ಮಂಗಳವಾರ, ಜೂನ್ 15, 2021
27 °C

ಸಂಭಾವಿತ ಪುತ್ರ!

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಜಲಾಶಯದ ಹಿನ್ನೀರ ತೀರದಲ್ಲಿ ಹಾಡಿಗೆ ಹೆಜ್ಜೆ ಹಾಕುತ್ತಿದ್ದರು ನಟಿ ನಿಖಿತಾ. ಅವರಿಗೆ ಸಾಥ್ ನೀಡಿದ್ದ ನಟ ಅಕ್ಷಯ್ ಜೊತೆ ಹೆಜ್ಜೆಗಳು ಹೊಂದಾಣಿಕೆ ಆಗುತ್ತಿರಲಿಲ್ಲ. ಹೀಗಾಗಿ ಪದೇ ಪದೇ ರೀಟೇಕ್ ಮೊರೆ ಹೋಗುವ ಸ್ಥಿತಿ ನಿರ್ದೇಶಕರದ್ದು. ಹತ್ತಾರು ಬಾರಿ ರೀಟೇಕ್ ಆದ ನಂತರ ಕೊನೆಗೂ ಟೇಕ್ ಸಮಾಧಾನ ತಂದಿತು. ಅದು `ಗೌರಿಪುತ್ರ~ ಚಿತ್ರದ ಹಾಡಿನ ಚಿತ್ರೀಕರಣದ ಸಂದರ್ಭ. ಬಿಸಿಲ ಝಳದ ಮಧ್ಯೆ ವಿರಾಮ ತೆಗೆದುಕೊಂಡ ಚಿತ್ರತಂಡ ಮಾತಿಗಿಳಿಯಿತು.ಸುದ್ದಿಗೋಷ್ಠಿಯಲ್ಲಿ ಕಾತರ ಮೂಡಿಸಿದ್ದು ನಟಿ ನಿಖಿತಾ ಹಾಜರಿ. ದರ್ಶನ್ ಮತ್ತು ಅವರ ಪತ್ನಿ ವಿಜಯಲಕ್ಷ್ಮಿ ಪ್ರಕರಣದ ಬಳಿಕ ನಿಖಿತಾ ಮೊದಲ ಬಾರಿಗೆ ಮಾಧ್ಯಮದ ಎದುರು ಕಾಣಿಸಿಕೊಂಡರು. ಈ ನಡುವೆ `ಸಂಗೊಳ್ಳಿ ರಾಯಣ್ಣ~ ಚಿತ್ರದಲ್ಲಿ ಐದು ದಿನಗಳ ಚಿತ್ರೀಕರಣದಲ್ಲಿ ಪಾಲ್ಗೊಂಡಿದ್ದರೂ ಅವರು ಮಾಧ್ಯಮಕ್ಕೆ ಎದುರಾಗಿರಲಿಲ್ಲ.ಚಿತ್ರದ ಐವರು ನಾಯಕಿಯರಲ್ಲಿ ನಿಖಿತಾ ಕೂಡ ಒಬ್ಬರು. ಆದರೆ ತಮ್ಮದು ಅತಿ ಮುಖ್ಯ ಪಾತ್ರ. ಉಳಿದ ನಾಯಕಿಯರ ಮಧ್ಯೆ ತಮಗೆ ಹೆಚ್ಚಿನ ಸ್ಕೋಪ್ ಇದೆ ಎಂಬುದು ಅವರ ಹೇಳಿಕೆ.ರಾಕೇಶ್ ಮತ್ತು ನಾಗಶೇಖರ್ ಅವರೊಂದಿಗೆ ಪ್ರಧಾನ ಭೂಮಿಕೆ ಹಂಚಿಕೊಂಡಿರುವ ನಟ ಅಕ್ಷಯ್‌ಗೆ ಇದು ಎರಡನೇ ಚಿತ್ರ. ಅವರದು ಸತ್ಯವಂತ ಹುಡುಗನ ಪಾತ್ರ. ಒಳ್ಳೆಯ ಗುಣಗಳಿದ್ದರೂ ಹೆಣ್ಣು ಸಿಗುವುದಿಲ್ಲ. ಹೆಣ್ಣು ನೋಡಲು ಹೋದಾಗಲೆಲ್ಲಾ ತನ್ನ ಕುರಿತ ವಿವರ ಇರುವ ಫೈಲ್ ಅನ್ನು ನೀಡುತ್ತಾನೆ. ಅದರಲ್ಲಿ ಆತನ ಬಲಹೀನತೆಗಳನ್ನೂ ಬರೆದಿರುತ್ತಾನೆ. ಹೀಗಾಗಿ ಅವನಿಗೆ ಯಾರೂ ಹೆಣ್ಣು ಕೊಡಲು ಒಪ್ಪುವುದಿಲ್ಲ. ನಾಯಕನಿಗೆ ಹೆಣ್ಣು ಸಿಗುತ್ತದೆಯೇ ಎಂಬುದೇ ಚಿತ್ರದ ಕುತೂಹಲದ ಅಂಶ ಎಂದು ಕಥೆಯ ಎಳೆಯನ್ನು ವಿವರಿಸಿದರು ಅಕ್ಷಯ್.ಡಬ್ಬಿಂಗ್ ಕಲಾವಿದರನ್ನು ಬಳಸಿಕೊಳ್ಳದೆ ಮಾತಿನ ಜೋಡಣೆ ಮಾಡಿರುವುದು ಚಿತ್ರದ ವಿಶೇಷ ಎಂದರು ನಿರ್ದೇಶಕ ಮಂಜು ಮಸಕಲಮಟ್ಟಿ. ಕಲಾವಿದರಿಗೆ ಹೊಂದಾಣಿಕೆ ಆಗುವ ಧ್ವನಿ ಇರಲಿ ಎಂಬ ಉದ್ದೇಶದಿಂದ ಎಲ್ಲಾ ಕಲಾವಿದರಿಗೂ ಅವರಿಗೆ ಹಿನ್ನೆಲೆ ಗಾಯನ ಮಾಡಿದ ಗಾಯಕರಿಂದಲೇ ಕಂಠದಾನ ಮಾಡಿಸಲಾಗಿದೆ ಎನ್ನುವುದು ಅವರ ವಿವರಣೆ. ಅಂದಹಾಗೆ, ಈ ಚಿತ್ರದ ಮೂಲ ಎಳೆ ತಮಿಳು ಚಿತ್ರದ್ದು. ಕಥೆಯನ್ನು ತಮಿಳಿನ ಜಗನ್ ಅವರಿಂದ ಕೇಳಿದ್ದ ಮಂಜು ಅದರ ರೀಮೇಕ್ ಹಕ್ಕನ್ನು ಸಹ ಖರೀದಿಸಿದ್ದರು. ಆದರೆ ಇದು ರೀಮೇಕ್ ಅಲ್ಲ. ಎಳೆಯಷ್ಟೆ ತಮಿಳಿನದು. ಇಲ್ಲಿ ಕಥೆ ಬದಲಾವಣೆ ಮಾಡಿಕೊಳ್ಳಲಾಗಿದೆ ಎಂಬುದು ಅವರ ಸಮಜಾಯಿಷಿ.ಚಿತ್ರೀಕರಣ ಮುಗಿದಿದ್ದರೂ ಹಾಡೊಂದರ ಚಿತ್ರೀಕರಣ ತೃಪ್ತಿ ನೀಡಿರಲಿಲ್ಲ. ಹೀಗಾಗಿ ಹಾಡಿಗೆ `ತೇಪೆ~ ಹಚ್ಚಲು ಮತ್ತೆ ಚಿತ್ರೀಕರಣ ನಡೆಸಿದ್ದಾಗಿ ಹೇಳಿದರು. ಬೆಂಗಳೂರು, ಹಿರಿಯೂರುಗಳಲ್ಲಿ ಸುಮಾರು 35 ದಿನ ಚಿತ್ರೀಕರಣ ನಡೆಸಲಾಗಿದೆ. ಏಪ್ರಿಲ್ ಅಂತ್ಯದೊಳಗೆ `ಗೌರಿಪುತ್ರ~ನ ವಿವಾಹ ತೆರೆ ಮೇಲೆ ಕಾಣಲು ಸಿದ್ಧವಾಗಲಿದೆ.

