿ ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ರಚನೆ ಮಾಡಿತು. ಬಿಬಿಎಂಪಿ ರಚನೆಯಾದ ಮೇಲೆ 2010ರಲ್ಲಿ ನಡೆದ ಚುನಾವಣೆ ಕಾಲಕ್ಕೆ  ಮತದಾರರ ಸಂಖ್ಯೆಯಲ್ಲಿ ಸರಿಸುಮಾರು ಮೂರು ಪಟ್ಟು ಹೆಚ್ಚಾಗಿತ್ತು. ಆಗಲೂ ಮತದಾನ ಹೆಚ್ಚಿರಲಿಲ್ಲ.‘ಮತದಾನದ ಕುರಿತು ಜನರಲ್ಲಿ ಜಾಗೃತಿ ಉಂಟುಮಾಡಲು ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಮೂಲಕ ಪ್ರಚಾರ ಕಾರ್ಯ ನಡೆಸಲು ಉದ್ದೇಶಿಸಲಾಗಿದೆ. ಈಗಾಗಲೇ ಅಲ್ಲಿನ ಅಧಿಕಾರಿಗಳ ಜತೆ ಒಂದು ಸುತ್ತಿನ ಸಭೆ ನಡೆಸಿದ್ದೇನೆ. ಮುಂದೆ ಕೈಗೊಳ್ಳಬೇಕಾದ ಕ್ರಮಗಳ ಕುರಿತು ಚರ್ಚಿಸಲು ಮತ್ತೆ ಸಭೆ ಕರೆಯಲಿದ್ದೇನೆ’ ಎಂದು ಹೇಳುತ್ತಾರೆ ಶ್ರೀನಿವಾಸಾಚಾರಿ.‘ಮತದಾನ ಕಡ್ಡಾಯ ಮಾಡುವುದು ಪರಿಹಾರವೇ’ ಎಂದು ಪ್ರಶ್ನಿಸಿದರೆ, ‘ಕೇವಲ ನಿಯಮಗಳಿಂದ ಜನರನ್ನು ಮತಗಟ್ಟೆಗಳಿಗೆ ಸೆಳೆಯಲು ಸಾಧ್ಯವಿಲ್ಲ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ತಮ್ಮ ಹಕ್ಕು ಚಲಾಯಿಸುವ ಜನ ಮುಂದೆ ಬರಬೇಕು’ ಎಂದು ಅಭಿಪ್ರಾಯಪಡುತ್ತಾರೆ.‘ಲೋಕಸಭೆ ಮತ್ತು ವಿಧಾನಸಭೆ ಚುನಾವಣೆಯಂತೆ ಮತ್ತೆ ಖ್ಯಾತ ನಾಮರನ್ನು ಬ್ರ್ಯಾಂಡ್‌ ಅಂಬಾಸಿಡರ್‌ ಆಗಿ ಬಳಸಿಕೊಳ್ಳಲಾಗುವುದೇ’ ಎಂದು ಕೇಳಿದಾಗ, ‘ಇಲ್ಲ, ಅಂತಹ ಯೋಚನೆ ಇಲ್ಲ. ಆಯೋಗದ ಪರವಾಗಿ ಏನು ಹೇಳುವುದಿದ್ದರೂ ನಾನೇ ಹೇಳುತ್ತೇನೆ’ ಎಂದು ಅವರು ನಗುತ್ತಾರೆ.‘ಕೆಲವು ವಾರಗಳ ಹಿಂದೆ ನಡೆದ ಗ್ರಾಮ ಪಂಚಾಯ್ತಿ ಚುನಾವಣೆಯಲ್ಲಿ ಹಲವು ಗ್ರಾಮಗಳಲ್ಲಿ ಮತದಾನದ ಪ್ರಮಾಣ ಶೇ 90ರಷ್ಟು ತಲುಪಿದೆ. ಅಂತಹ ಸಾಧನೆಯನ್ನೇ ನಾವು ಬೆಂಗ ಳೂರಿನಲ್ಲೂ ನಿರೀಕ್ಷಿಸಿದ್ದೇವೆ’ ಎನ್ನುತ್ತಾರೆ ಅವರು. ಈ ಮಧ್ಯೆ ಬಿಬಿಎಂಪಿ ಕೂಡ ಎಲ್ಲ ಬಡಾವಣೆಗಳಲ್ಲಿ ಜಾಗೃತಿ ಅಭಿಯಾನ ಹಮ್ಮಿಕೊಳ್ಳಲು ನಿರ್ಧರಿಸಿದೆ. ಸಾರ್ವಜನಿಕ ಸ್ಥಳಗಳಲ್ಲಿ ಸಹ ಮತದಾನದ ಕುರಿತು ಜಾಗೃತಿಗಾಗಿ ಕಾರ್ಯಕ್ರಮ ಹಮ್ಮಿಕೊಳ್ಳಲಿದೆ. 2010ರಲ್ಲಿ ನಡೆದ ಚುನಾವಣೆಯಲ್ಲಿ ಬೆಳ್ಳಂದೂರು ವಾರ್ಡ್‌ ಕನಿಷ್ಠ ಮತದಾನ (ಶೇ 29.26) ಕಂಡರೆ, ವರ್ತೂರು ಗರಿಷ್ಠ ಪ್ರಮಾಣದ ಮತದಾನ (ಶೇ 61.59) ಕಂಡಿತ್ತು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.