ಶುಕ್ರವಾರ, ಜನವರಿ 24, 2020
28 °C

ಸಂಗೀತವೇ ಸುಖ

ಗಣೇಶ ಅಮೀನಗಡ Updated:

ಅಕ್ಷರ ಗಾತ್ರ : | |

ಸಂಗೀತವೇ ಸುಖ

ಮೈಸೂರಿನ ರಾ. ಸತ್ಯನಾರಾಯಣ ಮತ್ತು ಬೆಂಗಳೂರಿನ ಮೈಸೂರು ವಿ. ಸುಬ್ರಹ್ಮಣ್ಯ ಅವರಿಗೀಗ ಕೇಂದ್ರ ಸಂಗೀತ, ನಾಟಕ ಅಕಾಡೆಮಿ ಸಮ್ಮಾನ. ಪ್ರದರ್ಶನ ಕಲಾಕ್ಷೇತ್ರದಲ್ಲಿನ ಸಾಧನೆಗಾಗಿ ಸತ್ಯನಾರಾಯಣ ಅವರಿಗೆ ‘ಅಕಾಡೆಮಿ ರತ್ನ’ ಪುರಸ್ಕಾರ ದೊರೆತಿದ್ದರೆ, ಇದೇ ಕ್ಷೇತ್ರದಲ್ಲಿನ ಸಮಗ್ರ ಸೇವೆಗಾಗಿ ಸುಬ್ರಹ್ಮಣ್ಯ ಅವರಿಗೆ ಅಕಾಡೆಮಿ ಪ್ರಶಸ್ತಿಯ ಗರಿ. ಪ್ರಶಸ್ತಿ ಪ್ರಭೆಯ ಹಿನ್ನೆಲೆಯಲ್ಲಿ ಅವರ ಬದುಕು–ಸಾಧನೆಯ ಕಿರುನೋಟ.ಓದಿದ್ದು ರಸಾಯನಶಾಸ್ತ್ರ, ಪಾಠ ಮಾಡಿದ್ದು ರಸಾಯನಶಾಸ್ತ್ರ ಕುರಿತು. ಆದರೆ, ರಸಾಯನಶಾಸ್ತ್ರ ಪ್ರಾಧ್ಯಾಪಕರೆಂದು ಕಾಲೇಜಿಗೆ ಹಾಗೂ ವಿದ್ಯಾರ್ಥಿಗಳಿಗೆ ಮಾತ್ರ ಗೊತ್ತು. ಆಸಕ್ತಿ ಇದ್ದುದು ಸಂಗೀತದಲ್ಲಿ, ತೊಡಗಿದ್ದು, ಹೆಸರು ಗಳಿಸಿದ್ದು ಸಂಗೀತ ಕ್ಷೇತ್ರದಲ್ಲಿ.ಅವರು ಮೈಸೂರಿನ ರಾ. ಸತ್ಯನಾರಾಯಣ. ಮೈಸೂರಿನ ಶಾರದಾ ವಿಲಾಸ ಕಾಲೇಜಿನಲ್ಲಿ 35 ವರ್ಷಗಳವರೆಗೆ ಅಧ್ಯಾಪಕರಾಗಿ, ಪ್ರಾಧ್ಯಾಪಕರಾಗಿ ನಿವೃತ್ತರಾಗುವವರೆಗೆ ಪಾಠ ಮಾಡಿದರು. ಆದರೆ, ಸಂಗೀತ ಹಾಗೂ ನೃತ್ಯ ಕ್ಷೇತ್ರಗಳಲ್ಲಿ ನಿರಂತರ ಅಧ್ಯಯನ, ಅಧ್ಯಾಪನ ಹಾಗೂ ಸಂಶೋಧನೆಯಿಂದಾಗಿ ವಿದ್ವಾಂಸರಾಗಿ ಹೆಸರಾದರು. ಹೀಗಾಗಿ ಕೇಂದ್ರ ಸಂಗೀತ ನಾಟಕ ಅಕಾಡೆಮಿಯು ‘ರತ್ನ ಪ್ರಶಸ್ತಿ’ ಘೋಷಿಸಿದೆ. ಅಕಾಡೆಮಿ ನೀಡುವ ಅತ್ಯುನ್ನತ ಪ್ರಶಸ್ತಿಯಾದ ಇದಕ್ಕೆ ದೇಶದಲ್ಲಿ ಆಯ್ಕೆಯಾದ ಮೂವರು ವಿದ್ವಾಂಸರಲ್ಲಿ ರಾ. ಸತ್ಯನಾರಾಯಣ ಕೂಡಾ ಒಬ್ಬರು. ಅವರು ಸಾಂಸ್ಕೃತಿಕ ನಗರಿ ಮೈಸೂರಿನವರು ಎನ್ನುವುದು ಅಗ್ಗಳಿಕೆ ಸಂಗತಿ.ಇದಕ್ಕೆ ಕಾರಣ; ಅವರಿಗೆ ಸಿಕ್ಕ ಸಾಹಿತ್ಯಿಕ ಹಾಗೂ ಸಾಂಸ್ಕೃತಿಕ ಸಂಸ್ಕಾರ. ಅವರ ತಾಯಿ ವರಲಕ್ಷ್ಮೀ ಸಂಗೀತದ ವರವನ್ನು ದಯಪಾಲಿಸಿದರು. ಸುಂದರಶಾಸ್ತ್ರೀಗಳು ಎಂಬ ಮೇಸ್ಟ್ರು ಸಿಕ್ಕಿದ್ದರಿಂದ ವರಲಕ್ಷ್ಮೀ  ಅವರು ಕರ್ನಾಟಕ ಸಂಗೀತ ಕಲಿತರು. ಸಹಜವಾಗಿ ತಾಯಿಯ ಪ್ರಭಾವ ಸತ್ಯನಾರಾಯಣ ಅವರ ಮೇಲಾಯಿತು. ಅವರಿಗಿಂತ ಮೊದಲು ಅವರ ಇಬ್ಬರು ಅಣ್ಣಂದಿರಾದ ರಾ.

