ಚಿಕ್ಕಮಗಳೂರು: ಪ್ರತಿವರ್ಷದಂತೆ ಈ ವರ್ಷವೂ ಪೊಲೀಸರು ದತ್ತಪೀಠದ ಹಾದಿಯಲ್ಲಿ ಸಂಚಾರ ನಿಭಾಯಿಸುವಲ್ಲಿ ಸಂಪೂರ್ಣ ವಿಫಲರಾಗಿದ್ದು ಸಾರ್ವಜನಿಕ ವಲಯದಲ್ಲಿ ವ್ಯಾಪಕ ಟೀಕೆಗೆ ಗುರಿಯಾಯಿತು.
ಗಿರಿ ಹಾದಿಯಲ್ಲಿ ಸೋಮವಾರ ಟ್ರಾಫಿಕ್ ಜಾಂ ಆಗಿ ಸ್ವತಃ ಎಸ್‌ಪಿ ವಿಕಾಸ್‌ಕುಮಾರ್ ಅವರ ಕಾರು ಗಂಟೆಗಟ್ಟಲೆ ವಾಹನದ ಸಮುದ್ರದಲ್ಲಿ ಸಿಲುಕಿಕೊಂಡಿತ್ತು. ಎಸ್‌ಪಿ ಸಾಹೇಬರೂ ರಸ್ತೆಗಿಳಿದು ಟ್ರಾಫಿಕ್ ಕ್ಲಿಯರ್ ಮಾಡಲು ಪರದಾಡುತ್ತಿದ್ದರು.
‘ಈ ಹಾದಿಯಲ್ಲಿ ಲಾಂಗ್‌ಛಾಸಿ ಬಸ್‌ಗಳಿಗೆ ಪ್ರವೇಶವಿಲ್ಲ ಎಂದು ಜಿಲ್ಲಾಡಳಿತ ಪ್ರತಿವರ್ಷ ಸಾರಿ ಹೇಳುತ್ತದೆ. ಆದರೆ ಪೊಲೀಸರು ಮಾತ್ರ ಇದುವರೆಗೆ ಈ ಆದೇಶಕ್ಕೆ ಸೊಪ್ಪು ಹಾಕಿಲ್ಲ. ಒಂದಾದರೂ ಬಸ್ ಗಿರಿಯಿಂದ ಸಾವಿರಾರು ಅಡಿ ಆಳದ ಕಣಿವೆಗೆ ಜಾರಿ ಜನ ಸಾಯುವವರೆಗೆ ನಮ್ಮ ಪೊಲೀಸರು ಎಚ್ಚೆತ್ತುಕೊಳ್ಳುವುದಿಲ್ಲ’ ಎಂದು ಹಿರಿಯ ನಾಗರೀಕ ಶಂಕರ್ ಆಕ್ರೋಶ ವ್ಯಕ್ತಪಡಿಸಿದರು.
‘ಜಿಲ್ಲಾಧಿಕಾರಿಗಳು ಒನ್‌ವೇ ಆದೇಶ ಹೊರಡಿಸಿದ್ದರೂ ಅದನ್ನು ಅನುಷ್ಠಾನಕ್ಕೆ ತರಲು ಪೊಲೀಸರು ಇಚ್ಛಾಶಕ್ತಿ ಮತ್ತು ಧೈರ್ಯ ಪ್ರದರ್ಶಿಸುತ್ತಿಲ್ಲ. ಹೀಗಾಗಿ ಪ್ರತಿವರ್ಷವೂ ದತ್ತಮಾಲಾ ಅಭಿಯಾನದ ವೇಳೆಯಲ್ಲಿ ಗಿರಿಹಾದಿಯಲ್ಲಿ ಟ್ರಾಫಿಕ್ ಜಾಂ ಆಗುತ್ತದೆ’ ಎಂದು ಬೆಂಗಳೂರಿನಿಂದ ಆಗಮಿಸಿದ್ದ ಭಕ್ತ ರಮೇಶ್ ದೂರಿದರು.
‘ಪಂಡರವಳ್ಳಿ ಗ್ರಾಮಕ್ಕೆ ಬಸ್ ಸೌಲಭ್ಯ ಕೊಡಿ ಎಂದರೆ ಲಾಂಗ್‌ಛಾಸಿ ಬಸ್‌ಗಳು ಘಾಟಿ ರಸ್ತೆಯಲ್ಲಿ ತಿರುಗುವುದಿಲ್ಲ ಎಂದು ಕೆಎಸ್‌ಆರ್‌ಟಿಸಿ ಸಬೂಬು ಹೇಳುತ್ತದೆ. ದತ್ತಜಯಂತಿ ವೇಳೆಯಲ್ಲಿ ಮಾತ್ರ ಅದೇ ಕೆಎಸ್‌ಆರ್‌ಟಿಸಿ ಲಾಂಗ್‌ಛಾಸಿ ಬಸ್‌ಗಳನ್ನು ಗಿರಿ ಹಾದಿಗೆ ನೂಕಿ ಭಕ್ತರ ಪ್ರಾಣದ ಜತೆ ಚಕ್ಕಂದವಾಡುತ್ತದೆ’ ಎಂದು ಹೆಸರು ಹೇಳಲು ಇಚ್ಛಿಸದ ಸ್ಥಳೀಯರು ದೂರಿದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.