ಗುರುವಾರ , ಮೇ 19, 2022
21 °C

ಸಂತಸ..ವಿಷಾದ..ಗೊಂದಲ...

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಲೋಕಸಭೆ ತಿದ್ದುಪಡಿ ಮಾಡಲಾದ ಕೃತಿಸ್ವಾಮ್ಯ ಕಾಯ್ದೆಗೆ ಇತ್ತೀಚೆಗೆ ಅಂಗೀಕಾರ ನೀಡಿತು. ಇದರ ಪ್ರಕಾರ ಒಂದು ಸೃಜನಶೀಲ ಕೃತಿ-ಸಂಗೀತವಿರಲಿ, ಸಾಹಿತ್ಯವಿರಲಿ ಅದರ ರಚನೆಗೆ, ಸೃಷ್ಟಿಗೆ ಕಾರಣನಾದ ಕಲಾವಿದನಿಗೆ ಅಂದರೆ ಸಂಗೀತ ನಿರ್ದೇಶಕನಿಗೆ ಮತ್ತು ಗೀತರಚನೆಕಾರನಿಗೆ ಅವನ ಕೃತಿಯ ಹಕ್ಕು ಮುಂದುವರಿಯುತ್ತದೆ ಮತ್ತು ಅದರ ಸಂಪೂರ್ಣ ಲಾಭ ಹಾಗೂ ಗೌರವಧನ ಅವನಿಗೆ ಸಲ್ಲಬೇಕು.ಇಂತಹ ಒಂದು ಸಂತಸದ ವಿಚಾರ ಮುಂಬೈ ಮತ್ತು ತಮಿಳು ಚಿತ್ರರಂಗದಲ್ಲಿ ವಿದ್ಯುತ್ ಸಂಚಾರ ಮೂಡಿಸಿದ್ದರಲ್ಲಿ ಆಶ್ಚರ್ಯವಿಲ್ಲ. ಇದು ಒಂದು ಮುಖವಾದರೆ, ಇದೇ ವಿಷಯಕ್ಕೆ ಇನ್ನೂ ಕೆಲವು ಮುಖಗಳಿವೆ. ಕೆಲವರಿಗೆ ನಿರಾಸೆ, ಕೆಲವರಿಗೆ ವಿಷಾದ, ಇನ್ನು ಕೆಲವರಿಗೆ ಪ್ರಶ್ನೆಗಳನ್ನೂ ಈ ಮಸೂದೆ ಮುಂದಿಟ್ಟಿದೆ.1957ರ ಕಾಪಿರೈಟ್ ಆ್ಯಕ್ಟ್ ಪ್ರಕಾರ, ಶೇಕಡಾ 50 ರಷ್ಟು ಕ್ಯಾಸೆಟ್ ಕಂಪೆನಿಗಳಿಗೆ, 25% ಸಂಗೀತ ನಿರ್ದೇಶಕರಿಗೆ, 15% ಚಲನಚಿತ್ರ ಗೀತರಚನಕಾರರಿಗೆ ಉಳಿದ 10% ಐಪಿಆರ್‌ಎಸ್‌ಗೆ ರಾಯಲ್ಟಿ ಹಂಚಿಕೆ ಆಗುತ್ತಿತ್ತು. ನಿರ್ಮಾಪಕನಿಗೆ ಏನೂ ಇರಲಿಲ್ಲ. ಕ್ಯಾಸೆಟ್ ಕಂಪೆನಿಗಳು ಕಾನೂನು ಮೂಲಕ ಹೋರಾಟ ನಡೆಸಿದರು. ಅವರ ವಾದದ ಪ್ರಕಾರ, ` ಸಂಗೀತ ನಿರ್ದೇಶಕರಿಗೂ ಗೀತರಚನಕಾರರಿಗೂ ಸಂಭಾವನೆಯನ್ನು ನಿರ್ಮಾಪಕ ಕೊಟ್ಟಿರುತ್ತಾನೆ.ಹಾಡುಗಳ ಹಕ್ಕನ್ನು ನಾವು ಖರೀದಿಸಿ ಒಪ್ಪಂದ ಮಾಡಿಕೊಂಡಿರುತ್ತೇವೆ. ಕ್ಯಾಸೆಟ್ ಅಥವಾ ಸಿ.ಡಿ. ವ್ಯಾಪಾರದಲ್ಲಿ ಪೈರಸಿ ಹಾವಳಿ ಇರುವುದರಿಂದ ನಷ್ಟ ಅನುಭವಿಸುವವರು ನಾವು. ಹಾಗಾಗಿ ರಾಯಲ್ಟಿಯನ್ನು ಗೀತರಚನಕಾರನಿಗೂ, ಸಂಗೀತ ನಿರ್ದೇಶಕನಿಗೂ ಕೊಡದೆ ನಮಗೆ ಮಾತ್ರ ಕೊಡಿ, ಅದರ ಸಂಪೂರ್ಣ ಹಕ್ಕು ನಮ್ಮದು~ ಎಂದು ಅವರ ವಾದ.ಯಾರ‌್ಯಾರಿಗೆ ಎಷ್ಟೆಷ್ಟು?

