ಶುಕ್ರವಾರ, ಮಾರ್ಚ್ 5, 2021
21 °C

ಸಂತರ ಸಂತೆಯಲ್ಲಿ ಗುಟ್ಟು – ರಟ್ಟಿನ ರಾಜಕೀಯ !

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಸಂತರ ಸಂತೆಯಲ್ಲಿ ಗುಟ್ಟು – ರಟ್ಟಿನ ರಾಜಕೀಯ !

ಚಿತ್ರದುರ್ಗ: ಕಲ್ಲಿನ ಕೋಟೆಯ ಈ ಜಿಲ್ಲೆಯಲ್ಲಿ ಗುರುಪೀಠಗಳ ಸರಪಳಿಯೇ ಇದೆ. ಹಾದಿಬದಿಯಲ್ಲಿ ಸಾಕಷ್ಟು ಸಂಸ್ಥಾನ­­ಗಳು ಸಿಗುತ್ತವೆ. ಬಹುತೇಕ ಎಲ್ಲ ಜನಾಂಗಗಳ ಮಠಗಳೂ ಇಲ್ಲಿ ಇವೆ.ಸಾದರ ಲಿಂಗಾಯತರ ತರಳಬಾಳು ಪೀಠ ಒಂದು ಕಡೆಯಾದರೆ, ಬಣಜಿಗರ ಮುರುಘಾ ಮಠ ಇನ್ನೊಂದು ಕಡೆ. ಮಾದಾರ ಚೆನ್ನಯ್ಯ ಸ್ವಾಮೀಜಿ, ಲಂಬಾಣಿಗಳ ಸರ್ದಾರ್‌ ಸೇವಾಲಾಲ್‌ ಸ್ವಾಮೀಜಿ, ಬೋವಿ ಜನಾಂಗದ ಇಮ್ಮಡಿ ಸಿದ್ಧರಾಮ ಸ್ವಾಮೀಜಿ, ಕುಂಬಾರ ಗುಂಡಯ್ಯ ಸ್ವಾಮೀಜಿ, ಮೇದಾರ ಗುರುಪೀಠದ ಕೇತೇಶ್ವರ ಸ್ವಾಮೀಜಿ, ಮಡಿವಾಳ ಮಾಚಿದೇವ ಸ್ವಾಮೀಜಿ, ಕುರುಬರ ಕನಕಪೀಠದ ಈಶ್ವರಾನಂದ ಸ್ವಾಮೀಜಿ, ಯಾದವಾನಂದ ಸ್ವಾಮೀಜಿ, ಉಪ್ಪಾರರ ಪುರುಷೋತ್ತಮಾನಂದ ಸ್ವಾಮೀಜಿ, ಆದಿ ಜಾಂಬವರ ಷಡಕ್ಷರಮುನಿ ಸ್ವಾಮೀಜಿ, ಮಾರ್ಕಂಡೇಯ ಸ್ವಾಮೀಜಿ, ಸಿದ್ದಯ್ಯನ ಕೋಟೆ ಸ್ವಾಮೀಜಿ, ಚಲವಾದಿ ಗುರುಪೀಠದ ಬಸವ ನಾಗಿದೇವ ಸ್ವಾಮೀಜಿ ಹೀಗೆ ಗುರುಪೀಠಗಳ ಸಾಲು ಮುಂದುವರಿಯುತ್ತಲೇ ಇರುತ್ತದೆ.ಕೆಲವು ಸ್ವಾಮೀಜಿಗಳು ನೇರವಾಗಿ ರಾಜಕೀಯ ಮಾಡುತ್ತಿದ್ದರೆ ಇನ್ನು ಕೆಲವರು ಗುಟ್ಟಾಗಿ ಮಾಡುತ್ತಿದ್ದಾರೆ. ಆದರೆ, ಯಾರೂ ರಾಜಕೀಯದಿಂದ ಹೊರತಾಗಿಲ್ಲ ಎನ್ನುವುದೇ ಇಲ್ಲಿನ ವಿಶೇಷ.