ಸೋಮವಾರ, ಮಾರ್ಚ್ 1, 2021
31 °C

ಸಂಜಯ್ ಗುಪ್ತಾ ಚಿತ್ರದಲ್ಲಿ ಐಶೂ ಎಂಬ ಹೀರೊ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಸಂಜಯ್ ಗುಪ್ತಾ ಚಿತ್ರದಲ್ಲಿ ಐಶೂ ಎಂಬ ಹೀರೊ

ಮುದ್ದು ಮಗಳು ಆರಾಧ್ಯ ಪ್ಲೇಹೋಮ್‌ಗೆ ಹೋಗುತ್ತಿರುವ ಹಿನ್ನೆಲೆಯಲ್ಲಿ ಐಶ್ವರ್ಯಾ ರೈ ಬಚ್ಚನ್‌ ಈಗ ಸ್ವಲ್ಪ ನಿರಾಳರಾಗಿದ್ದು  ಚಿತ್ರರಂಗಕ್ಕೆ ರೀ ಎಂಟ್ರಿ ಕೊಡಲು ತೀರ್ಮಾನಿಸಿದಂತಿದೆ. ಸಂಜಯ್‌ ಗುಪ್ತಾ ನಿರ್ದೇಶನದ ‘ಜಝ್ಬಾ’ ಚಿತ್ರದಲ್ಲಿ ಐಶೂ ಕಾಣಿಸಿಕೊಳ್ಳುವುದು ನಿಚ್ಚಳವಾಗಿದೆ. ಈ ಮೂಲಕ ಆ್ಯಕ್ಷನ್‌ ಚಿತ್ರದಲ್ಲಿ ಕಾಣಿಸಿಕೊಳ್ಳುವ ಅವರ ಕನಸೂ ನನಸಾಗಲಿದ್ದು ಸಾಹಸ ದೃಶ್ಯಗಳನ್ನು ಸ್ವತಃ ನಿರ್ವಹಿಸಲಿದ್ದಾರೆ ಎಂದು ಬಲ್ಲ ಮೂಲಗಳು ದೃಢಪಡಿಸಿವೆ.ಬಾಲಿವುಡ್‌ಗೆ ಐಶ್ವರ್ಯಾ ಅವರನ್ನು ಪರಿಚಯಿಸಿದ ನಿರ್ದೇಶಕ ಮಣಿರತ್ನಂ ಚಿತ್ರದ ಮೂಲಕವೇ ತಮ್ಮ ಎರಡನೇ ಇನಿಂಗ್ಸ್‌ ಶುರು ಮಾಡುತ್ತಾರೆ ಎಂಬ ಮಾತು ಈ ಹಿಂದೆ ಕೇಳಿಬಂದಿತ್ತಾದರೂ ಅದು ಇನ್ನೂ ನಿಶ್ಚಿತವಾಗಿಲ್ಲ. ಅಲ್ಲದೆ, ಅದ್ಮಾನ್ ಪ್ರಹ್ಲಾದ್‌ ಕಕ್ಕರ್ ಅವರ ಚಿತ್ರದಲ್ಲಿ ನಟಿಸುವ ಪ್ರಸ್ತಾಪವೂ ಬಿದ್ದುಹೋಗಿದೆ.ಇದೀಗ ಗುಪ್ತಾ ಅವರೇ ತಮ್ಮ ಚಿತ್ರದ ಬಗ್ಗೆ ಖಚಿತಪಡಿಸಿದ್ದು, ‘2015ರ ಜನವರಿಯಲ್ಲಿ ಚಿತ್ರೀಕರಣ ಶುರುವಾಗಲಿದ್ದು, ಅದೇ ವರ್ಷದ ಕಾನ್‌ ಚಿತ್ರೋತ್ಸವದಲ್ಲಿ ಅದನ್ನು ತೆರೆಗೆ ತರಲಿದ್ದೇವೆ’ ಎಂದಿರುವ ಗುಪ್ತಾ, ಇದು ಸ್ತ್ರೀಪ್ರಧಾನ ಚಿತ್ರವಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