ಸಂಗೀತ ನಿರ್ದೇಶಕನಿಗೆ ಅವನ ಹಾಡಿನ ಹಕ್ಕು ಸಿಕ್ಕಿದ ಮೇಲೆ ಅದರ ಮೂಲಕ ಬರುವ ರಾಯಲ್ಟಿ ಹಣ ಎಷ್ಟು? ಗೀತರಚನಕಾರನಿಗೆ ಇನ್ನು ಮುಂದೆ ಎಷ್ಟು ಹಣ ಬರುತ್ತದೆ? ಈ ಕಾಯಿದೆಯಡಿ ಕಥಾಲೇಖಕ, ಚಿತ್ರಕಥಾ ಲೇಖಕ, ಸಂಭಾಷಣೆಗಾರರೂ ಒಳಪಡುತ್ತಾರಾ? ಆದರೆ ಇಡೀ ಚಲನಚಿತ್ರಕ್ಕೆ ಸಮಗ್ರವಾಗಿ ಒಂದು ಗೌರವಧನ ಬರುವುದರಿಂದ, ಅಂದರೆ ಟಿವಿಯಲ್ಲಿ ಪ್ರಸಾರವಾದರೆ, ಅಥವಾ ರೇಡಿಯೊದಲ್ಲಿ ಅದರ ಸೌಂಡ್‌ಟ್ರಾಕ್ ಪ್ರಸಾರವಾದರೆ ನಿರ್ಮಾಪಕ, ಲೇಖಕ, ರಾಗಸಂಯೋಜಕ ಈ ಎಲ್ಲರಿಗೂ ರಾಯಲ್ಟಿ ಹಂಚಿಕೆ ಆಗುವ ಅವಕಾಶ ಈಗ ಇದೆ. ಹೆಚ್ಚಿನ ನಿರಾಶೆ ಆಗಿರುವುದು ಆಡಿಯೋ ಸಂಸ್ಥೆಗಳಿಗೆ.ಬೆಂಗಳೂರಿನಲ್ಲಿ ನಡೆದ ಕೆಲವು ಘಟನೆಗಳು ಬಹಳ ವಿಷಾದನೀಯವಾಗಿ ಕಾಣುತ್ತವೆ.ಕೆಲವರು ಐಪಿಆರ್‌ಎಸ್ ಹೆಸರಲ್ಲಿ ಸಣ್ಣಪುಟ್ಟ ಆರ್ಕೆಸ್ಟ್ರಾಗಳಿಂದ ದೊಡ್ಡ ದೊಡ್ಡ ರಸ ಸಂಜೆ ಕಾರ್ಯಕ್ರಮಗಳ ನಿರ್ವಾಹಕರಿಂದ ಸ್ಟಾರ್ ಹೋಟೆಲ್‌ಗಳಿಂದ ಬೇಕಾಬಿಟ್ಟಿಯಾಗಿ ಇಷ್ಟಬಂದಂತೆ ವಸೂಲಿ ಮಾಡಿದ್ದಾರೆ.ಗಣೇಶೋತ್ಸವ ಇಲ್ಲವೆ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಆರ್ಕೆಸ್ಟ್ರಾಗಳಿಗೆ ಕೊಡುವ ಹಣ ತೀರಾ ಕಡಿಮೆ. ಅದರಲ್ಲಿ ವಾದ್ಯಗಾರರಿಗೆ, ಗಾಯಕರಿಗೆ, ಸೌಂಡ್‌ಸಿಸ್ಟಮ್‌ನವರಿಗೆಲ್ಲಾ ಕೊಟ್ಟು 1015 ಸಾವಿರ ರೂಪಾಯಿ ಉಳಿಯಬಹುದು. ಅಂತಹ ಬಡಪಾಯಿಗಳಿಂದ ಐಪಿಆರ್‌ಎಸ್ ಹೆಸರಲ್ಲಿ 4050 ಸಾವಿರ ರೂಪಾಯಿವರೆಗೂ ಬೆದರಿಸಿ ವಸೂಲು ಮಾಡಿ ತಮ್ಮ ಜೇಬಿಗೆ ಇಳಿಸಿಕೊಂಡ ನಿದರ್ಶನಗಳಿವೆ.