ಚುನಾವಣೆಯಲ್ಲಿ ಯಾರನ್ನು ಗೆಲ್ಲಿಸಬೇಕು, ಯಾರನ್ನು ಸೋಲಿಸಬೇಕು ಎಂದು ಫರ್ಮಾನು ಹೊರಡಿಸುತ್ತಿದ್ದ ತರಳಬಾಳು ಶಿವಮೂರ್ತಿ ಶಿವಾ­ಚಾರ್ಯ ಸ್ವಾಮೀಜಿ ಅವರು ಈ ಬಾರಿ ರಾಜಕಾರಣಗಳಿಗೆ ನೀತಿ ಸಂಹಿತೆ­ಯೊಂದನ್ನು ಜಾರಿಗೆ ತಂದಿದ್ದಾರೆ. ಯಾವುದೇ ರಾಜಕಾರಣಿಗಳು ತಮ್ಮ ಆಶೀರ್ವಾದ ಪಡೆಯಲು ಬರಬಹುದು. ಆದರೆ, ಅದರ ಫೊಟೋ ತೆಗೆಯುವ ಹಾಗಿಲ್ಲ. ಚುನಾವಣೆ ಪ್ರಚಾರಕ್ಕೆ ತಮ್ಮ ಜೊತೆ ಇರುವ ಭಾವಚಿತ್ರವನ್ನು ಬಳಸುವಂತಿಲ್ಲ ಎಂದು ಕಟ್ಟುನಿಟ್ಟಾಗಿ ಹೇಳಿದ್ದಾರೆ.‘ಅಯ್ಯೋ ಆ ಸ್ವಾಮೀಜಿ ಈಗಾಗಲೇ ಯಾರಿಗೋ ಕಮಿಟ್ಟಾಗಿದ್ದಾರೆ. ಅದಕ್ಕೆ ಬೇರೆ ಯಾರೂ ತಮ್ಮ ಹೆಸರನ್ನು ಬಳಸದೇ ಇರಲಿ ಎಂದು ಹೀಗೆ ಷರತ್ತು ವಿಧಿಸಿದ್ದಾರೆ’ ಎಂದು ಅವರನ್ನು ಟೀಕಿಸುವವರೂ ಇಲ್ಲಿದ್ದಾರೆ. ಸ್ವಾಮೀಜಿ ಅವರ ಷರತ್ತನ್ನು ಮೆಚ್ಚುವವರೂ ಇದ್ದಾರೆ.

ಶಿವಮೂರ್ತಿ ಮುರುಘರಾಜೇಂದ್ರ ಶರಣರು ‘ಕಡ್ಡಾಯವಾಗಿ ಮತದಾನ ಮಾಡಿ. ಮತವನ್ನು ಮಾರಾಟ ಮಾಡಿಕೊಳ್ಳಬೇಡಿ’ ಎಂದು ಜನರಲ್ಲಿ ಜಾಗೃತಿ ಮೂಡಿಸುವ ಕೆಲಸ ಮಾಡುತ್ತಿದ್ದಾರೆ. ದಾವಣಗೆರೆ ಮತ್ತು ಚಿತ್ರದುರ್ಗ ಜಿಲ್ಲೆಗಳಲ್ಲಿ ಅವರ ಜಾಗೃತಿ ಕಾರ್ಯಕ್ರಮ ಜೋರಾಗಿ ನಡೆಯುತ್ತಿದೆ. ಇದಕ್ಕೆ ಆಯಾ ಜಿಲ್ಲಾಡಳಿತಗಳ ಸಹಕಾರ ಕೂಡ ಅವರಿಗೆ ದೊರೆ­ಯುತ್ತಿದೆ. ‘ಯಾರು ಗೆಲ್ಲುತ್ತಾರೆ. ಯಾರು ಸೋಲುತ್ತಾರೆ ಎನ್ನುವುದು ನಮಗೆ ಮುಖ್ಯವಲ್ಲ. ಜನರು ತಮ್ಮ ಹಕ್ಕನ್ನು ಚಲಾಯಿಸಿ ಯೋಗ್ಯರನ್ನು ಆಯ್ಕೆ ಮಾಡಬೇಕು’ ಎಂದು ಅವರು ಹೇಳಿದರು.