ಚಂದ್ರಶೇಖರಯ್ಯ ಹಾಗೂ ರಾ. ಸೀತಾರಾಮಯ್ಯ ಸಂಗೀತ ಕಲಿತು ಒಟ್ಟಿಗೇ ಹಾಡುತ್ತಿದ್ದರು. ಒಟ್ಟಿಗೇ ಸಂಗೀತ ಕಾರ್ಯಕ್ರಮ ನೀಡಿದ ಸಂದರ್ಭದಲ್ಲಿ ‘ಮೈಸೂರು ಬ್ರದರ್ಸ್‌’ ಎಂದು ಸನ್ಮಾನಿಸಲಾಯಿತು. ಅವರೊಂದಿಗೆ ಸತ್ಯನಾರಾಯಣ ಕೂಡಾ ಅರಮನೆಯಲ್ಲಿ ಸಂಗೀತ ಕಛೇರಿ ನೀಡಿದರು. ಅವರ ತಮ್ಮ ವಿಶ್ವೇಶ್ವರನ್‌ ವೀಣೆ ನುಡಿಸುತ್ತಿದ್ದರು. ಹೀಗೆ ಸಂಗೀತವೇ ಉಸಿರಾಡುತ್ತಿದ್ದ ಮನೆಯಲ್ಲಿ ಬೆಳೆದರು.ಆದರೆ, ಮನೆಯಲ್ಲಿ ಎಲ್ಲರೂ ಚೆನ್ನಾಗಿ ಹಾಡುತ್ತಿದ್ದರು. ತಾನೇ ಸಾಮಾನ್ಯ ಸಂಗೀತಗಾರ ಎನ್ನುವ ಕೀಳರಿಮೆ ಕಾಡತೊಡಗಿತು. ಹೀಗಾಗಿ ಹಾಡುವುದು ಕಡಿಮೆ ಮಾಡಿ ಓದುವುದು ಹೆಚ್ಚು ಮಾಡಿದರು. ಸಂಗೀತ ಕಛೇರಿ ಕೇಳುವುದು ಇದ್ದೇ ಇತ್ತು. ಆಮೇಲೆ ಸಂಗೀತ ಕುರಿತು ಉಪನ್ಯಾಸ ನೀಡತೊಡಗಿದರು. ಜೊತೆಗೆ ಕೃತಿಗಳನ್ನು ರಚಿಸಿದರು. ಸಂಗೀತ ಕುರಿತು ಒಟ್ಟು 20 ಸಾವಿರ ಪುಟಗಳಷ್ಟು ಬರೆದಿದ್ದಾರೆ.ಅವರ ‘ನಾಲ್ವರು ಸಂಗೀತ ಮಹಾರಾಜರು’ ಕೃತಿ ಗಮನಿಸಬೇಕು. ಮುಮ್ಮುಡಿ ಕೃಷ್ಣರಾಜ ಒಡೆಯರ್‌, ಚಾಮರಾಜ ಒಡೆಯರ್‌, ನಾಲ್ವಡಿ ಕೃಷ್ಣರಾಜ ಒಡೆಯರ್‌ ಹಾಗೂ ಜಯಚಾಮರಾಜೇಂದ್ರ ಒಡೆಯರ್‌ ಅವರು ಸಂಗೀತಕ್ಕೆ ನೀಡಿದ ಕೊಡುಗೆ ಕುರಿತು ಕೃತಿಯಲ್ಲಿ ವಿವರಿಸಿದ್ದಾರೆ. ಹಿಂದೂಸ್ತಾನಿ, ಕರ್ನಾಟಕ ಹಾಗೂ ಪಾಶ್ಚಾತ್ಯ ಸಂಗೀತಕ್ಕೆ ಈ ನಾಲ್ವರ ಕೊಡುಗೆ ಕುರಿತು ಅಪೂರ್ವ ಮಾಹಿತಿ ನೀಡಿದ್ದಾರೆ. ಇದರಿಂದ ಇಂದಿಗೂ ಮೈಸೂರು ಸಂಗೀತದ ತವರೂರು