ಶನಿವಾರ, ಏಪ್ರಿಲ್ 10, 2021
32 °C

ಸಂಗೀತ ಸುಧೆಗೆ ಗ್ರಾಮ ಸಜ್ಜು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ರಾಮನಾಥಪುರ: ಸಂಗೀತ ಗ್ರಾಮ ಎಂದೇ ಪ್ರಸಿದ್ಧಿ ಪಡೆದಿರುವ ರುದ್ರಪಟ್ಟಣದಲ್ಲಿ ಮಾ.3ರಿಂದ 6ರವರೆಗೆ ನಡೆಯಲಿರುವ ದಶಮಾನೋತ್ಸವ ಸಮಾರಂಭಕ್ಕೆ ಸರ್ವ ಸಿದ್ದತೆಗಳು ಪೂರ್ಣಗೊಂಡಿವೆ. ರುದ್ರಪಟ್ಟಣ ಸಂಗಿತೋತ್ಸವ ಸಮಿತಿ ಟ್ರಸ್ಟ್ ಏರ್ಪಡಿಸಿರುವ ದಶಮಾನೋತ್ಸವ ಸಮಾರಂಭದ ಪ್ರಯುಕ್ತ ಸಂಗೀತ, ನೃತ್ಯ, ನಾಟಕ, ಗಮಕೋತ್ಸವವು ಗುರುವಾರ ಚಾಲನೆ ಪಡೆಯಲಿದ್ದು, ಗ್ರಾಮದಲ್ಲಿ 4 ದಿನ ಸಂಗೀತ ಸುಧೆ ಹರಿಯಲಿದೆ.ನಾರಾಯಣ ನಾದ ಮಂಟಪ ಎನ್ನುವ ಹೆಸರಿನಲ್ಲಿ ಅದ್ಧೂರಿ ವೇದಿಕೆ ನಿರ್ಮಾಣಗೊಂಡಿದೆ. ಬರುವ ಅತಿಥಿಗಳಿಗೆ ಉತ್ತಮ ಊಟದ ವ್ಯವಸ್ಥೆ ಸಿದ್ದಪಡಿಸಲು ಭೋಜನ ಶಾಲೆ ತೆರೆಯಲಾಗಿದ್ದು, ಒಂದು ಬಾರಿಗೆ ಊಟಕ್ಕೆ 150 ಮಂದಿ ಕೂರಲು ವ್ಯವಸ್ಥೆ ಕೈಗೊಳ್ಳಲಾಗಿದೆ. ಇದಲ್ಲದೇ ಆಯಾ ದಿನದ ಕಾರ್ಯಕ್ರಮ ಕುರಿತು ಮಾಹಿತಿ ಪಡೆದುಕೊಳ್ಳಲು ಪ್ರತ್ಯೇಕವಾಗಿ ಕೊಠಡಿ ವ್ಯವಸ್ಥೆ ಮಾಡಲಾಗಿದೆ. ಶೌಚಾಲಯಕ್ಕಾಗಿ ಕೃತಕವಾಗಿ ಕೊಠಡಿ ವ್ಯವಸ್ಥೆ ಇದೆ. ನದಿ ತಟದದಲ್ಲಿ ಬೆಳೆದಿರುವ ಮರದ ರೆಂಬೆ- ಕೊಂಬೆಗಳ ಮೇಲೆ ಎಳೆದು ಬಿಟ್ಟಿರುವ ವಿದ್ಯುತ್ ಬೆಳಕಿನ ಚಿತ್ತಾರದಿಂದಾಗಿ ರಾತ್ರಿ ವೇಳೆ ಕಾರ್ಯಕ್ರಮ ನಡೆಯುವ ಸುತ್ತಮುತ್ತಲಿನ ಪ್ರದೇಶ ಬಣ್ಣ ಬಣ್ಣದ ಬೆಳಕಿನಿಂದ ಕಂಗೊಳಿಸುತ್ತಿದೆ.ಕಾರ್ಯಕ್ರಮದಲ್ಲಿ ಹಲವಾರು ಸಂಗೀತ ವಿದ್ವಾಂಸರು ಭಾಗವಹಿಸಲಿದ್ದಾರೆ. ಮಾ. 3ರಂದು ಬೆಳಿಗ್ಗೆ ಯುವ ಪ್ರತಿಭಾ ಕಾರ್ಯಕ್ರಮ, ಸಂಜೆ ನೃತ್ಯ, 4ರಂದು ನಿರಂತರ ನಾದ ನಮನ ಕಾರ್ಯಕ್ರಮ, 5ರಂದು ಬೆಳಿಗ್ಗೆ ಚೈನ್ನೈ ವಿದ್ವಾನ್ ಟಿ.ಎಂ. ಕೃಷ್ಣ ಅವರಿಂದ ಗಾಯನ, ವಿದ್ವಾನ ಎಚ್.ಕೆ. ವೆಂಕಟ್ರಾಂ ಪಿಟೀಲು, ವಿದ್ವಾನ್ ಸಿ. ಚೆಲುವರಾಜ್ ಮೃದಂಗ, ವಿದ್ವಾನ್ ಸಿ.ಪಿ. ವ್ಯಾಸವಿಠ್ಠಲ ಖಂಜಿರ ನುಡಿಸಲಿದ್ದಾರೆ.ಸಂಜೆ ತೆಪ್ಪೋತ್ಸವ ನಡೆಯಲಿದ್ದು, ಪ್ರಭಾತ ಕಲಾವಿದರಿಂದ ಪುಣ್ಯಕೋಟಿ ಮತ್ತು ಧರ್ಮಭೂತಮಿ ನೃತ್ಯ ನಾಟಕ ಹಾಗೂ 6ರಂದು ಬೆಳಿಗ್ಗೆ ಗಮಕ ಸೌರಭ, ಸಂಜೆ ತ್ಯಾಗರಾಜರ ಪಂಚರತ್ನ ಕೃತಿಗಳ ಗೋಷ್ಠಿ ಗಾಯನದ ನಂತರ ನಡೆಯಲಿರುವ ಸಭಾ ಕಾರ್ಯಕ್ರಮದಲ್ಲಿ ಗ್ರಾಮದ ಕಲಾ ಪೋಷಕ ಆರ್. ಸುಬ್ರಹ್ಮಣ್ಯ ಅವರಿಗೆ ನಾಚಾರಮ್ಮ ಪ್ರಶಸ್ತಿ ವಿತರಿಸಲಾಗುವುದು. ಬಳಿಕ ವಿದ್ವಾನ್ ಸತ್ಯನಾರಾಯಣ ರಾಜು ಮತ್ತು ವಿದ್ವಾನ್ ಸೀತಾ ಕೋಟೆ ಅವರಿಂದ ‘ಶಿವೋಹಂ’ ಭರತನಾಟ್ಯ ಕಾರ್ಯಕ್ರಮ ಜರುಗಲಿದೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.