ಕಾಂಗ್ರೆಸ್ ಪಕ್ಷದಿಂದ ಮಾದಾರ ಜನಾಂಗಕ್ಕೆ ಸೇರಿದ ಚಂದ್ರಪ್ಪ ಅಭ್ಯರ್ಥಿ. ಬೋವಿ ಜನಾಂಗಕ್ಕೆ ಸೇರಿದ ಜನಾರ್ದನ­ಸ್ವಾಮಿ ಬಿಜೆಪಿ ಅಭ್ಯರ್ಥಿ­ಯಾದರೆ, ಇದೇ ಜನಾಂಗದ ಗೂಳಿಹಟ್ಟಿ ಶೇಖರ್‌ ಜನತಾ ದಳ (ಎಸ್‌) ಅಭ್ಯರ್ಥಿ. ಈ ಎರಡೂ ಜನಾಂಗಗಳ ಗುರುಪೀಠ­ಗಳು ಇಲ್ಲಿರು­ವುದರಿಂದ ಸ್ವಾಮೀಜಿಗಳಿಗೆ ಇಷ್ಟ ಇರಲಿ, ಇಲ್ಲದೇ ಇರಲಿ ಆಯಾ ಜನಾಂಗದ ಮುಖಂಡರು ಗುರುಪೀಠ­ಗಳಿಗೆ ಮುತ್ತಿಗೆ ಹಾಕುವುದು ತಪ್ಪಿಲ್ಲ. ರಾಜಕೀಯವಾಗಿ ಯಾವುದಾದರೂ ಒಂದು ನಿರ್ಧಾರವನ್ನು ತೆಗೆದುಕೊ­ಳ್ಳುವುದು ಅನಿವಾರ್ಯ ಎಂಬ ಸ್ಥಿತಿಯನ್ನು ಉಂಟು ಮಾಡಿದೆ.ಮಾದಾರ ಚೆನ್ನಯ್ಯ ಸ್ವಾಮೀಜಿ ಅವರಿಗೆ ನರೇಂದ್ರ ಮೋದಿ ಪ್ರಧಾನಿಯಾದರೆ ಒಳ್ಳೆಯದು ಎಂಬ ಭಾವನೆ ಇದೆ. ಆದರೆ, ಈ ಕ್ಷೇತ್ರದಲ್ಲಿ ಚಂದ್ರಪ್ಪ ಅವರಿಗೆ ಬೆಂಬಲ ನೀಡುವ ಅನಿವಾರ್ಯತೆಯೂ ಇದೆ. ‘ನಮಗೆ ಕ್ಷೇತ್ರ ಎಷ್ಟು ಮುಖ್ಯವೋ ದೇಶವೂ ಅಷ್ಟೇ ಮುಖ್ಯ. ನಮ್ಮ ಬಳಿಗೆ ಬರುವ ಎಲ್ಲರಿಗೂ ನಾವು ಆಶೀರ್ವಾದ ಮಾಡು­ತ್ತೇವೆ. ಆದರೆ ನಿರ್ದಿಷ್ಟವಾಗಿ ಇಂತಹ ಅಭ್ಯರ್ಥಿಗೇ ಮತ ಹಾಕಿ ಎಂದು ನಾವು ಹೇಳುವುದಿಲ್ಲ. ಆದರೆ, ಎಲ್ಲರೂ ಕಡ್ಡಾಯ­ವಾಗಿ ಮತದಾನ ಮಾಡ­ಬೇಕು’ ಎಂದು ಅವರು ಹೇಳುತ್ತಾರೆ. ಬಿಡಿಸಿ ಬಿಡಿಸಿ ಕೇಳಿದರೆ ತಮ್ಮ ಒಲವು ಈ ಕ್ಷೇತ್ರದ ಮಟ್ಟಿಗೆ ಕಾಂಗ್ರೆಸ್‌ ಪರ ಇರುವುದನ್ನು ಒಪ್ಪಿಕೊಳ್ಳುತ್ತಾರೆ.ಬೋವಿ ಜನಾಂಗದ ಇಮ್ಮಡಿ ಸಿದ್ಧರಾಮ ಸ್ವಾಮೀಜಿಗೆ ಇಂತಹ ಗೊಂದ­ಲ­ಗಳು ಇಲ್ಲ. ಅವರು ನೇರವಾಗಿಯೇ ರಾಜಕೀಯ ನಿರ್ಣಯವನ್ನು ಕೈಗೊಂಡಿ­ದ್ದಾರೆ. ಇದೇ ಜನಾಂಗದ ಇಬ್ಬರು ಅಭ್ಯರ್ಥಿ­ಗಳು ಇದ್ದರೂ ಅವರು ಬಿಜೆಪಿಯ ಜನಾರ್ದನಸ್ವಾಮಿ ಪರವಾಗಿದ್ದಾರೆ. ಇದಕ್ಕೆ ಆ ಜನಾಂಗದ ಮುಖಂಡರ ಬೆಂಬಲವೂ ಇದೆ. ‘ನಮ್ಮ ಜನಾಂಗದ ಮೇಲೆ ನಿರಂತರ ದೌರ್ಜನ್ಯ ನಡೆಯುತ್ತಿದೆ.