ಅವರಲ್ಲಿ `ನೀವೇಕೆ ಹಾಗೇ ಸುಮ್ಮನೆ ನಗದು ಹಣ ಕೊಡುತ್ತೀರಿ? ಐಪಿಆರ್‌ಎಸ್ ಹೆಸರಲ್ಲಿ ಚೆಕ್ ಕೊಟ್ಟರೆ ನೇರವಾಗಿ ಅದು ಸಂಸ್ಥೆಗೇ ಸೇರುವುದಲ್ಲವೇ?~ ಎಂದು ಕೇಳಿದರೆ ಅವರಿಂದ ಬಂದ ಉತ್ತರ ವಂಚನೆಯ ಇನ್ನೊಂದು ಮುಖವನ್ನು ಪರಿಚಯಿಸುತ್ತದೆ.`ಚೆಕ್ ಅಂದರೆ 60 ಸಾವಿರ, ನೀವು ನಗದಾಗಿ ಕೊಡುವುದಾದರೆ 30 ಸಾವಿರ, ಯಾವುದು ಬೇಕೊ ಹೇಳಿ~ ಎಂದಾಗ ಅವರ ಕೈಗೆ 5 ಸಾವಿರ ಕೊಟ್ಟು ಸಾಗಹಾಕುತ್ತೇನೆ - ಯಾಕೆಂದರೆ ಅವರಲ್ಲಿ  ಚೌಕಾಸಿ ಮಾಡುತ್ತಾ ನಿಂತರೆ ನಮ್ಮ ಮನರಂಜನಾ ಕಾರ್ಯಕ್ರಮಕ್ಕೆ ಅಡ್ಡಿಯಾಗುತ್ತದೆ, ಹೀಗಾಗಿ ನಾವು ತುಂಬಾ ಟೆನ್‌ಷನ್‌ನಲ್ಲಿರುವ ಸನ್ನಿವೇಶದ ದುರುಪಯೋಗ ಮಾಡಿಕೊಳ್ಳುವವರು ಅನೇಕರಿದ್ದಾರೆ~ ಎನ್ನುತ್ತಾರೆ ಒಬ್ಬ ನಿರ್ವಾಹಕ.ಇವೆಲ್ಲಾ ಸಂಭ್ರಮ, ಅವಾಂತರ, ಗೊಂದಲಗಳ ನಡುವೆ ಸಿನಿಮಾ ನಿರ್ಮಾಪಕ `ತನ್ನ ಪಾಲೇನು~ ಎಂದು ಮಿಕಮಿಕ ನೋಡುತ್ತಿದ್ದಾನೆ - ಪಾಪ, ಕೋಟಿಗಟ್ಟಲೆ ಬಂಡವಾಳ ಹಾಕಿ ಪ್ರತಿಫಲವಿಲ್ಲ ಎಂದಾಗ ಬೇಸರವಾಗುವುದು ಸಹಜ. ಈ ಕಾಯಿದೆಯಲ್ಲಿ ನಿರ್ಮಾಪಕ ಮತ್ತು ಆಡಿಯೊ ಸಂಸ್ಥೆಗಳಿಗೂ ನಿರಾಸೆ ಆಗದ ರೀತಿಯಲ್ಲಿ ಪ್ರತಿಫಲ ದೊರೆಯುವ ಹಾಗಿದ್ದರೆ ಒಳ್ಳೆಯದಿತ್ತು.ಮುಂದೇನು?