ಎನ್ನಿಸಿಕೊಳ್ಳಲು ಹೇಗೆ ಸಾಧ್ಯವಾಯಿತು ಎನ್ನುವುದನ್ನು ಸಾಬೀತುಪಡಿಸಿದ್ದಾರೆ. ಈ ಕೃತಿಯ ಹಾಗೆ ಅವರ ಇನ್ನೊಂದು ಕೃತಿ ಶ್ರೀ ಮತಂಗ ಮುನಿ ವಿರಚಿತ ‘ಬೃಹದ್ದೇಶೀ’ ಕೃತಿ. ಇದನ್ನು ಹಂಪಿ ಕನ್ನಡ ವಿಶ್ವವಿದ್ಯಾನಿಲಯ (1998) ಪ್ರಕಟಿಸಿದೆ.5–7ನೇ ಶತಮಾನದಲ್ಲಿ ‘ಬೃಹದ್ದೇಶೀ’ ಕೃತಿಯನ್ನು ಮತಂಗ ಮುನಿ ಹಂಪಿಯಲ್ಲಿ ರಚಿಸಿದ. ಸಂಸ್ಕೃತದಲ್ಲಿಯ ಈ ಕೃತಿಯನ್ನು ಕನ್ನಡಕ್ಕೆ ಅನುವಾದಿಸಿ, ವ್ಯಾಖ್ಯಾನಿಸಿದ್ದಾರೆ. ಈ ಕೃತಿಯ ಮೂಲಕ ಸಂಗೀತಶಾಸ್ತ್ರದ ಪಾಂಡಿತ್ಯ, ವಿಮರ್ಶೆ, ಸಂಶೋಧನೆಗಳು ಅಂತರರಾಷ್ಟ್ರೀಯ ಸ್ತರವನ್ನು ಕನ್ನಡದಲ್ಲಿ ತಲುಪಿಸಲು ಸಾಧ್ಯವೆಂಬುದನ್ನು ಸಾಬೀತುಪಡಿಸಿದ್ದಾರೆ. ಹೀಗೆಯೇ 13ನೇ ಶತಮಾನದಲ್ಲಿ ಸಾರಂಗದೇವ ರಚಿಸಿದ ‘ಸಂಗೀತ ರತ್ನಾಕರ’ ಕೃತಿಯ ಕುರಿತು ವ್ಯಾಖ್ಯಾನವನ್ನು ಬರೆದು ಅದೇ ಹೆಸರಿನಲ್ಲಿ ಪ್ರಕಟಿಸಿದ್ದಾರೆ. ಈ ಕೃತಿಗೆ ಮೈಸೂರು ವಿಶ್ವವಿದ್ಯಾನಿಲಯ 1976ರಲ್ಲಿ ಡಿ.ಲಿಟ್‌ ನೀಡಿ ಗೌರವಿಸಿತು.ನೂರಾರು ಶ್ಲೋಕಗಳಿರುವ ‘ವೀಣಾ ಲಕ್ಷಣ ವಿಮರ್ಶೆ’ ಕೃತಿಯು ವ್ಯಾಖ್ಯಾನವನ್ನೂ ಒಳಗೊಂಡಿದೆ. ಈ ಕೃತಿ ಮೈಸೂರು ವಿಶ್ವವಿದ್ಯಾನಿಲಯ, ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ಪಠ್ಯವಾಗಿತ್ತು. ಇದರೊಂದಿಗೆ ‘ಸ್ಟಡಿ ಇನ್‌ ಇಂಡಿಯನ್‌ ಡಾನ್ಸ್’, ‘ಭರತನಾಟ್ಯ ಎ ಕ್ರಿಟಿಕಲ್‌ ಸ್ಟಡಿ’ ಮೊದಲಾದ ಕೃತಿಗಳನ್ನು ಇಂಗ್ಲಿಷಿನಲ್ಲಿಯೂ ಪ್ರಕಟಿಸಿದ್ದಾರೆ.