ಸೋಮವಾರ, ಮೇ 23, 2022
27 °C

ಸಂಪುಟ ಸಚಿವಾಲಯಕ್ಕೆ ಮಂಗಳಾರತಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ (ಪಿಟಿಐ): ಸ್ವಿಸ್ ಬ್ಯಾಂಕಿನಲ್ಲಿ ಇರಿಸಿರುವ ಕಪ್ಪು ಹಣದ ವಿವರ ನೀಡಿಕೆಗೆ ಸಂಬಂಧಿಸಿದಂತೆ ಮಾಹಿತಿ ಹಕ್ಕು ಕಾಯ್ದೆಯಡಿ ಪ್ರಶ್ನಿಸಲಾದ ಅರ್ಜಿಗೆ ಉತ್ತರ ನೀಡಲು ವಿಳಂಬ ಮಾಡುತ್ತಿರುವ ಸಂಪುಟ ಸಚಿವಾಲಯದ ಧೋರಣೆಗೆ ಕೇಂದ್ರ ಮಾಹಿತಿ ಆಯೋಗ ತೀವ್ರ ಅತೃಪ್ತಿ ವ್ಯಕ್ತಪಡಿಸಿದೆ.ಸೋಮವಾರ ಪ್ರಮೋದ್ ಚಾವ್ಲಾ ಎಂಬುವವರ ಅರ್ಜಿಯ ವಿಚಾರಣೆ ನಡೆಸಿದ ಆಯೋಗವು, ಈ ಕುರಿತು ಸಚಿವಾಲಯವನ್ನು ತೀವ್ರ ತರಾಟೆಗೆ ತೆಗೆದುಕೊಂಡಿತು. ಸ್ವಿಸ್ ಬ್ಯಾಂಕಿನಲ್ಲಿ ಭಾರತೀಯರು ಇರಿಸಿರುವ ಕಪ್ಪು ಹಣದ ವಿವರ ನೀಡುವಂತೆ ಸಂಪುಟ ಸಚಿವಾಲಯಕ್ಕೆ ಚಾವ್ಲಾ ಮನವಿ ಮಾಡಿದ್ದಾರೆ. ಅವರ ಈ ಮನವಿಯನ್ನು ಸಂಪುಟ ಸಚಿವಾಲಯವು ವಿದೇಶಾಂಗ ಇಲಾಖೆಗೆ ಕಳುಹಿಸಿದೆ. ಆದರೆ ವಿದೇಶಾಂಗ ಇಲಾಖೆ ಈ ಬಗ್ಗೆ ತನ್ನಲ್ಲಿ ಯಾವುದೇ ವಿವರಗಳು ಇಲ್ಲವೆಂದು ಹೇಳಿದೆ. ಇದರಿಂದಾಗಿ ಚಾವ್ಲಾ ಕೇಂದ್ರ ಮಾಹಿತಿ ಆಯೋಗದ ಮೊರೆ ಹೋಗಿದ್ದಾರೆ. ಹೀಗೆಲ್ಲಾ ಆದರೆ ಮಾಹಿತಿ ಪಡೆಯಬೇಕೆನ್ನುವವರ ಪಾಡೇನು ಎಂದು ಆಯೋಗವು ಖಾರವಾಗಿ ಪ್ರಶ್ನಿಸಿತು.ಈ ಸಂದರ್ಭದಲ್ಲಿ ಸಚಿವಾಲಯದ ಅಧಿಕಾರಿಗಳು ಮಾಹಿತಿ ಆಯೋಗಕ್ಕೆ ವಿವರಣೆ ನೀಡಿ, ಸ್ವಿಸ್ ಬ್ಯಾಂಕಿನಲ್ಲಿರುವ ಭಾರತೀಯರ ಹಣದ ವ್ಯವಹಾರಗಳು ವಿದೇಶಾಂಗ ವ್ಯವಹಾರಗಳ ಇಲಾಖೆಯ ವ್ಯಾಪ್ತಿಯಲ್ಲಿಯೇ ಇವೆ. ಈ ಕುರಿತ ಮಾಹಿತಿಗಳು ಅಲ್ಲಿ ಮಾತ್ರವೇ ದೊರೆಯುತ್ತವೆ ಎಂದು ತಿಳಿಸಿದರು.ಆದರೆ ಸಚಿವಾಲಯ ಅಧಿಕಾರಿಗಳ ಈ ವಿವರಣೆಯಿಂದ ತೃಪ್ತರಾಗದ ಮುಖ್ಯ ಆಯುಕ್ತ ಸತ್ಯಾನಂದ ಮಿಶ್ರಾ ಕೆಂಡಾಮಂಡಲವಾದರು.ಈ ಅರ್ಜಿಯಲ್ಲಿ ಅರ್ಜಿದಾರರು ವಿವಿಧ ದೇಶಗಳ ಬ್ಯಾಂಕುಗಳಲ್ಲಿ ಭಾರತೀಯರು ಇರಿಸಿರುವ ಹಣದ ವಿವರಗಳನ್ನು ಕೇಳಿದ್ದಾರೆ. ಇದರ ಬಗ್ಗೆ ಸಂಪುಟ ಸಚಿವಾಲಯ ಸೂಕ್ತ ತಿಳಿವಳಿಕೆ ಹೊಂದಿರಬೇಕು. ಕನಿಷ್ಠ ವಿದೇಶಿ ಸರ್ಕಾರಗಳ ಜೊತೆ ವ್ಯವಹರಿಸುವ ಇತರೆ ಖಾತೆಗಳಾದರೂ ಈ ಬಗ್ಗೆ ಮಾಹಿತಿ ಹೊಂದಿರುವುದು ಅಗತ್ಯ ಎಂದು ಅವರು ತಮ್ಮ ಅಸಮಾಧಾನ ವ್ಯಕ್ತಪಡಿಸಿದರು.1 ಲಕ್ಷ ಕೋಟಿ ಕಪ್ಪು ಹಣಕ್ಕೆ ತೆರಿಗೆ -ಪ್ರಣವ್

ನವದೆಹಲಿ (ಪಿಟಿಐ): ಹಣಕಾಸು ಇಲಾಖೆಯು ಕಳೆದ ಒಂದೂವರೆ ವರ್ಷದ ಅವಧಿಯಲ್ಲಿ  ಸುಮಾರು ಒಂದು ಲಕ್ಷ ಕೋಟಿ ರೂಪಾಯಿ ಮೊತ್ತದ ಕಪ್ಪು ಹಣವನ್ನು ಪತ್ತೆ ಮಾಡಿ ತೆರಿಗೆ ವಿಧಿಸಿದೆ ಎಂದು ಹಣಕಾಸು ಸಚಿವ ಪ್ರಣವ್ ಮುಖರ್ಜಿ ಸೋಮವಾರ ರಾಜ್ಯಸಭೆಗೆ ತಿಳಿಸಿದರು.ಬಜೆಟ್ ಮೇಲಿನ ಚರ್ಚೆಯ ಸಂದರ್ಭದಲ್ಲಿ ಸಚಿವರು ಸದನಕ್ಕೆ ಈ ಮಾಹಿತಿ ನೀಡಿದರು. ಅಂತರರಾಷ್ಟ್ರೀಯ ಹಣಕಾಸು ಸಂಸ್ಥೆಗಳ ನೆರವು ಹಾಗೂ ಸರ್ಕಾರಿ ಇಲಾಖೆಗಳ ಕಾರ್ಯಕ್ಷಮತೆಯಿಂದ ಇದು ಸಾಧ್ಯವಾಗಿದೆ ಎಂದು ಅವರು ತಿಳಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.