ಅಲ್ಲದೆ ಮೀಸಲಾತಿಯ ಲಾಭವೂ ನಮಗೆ ಸಿಗುತ್ತಿಲ್ಲ. ನಿರ್ಣಯ ಕೈಗೊಳ್ಳುವ ಜಾಗದಲ್ಲಿ ನಾವು ಇಲ್ಲ. ಅದಕ್ಕಾಗಿ ನಮ್ಮ ಪ್ರತಿನಿಧಿಯೊಬ್ಬರು ಸಂಸತ್ತಿನಲ್ಲಿ ಇರಬೇಕು. ಅದಕ್ಕಾಗಿ ಕ್ಷೇತ್ರದಲ್ಲಿ ನಮ್ಮ ಜನಾಂಗದ ಇಬ್ಬರು ಅಭ್ಯರ್ಥಿಗಳು ಇದ್ದರೂ ನಾವು ಯಾವುದೋ ಒಬ್ಬ ಅಭ್ಯರ್ಥಿಯ ಪರ ನಿರ್ಣಯ ಕೈಗೊಳ್ಳಲೇ ಬೇಕಾಗಿದೆ. ನಾವು ನಮ್ಮ ನಿರ್ಧಾರವನ್ನು ನಮ್ಮ ಜನರಿಗೆ ತಿಳಿಸಿದ್ದೇವೆ. ಈ ಹಿಂದೆ ಮಾಡಿದ ತಪ್ಪನ್ನು ಇನ್ನು ಮುಂದೆ ಮಾಡಬೇಡಿ ಎಂಬ ಎಚ್ಚರಿಕೆಯನ್ನೂ ನೀಡಿದ್ದೇವೆ’ ಎಂದು ಸ್ಪಷ್ಟ ಮಾತುಗಳಲ್ಲಿ ಹೇಳಿದರು.

ಚಲವಾದಿ ಗುರುಪೀಠದ ಬಸವ ನಾಗಿದೇವ ಸ್ವಾಮೀಜಿಗೆ ಈ ಸಮಸ್ಯೆಯೇ ಇಲ್ಲ. ಅವರಿಗೆ ಮತ ಹಾಕಿ ಇವರಿಗೆ ಮತ ಹಾಕಿ ಎಂದು ಹೇಳುವ ರಗಳೆಯೇ ಇಲ್ಲ. ಯಾಕೆಂದರೆ ಸ್ವತಃ ಸ್ವಾಮೀಜಿ ಅವರೇ ಚುನಾವಣಾ ಕಣಕ್ಕೆ ಇಳಿದಿದ್ದಾರೆ.‘12 ವರ್ಷದಿಂದ ಚಲವಾದಿ ಗುರು­ಪೀಠದ ಮಠಾಧೀಶರಾಗಿದ್ದೇವೆ. ಜನ ಸಾಮಾನ್ಯರ ನಡುವೆ ಇದ್ದೇವೆ. ನಾವು ಯಾಕೆ ಅವರಿವರನ್ನು ನಂಬಿ ಕುಳಿತು­ಕೊಳ್ಳಬೇಕು. ಜನರೂ ಬಯಸಿದರು. ಒತ್ತಾಯಿಸಿದರು. ಅದಕ್ಕೇ ರಾಜಕೀಯಕ್ಕೆ ಬಂದೆ. ವೈಯಕ್ತಿ­ಕವಾಗಿ ನಮಗೆ ರಾಜಕೀಯ ಅನಿವಾರ್ಯವೂ ಅಲ್ಲ. ಅಗತ್ಯವೂ ಅಲ್ಲ. ಆದರೆ, ಜನರಿಗೆ ನ್ಯಾಯ ದೊರಕಿಸಿ ಕೊಡಬೇಕು ಎಂದರೆ ಅಧಿಕಾರ ಅಗತ್ಯ’ ಎಂದು ಅವರು ಹೇಳುತ್ತಾರೆ.‘ರಾಜಕೀಯ ಕೆಟ್ಟು ಹೋಗಿದೆ ಎಂದು ಎಲ್ಲರೂ ಹೇಳುತ್ತಾರೆ. ಅದನ್ನು ಸ್ವಚ್ಛ ಮಾಡಬೇಕು ಎಂದೂ ಬಯಸುತ್ತಾರೆ. ಆದರೆ, ಹೊರಗಿನಿಂದ ಅದನ್ನು ಶುದ್ಧ ಮಾಡಲು ಸಾಧ್ಯವಿಲ್ಲ. ಒಳಕ್ಕೆ ಹೋಗಿಯೇ ಕಸ ಗುಡಿಸಬೇಕು. ಅದಕ್ಕೇ ಚುನಾವಣೆ ಕಣಕ್ಕೆ ಇಳಿದಿದ್ದೇವೆ’ ಎಂದೂ ಅವರು ಹೇಳುತ್ತಾರೆ.