‘ಐಶ್ವರ್ಯಾ ರೈ ಬಚ್ಚನ್‌ ಚಿತ್ರದಲ್ಲಿ ಪ್ರಮುಖ ಪಾತ್ರದಲ್ಲಿದ್ದಾರೆ ಎಂಬ ಕಾರಣಕ್ಕೆ ನಾವದಕ್ಕೆ ಮಹಿಳಾಪ್ರಧಾನ ಚಿತ್ರವೆಂದು ಹಣೆಪಟ್ಟಿ ಕಟ್ಟಲಾಗದು. ಆದರೆ ಐಶ್ವರ್ಯಾ ನಮ್ಮ ಚಿತ್ರದ ಹೀರೊ ಎಂದಷ್ಟೇ ನಾನು ಹೇಳಬಲ್ಲೆ’ ಎಂದಿದ್ದಾರೆ ಗುಪ್ತಾ.ಸ್ಟಂಟ್‌ ಚಿತ್ರ ‘ಧೂಮ್‌–2’ನಲ್ಲಿ ಹೃತಿಕ್‌ ರೋಶನ್‌ ಜತೆ ನಟಿಸಿದ್ದರೂ ಐಶೂ ಅದರಲ್ಲಿ ಸಾಹಸ ದೃಶ್ಯಗಳಲ್ಲಿ ಸ್ವತಃ ಪಾಲ್ಗೊಂಡಿರಲಿಲ್ಲ. ಆದರೆ ಇದೀಗ ಗುಪ್ತಾ ಅವರ ಚಿತ್ರದಲ್ಲಿ ಡ್ಯೂಪ್‌ ಇಲ್ಲದೆ ಸ್ವತಂತ್ರವಾಗಿ ಸ್ಟಂಟ್‌ ಮಾಡಲಿದ್ದಾರೆ. ಇದಕ್ಕಾಗಿ ಈಗಾಗಲೆ ತರಬೇತಿಯಲ್ಲೂ ಐಶೂ ತೊಡಗಿಸಿಕೊಂಡಿದ್ದಾರೆ ಎಂದು ಅವರು ಸ್ಪಷ್ಟಪಡಿಸಿದರು.‘ನನ್ನ ಪ್ರಕಾರ ಸ್ಟಂಟ್‌ ಸೀನ್‌ಗಳಿಗೆ ಸ್ತ್ರೀ, ಪುರುಷ ಎಂಬ ಭೇದವಿಲ್ಲ. ಆಕೆ ನನ್ನ ಇತರ ಚಿತ್ರದ ಯಾವುದೇ ಹೀರೊನಂತೆ. ಅದು ‘ಶೂಟೌಟ್‌ ಅಟ್ ವಡಾಲಾ’ದಲ್ಲಿನ ಜಾನ್‌ ಅಬ್ರಹಾಂ ಆಗಿರಬಹುದು, ‘ಜಿಂದಾ’ದಲ್ಲಿನ ಸಂಜಯ್‌ ದತ್‌ ಆಗಿರಬಹುದು. ಐಶ್ವರ್ಯಾ ಗಂಡೋ ಹೆಣ್ಣೋ ಎನ್ನುವುದಕ್ಕಿಂತ ಅವರು ಮಾಡಿರುವ ಪಾತ್ರ ಯಾವುದು ಮತ್ತು ಏನು ಎಂಬುದಷ್ಟೇ ಮುಖ್ಯ’ ಎಂದು ತಮ್ಮ ನಿಲುವನ್ನು ಸಮರ್ಥಿಸಿಕೊಂಡಿರುವ ಗುಪ್ತಾ, ಚಿತ್ರದಲ್ಲಿನ ಇಬ್ಬರು ಪುರುಷ ಪಾತ್ರಗಳ ಆಯ್ಕೆ ಇನ್ನೂ ಅಂತಿಮಗೊಂಡಿಲ್ಲ ಎಂದೂ ಹೇಳಿದ್ದಾರೆ.ಆಸಕ್ತಿಯ ಸಂಗತಿಯೆಂದರೆ, ಐಶೂ ಪತಿ ಅಭಿಷೇಕ್‌ ಬಚ್ಚನ್‌ ಜತೆ ‘ಖೊಟ್ಟಿ ಸಿಕ್ಕಾಯ್‌’ ಚಿತ್ರದಲ್ಲಿ ಗುಪ್ತಾ ಕೆಲಸ ಮಾಡಲಿದ್ದು ‘ಜಝ್ಬಾ’ದ ನಂತರ ಅದು ಸೆಟ್ಟೇರಲಿದೆ. ಒಂದು ವರ್ಷದ ಬಿಡುವು ಪಡೆದಿದ್ದ ಗುಪ್ತಾ ಈಗ ಮೂರು ಸರಣಿ ಚಿತ್ರಗಳನ್ನು ಕೈಗೆತ್ತಿಕೊಂಡಿದ್ದಾರೆ.

 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.