ಆಡಿಯೊ ಸಂಸ್ಥೆಗಳು ತಮಗಿನ್ನೇನೂ ಹಕ್ಕಿಲ್ಲ ಎಂದಾಗ ಚಲನಚಿತ್ರದ ಆಡಿಯೊ ಖರೀದಿ ಮಾಡಲು ಮುಂದಾಗುತ್ತವೆಯೇ? ಹಾಡುಗಳಿಂದ ಲಾಭವಿಲ್ಲ ಎಂದ ಮೇಲೆ ಯಾಕೆ ಖರ್ಚು ಮಾಡಲಿ ಎಂದು ನಿರ್ಮಾಪಕ ತನ್ನ ಚಿತ್ರದಲ್ಲಿ ಹಾಡು ಬೇಡ ಎನ್ನಲಾರನೇ? ಇನ್ನು ಮುಂದೆ ಹಾಡುಗಳಿಲ್ಲದ ಚಿತ್ರಗಳೇ ಬರಬಹುದೇ? ಆಗ ಗೀತರಚನೆಕಾರ ಮತ್ತು ರಾಗ ಸಂಯೋಜಕನಿಗೆ ಏನು ಕೆಲಸ? ಹೀಗೆ ಹಲವು ಪ್ರಶ್ನೆಗಳನ್ನು ತನ್ನೊಳಗೆ ಇಟ್ಟುಕೊಂಡರೂ ನಮ್ಮ ಮೆಚ್ಚಿನ `ಚಂದನವನ~ ಸ್ಯಾಂಡಲ್‌ವುಡ್‌ನಲ್ಲಿ ಇದರ ಬಗ್ಗೆ ಯಾರಿಗೂ ಆಸಕ್ತಿ ಇಲ್ಲದಿರುವುದು, ಚರ್ಚೆ ಆಗದಿರುವುದು ನಿಜಕ್ಕೂ ಬೇಸರದ ಸಂಗತಿ.ಲೇಖಕರು ಸಂಗೀತ ನಿರ್ದೇಶಕರುಏನಿದು ಐಪಿಆರ್‌ಎಸ್?ಇಂಡಿಯನ್ ಪರ್ಫಾಮರ್ಸ್ ರೈಟ್ಸ್ ಸೋಸೈಟಿಯ ಸದಸ್ಯತ್ವವನ್ನು ಭಾರತದ ಅನೇಕ ಚಿತ್ರ ಸಾಹಿತಿಗಳು ಮತ್ತು ಸಂಗೀತ ನಿರ್ದೇಶಕರು ಹೊಂದಿದ್ದಾರೆ. ಈ ಸಂಸ್ಥೆ ಹಲವು ಮೂಲಗಳಿಂದ ರಾಯಲ್ಟಿ (ಗೌರವಧನ) ಸಂಗ್ರಹಿಸಿ ತನ್ನ ಸದಸ್ಯರಿಗೆ ಹಂಚುತ್ತದೆ.  ಮನರಂಜನಾ ಕಾರ್ಯಕ್ರಮಗಳಲ್ಲಿ ಬಳಸುವ ಸಿನಿಮಾ ಸಂಗೀತಕ್ಕೆ ರಾಯಲ್ಟಿ ಸಂಗ್ರಹಿಸಿ ಸಂಗೀತನಿರ್ದೇಶಕರು ಮತ್ತು ಚಿತ್ರ ಸಾಹಿತಿಗಳಿಗೆ ಸಲ್ಲುವಂತೆ ಮಾಡುವಲ್ಲಿ ಐಪಿಆರ್‌ಎಸ್ ಪಾತ್ರ ಮಹತ್ವದ್ದು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.