ಹೀಗೆ ಸಂಗೀತದ ಮೂಲಕ ಸಿದ್ಧಿಯನ್ನು, ಪ್ರಸಿದ್ಧಿಯನ್ನು ಪಡೆದ ಅವರಿಗೆ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ, ರಾಜ್ಯ ಸಂಗೀತ ವಿದ್ವಾನ್ ಪ್ರಶಸ್ತಿ, ಚೆನ್ನೈನ ಸಂಗೀತ ಕಲಾನಿಧಿ ಮೊದಲಾದ ಪ್ರಶಸ್ತಿಗಳಿಗೆ ಭಾಜನರಾಗಿದ್ದಾರೆ. ಸಂಗೀತ ಕುರಿತು ತಲಸ್ಪರ್ಶಿ ಅಧ್ಯಯನ ಕೈಗೊಂಡ ಪರಿಣಾಮ ಸಂಗೀತದ ಆಸಕ್ತರಿಂದ ಹಿಡಿದು ಸಂಶೋಧಕರಿಗೆ ಆಕರ ಗ್ರಂಥಗಳನ್ನು ಒದಗಿಸಿದ್ದಾರೆ. ಸಂಗೀತ ವಿದ್ವಾಂಸರ ವಿವೇಚನೆಯನ್ನು ಹಿಗ್ಗಿಸಿದ ಹೆಗ್ಗಳಿಕೆ ಅವರದು.ಇನ್ನು ಅವರ ತಂದೆ ಕುರಿತು ಹೇಳಲೇಬೇಕು. ಅವರ ತಂದೆ ಬಿ. ರಾಮಯ್ಯ. ಮಹಾರಾಜರಿಗೆ ಉಡುಪು ಹಾಗೂ ಆಹಾರ ಸರಬರಾಜುಗೊಳಿಸುತ್ತಿದ್ದ ಅರಮನೆಯಲ್ಲಿಯ ಬಿಡದಿ ಎಂಬ ಇಲಾಖೆಯಲ್ಲಿ ಮುಖ್ಯ ಗುಮಾಸ್ತರಾಗಿದ್ದರು. ಹೀಗಾಗಿ ಅರಮನೆಯಲ್ಲಿ ನಡೆಯುತ್ತಿದ್ದ ಸಂಗೀತ ಕಛೇರಿಗಳನ್ನು ಆಲಿಸಿದರು. ಸಂಗೀತದಷ್ಟೇ ನೃತ್ಯ ಕುರಿತು ಅಧಿಕೃತವಾಗಿ ಮಾತನಾಡಬಲ್ಲ ಅವರು, ಸಂಗೀತ–ನೃತ್ಯ ವಿದ್ವಾಂಸರೆಂದೇ ಖ್ಯಾತರು. ಅವರ ಹೆಸರನ್ನು, ಕೀರ್ತಿಯನ್ನು ತರುತ್ತಿರುವವರು ಅವರ ಪುತ್ರ ಆರ್‌.ಎಸ್‌. ನಂದಕುಮಾರ್‌. ಮೈಸೂರಿನ ಡಾ.ಗಂಗೂಬಾಯಿ ಹಾನಗಲ್‌ ಸಂಗೀತ ವಿಶ್ವವಿದ್ಯಾಲಯದಲ್ಲಿ ಪ್ರಾಧ್ಯಾಪಕರಾದ ಅವರು, ಸಂಗೀತಗಾರರು. ನಂದಕುಮಾರ್‌ ಪತ್ನಿ ರಾಧಿಕಾ ಭರತನಾಟ್ಯ ಕಲಾವಿದೆ. ಹೀಗೆ ಸಂಗೀತ ಪರಂಪರೆ ಮುಂದುವರಿಯುತ್ತಿದೆ.

 

ಪ್ರತಿಕ್ರಿಯಿಸಿ (+)