‘ಜನರೇ ಹಣ ಕೊಟ್ಟು ನಾಯಕರನ್ನು ಗೆಲ್ಲಿಸಿದ ಉದಾಹರಣೆ ನಮ್ಮ ದೇಶ ಮತ್ತು ರಾಜ್ಯದಲ್ಲಿ ಇದೆ. ರಾಜಕಾರಣಿ­ಯೊಬ್ಬನನ್ನು ಜನರು ಗೆಲ್ಲಿಸಬಹು­ದಾದರೆ ಸ್ವಾಮೀಜಿ ಒಬ್ಬರನ್ನು ಗೆಲ್ಲಿಸುವುದಿಲ್ಲವೇ?’ ಎಂದು ಅವರು ಪ್ರಶ್ನೆ ಮಾಡುತ್ತಾರೆ.‘ನಮ್ಮ ಪ್ರತಿನಿಧಿ ಪ್ರಾಮಾಣಿಕನಾ­ಗಿರಬೇಕು ಎಂದು ಎಲ್ಲರೂ ಬಯಸು­ತ್ತಾರೆ. ನಾವು ಪ್ರಾಮಾಣಿಕ ಎಂದು ಸಾಬೀತು ಮಾಡುವ ಪ್ರಮೇಯ ಇಲ್ಲ. ಸ್ವಾಮೀಜಿ ಒಬ್ಬರು ಚುನಾವಣೆಗೆ ಸ್ಪರ್ಧೆ ಮಾಡು­ವುದು ಇದು ಮೊದಲೂ ಅಲ್ಲ. ಕೊನೆಯೂ ಅಲ್ಲ. ನಾವು ಈವರೆಗೆ ಹಾಜರಾದ ಯಾವುದೇ ಪರೀಕ್ಷೆಯಲ್ಲಿ ಫೇಲ್‌ ಆಗಿಲ್ಲ. ಚುನಾವಣೆ ಎಂಬ ಈ ಪರೀಕ್ಷೆ­ಯಲ್ಲಿಯೂ ನಪಾಸಾಗುವುದಿಲ್ಲ’ ಎಂಬ ವಿಶ್ವಾಸ ಅವರದ್ದು.‘ಗೆಲುವನ್ನು ಸಂಭ್ರಮಿಸುವಷ್ಟೇ ಸೋಲನ್ನೂ ಸಕಾರಾತ್ಮಕವಾಗಿ ಸ್ವೀಕರಿ­ಸುತ್ತೇವೆ. ಆದರೆ ಜನರಲ್ಲಿ ಅರಿವು ಮೂಡಿಸಲು ಇದೂ ಒಂದು ಮಾರ್ಗ’ ಎಂದು ಅವರು ಹೇಳುತ್ತಾರೆ.ಚಿತ್ರದುರ್ಗದಲ್ಲಿ ಗುರುಪೀಠಗಳ ಸಂತೆಯೇ ಇದ್ದರೂ ಅವರೆಲ್ಲರೂ ರಾಗ ದ್ವೇಷಗಳಿಂದ ಮುಕ್ತರಾಗಿಲ್ಲ. ಅಕ್ಕಪಕ್ಕ­ದಲ್ಲಿಯೇ ಕುಳಿತುಕೊಂಡರೂ ಎಲ್ಲರ ಮನಸ್ಸೂ ಒಂದಾಗಿಲ್ಲ. ಅವರವರ ನಡುವೆಯೇ ಒಡಕುಗಳು ಇವೆ. ದ್ವೇಷ ಇದೆ. ಚಿತ್ರದುರ್ಗ ಲೋಕಸಭಾ ಕ್ಷೇತ್ರದಲ್ಲಿ ಕೇವಲ ವಿವಿಧ ಪಕ್ಷಗಳ ಅಭ್ಯರ್ಥಿಗಳ ನಡುವೆ ಚುನಾವಣೆ ನಡೆಯುತ್ತಿಲ್ಲ. ಸ್ವಾಮೀಜಿಗಳ ಕದನ ಕುತೂಹಲವೂ ಇಲ್ಲಿದೆ. ಅದೇ ಇಲ್ಲಿನ ವಿಶೇಷ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.