ನಾನು ಬಲಿಪಶುವಾದೆ...

`ಅವರ ಕುಟುಂಬದ ಆಂತರಿಕ ವಿಷಯದೊಳಗೆ ನನ್ನನ್ನೇ ಏಕೆ ಎಳೆದು ತಂದರೋ ಅರ್ಥವಾಗಲಿಲ್ಲ~- ದರ್ಶನ್ ಮತ್ತು ವಿಜಯಲಕ್ಷ್ಮಿ ಪ್ರಕರಣದ ವಿವಾದದ ಬಳಿಕ ಪತ್ರಕರ್ತರಿಗೆ ಮೊದಲ ಬಾರಿಗೆ ಎದುರಾದ ನಟಿ ನಿಖಿತಾ ಹೇಳಿದ ಮಾತಿದು. `ನಾಲ್ಕು ಗೋಡೆಯ ಮಧ್ಯೆ ಬಗೆಹರಿಸಿಕೊಳ್ಳಬೇಕಾಗಿದ್ದ ಸಮಸ್ಯೆಯದು. ಹಾಗೆ ನೋಡಿದರೆ ದರ್ಶನ್ ಜೊತೆಯಲ್ಲಿ ಮತ್ತಷ್ಟು ನಟಿಯರ ಹೆಸರುಗಳನ್ನೂ ಪ್ರಸ್ತಾಪಿಸಬೇಕಿತ್ತು. ಆದರೆ ನನ್ನನ್ನು ಮಾತ್ರ ಏಕೆ ಇಲ್ಲಿ ಎಳೆಯಲಾಯಿತು...~- ಮಾತಿನ ಲಹರಿಗೆ ಥಟ್ಟನೆ ಬ್ರೇಕ್ ಹಾಕಿದರು ನಿಖಿತಾ.`ಘಟನೆಯಿಂದ ತೀವ್ರ ಆಘಾತಕ್ಕೊಳಗಾಗಿದ್ದೆ. ಮನೆ ಹೊರಗೆ, ಚಿತ್ರರಂಗದಲ್ಲಿ ನನ್ನ ಬಗ್ಗೆ ಕೀಳಾಗಿ ಮಾತನಾಡತೊಡಗಿದರು. ಆಗ ಸ್ಥೈರ್ಯ ತುಂಬಿದ್ದು ಅಮ್ಮ. ತಮಿಳು ಮತ್ತು ತೆಲುಗು ಚಿತ್ರರಂಗದಲ್ಲಿ ಅವಕಾಶಗಳಿದ್ದೇ ಇದ್ದವು. ಕನ್ನಡ ಚಿತ್ರರಂಗದ ಮೇಲೆ ಕೋಪವಿಲ್ಲ. ಇಲ್ಲಿಯೂ ಕೆಲವರು ಹಾಗೂ ಮಾಧ್ಯಮಗಳು ನನಗೆ ಬೆಂಬಲ ನೀಡಿವೆ.~ ನಿಕಿತಾ ಮಾತಿನಲ್ಲಿ ವಿಷಾದವೂ ಇತ್ತು, ನಿರಾಳವೂ ಇತ್ತು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.