ಶುಕ್ರವಾರ, ಜೂಲೈ 10, 2020
28 °C

ಸಂಘಟನೆ ಕೊರತೆ ಸೋಲಿಗೆ ಕಾರಣ: ಬೈರೇಗೌಡ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಳಗಾವಿ: ಸಂಘಟನೆಯ ಕೊರತೆ ಪಕ್ಷದ ಸೋಲಿಗೆ ಕಾರಣವಾಗಿದೆ. ಆದ್ದರಿಂದ ಪಕ್ಷದಲ್ಲಿ ಸಂಘಟನೆಗೆ ಹೆಚ್ಚಿನ ಒತ್ತು ನೀಡಲಾಗಿದೆ ಎಂದು ಕಾಂಗ್ರೆಸ್ ಯುವ ಘಟಕದ ರಾಜ್ಯ ಅಧ್ಯಕ್ಷ ಕೃಷ್ಣ ಬೈರೇಗೌಡ ಹೇಳಿದರು.‘ಪ್ರತಿ ಚುನಾವಣೆಯ ಸೋಲಿನ ನಂತರವೂ ಅದೇ ಕಾರಣಗಳನ್ನು ಹೇಳಲು ಸಾಧ್ಯವಿಲ್ಲ. ಬಿಜೆಪಿ ಸರ್ಕಾರದ ವೈಫಲ್ಯದ ನಂತರವೂ ಸಂಘಟನೆಯ ಕಾರಣದಿಂದ ಪಕ್ಷಕ್ಕೆ ಗೆಲವು ಸಾಧಿಸಲು ಸಾಧ್ಯವಾಗುತ್ತಿಲ್ಲ’ ಎಂದು ಅವರು ಸೋಮವಾರ ಸುದ್ದಿಗಾರರಿಗೆ ತಿಳಿಸಿದರು.‘ಜಿ.ಪಂ. ಹಾಗೂ ತಾ.ಪಂ ಚುನಾವಣೆಗಳಲ್ಲಿ ಪಕ್ಷಕ್ಕೆ ಬಹಳಷ್ಟು ಹಿನ್ನಡೆಯಾಗಿಲ್ಲ. ಸೋಲಿನ ಕುರಿತು ಆತ್ಮವಿಮರ್ಶೆ ಮಾಡಿಕೊಳ್ಳಲಾಗಿದ್ದು, ನೂತನ ಅಧ್ಯಕ್ಷರ ನೇತೃತ್ವದಲ್ಲಿ ಸಂಘಟನೆ ಮಾಡಲಾಗುವುದು’ ಎಂದು ಅವರು ಹೇಳಿದರು.‘ಕಾಂಗ್ರೆಸ್ ಯುವ ಘಟಕದ ಸದಸ್ಯತ್ವ ನೋಂದಣಿ ಕಾರ್ಯಕ್ಕೆ ಚಾಲನೆ ನೀಡಲಾಗಿದೆ. ಮತಗಟ್ಟೆ ಯಿಂದ ರಾಜ್ಯಮಟ್ಟದವರೆಗೂ ಪಾರದರ್ಶಕ ಚುನಾವಣೆ ನಡೆಸುವ ಮೂಲಕ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಗುವುದು’ ಎಂದು ಅವರು ತಿಳಿಸಿದರು.‘ಯುವಕರು ರಾಜಕೀಯಕ್ಕೆ ಬರಬೇಕು ಎನ್ನುವುದು ನಮ್ಮ ಇಚ್ಛೆ. ಅದೇ ಕಾರಣಕ್ಕಾಗಿ ಯುವ ಘಟಕದ ಪದಾಧಿಕಾರಿಗಳನ್ನು ಚುನಾವಣೆ ಮೂಲಕ ಆಯ್ಕೆ ಮಾಡಲಾಗುತ್ತಿದೆ.ಎಲ್ಲರಿಗೂ ಮುಕ್ತ ಅವಕಾಶ ನೀಡಲಾಗುವುದು’ ಎಂದು ಹೇಳಿದರು.‘ಸದಸ್ಯತ್ವ ಅಭಿಯಾನ ಆರಂಭಿಸಲಾಗಿದೆ. ಎಲ್ಲ ಕಡೆಗಳಲ್ಲೂ ಅರ್ಜಿ ದೊರೆಯುವ ವ್ಯವಸ್ಥೆ ಮಾಡಲಾಗುವುದು. ಹೆಚ್ಚಿನ ಸಂಖ್ಯೆಯಲ್ಲಿ ಸದಸ್ಯತ್ವ ಮಾಡಲಾಗುವುದು. ಯುವಕರಿಗೆ ತರಬೇತಿ ನೀಡಲಾಗುವುದು’ ಎಂದು ತಿಳಿಸಿದರು.ಅಖಿಲ ಭಾರತ ಯುವ ಘಟಕದ ಕಾರ್ಯದರ್ಶಿ ವಿಶ್ವರಂಜನ್ ಮೊಹಂತಿ, ಶಾಸಕ ಶ್ರೀನಿವಾಸ ಮಾನೆ, ಜಿಲ್ಲಾ ಘಟಕದ ಅಧ್ಯಕ್ಷೆ ಲಕ್ಷ್ಮೀ ಹೆಬ್ಬಾಳಕರ್, ಎನ್‌ಎಸ್‌ಯುಐ ರಾಜ್ಯ ಘಟಕದ ಅಧ್ಯಕ್ಷ ಮಹೇಶ ಉಪಸ್ಥಿತರಿದ್ದರು.ಇದಕ್ಕೂ ಮೊದಲು ಯುವ ಕಾಂಗ್ರೆಸ್ ಸಮಿತಿ ಸದಸ್ಯತ್ವ ಅಭಿಯಾನ ಪೂರ್ವಭಾವಿ ಸಭೆ ನಡೆಸಲಾಯಿತು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.